ಒಂದು ಅಂತಾರಾಷ್ಟ್ರೀಯ ಒಪ್ಪಂದ, ಅಂತಾರಾಷ್ಟ್ರೀಯ ಒತ್ತಡ ಹಾಗೂ ಜನಸಾಮಾನ್ಯರ ಭಾವನಾತ್ಮಕ ಕೂಗನ್ನು ಮೀರಿದ, ಪಕ್ಷ ಹಾಗೂ ವ್ಯಕ್ತಿಗತ ಸ್ವಾರ್ಥವನ್ನು ಮೀರಿದ ನಾಯಕತ್ವದ ನಿರ್ಧಾರಗಳು ಎಂತಹ ಫಲಿತಾಂಶ ನೀಡಬಲ್ಲವು ಎಂಬುದಕ್ಕೆ ಶುಕ್ರವಾರ ವಾಘಾ ಗಡಿ ಸಾಕ್ಷಿಯಾಯಿತು.
ಭಾರತೀಯ ವಾಯುಪಡೆ ಕಳೆದ ಮಂಗಳವಾರ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್ ಪ್ರದೇಶದ ಉಗ್ರರ ನೆಲೆ ಮೇಲೆ ವಾಯುದಾಳಿ ನಡೆಸಿ, ಉಗ್ರ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿತ್ತು. ಅದಾದ ಮಾರನೇ ದಿನ, ಬುಧವಾರ ಗಡಿನಿಯಂತ್ರಣ ರೇಖೆ ಬಳಿ ಪಾಕ್ ಯುದ್ಧ ವಿಮಾನ ಎಫ್ 26ನ್ನು ಹೊಡೆದುರುಳಿಸಿದ್ದ ಮಿಗ್ 21 ವಿಮಾನದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್ ಗಡಿಯೊಳಗೆ ಬಿದ್ದಿದ್ದರು. ಅವರನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪಾಕ್ ಸೇನೆಗೆ ಒಪ್ಪಿಸಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು.
ಆದರೆ, ರಾಜತಾಂತ್ರಿಕ ಒತ್ತಡ, ವಿಶ್ವದ ಪ್ರಮುಖ ರಾಷ್ಟ್ರಗಳ ಕಿವಿಮಾತು ಹಾಗೂ ಮುಖ್ಯವಾಗಿ ಯುದ್ಧ ಕೈದಿಗಳನ್ನು ಪರಸ್ಪರ ಗೌರವದಿಂದ ನಡೆಸಿಕೊಳ್ಳುವ ಮತ್ತು ಆಯಾ ದೇಶಕ್ಕೆ ಹಸ್ತಾಂತರಿಸುವ ಕುರಿತ ಜಿನೇವಾ ಒಪ್ಪಂದಕ್ಕೆ ತಲೆಬಾಗಿದ ಪಾಕ್ ಪ್ರಧಾನಿ, ಇಮ್ರಾನ್ ಖಾನ್ ಅಭಿನಂದನ್ ಅವರನ್ನು ಶಾಂತಿಯ ನಡೆಯ ಸಂಕೇತವಾಗಿ ಶುಕ್ರವಾರ ಭಾರತಕ್ಕೆ ಹಸ್ತಾಂತರಿಸುವುದಾಗಿ ಘೋಷಿಸಿದ್ದರು. ಪಾಕಿಸ್ತಾನದ ಕೆಲವು ಯುದ್ಧನ್ಮಾದಿ ಗುಂಪುಗಳು ಅಭಿನಂದನ್ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ವರದಿಗಳ ಹೊರತಾಗಿಯೂ ಪ್ರಧಾನಿ ಇಮ್ರಾನ್ ಅವರ ಈ ನಿರ್ಧಾರ, ಪಾಕ್ ಮತ್ತು ಭಾರತದ ನಡುವಿನ ಸದ್ಯದ ವಿಷಮ ಪರಿಸ್ಥಿತಿಯನ್ನು ಶಮನಗೊಳಿಸಿರುವುದಷ್ಟೇ ಅಲ್ಲ; ಈ ಐತಿಹಾಸಿಕ ನಿರ್ಧಾರ ಭವಿಷ್ಯದ ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೂ ಹೊಸ ತಿರುವು ನೀಡಬಹುದು ಎಂಬ ವ್ಯಾಖ್ಯಾನಗಳೂ ಕೇಳಿಬರುತ್ತಿವೆ.
ಈ ನಡುವೆ, ಇಮ್ರಾನ್ ಖಾನ್ ಅಭಿನಂದನ್ ಬಿಡುಗಡೆಗೆ ಮುನ್ನ ಭಾರತ ಮಾತುಕತೆಗೆ ಬರಬೇಕು ಎಂಬ ಬೇಡಿಕೆಯನ್ನೂ ಬುಧವಾರ ಇಟ್ಟಿದ್ದರು. ಆದರೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವವರೆಗೆ, ಉಗ್ರರನ್ನು ಸದೆಬಡಿಯುವವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಭಾರತ ಆ ಪ್ರಸ್ತಾಪವನ್ನು ತಳ್ಳಿಹಾಕಿತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ಆದರೆ, ಗುರುವಾರದ ಹೊತ್ತಿಗೆ ಪಾಕ್ ಪ್ರಧಾನಿಯ ವರಸೆ ಬದಲಾಗಿತ್ತು. ಅದಕ್ಕೆ ಪ್ರಮುಖ ಕಾರಣ ಜಿನೇವಾ ಒಪ್ಪಂದದ ಕಠಿಣ ಷರತ್ತುಗಳು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿರುವ ಸಂಗತಿ.
1949ರ ಮೂರನೇ ಜಿನೇವಾ ಒಪ್ಪಂದಕ್ಕೆ ಸಹಿ ಮಾಡಿದ ದೇಶಗಳು ಯಾವುದೇ ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು. ಯುದ್ಧ ಕೈದಿಗಳ ಹಕ್ಕುಗಳನ್ನು ನಿಗದಿ ಮಾಡಿರುವ ಒಪ್ಪಂದ, ಎಂತಹದ್ದೇ ಸಂದರ್ಭದಲ್ಲಿ ದೇಶಗಳು ಯುದ್ಧ ಕೈದಿಗಳ ಹಕ್ಕುಗಳನ್ನು ಉಲ್ಲಂಘಿಸುವಂತಿಲ್ಲ ಎನ್ನುತ್ತದೆ. ಯುದ್ಧಕೈದಿಗಳಿಗೆ ಯಾವುದೇ ಬಗೆಯ ಹಿಂಸೆ ನೀಡುವಂತಿಲ್ಲ, ಬೆದರಿಸುವಂತಿಲ್ಲ, ಅವಮಾನಿಸುವಂತಿಲ್ಲ ಮತ್ತು ಕನಿಷ್ಠ ವಸತಿ, ವಸ್ತ್ರ, ಆಹಾರ ಹಾಗೂ ಅಗತ್ಯ ವೈದಕೀಯ ನೆರವು ನೀಡಬೇಕು ಎನ್ನುತ್ತದೆ ಜಿನೇವಾ ಒಪ್ಪಂದ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮಧ್ಯಸ್ಥಿಕೆಯಲ್ಲಿ ಬಂಧಿತ ಯೋಧರನ್ನು ಆಯಾ ದೇಶಕ್ಕೆ ಹಸ್ತಾಂತರಿಸಬೇಕು ಎಂಬ ಷರತ್ತು ಕೂಡ ಇದ್ದು, ಇದೀಗ ಪಾಕಿಸ್ತಾನ ಆ ಒಪ್ಪಂದಕ್ಕೆ ಬದ್ಧವಾಗಿ ಅಭಿನಂದನ್ ಅವರನ್ನು ಭಾರತಕ್ಕೆ ವಾಪಸು ಕಳಿಸುತ್ತಿದೆ ಎನ್ನಲಾಗಿದೆ.
ಪಾಕಿಸ್ತಾನ ಸೆರೆ ಹಿಡಿದಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಶುಕ್ರವಾರ ಸಂಜೆ ವಾಘಾ ಗಡಿಯಲ್ಲಿ ದೇಶಕ್ಕೆ ಹಸ್ತಾಂತರಿಸುವ ಮುಹೂರ್ತ ನಿಗದಿಯಾದ ಹಿನ್ನೆಲೆಯಲ್ಲಿ ಇಡೀ ದಿನ ಬೆಳಗಿನಿಂದ ದೇಶದ ಮೂಲೆಮೂಲೆಯಲ್ಲಿ ಭಾರೀ ಸಂಭ್ರಮಾಚರಣೆಗಳು ಮುಗಿಲುಮುಟ್ಟಿದ್ದವು.
ಈ ನಡುವೆ, ನಮ್ಮ ಯೋಧನೊಬ್ಬ ಪಾಕಿಸ್ತಾನದಲ್ಲಿ ಸೆರೆಯಾಗಿರುವ ಸಂದರ್ಭದಲ್ಲಿಯೂ ಅಪಾಯದಲ್ಲಿರುವ ಅವರ ಜೀವ ಮತ್ತು ಅವರ ಕುಟುಂಬದ ಭಾವನೆಗಳನ್ನು ಮರೆತು, ದೇಶದ ಉದ್ದಗಲಕ್ಕೆ ಕೆಲವು ಯುದ್ಧದಾಹಿ ಗುಂಪುಗಳು ಅಭಿನಂದನ್ ಬಿಡುಗಡೆ ವಿಷಯ ಮತ್ತು ಪಾಕಿಸ್ತಾನದ ನಿಲುವನ್ನು ಕೂಡ ಒಂದು ಪಕ್ಷ, ಒಬ್ಬ ವ್ಯಕ್ತಿಯ ಯಶಸ್ಸು ಎಂಬಂತೆ ಬಿಂಬಿಸಿ ಸಂಭ್ರಮಿಸಿದರು. ಟಿವಿ ಮಾಧ್ಯಮಗಳು ಕೂಡ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಮರೆತು ಯುಧ್ಧೋನ್ಮಾದ ಮೆರೆದವು.
ಈ ನಡುವೆ, ಶುಕ್ರವಾರ ವಾಘಾ ಗಡಿಯಲ್ಲಿ ಕೂಡ ಸಾವಿರಾರು ಮಂದಿ ವೀರ ಯೋಧನ ಸ್ವಾಗತಕ್ಕೆ ದಿನವಿಡೀ ಕಾದಿದ್ದರು ಸಂಜೆ ಏಳರ ಹೊತ್ತಿಗೆ ಅಭಿನಂದನ್ ಅವರನ್ನು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ವಾಘಾ ಗಡಿಗೆ ಕರೆತರಲಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅವರು ವಾಘಾದಿಂದ ದೆಹಲಿಗೆ ತೆರಳಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಈ ನಡುವೆ, ಅಭಿನಂದನ್ ಹಸ್ತಾಂತರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಂಜೆ 6.30ಕ್ಕೆ ಭಾರತೀಯ ವಾಯುಪಡೆಯ ಉನ್ನತಾಧಿಕಾರಿಗಳು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಲಾಯಿತು. ಬಳಿಕ, ಹಲವು ಮಿಲಿಟರಿ ವಾಹನಗಳನ್ನೊಳಗೊಂಡ ಪಾಕಿಸ್ತಾನದ ತಂಡ ವಾಘಾ ಗಡಿಗೆ ಬಂದಿತು. ಆದರೆ, ನಿರೀಕ್ಷೆಯಂತೆ 6.30ರ ಹೊತ್ತಿಗೆ ಅಭಿನಂದನ್ ಹಸ್ತಾಂತರ ಪೂರ್ಣಗೊಂಡಿಲ್ಲ.
ಈ ನಡುವೆ, ಸಂಜೆ ಹೊತ್ತಿಗೆ ಪಾಕಿಸ್ತಾನ ಸೇನೆ ಅಭಿನಂದನ್ ಅವರ ಕೈಗಳನ್ನು ಕಟ್ಟಿ ಹಿಂಸೆ ನೀಡಿದೆ ಎಂಬಂತೆ ಚಿತ್ರಿಸಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೆ, ಅದಾದ ಕೆಲವೇ ಕ್ಷಣಗಲ್ಲಿ ಪಾಕ್ ಸರ್ಕಾರ ಆ ವೀಡಿಯೋಗಳನ್ನು ಜಾಲತಾಣದಿಂದ ತೆಗೆದುಹಾಕಿದೆ ಎಂಬ ವರದಿಗಳೂ ಇವೆ. ಅಭಿನಂದನ್ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗೆಯ ಸುದ್ದಿಗಳು ದೇಶವ್ಯಾಪಿ ಮತ್ತೊಂದು ಸುತ್ತಿನ ಆತಂಕ ಹೆಚ್ಚಿಸಿವೆ. ಅದೇ ಹೊತ್ತಿಗೆ, ಯುದ್ಧ ಕೈದಿಗಳ ಹಸ್ತಾಂತರ ನಿಯಮಾನುಸಾರ ಅನುಸರಿಸಬೇಕಾದ ದೈಹಿಕ ಮತ್ತು ಮಾನಸಿಕ ವೈದ್ಯಕೀಯ ಪರೀಕ್ಷೆ, ಉಭಯ ರಾಷ್ಟ್ರಗಳ ನಡುವಿನ ಕೆಲವು ದಾಖಲೆಪತ್ರಗಳಿಗೆ ಸಹಿ ಮುಂತಾದ ರೀತಿ-ರಿವಾಜುಗಳನ್ನು ಪೂರ್ಣಗೊಳಿಸಬೇಕಿದೆ. ಆ ಹಿನ್ನೆಲೆಯಲ್ಲಿ ವಿಳಂಬವಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದರೆ, ಅಭಿನಂದನ್ ಹಸ್ತಾಂತರದ ಸಮಯದ ಬಗ್ಗೆಯಾಗಲೀ, ವಿಳಂಬದ ಬಗ್ಗೆಯಾಗಲೀ, ಅವರನ್ನು ನೇರವಾಗಿ ದೇಶದ ಉನ್ನತ ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಲಾಗುತ್ತದೆಯೇ ಅಥವಾ ರೆಡ್ ಕ್ರಾಸ್ ಮೂಲಕ ಹಸ್ತಾಂತರ ನಡೆಯುತ್ತದೆಯೇ? ಎಂಬ ಬಗ್ಗೆ ಭಾರತ ಅಥವಾ ಪಾಕಿಸ್ತಾನ ಈವರೆಗೆ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ ಎಂಬುದು ಗಮನಾರ್ಹ.