“ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಬಂಧನದಲ್ಲಿದ್ದರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ತಮ್ಮ ಎಂದಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ದೆಹಲಿ ಸಂಸತ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಕೇಜ್ರಿವಾಲ್, ಉಗ್ರರ ದಾಳಿಯಿಂದ ಇಡೀ ದೇಶದಲ್ಲಿ ದುಖಃದ ವಾತಾವರಣ ಮಡುಗಟ್ಟಿದೆ, ಜನತೆ ಕೋಪೋದ್ರಿಕ್ತರಾಗಿದ್ದಾರೆ. ಬೆನ್ನಲ್ಲೇ, ಬುಧವಾರ ಪಾಕಿಸ್ತಾನ ವಾಯುಪಡೆ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದು, ನಮ್ಮ ವಾಯು ಪಡೆ ಸಹ ಪ್ರತಿ ದಾಳಿ ನಡೆಸಿದೆ, ಈ ವೇಳೆ ನಮ್ಮ ಒಂದು ಯುದ್ಧ ವಿಮಾನ ನಾಶವಾಗಿದೆ, ಓರ್ವ ಪೈಲಟ್ ಪಾಕ್ ವಶದಲ್ಲಿದ್ದಾರೆ.
“ಇಡೀ ದೇಶ ಪ್ರಧಾನಿಗಳು ಹಾಗೂ ಸೇನಾ ಪಡೆಯ ಬೆಂಬಲಕ್ಕೆ ನಿಂತಿದೆ. ಎಲ್ಲಾ ಪಕ್ಷಗಳು ರಾಜಕೀಯವನ್ನು ಬದಿಗೊತ್ತಿ ಪ್ರಧಾನಿ ಮೋದಿ ಅವರ ಪರವಾಗಿ ನಿಂತಿದ್ದಾರೆ. ಆದರೆ ನಮ್ಮ ಪ್ರಧಾನಿ ಮೋದಿ ಅವರು ಮಾತ್ರ ಚುನಾವಣಾ ಪ್ರಚಾರದಲ್ಲಿ ನಿರತರಾಗಿ, ದೇಶವನ್ನು ಬಿಟ್ಟು ತಮ್ಮ ಬಿಜೆಪಿ ಪಕ್ಷವನ್ನು ಸಧೃಡಗೊಳಿಸುತ್ತಿರುವುದು ಖೇದಕರ ಸಂಗತಿ,’’ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದರು.
ವಾಸ್ತವದಲ್ಲಿ ಪ್ರಧಾನಿ ಮೋದಿ ಅವರು ಪಾಕ್ ಬಂಧನದಲ್ಲಿರುವ ನಮ್ಮ ಪೈಲಟ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ, ಅವರ ಭದ್ರತೆ ಕುರಿತು ಗಮನಹರಿಸಬೇಕಿತ್ತು. ಇದು ಅವರ ಜವಾಬ್ದಾರಿ ಕೂಡಾ. ಆದರೆ ಬದಲಾಗಿ ‘ನನ್ನ ಬೂತ್, ಬಾಳಾ ಮಜಬೂತಾಗಿದೆ’ (ಮೇರಾ ಬೂತ್ ಸಬ್ಸೆ ಮಜ್ ಬೂತ್) ಎಂಬ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಗಳನ್ನು ಮಾಡುತ್ತಾ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಕೇಜ್ರಿವಾಲ್, ಏಪ್ರಿಲ್ ಅಥವಾ ಮೇ ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಇದನ್ನು ಗಮನದಲ್ಲಿಟ್ಟುಕೊಂಡೇ ಗಡಿಯಲ್ಲಿ ಈ ಎಲ್ಲಾ ವಿದ್ಯಾಮಾನಗಳನ್ನು ನಡೆಸಲಾಗಿದೆಯೇ? ಎಂದೂ ಪ್ರಶ್ನಿಸಿದರು.
ಪಾಕ್ ಮೇಲೆ ವಾಯುಪಡೆ ನಡೆಸಿದ ದಾಳಿಯ ನಂತರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 22 ಸ್ಥಾನಗಳನ್ನು ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದಿದ್ದ ಕರ್ನಾಟಕದ ಬಿಜೆಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದ ಕೇಜ್ರಿವಾಲ್, 300 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಎಷ್ಟು ಯೋಧರನ್ನು ಹುತಾತ್ಮರಾಗಿ ಮಾಡುತ್ತೀರಿ?, ಬಿಜೆಪಿ ಮೃತ ದೇಹಗಳನ್ನು ಎಣಿಸುತ್ತಿದೆಯೇ? ಎಂಬ ಗಂಭೀರ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಹಾಕಿದ್ದಾರೆ.
ನಮ್ಮ ಯೋಧರೂ ಎಲ್ಲರಿಗಿಂತ ಶಕ್ತಿಶಾಲಿಗಳು: ಆಮ್ ಆದ್ಮಿ ಘೋಷಣೆ
ದೆಹಲಿ ಸದನದಲ್ಲಿ ಪ್ರಶ್ನಾವಳಿ ಅವಧಿ ಆರಂಭವಾಗುತ್ತಿದ್ದಂತೆ ಎಲ್ಲಾ ಎಎಪಿ ಸಚಿವರು ಹಾಗೂ ಶಾಸಕರು “ನಮ್ಮ ಯೋಧರೂ ಎಲ್ಲರಿಗಿಂತ ಶಕ್ತಿಶಾಲಿಗಳು’’ (ಮೇರಾ ಜವಾನ್ ಸಬ್ಸೆ ಮಜ್ ಬೂತ್) ಎನ್ನುತ್ತಾ ಘೋಷಣೆ ಕೂಗಿದರು.