ಇತ್ತೀಚಿನ ಭಾರತ-ಪಾಕಿಸ್ತಾನದ ವಿದ್ಯಮಾನಗಳನ್ನು ನೋಡುವಾಗ ನನ್ನದೊಂದು ಅನುಭವ ನೆನಪಿಗೆ ಬರುತ್ತದೆ. ನಾನು ಕೆಲ ವರ್ಷಗಳ ಹಿಂದೆ ಪಂಜಾಬ್ ರಾಜ್ಯದಲ್ಲಿರುವ ವಾಘಾ ಗಡಿಗೆ ಹೋಗಿದ್ದೆ. ಅದು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯ ಒಂದು ಭಾಗ. ಅಲ್ಲಿ ಗಡಿಯುದ್ಧಕ್ಕೂ ಬೇಲಿ ಮತ್ತು ಸೇನಾಪಡೆಗಳ ಪಹರೆ ಇರುವುದು ಸಹಜವೇ. ಬೇಲಿಯ ಇಕ್ಕೆಲಗಳಲ್ಲಿ ಒಂದೇ ಬಣ್ಣದ ಮಣ್ಣು, ಆ ಮಣ್ಣಿನಲ್ಲಿ ಕೆಲಸ ಮಾಡುವ ಒಂದೇ ತೆರನಾದ ಹೆಣ್ಣುಗಂಡುಗಳು… ಆದರೆ ಈ ಬದಿಯವರ ಹೆಸರು ಭಾರತೀಯರು, ಆ ಪಕ್ಕದವರು ಪಾಕಿಸ್ತಾನಿಯರು. ಇಬ್ಬರೂ ಪಂಜಾಬಿ ಭಾಷೆ ಮಾತನಾಡುವರು, ಬೇಕೆಂದಾಗ ಬೇಲಿಯ ಪಕ್ಕದಲ್ಲೇ ನಿಂತು ಹರಟುವವರು. ಅಂದ ಹಾಗೆ, 47ರ ಮುನ್ನ ಒಂದೇ ದೇಶದವರಾಗಿದ್ದವರಲ್ಲವೇ? ಈ ಪ್ರೀತಿಯ ಮಾತುಗಳಿಗೆ ಪಾಸ್ಪೋರ್ಟ್ ವೀಸಾಗಳ ಅಗತ್ಯವೇ ಇಲ್ಲ. ಹಸಿರಾದ ಭೂಮಿಯ ಮೇಲೆ ನಿಷ್ಕಲ್ಮಶವಾದ ಶ್ರಮಜೀವಿಗಳ ಕೈಗಳು, ಅವುಗಳಿಗೆ ನಾವು ರಾಷ್ಟ್ರೀಯತೆಯ ಲೇಪನ ಮಾಡಿ ಅದಕ್ಕೆ ಭಾವೋದ್ವೇಗ ತುಂಬಿ ಶ್ರೇಷ್ಠತೆಯ ವ್ಯಸನವನ್ನು ಹರಡಲು ಯತ್ನಿಸುತ್ತಿದ್ದೇವೆಯೇ?
ಹೌದೆನಿಸಿದ್ದು ಸಂಜೆ ಅಲ್ಲೇ ನಡೆದ ಸೇನಾ ಕವಾಯಿತಿಗೆ ನಾವು ಸಾಕ್ಷಿಯಾದಾಗ. ಗಡಿಯ ಮುಖ್ಯದ್ವಾರದ ಆಚೆಗೆ ಪಾಕಿಸ್ತಾನಿ ಸೇನಾಪಡೆ ಮತ್ತು ಆ ದೇಶದ ಜನ. ಈಚೆ ಭಾರತೀಯ ಸೇನಾಪಡೆಯ ಸಮವಸ್ತ್ರಧಾರಿ ಸಶಸ್ತ್ರ ಯೋಧರು ಮತ್ತು ಭಾರತದ ಜನತೆ. ಒಂದೆರಡು ನಿಮಿಷಗಳ ಮಟ್ಟಿಗೆ ದ್ವಾರ ತೆರೆದು ಎರಡೂ ದೇಶಗಳ ಸೇನಾಪಡೆಗಳು ಪಕ್ಕದ ಪ್ರದೇಶಕ್ಕೆ ಪರಸ್ಪರ ಚಲಿಸಿ ಹಿಂದಿರುಗುತ್ತವೆ. ಪರಸ್ಪರ ಎರಡೂ ರಾಷ್ಟ್ರಗಳಿಗೆ ಗೌರವ ಸೂಚಿಸಿ ಸ್ನೇಹ ಬೆಳೆಸಿ ಸೌಹಾರ್ದತೆ ಸಮನ್ವಯಗಳನ್ನು ಸಾಧಿಸುವುದು ಈ ಕವಾಯಿತನ ಮೂಲ ಉದ್ದೇಶವಾಗಿತ್ತು. ಆದರೆ ಆಗಿದ್ದೇ ಬೇರೆ! ಈ ಕಡೆಯಿಂದ ಪಾಕಿಸ್ತಾನದ ಗಡಿಯತ್ತ ನೋಡುತ್ತ ಗಂಟಲು ಹರಿಯುವಂತೆ ಭಾರತ ಮಾತಾ ಕಿ ಜೈ ಎಂದು ಅರಚಿದರೆ, ಅತ್ತ ಪಾಕಿಸ್ತಾನ್ ಜಿಂದಾಬಾದ್ ಅಂತ ನಮ್ಮ ಕಡೆಗೆ ನೋಡಿ ಕೂಗಾಡುವುದು.. ಇದಕ್ಕೆ ಎರಡೂ ಕಡೆಗಳಲ್ಲಿ ಆಜಾನಬಾಹು ಯೋಧರ ಕುಮ್ಮಕ್ಕು ಎಂದು ಹೇಳಲು ನೋವಾಗುತ್ತದೆ. ಅಲ್ಲಿದ್ದ ಯಾರೊಬ್ಬ ಜವಾಬ್ದಾರಿಯುತ ಅಧಿಕಾರಿಯೂ ಪರಸ್ಪರ ಹೀಗೆ ಕೆಣಕುವುದನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಎರಡೂ ದೇಶಗಳ ಜನರು ಅನವಶ್ಯವಾಗಿ ಪರಸ್ಪರ ಪ್ರಚೋದನೆ ಮಾಡುತ್ತಾ, ಗೇಲಿ ಮಾಡಿಕೊಂಡು ವಿಕೃತ ಸುಖ ಅನುಭವಿಸಿ ಹೊರಬಂದರು. ಆ ಸಂಜೆ ನಾನು ಅತ್ಯಂತ ವೇದನೆಯಿಂದ ವಾಘಾ ಗಡಿಯಲ್ಲಿ ಕಂಡಿದ್ದ ದೃಶ್ಯವೇ ಇಂದು ಈ ಎರಡು ರಾಷ್ಟ್ರಗಳ ಸರ್ಕಾರಗಳಿಗೂ ಅನ್ವಯಿಸುತ್ತಿದೆ ಎಂದು ಹೇಳಬಹುದು.
ಅಂದು ಯಾವ ಪಬ್ಲಿಕ್ಕೂ ರಿಪಬ್ಲಿಕ್ಕೂ ಇರಲಿಲ್ಲ, ಕಿಂಚಿತ್ತಾದರೂ ನೆಮ್ಮದಿ ಇತ್ತು. ಆದರೆ ಈಗ ಮಾಧ್ಯಮಗಳು ಸೃಷ್ಟಿಸುತ್ತಿರುವ ಯುದ್ಧ, ದ್ವೇಷ, ಪ್ರತೀಕಾರ, ಅಸಹನೆಗಳ ಸಮೂಹ ಸನ್ನಿಗೆ ಚಿಕಿತ್ಸೆ ಏನು ಎಂಬುದು ವಿವೇಕ ಉಳ್ಳವರ ಆತಂಕವಾಗಿದೆ. ಫುಲ್ವಾಮಾ ದಾಳಿಯ ತಕ್ಷಣವೇ ಹರಿದಾಡಿದ ಸುಳ್ಳು ಸುದ್ದಿಗಳು, ರೂಪಾಂತರಗೊಂಡ ಚಿತ್ರಗಳು ಬಾಲಾಕೋಟ್ ದಾಳಿಯ ನಂತರ ಹೆಚ್ಚಾಗಿಬಿಟ್ಟವು. ಪಾಕಿಸ್ತಾನದಲ್ಲಿ ಬಾಲಾಕೋಟ್ ನ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿ ನೂರಾರು ಉಗ್ರರನನ್ನು, ತರಬೇತುದಾರರನ್ನು ಹತ್ಯೆಗೊಳಿಸಿ ಶಿಬಿರವನ್ನು ಧ್ವಂಸ ಮಾಡಿತೆಂದು ಟಿವಿ ವಾಹಿನಿಗಳು ನಾಮುಂದು ತಾಮುಂದು ಎಂದು ಸುದ್ದಿ ಬಿತ್ತರಿಸುತ್ತಿರುವಾಗ, ಪ್ರತಿಷ್ಠಿತ ಜಾಗತಿಕ ಸುದ್ದಿ ಸಂಸ್ಥೆಗಳು ಪ್ರತ್ಯಕ್ಷ ವರದಿಯನ್ನು ಪ್ರಕಟಿಸಿ ಒಬ್ಬ ನಾಗರಿಕ ಮಾತ್ರ ಸಾವಿಗೀಡಾಗಿರುವುದೆಂದು ತಿಳಿಸಿದವು. ಅಲ್ಲದೆ ಧ್ವಂಸವಾಗಿದ್ದು ಕೇವಲ ಮರಗಿಡಗಳು ಎಂದೂ ಹೇಳಿಬಿಟ್ಟವು. ಈ ಎಲ್ಲಾ ಟಿವಿ ವಾಹಿನಿಗಳಿಗೆ ದಾಳಿಯಿಂದ ಹತರಾದವರ ಸಂಖ್ಯೆ ಕೊಟ್ಟವರು ಯಾರು? ಇಂತಹ ಸುಳ್ಳು ಸುದ್ದಿಯನ್ನು ಯಾವುದೇ ನಾಚಿಕೆ, ಭಯವಿಲ್ಲದೆ ಪ್ರಸಾರ ಮಾಡುತ್ತವಲ್ಲಾ, ಏನಿದರ ಅರ್ಥ? ಇದರ ಹಿಂದೆ ಇರುವ ರಾಜಕೀಯ ಪ್ರೇರಣೆಯಾದರೂ ಏನು? ಬಿಜೆಪಿಯ ನಾಯಕರು ಫುಲ್ವಾಮಾ ದಾಳಿಯಿಂದ ಹಿಡಿದು ಬಾಲಾಕೋಟ್ ವರೆಗೂ ತಮ್ಮ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿರುವಾಗ ಮಾಧ್ಯಮಗಳ ವರ್ತನೆಗೂ ಇದಕ್ಕೂ ಸಂಬಂಧವಿದೆ ಎನ್ನಲಾದೀತೆ? ಮಾಧ್ಯಮಗಳ ಈ ಹೊಣೆಗೇಡಿತನ ನಮ್ಮ ಸೇನಾಪಡೆಗಳನ್ನು ಜಗತ್ತಿನೆದುರು ಅಪಮಾನಿಸಿದಂತಲ್ಲವೇ? ಒಂದು ಚಾನೆಲ್ ನಲ್ಲಂತೂ ಭಾರತ ಪಾಕಿಸ್ತಾನಗಳ ನಡುವಿನ ಈ ಘರ್ಷಣೆಯ ಬಗ್ಗೆ ವರದಿ ಮಾಡುವಾಗ ನಿರೂಪಕ ಸೇನೆಯ ಉಡುಪು ಧರಿಸಿ ಕೈನಲ್ಲೊಂದು ಆಟಿಕೆಯ ಕೋವಿಯನ್ನಿಡಿದಿರುತ್ತಾನೆ. ಯುದ್ಧ, ಸೇನಾಪಡೆಗಳ ಘರ್ಷಣೆ ಎಂದರೆ ಈ ಮೂಢರು ಮಕ್ಕಳ ಆಟ ಎಂದು ತಿಳಿದಿರುವರಾ? ಸ್ಟುಡಿಯೋದೊಳಗೆ ಕುಳಿತು ಸೈನಿಕರನ್ನು ಬಲಿಕೊಡುವುದು ಯಾವ ದೇಶಪ್ರೇಮದ ಮಾದರಿ ಇದು? ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಬುದ್ಧಿಗೆ ಧಿಕ್ಕಾರವಿರಲಿ.
ವಿಂಗ್ ಕಮಾಂಡರ್ ಅಭಿನಂದನ್ ಅವರ ಕುರಿತ ಸುದ್ದಿ ಪ್ರಕಟಿಸಿ ಮಾಧ್ಯಮಗಳು ಇನ್ನೊಂದು ಘೋರ ಅಪರಾಧವನ್ನೆಸಗಿವೆ. ಶತ್ರುವಿನ ಸುಪರ್ಧಿಯಲ್ಲಿರುವ ಯೋಧನೊಬ್ಬನ ಮಾಹಿತಿಗಳನ್ನು ಬಹಿರಂಗಗೊಳಿಸಬಾರದು ಎಂಬ ಸಾಮಾನ್ಯಪ್ರಜ್ಞೆಯೂ ಇಲ್ಲದ ಪತ್ರಕರ್ತರು, ಕನಿಷ್ಠ ಪಾಕಿಸ್ತಾನಿ ಸೇನಾಪಡೆಗಳ ಕೈಗಳಲ್ಲಿ ಸೆರೆಸಿಕ್ಕಿ ಯಾವ ಸಂದರ್ಭದಲ್ಲೂ ತನ್ನ ಮಾಹಿತಿಗಳನ್ನು ಹೇಳದೆ ತಡೆಹಿಡಿದುಕೊಂಡ ವಿಡೀಯೊ ಕ್ಲಿಪಿಂಗ್ನಾದರೂ ಗಮನಿಸಬಾರದಿತ್ತೇ? ಶತ್ರುಗಳ ಹಿಡಿತದಲ್ಲಿದ್ದರೂ ವಿಂಗ್ ಕಮಾಂಡರ್ ಗೌಪ್ಯವಾಗಿಡಬೇಕಿದ್ದ ವಿಚಾರಗಳನ್ನು ಗೌಪ್ಯವಾಗಿಯೇ ಇಟ್ಟು ತಮ್ಮ ಕರ್ತವ್ಯಪ್ರಜ್ಞೆ ಮತ್ತು ಬದ್ಧತೆ ಮೆರೆದಿದ್ದಾರೆ. ಅವರಿಗೆ ನಮ್ಮೆಲ್ಲರ ಪ್ರೀತಿಯ ಗೌರವಪೂರ್ವಕ ಸೆಲ್ಯೂಟ್. ಆದರೆ ಅವರ ಮಾಹಿತಿಗಳನ್ನು ಜಗತ್ತಿಗೇ ಬಿಚ್ಚಿಟ್ಟು ದೇಶದ್ರೋಹ ಎಸಗಿದ ಮಾಧ್ಯಮಗಳಿಗೆ ಶಿಕ್ಷೆ ಏನು? ಈ ಮಾಧ್ಯಮಗಳು ಮಾಡುತ್ತಿರುವ ಅನಾಹುತ, ಅಪಚಾರಗಳಿಗೆ ಕಡಿವಾಣವೇ ಇಲ್ಲವೇ? ಕೆಲವು ಪತ್ರಿಕೆಗಳಂತೂ ಭಾರತೀಯ ಸೇನೆಯನ್ನು ನಮೋ ಸೇನೆ ಎಂದು ನಾಮಕರಣ ಮಾಡಿಬಿಟ್ಟವು. ಸೇನಾಪಡೆಗಳು ಈ ದೇಶಕ್ಕೆ ಸೇರಿದ್ದೇ ಹೊರತು ಯಾವ ವ್ಯಕ್ತಿಯದ್ದಲ್ಲ. ಇದು ಪ್ರಜಾಪ್ರಭುತ್ವವೇ ವಿನಾ ಸರ್ವಾಧಿಕಾರವಲ್ಲ. ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ, ವಿರೋಧಿಸುವವರಿಗೆ ರಾಷ್ಟ್ರದ್ರೋಹಿಗಳೆಂದು ಹಣೆಪಟ್ಟಿ ಹಚ್ಚುವ ಈ ಭೂಪರು ಸೇನೆಯನ್ನು ಯಾರದ್ದೋ ಸ್ವತ್ತೆಂಬುದಾಗಿ ಬರೆಯುವಾಗ ಇವರ ದೇಶಭಕ್ತಿ ಎಲ್ಲಿ ಹೋಗಿತ್ತೋ?
ಫುಲ್ವಾಮಾ ದಾಳಿಯಲ್ಲಿ ಬಲಿಯಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಪಶ್ಚಿಮ ಬಂಗಾಳದ ಸಿಆರ್ಪಿಎಫ್ ಯೋಧನೊಬ್ಬನ ಮಡದಿ ತನ್ನ ಅನುಭವದ ಮೂಲಕ ಕಂಡುಕೊಂಡ ಸತ್ಯವನ್ನು ಬಹಿರಂಗಗೊಳಿಸಿದಳು. ಯುದ್ಧ ನಡೆಸುವುದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹೀನಾಮಾನ ಹೀಯಾಳಿಸಲಾಗುತ್ತಿದೆ. ಯುದ್ಧ ಎಂದರೇನೆಂಬ ಪರಿಕಲ್ಪನೆಯೂ ಇಲ್ಲದ ಹುಚ್ಚುಪಡೆಗಳು ಟಿವಿ ಮಾಧ್ಯಮ ಮತ್ತು ಬಿಜೆಪಿ ನಾಯಕರು ಸೃಷ್ಟಿಸಿರುವ ಉನ್ಮಾದದಿಂದ ತಮ್ಮ ಬದುಕಿನ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಯುದ್ಧೋನ್ಮಾದದ ಭ್ರಮಾಲೋಕದಲ್ಲಿ ತೇಲಾಡುತ್ತಿವೆ. ದೇಶಪ್ರೇಮ ಎಂದರೆ ಜೀವಗಳನ್ನು ಬಲಿಕೊಡುವುದಲ್ಲ ಎಂಬ ಸರಳ ಸತ್ಯವನ್ನರಿಯಲು ಸಂಘಪರಿವಾರ ಪೋಷಿತ ಮಾಧ್ಯಮಗಳು ಜನತೆಗೆ ಅವಕಾಶ ನೀಡುತ್ತಿಲ್ಲ. ಸತ್ಯವನ್ನು ನೇರವಾಗಿ ನುಡಿದ ಈ ದಿಟ್ಟ ಮಹಿಳೆಯ ಜೊತೆ ನಾವೆಲ್ಲರೂ ನಿಲ್ಲೋಣ.
ಪಾಕಿಸ್ತಾನ ಎಂಬ ರಾಷ್ಟ್ರ ಜನ್ಮ ತಳೆದಿದ್ದೇ ರಕ್ತದ ಮಡುವಿನಲ್ಲಿ ಎಂಬ ಕಹಿಸತ್ಯ ಭಾರತದ ವಿಭಜನೆಯ ನೋವಿನ ಚರಿತ್ರೆಯಲ್ಲಿ ಅಡಗಿದೆ. ಈ ನೆರೆಹೊರೆಯ ರಾಷ್ಟ್ರಗಳಿಗೆ ಯುದ್ಧದ ಹೊಗೆ ಹೊಸದೇನಲ್ಲ ಮತ್ತು ಎರಡೂ ದೇಶಗಳ ಕಪಟ ರಾಜಕಾರಣಿಗಳು ಪರಸ್ಪರ ಇನ್ನೊಂದು ದೇಶದತ್ತ ಬೊಟ್ಟು ಮಾಡಿಕೊಂಡೇ ತಮ್ಮ ಕುಟಿಲ ರಾಜಕೀಯ ತಂತ್ರವನ್ನು ಹೆಣೆಯುತ್ತಿರುವುದು ವಾಸ್ತವ. ಭಾರತದಲ್ಲಿ ಬಿಜೆಪಿಯಂತಹ ಬಲಪಂಥೀಯ ರಾಜಕೀಯ ಪಕ್ಷಗಳು ಪಾಕಿಸ್ತಾನವನ್ನು ತೋರಿಸದೇ ರಾಜಕಾರಣ ಮಾಡಿದ ದಿನಗಳೇ ಇಲ್ಲ ಎಂದು ಹೇಳಬಹುದು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೂ ಪಾಕಿಸ್ತಾನದ ವಿರುದ್ಧ ಅತ್ಯುಗ್ರವಾಗಿ ಭಾಷಣಗಳನ್ನು ಮಾಡಿದ ಬಿಜೆಪಿ ನಾಯಕರು ಜನರನ್ನು ಕೆರಳಿಸಿದ್ದು ಹೌದು. ಪಾಕಿಸ್ತಾನವೂ ಭಾರತದ ವಿರುದ್ಧ ಇದೇ ರೀತಿಯ ವೈಷಮ್ಯವನ್ನು ಹುಟ್ಟುಹಾಕುವಲ್ಲಿ ಹಿಂದೆ ಬೀಳಲಿಲ್ಲ. ಅದು ಉಗ್ರಗಾಮಿ ಸಂಘಟನೆಗಳನ್ನು ಸಾಕಿ ಸಲುಹಿತು. ಇದಕ್ಕೆ ಅಮೆರಿಕ ತನ್ನ ಹಿತಾಸಕ್ತಿಗಾಗಿ ತುಪ್ಪ ಸುರಿಯುತ್ತಲೇ ಬಂದಿದೆ.
ಒಟ್ಟಾರೆ ಈ ಪ್ರದೇಶದಲ್ಲಿ ಸೌಹಾರ್ದಯುತ ಮಾತುಕತೆಗಳೊಂದಿಗೆ ಶಾಂತಿಯುತ ವಾತಾವರಣ ಸೃಷ್ಟಿಸುವ ಬದಲು ಕಾಶ್ಮೀರ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಸ್ವಯಂನಿರ್ಣಯದ ಹಕ್ಕಿಗಾಗಿ ಹೋರಾಡುತ್ತಿರುವ ಕಾಶ್ಮೀರದ ಜನತೆ ಇತ್ತ ಭಾರತೀಯ ಸೇನೆಯಿಂದಲೂ ಅತ್ತ ಪಾಕಿಸ್ತಾನಿ ಉಗ್ರರಿಂದಲೂ ದೌರ್ಜನ್ಯಕ್ಕೊಳಗಾಗುತ್ತಾ, ಅವರ ಬದುಕು ಬಾಂಬು ಬಂದೂಕುಗಳ ನಡುವೆ ನೆತ್ತರಿನಲ್ಲಿ ಮುಳುಗಿಹೋಗಿದೆ. ಗಡಿ ರೇಖೆಯ ಎರಡೂ ಬದಿಗಳಲ್ಲಿ ವಿಷವನ್ನೇ ಬಿತ್ತುವ ಕೆಲಸ ನಡೆದಿರುವುದು ಮಾನವಕುಲಕ್ಕೆ ಅವಮಾನಕರ. ನರೇಂದ್ರ ಮೋದಿಯವರ ಆಡಳಿತದಲ್ಲಿ ಸತ್ಯ, ಶಾಂತಿ, ವೈಚಾರಿಕತೆ, ವೈಜ್ಞಾನಿಕತೆಗಳು ಬಲಿಪಶುಗಳಾಗಿವೆ. ಅಂತೆಯೇ ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳೂ ಸಹ.. ಮಾಧ್ಯಮಗಳು, ಅದರಲ್ಲೂ ಟಿವಿ ವಾಹಿನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನರಿತು ನೈತಿಕಪ್ರಜ್ಞೆಯಿಂದ ವರ್ತಿಸಬೇಕಿದೆ, ಯಾವುದೋ ಒಂದು ರಾಜಕೀಯ ಪಕ್ಷದ ವಕ್ತಾರರಂತೆ ಕಾರ್ಯನಿರ್ವಹಿಸಿ ಜನತೆಯನ್ನು ತಪ್ಪುದಾರಿಗೆ ಎಳೆಯುವುದು ದೇಶಕ್ಕೇ ಅಪಾಯಕಾರಿ. ಅಂತಹ ಭ್ರಷ್ಟರನ್ನು ಮುಂದಿನ ಪೀಳಿಗೆಗಳು ಖಂಡಿತಾ ಕ್ಷಮಿಸುವುದಿಲ್ಲ. ಯುದ್ಧವೇ ಎಲ್ಲದಕ್ಕೂ ಪರಿಹಾರ ಎಂಬುದು ಅಜ್ಞಾನವಲ್ಲದೆ ಬೇರೇನಲ್ಲ… ಅಂದ ಹಾಗೆ ಇವತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆ… ಅಜ್ಞಾನ ಅಳಿಯಲಿ, ವಿಜ್ಞಾನ ಬೆಳೆಯಲಿ.
ಜ್ಯೋತಿ ಎ.
Disclaimer: The views expressed in the articles are those of the authors and do not necessarily represent or reflect the views of TruthIndia