ಲಕ್ಷಾಂತರ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಫೆಬ್ರವರಿ13 ರ ತನ್ನ ಆದೇಶಕ್ಕೆ ನೆನ್ನೆ ಸುಪ್ರೀಂ ಕೋರ್ಟ್ ತಡೆ ತಂದ ಬೆಳವಣಿಗೆಯ ನಡುವೆಯೂ ಜಾರ್ಖಂಡಿನ ಆದಿವಾಸಿಗಳು ಬೀದಿಗಿಳಿದಿದ್ದಾರೆ. ಕೋರ್ಟ್ ತೀರ್ಪು ಮತ್ತು ಸರ್ಕಾರಗಳ ಹೊಣೆಗೇಡಿತನದ ವಿರುದ್ಧ ಬರುವ ದಿನಗಳಲ್ಲಿ ದೇಶದಾದ್ಯಂತ ಲಕ್ಷಾಂತರ ಬುಡಕಟ್ಟು ಆದಿವಾಸಿಗಳು, ಅರಣ್ಯವಾಸಿಗಳು ಬಂಡಾಯ ಸಾರುವ ಸೂಚನೆ ನೀಡಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ವಾಸಿಸುವ, ದೇಶದ 17 ರಾಜ್ಯಗಳ ಅದಿವಾಸಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ರಾಷ್ಟ್ರಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಅರಣ್ಯಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗಗಳ 10 ಲಕ್ಷ ಜನರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ, ತಲತಲಾಂತರದಿಂದ ಅಲ್ಲೇ ವಾಸಿಸುತ್ತ ಬಂದಿರುವ ಮೂಲನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಆವಾಸಸ್ಥಳವನ್ನು ಬಿಡಲೊಪ್ಪದ, ಅರಣ್ಯಪ್ರದೇಶಗಳಲ್ಲಿ ನೆಲೆಸಿರುವ ಮೂಲನಿವಾಸಿಗಳು ಮತ್ತು ಬುಡಕಟ್ಟು ಕುಟುಂಬಗಳಿಗೂ ಇದು ಅಂತಿಮ ಆದೇಶವಾಗಿದೆ. 2019ರ ಜುಲೈ 27ರ ಒಳಗೆ ಎಲ್ಲಾ ಕುಟುಂಬಗಳು ಸ್ಥಳಾಂತರವಾಗಬೇಕು ಎಂದೂ ಕೋರ್ಟ್ ಅಂತಿಮ ಗಡುವು ನೀಡಿರುವುದು ಅವರಲ್ಲಿ ಕಿಚ್ಚು ಹಚ್ಚಿದೆ.
ಕೋರ್ಟ್ ಆದೇಶವನ್ನು ಖಂಡಿಸಿ ಮಾರ್ಚ್ ಫಾರ್ ಫಾರೆಸ್ಟ್ ಮತ್ತು ಲ್ಯಾಂಡ್ ರೈಟ್ಸ್ (ಎಂಎಫ್ಎಲ್ಆರ್), ಜಂಗಲ್ ಜಮೀನ್ ಅಧಿಕಾರ್ ಪಾದಯಾತ್ರ – 2019 ಸಂಸ್ಥೆಗಳು ಒಟ್ಟಾಗಿ ಏಳು ದಿನಗಳ ಪಾದಯಾತ್ರೆಯನ್ನು ಫೆಬ್ರವರಿ 20ರಿಂದ ಆಯೋಜಿಸಿದೆ. ಜಾರ್ಖಂಡ್ ನ ರಾಂಚಿಯಲ್ಲಿ ತಮ್ಮ ಪೂರ್ವಿಕರ ಆಸ್ತಿಯ ಜೊತೆಗೇ, ನೀರು, ಕಾಡು, ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಬುಡಕಟ್ಟು ಜನಾಂಗಗಳು ಪ್ರತಿಭಟನೆ ಆರಂಭಿಸಿವೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಕಡೆಗಣಿಸಿದೆ ಎಂದು ಜನರು ಬೀದಿಗಿಳಿದು ಅಭಿಯಾನ ಕೈಗೊಂಡಿದ್ದಾರೆ.
ಮೊದಲ ದಿನದ ಪ್ರತಿಭಟನೆಯಲ್ಲಿ ಭೂಮಿರಹಿತ ರೈತರ ಸಮೂಹ ಮತ್ತು ಬುಡಕಟ್ಟು ಸಮುದಾಯದ ಜನರು ಜಾರ್ಖಂಡ್ ರಾಜ್ಯದ ಹಜಾರಿಭಾಗ್ ನ ಕೊಲಂಬಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಒಟ್ಟಾಗಿ ಜಮಾಯಿಸಿದ್ದರು. ಬರೋಬ್ಬರಿ ಬುಡಕಟ್ಟು ಸಮುದಾಯಕ್ಕೆ ಸೇರಿದ 20 ಸಾವಿರ ಜನರು ಸೇರಿ ಮೂಲಭೂತ ಸೌಕರ್ಯಗಳು ಹಾಗೂ ತಮ್ಮ ಪೂರ್ವಿಕರ ಭೂಮಿಗಾಗಿ ಆಗ್ರಹಿಸಿದ್ದಾರೆ. ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ, 2 ಕೆಜಿ ಆಲೂಗಡ್ಡೆ, ಸಕ್ಕರೆ, ಉಪ್ಪು ಮತ್ತು ಅಗತ್ಯ ಧಾನ್ಯಗಳು ಅವಶ್ಯವಿದ್ದು, ಈ ಸೌಲಭ್ಯಗಳು ಸಿಕ್ಕರೆ ಮಾತ್ರ ಜನರು ಆಹಾರ ಸೇವಿಸಲು ಸಾಧ್ಯ ಎಂದು ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಬುಡಕಟ್ಟು ಸಮುದಾಯ ಸಚಿವಾಲಯದ ಮಾಹಿತಿಯನ್ನು ಗಮನಿಸಿದರೆ, 2018ರ ನವೆಂಬರ್ ವರೆಗೆ 18.29 ಲಕ್ಷ ಬುಡಕಟ್ಟು ಹಾಗೂ ಅರಣ್ಯವಾಸಿ ಜನರ ಹಕ್ಕುಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಅರಣ್ಯ ಹಕ್ಕು ಕಾಯ್ದೆ – 2006ರ ಅಡಿಯಲ್ಲಿ ಕಾಡುಗಳಲ್ಲಿ ನೆಲೆಸಿದ್ದ ನಿವಾಸಿಗಳಿಗೆ ಕೋರ್ಟ್ ನ ಈ ತೀರ್ಮಾನ ಭೀತಿ ಹುಟ್ಟಿಸಿದೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ, ಅಲ್ಲದೇ ನಮ್ಮ ಪೂರ್ವಿಕರ ಕಾಲದಿಂದಲೂ ಕಾಡಿನಲ್ಲೇ ನೆಲೆಸಿದ್ದ ನಮ್ಮಂಥ ಲಕ್ಷಾಂತರ ಜನರನ್ನು ಸ್ಥಳಾಂತರಿಸಲು ಒತ್ತಡ ಹೇರುತ್ತಿದೆ. ಕೇಂದ್ರ ಸರ್ಕಾರದ ಸೊಕ್ಕಿನ, ದರ್ಪದ ಆದೇಶ ಇದಾಗಿದೆ” ಎಂದು ಬುಡಕಟ್ಟು ಸಮುದಾಯ ಕಿಡಿ ಕಾರಿದೆ. “ವಿವಿಧ ರಾಜ್ಯಗಳ ಬುಡಕಟ್ಟು ಸಮುದಾಯದ ಜನರು ಪ್ರತಿಭಟನೆಯಲ್ಲಿ ಸೇರಿದ್ದೇವೆ, ಎಲ್ಲರೂ ಒಟ್ಟಾಗಿ ಅಪೆಕ್ಸ್ ಕೋರ್ಟ್ ನಿರ್ಧಾರವನ್ನು ತಿರಸ್ಕರಿಸುತ್ತೇವೆ” ಎಂದು ಇವರು ಪಣ ತೊಟ್ಟಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಾರ್ಖಂಡ್ ಮುಕ್ತಿ ಮೋರ್ಚಾದ ಮಹಿಳಾ ಘಟಕದ ಅಧ್ಯಕ್ಷೆ ಮಹೌ ಮಂಜ್ಹಿ, “ಅರಣ್ಯವಾಸಿಗಳ ಹಕ್ಕುಗಳ ಪ್ರಕರಣವನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ, ಇದಕ್ಕೆ ಕೇಂದ್ರವೇ ಜವಾಬ್ದಾರಿ ಹೊರಬೇಕು. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿರುವ ಕಾರಣ ಕೋರ್ಟ್ ಈ ರೀತಿ ತೀರ್ಪು ನೀಡಿದೆ. ನಮ್ಮನ್ನು ಸ್ಥಳಾಂತರಿಸುವ ಈ ತೀರ್ಪನ್ನು ಮತ್ತೊಮ್ಮೆ ಅವಲೋಕಿಸಲು, ನಮ್ಮನ್ನು ರಕ್ಷಿಸಲು ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಿ. ಜಾರ್ಖಂಡ್ ನಲ್ಲಿ ಲಕ್ಷಾಂತರ ಅರಣ್ಯವಾಸಿಗಳಿದ್ದಾರೆ” ಎಂದು ಮನವಿ ಮಾಡಿದ್ದಾರೆ.
ರಾಜಸ್ತಾನದ ಬುಡಕಟ್ಟು ಸಮುದಾಯ ಸುಪ್ರೀಂಕೋರ್ಟ್ ಆದೇಶವನ್ನು ನಿರಾಕರಿಸಿದ್ದು, “ಇದು ನಮ್ಮನ್ನು ಉದ್ರೇಕಿಸುವಂತಹ ತೀರ್ಪು. ತಮ್ಮ ಪೂರ್ವಿಕರ ಹಕ್ಕನ್ನು ಕೇಳಿದ 37 ಸಾವಿರ ಕುಟುಂಬಗಳ ಮನವಿಯನ್ನು ಎಫ್ಆರ್ ಎ ಅಡಿಯಲ್ಲಿ ತಿರಸ್ಕರಿಸಿದೆ. ಅಲ್ಲದೇ ಇದೀಗ ಬನಸ್ವರದ 16 ಸಾವಿರ ಕುಟುಂಬಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ” ಎಂದಿದೆ.
ಒರಿಸ್ಸಾದ ನಿಯಮಗಿರಿ ಬೆಟ್ಟದಲ್ಲಿ ಒಟ್ಟು 8 ಸಾವಿರ ಡೊಂಗ್ರಿಯಾ ಕೊಂದ್ ಎಂಬ ದುರ್ಬಲ ಬುಡಕಟ್ಟು ಸಮುದಾಯದ ಜನರು ರಾಜ್ಯ ಸರ್ಕಾರದ ಗಣಿ ಯೋಜನೆಯ ವಿರುದ್ಧ ಹೋರಾಟ ನಡೆಸಿದ ನಂತರ ಹೊರಬಿದ್ದ ಸುಪ್ರೀಂಕೋರ್ಟ್ ಆದೇಶದಿಂದಾಗಿ ತತ್ತರಗೊಂಡಿದ್ದರು. ಬಹುಶಃ ಈ ಆದೇಶವೇನಾದರೂ ಜಾರಿಯಾಗಿದ್ದರೆ ನೂರಾರು ಜನರು ಮನೆಗಳನ್ನು ಕಳೆದುಕೊಳ್ಳಬೇಕಿತ್ತು, ಅರಣ್ಯವನ್ನು ತ್ಯಜಿಸಬೇಕಿತ್ತು. ಆದರೆ ನಾವು ಕೂಡಲೇ ನಮ್ಮ ಹಕ್ಕಿಗಾಗಿ ತೀವ್ರ ಹೋರಾಟ ನಡೆಸಿದ್ದೆವು ಎಂದು ನಿಯಮಗಿರಿ ಸಮಿತಿಯ ವಕ್ತಾರ ಲಿಂಗರಾಜ್ ಆಜಾದ್ ಹೇಳುತ್ತಾರೆ.
ಬುಡಕಟ್ಟು ಸಮುದಾಯದ ಪ್ರಾಥಮಿಕ ಬೇಡಿಕೆಗಳಿವು
ಬುಡಕಟ್ಟು ಸಮುದಾಯದ ಯುವಜನತೆ, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಅಂದಾಜು 10 ಸಾವಿರ ಜನರು ಅರಣ್ಯದಲ್ಲಿ ವಾಸವಿದ್ದಾರೆ. ಅವರ ಆದ್ಯತೆಯ ಬೇಡಿಕೆಗಳು ಇವು
* ಬುಡಕಟ್ಟು ಸಮುದಾಯಗಳ ವಿರುದ್ಧ ಅನುಚಿತವಾಗಿ ಹೂಡಿರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು
* ಸರ್ಕಾರವು ಬುಡಕಟ್ಟು ಸಮುದಾಯದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾದರೆ ಅಲ್ಲಿನ ಗ್ರಾಮದ ಜನರ ಅನುಮತಿ ಪಡೆಯಬೇಕು
* ಬುಡಕಟ್ಟು ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಪ್ರತ್ಯೇಕ ಬುಡಕಟ್ಟು ಇಲಾಖೆಯನ್ನು ರಚಿಸಬೇಕು
* ಅರಣ್ಯ ಹಕ್ಕುಗಳ ಕಾಯ್ದೆ – 2006ರ ಅಡಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ ಭೂಮಿ ಹಕ್ಕನ್ನು ಪ್ರಚಾರ ಮಾಡಿ ಆರು ತಿಂಗಳ ಒಳಗೆ ವಿಮೆ ಮಾಡಿಸಬೇಕು
* ಛೋಟಾನಾಗಪುರ ಒಕ್ಕಲುತನ ಕಾಯ್ದೆ (ಸಿಎನ್ ಟಿ) ಮತ್ತು ಸಂತಲ್ ಪರ್ಗಣ ಒಕ್ಕಲುತನ ಕಾಯ್ದೆ (ಎಸ್ ಪಿಟಿ) ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು
* ಸಮುದಾಯದ ಭೂಮಿಯನ್ನು ಭೂಮಿ ಬ್ಯಾಂಕ್ ನಿಂದ ಸ್ವತಂತ್ರಗೊಳಿಸಬೇಕು
* 2013ರ ಭೂ ಸ್ವಾಧೀನ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು