ಪುಲ್ವಾಮಾ ದಾಳಿ ಮತ್ತು ನಂತರದಲ್ಲಿ ಭಾರತೀಯ ಸೇನೆಯ ಯೋಧರ ತ್ಯಾಗ, ಶೌರ್ಯಗಳು ಇಡೀ ದೇಶದ ಮನೆಮಾತಾಗುತ್ತಿದ್ದಂತೆ, ಯೋಧರನ್ನು ಹತ್ಯೆಗೈದವರ ಕುರಿತು ಆಕ್ರೋಶ ಮಡುಗಟ್ಟುತ್ತಿದ್ದಂತೆ ಇಡೀ ವಿದ್ಯಮಾನವನ್ನು ಬಿಜೆಪಿ ನಾಯಕರು ಮುಂಬರಲಿರುವ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುತ್ತಿರುವ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ದೇಶ ಪಕ್ಷ-ಪಂಗಡ ಎನ್ನದೇ ಒಂದಾಗಿ ನಿಲ್ಲಬೇಕಾದ ಹೊತ್ತಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ನೆನ್ನೆ ಎಲ್ಲಾ ಪ್ರತಿಪಕ್ಷಗಳ ಮುಖಂಡರೂ ದೂರಿದ್ದರು.
ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಮಾತನಾಡುತ್ತಾ ಬಿಜೆಪಿಯ ನಡೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಬಿ. ಎಸ್ ಯಡಿಯೂರಪ್ಪ ಮಾತ್ರವಲ್ಲ, ಮೋದಿ ನೇತೃತ್ವದ ಇಡೀ ಕೇಂದ್ರ ಸರ್ಕಾರವೇ ಹುತಾತ್ಮ ಯೋಧರ ಹೆಸರಿನಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ’ ಎಂದಿದ್ದಾರೆ.
‘ಯೋಧರ ಪತ್ನಿಯರು ವಿಧವೆಯರಾಗಿದ್ದಾರೆ, ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡಿದೆ. ಆದರೆ ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇವರೆಲ್ಲ ನಾಚಿಕೆ ಇಲ್ಲದವರು’ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶದಿಂದ ನುಡಿದಿದ್ದಾರೆ.
ಮುಂದುವರಿದು ಮುಖ್ಯಮಂತ್ರಿಯವರು, ಇಂದಿರಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಆಡಳಿತದ ಸಂದರ್ಭದಲ್ಲೂ ಯುದ್ಧ ನಡೆದಿತ್ತು. ಆದರೆ ಅವರ್ರ್ಯಾರು ಇದನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ರಕ್ಷಣಾ ಯೋಧರು ಬಾಂಬ್ ದಾಳಿ ಮಾಡಿ ಬಂದಿದ್ದಾರೆ. ಆದರೆ ಬಿಜೆಪಿ ಪಕ್ಷದ ಕಾರ್ಯಕರ್ತರು ತಾವೇ ಸಲಹೆ ನೀಡಿ ದಾಳಿ ನಡೆಸಿ ಗೆದ್ದಿರುವುದಾಗಿ ಬೀಗುತ್ತಿದ್ದಾರೆ’ ಎಂದು ಎಚ್ಡಿಕೆ ಛೇಡಿಸಿದ್ದಾರೆ.