ಆಪರೇಷನ್ ಸರ್ಚ್ ಲೈಟ್ಗೆ ತಯಾರಿ…
ಲಕ್ಷಾಂತರ ಹತ್ಯೆಗಳು, ಅತ್ಯಾಚಾರಗಳಿಗೆ ಕಾರಣವಾದ ಪಶ್ಚಿಮ ಪಾಕಿಸ್ತಾನದ ಸೇನಾಕಾರ್ಯಾಚರಣೆ ಹುಟ್ಟಿಕೊಂಡಿದ್ದು ರಾಜಕೀಯ ಕಾರಣಗಳಿಗೆ. ಈ ಕಾರ್ಯಾಚರಣೆಯ ಹಿನ್ನೆಲೆಯನ್ನು ಗಮನಿಸಿದರೆ ಒಂದು ದುರ್ಬಲ, ಬೇಜವಾಬ್ದಾರಿ ನಾಯಕತ್ವ ಇಡೀ ದೇಶವನ್ನು ಹೇಗೆ ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂಬುದು ಅರ್ಥವಾಗುತ್ತದೆ.
1970ರ ಮೊದಲ ಚುನಾವಣೆಯಲ್ಲಿ ಅವಾಮಿ ಲೀಗ್ ಪಾಕಿಸ್ತಾನ ಸಂಸತ್ತಿನ 312 ಸ್ಥಾನಗಳ ಪೈಕಿ 167ರಲ್ಲಿ ಗೆದ್ದು ಸರಳ ಬಹುಮತ ಪಡೆದುಕೊಂಡಿತ್ತು. ಪಾಕಿಸ್ತಾನ ಜನಸಂಖ್ಯೆಯ ಅರ್ಧದಷ್ಟಿದ್ದ ಬಂಗಾಳಿಗಳು ಅಧಿಕಾರ ಹಸ್ತಾಂತರವಾಗುತ್ತದೆ ಎಂದು ಕಾದಿದ್ದರು. ಆದರೆ ಹಾಗಾಗಲಿಲ್ಲ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಜುಲ್ಫಿಕರ್ ಅಲಿ ಭುಟ್ಟೋ ಯಾವ ಕಾರಣಕ್ಕೂ ದೇಶದ ಆಡಳಿತ ಚುಕ್ಕಾಣಿ ಬಂಗಾಳಿಗಳ ಕೈಸೇರುವುದನ್ನು ಒಪ್ಪಲಿಲ್ಲ. ಭುಟ್ಟೋ ನಿರಂತರವಾಗಿ ಅಧ್ಯಕ್ಷ ಯಾಹ್ಯಾ ಖಾನ್ ಮೇಲೆ ಒತ್ತಡ ಹೇರುತ್ತ ಬಂದರು. ಯಾಹ್ಯಾ ಖಾನ್ ನ್ಯಾಷನಲ್ ಅಸೆಂಬ್ಲಿ ಸಭೆಯನ್ನು ಮುಂದೂಡಿದರು. ಇದು ಪೂರ್ವ ಪಾಕಿಸ್ತಾನದಲ್ಲಿ ಆಕ್ರೋಶದ ತರಂಗಗಳನ್ನು ಏರಿಸಿತು. ಮಿಲಿಟರಿ ಮತ್ತು ನಾಗರಿಕರ ನಡುವೆ ಸಂಘರ್ಷಗಳು ಏರ್ಪಟ್ಟವು. ಬಂಗಾಳಿಗಳು ಮತ್ತು ಬಿಹಾರಿ ಮುಸ್ಲಿಮರ ನಡುವೆ ಗಲಭೆಗಳು ನಡೆದವು. ಯಾಹ್ಯಾ ಖಾನ್ ಢಾಕಾಗೆ ತೆರಳಿ ಅವಾಮಿ ಲೀಗ್ ಮುಖ್ಯಸ್ಥ ಶೇಕ್ ಮುಜಿಬುರ್ ರೆಹಮಾನ್ ಜತೆ ಮಾತುಕತೆ ನಡೆಸಿದರು. ನಂತರ ಪಿಪಿಪಿಯ ಜುಲ್ಫಿಕರ್ ಅಲಿ ಭುಟ್ಟೋ ಜತೆಗೂ ಮಾತುಕತೆಗಳಾದವು. ಚೋದ್ಯವೆಂದರೆ 81 ಸೀಟುಗಳನ್ನು ಗೆದ್ದಿದ್ದ ಭುಟ್ಟೋ 167 ಸೀಟುಗಳನ್ನು ಗೆದ್ದ ಮುಜಿಬುರ್ ಅವರಿಗೆ ಅಧಿಕಾರ ದೊರೆಯದಂತೆ ನೋಡಿಕೊಂಡರು. ಮಾತುಕತೆ ವಿಫಲವಾಯಿತು. ಅದರ ಬೆನ್ನಲ್ಲೇ ಪೂರ್ವ ಪಾಕಿಸ್ತಾನದಲ್ಲಿ ಆರಂಭಗೊಂಡಿದ್ದ ದಂಗೆಯನ್ನು ಶಮನ ಮಾಡಲು ಮಿಲಿಟರಿ ಕಾರ್ಯಾಚರಣೆಗೆ ಯಾಹ್ಯಾ ಖಾನ್ ನಿರ್ಧರಿಸಿದ್ದರು. ಘನಘೋರ ನರಮೇಧಗಳ ಇತಿಹಾಸ ಹೀಗೆ ಶುರುವಾಗಿತ್ತು.
ಅಧಿಕಾರ ಹಸ್ತಾಂತರಿಸದ ಪಶ್ಚಿಮ ಪಾಕಿಸ್ತಾನಿ ರಾಜಕಾರಣಿಗಳ ಮೇಲಿನ ಬಂಗಾಳಿಗಳ ಸಿಟ್ಟು ಬಿಹಾರಿ ಮುಸ್ಲಿಮರ ಮೇಲೆ ತಿರುಗಿಕೊಂಡಿತು. 1971 ರ ಮಾರ್ಚ್ ಆರಂಭದಲ್ಲಿ ಸುಮಾರು ಮುನ್ನೂರು ಬಿಹಾರಿಗಳನ್ನು ಚಿತ್ತಗಾಂಗ್ನಲ್ಲಿ ಉದ್ರಿಕ್ತ ದುಷ್ಕರ್ಮಿಗಳ ಗುಂಪೊಂದು ದಾರುಣವಾಗಿ ಕೊಂದುಹಾಕಿತು. ಈ ಘಟನೆಯನ್ನು ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗಾಗಿ ಕಾರಣವನ್ನಾಗಿ ಮಾಡಿಕೊಂಡಿತು. ಮಿಲಿಟರಿ ಕಾರ್ಯಾಚರಣೆಗೆ ಪಾಕಿಸ್ತಾನ ಇಟ್ಟ ಹೆಸರು ‘ಆಪರೇಷನ್ ಸರ್ಚ್ಲೈಟ್.
ಈ ಸಂದರ್ಭದಲ್ಲಿ ಪಾಕಿಸ್ತಾನ ಆಡಳಿತಗಾರರು ವಿವೇಕದಿಂದ ನಡೆದುಕೊಂಡಿದ್ದರೆ ಬಹುಶಃ ಪಾಕಿಸ್ತಾನ ವಿಭಜನೆಯಾಗುತ್ತಿರಲಿಲ್ಲವೇನೋ? ಆದರೆ ಅತಿಯಾದ ಆತ್ಮವಿಶ್ವಾಸ, ಬಂಗಾಳಿಗಳ ಮೇಲಿನ ದ್ವೇಷ ಅದಕ್ಕೆ ಎಡೆ ಮಾಡಿಕೊಡಲಿಲ್ಲ. ಆಪರೇಷನ್ ಸರ್ಚ್ಲೈಟ್ಗೂ ಮುನ್ನ ನಡೆದ ನಿರ್ಣಾಯಕ ಸಭೆಯಲ್ಲಿ ಪೂರ್ವ ಪಾಕಿಸ್ತಾನದ ವೈಸ್ ಅಡ್ಮಿರಲ್ ಸೈಯದ್ ಮಹಮದ್ ಅಹ್ಸಾನ್ ಉದ್ದೇಶಿತ ಆಪರೇಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಢಾಕಾ ಏರ್ಬೇಸ್ನ ಏರ್ ಆಫಿಸರ್ ಕಮ್ಯಾಂಡಿಂಗ್ ಮಿಟ್ಟಿ ಮಸೂದ್ ಕೂಡ ಆಪರೇಷನ್ ಸಲ್ಲದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಇಬ್ಬರೂ ಅಧಿಕಾರಿಗಳು ಇಂಥ ಕಾರ್ಯಾಚರಣೆಗಳಿಂದ ದೊಡ್ಡ ಸ್ವರೂಪದ ಹಿಂಸಾಚಾರ ಸಂಭವಿಸಬಹುದು ಎಂಬ ಎಚ್ಚರಿಕೆಯನ್ನೂ ನೀಡಿದರು. ಆದರೆ ತೀವ್ರ ಒತ್ತಡದಲ್ಲಿದ್ದ ಅಧ್ಯಕ್ಷ ಯಾಹ್ಯಾ ಖಾನ್ ಭೂಸೇನೆ ಮತ್ತು ವಾಯುಸೇನೆಯ ಅಧಿಕಾರಿಗಳಿಗೆ ಕಾರ್ಯಾಚರಣೆ ನೀಡುವ ಆದೇಶವನ್ನು ನೀಡಿಯೇಬಿಟ್ಟರು. ಅಡ್ಮಿರಲ್ ಅಹ್ಸಾನ್ ಅವರನ್ನು ಅವರ ಹುದ್ದೆಯಿಂದ ಇಳಿಸಲಾಯಿತು. ತದನಂತರ ವಾಯುದಾಳಿ ನಡೆಸಲು ನಿರಾಕರಿಸಿದ ಮಿಟ್ಟಿ ಮಸೂದ್ ಅವರನ್ನೂ ಸಹ ಪದಚ್ಯುತಿಗೊಳಿಸಲಾಯಿತು.
ಲೆಫ್ಟಿನೆಂಟ್ ಜನರಲ್ ಟಿಕ್ಕಾ ಖಾನ್ ಪೂರ್ವಪಾಕಿಸ್ತಾನದ ಗವರ್ನರ್ ಆಗಿ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿದ. ಟಿಕ್ಕಾ ಖಾನ್ ಎಂಥ ಕ್ರೂರಿಯೆಂದರೆ ‘ಬಂಗಾಳಿಗಳ ಕೊಲೆಗಡುಕ’ ಎಂದೇ ಈತನನ್ನು ಕರೆಯಲಾಗುತ್ತದೆ. ಮೇಜರ್ ಜನರಲ್ ಖಾದಿಮ್ ಹುಸೇನ್ ರಾಜಾ, ಮೇಜರ್ ಜನರಲ್ ರಾವ್ ಫರ್ಮಾನ್ ಅಲಿ ನೀಲನಕ್ಷೆಯನ್ನು ರೂಪಿಸಿದರು. ಪಶ್ಚಿಮ ಪಾಕಿಸ್ತಾನದಿಂದ ಹಲವು ಬೆಟಾಲಿಯನ್ಗಳನ್ನು ಪೂರ್ವ ಪಾಕಿಸ್ತಾನಕ್ಕೆ ಕರೆಯಿಸಿಕೊಳ್ಳಲಾಯಿತು. ಇಡೀ ಆಪರೇಷನ್ನ ರೂಪುರೇಷೆಗಳನ್ನು ತಿಳಿನೀಲಿ ಬಣ್ಣದ ಆಫೀಸ್ ಪ್ಯಾಡ್ನಲ್ಲಿ ಲೆಡ್ ಪೆನ್ಸಿಲ್ ನಿಂದ ಫರ್ಮಾನ್ ಅಲಿ ಬರೆದಿದ್ದರು. ಐದು ಪುಟಗಳಲ್ಲಿ ಬರೆದ ಹದಿನಾರು ಪ್ಯಾರಾಗಳಲ್ಲಿ ಇಡೀ ಕಾರ್ಯಾಚರಣೆ ಅಡಗಿತ್ತು.
ಆಪರೇಷನ್ ಸರ್ಚ್ಲೈಟ್ ಬಹಳ ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದ್ದ ಕಾರ್ಯಯೋಜನೆಯಾಗಿತ್ತು. ಪೂರ್ವ ಪಾಕಿಸ್ತಾನದ ಎಲ್ಲೆಡೆ ಏಕಕಾಲಕ್ಕೆ ದಾಳಿ ನಡೆಸುವುದು, ರಾಜಕೀಯ ಮುಖಂಡರು ವಿದ್ಯಾರ್ಥಿ ನಾಯಕರು, ಸಾಂಸ್ಕೃತಿಕ ಸಂಘಟನೆಗಳ ಮುಖ್ಯಸ್ಥರು, ಶಿಕ್ಷಕರುಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂಖ್ಯೆಯಲ್ಲಿ ಬಂಧಿಸುವುದು ಇದರ ಗುರಿಯಾಗಿತ್ತು. ಬಂಡುಕೋರರ ಬೌದ್ಧಿಕ ಶಕ್ತಿಯಾಗಿದ್ದ ಢಾಕಾ ವಿಶ್ವವಿದ್ಯಾಲಯವನ್ನು ವಶಪಡಿಸಿಕೊಳ್ಳುವುದು ಮತ್ತು ಇಡೀ ಢಾಕಾ ನಗರಿಯಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸುವುದು ಸೈನ್ಯದ ಉದ್ದೇಶವಾಗಿತ್ತು. ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಆಗುವ ದೌರ್ಜನ್ಯಗಳು ಜಗತ್ತಿಗೆ ಗೊತ್ತಾಗದಂತೆ ತಡೆಯಲು ಎಲ್ಲ ಬಗೆಯ ಸಂಪರ್ಕಸಾಧನಗಳನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿತ್ತು. ಟೆಲಿಫೋನ್, ಟೆಲಿವಿಷನ್, ರೇಡಿಯೋ ಮತ್ತು ಟೆಲಿಗ್ರಾಫ್ ಸಂಪರ್ಕಗಳು ಕಡಿತಗೊಂಡವು. ಪೂರ್ವ ಪಾಕಿಸ್ತಾನದ ಮಿಲಿಟರಿ ಪಡೆಗಳಿಂದ ಎಲ್ಲ ಬಗೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಸಹ ಕ್ರಿಯಾಯೋಜನೆಯ ಭಾಗವಾಗಿತ್ತು. ಅವಾಮಿ ಲೀಗ್ ಪಕ್ಷವನ್ನು ಯಾಮಾರಿಸುವ ಸಲುವಾಗಿ ಅಧ್ಯಕ್ಷ ಯಾಹ್ಯಾ ಖಾನ್ ಏನೂ ಗೊತ್ತಿಲ್ಲದಂತೆ ಮುಜಿಬುರ್ ರೆಹಮಾನ್ ಅವರೊಂದಿಗೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸುವುದು, ಅವಾಮಿ ಲೀಗ್ನ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸುವಂತೆ ನಟಿಸುವುದು ಸಹ ತಂತ್ರದ ಭಾಗವಾಗಿತ್ತು.
ಪಾಕಿಸ್ತಾನಿ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಢಕಾ, ಕುಲ್ನಾ, ಚಿತ್ತಗಾಂಗ, ಮೊಕಿಲ್ಲ, ಜೆಸ್ಸೂರ್, ರಾಜ್ ಶಾಹಿ, ರಂಗ್ಪುರ, ಸೈದ್ಪುರ, ಸಿಲ್ಹೆಟ್ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ದಾಳಿಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು.
ಟಿಕ್ಕಾ ಖಾನ್, ಕೆಲವೇ ದಿನಗಳಲ್ಲಿ ಈ ಕಾರ್ಯಾಚರಣೆ ಮುಗಿಯಬಹುದೆಂದೂ, ಏಪ್ರಿಲ್ ೧೦ರ ನಂತರ ಯಾವುದೇ ಬಗೆಯ ಬಂಡಾಯದ ಸದ್ದೂ ಕೇಳದೆಂದೂ ಭಾವಿಸಿದ್ದರು. ಆದರೆ ಪಾಕಿಸ್ತಾನ ಮಿಲಿಟರಿ ಪಡೆಗಳ ದಾಳಿ, ದೌರ್ಜನ್ಯ ಎಷ್ಟು ಪ್ರಬಲವಾಗಿತ್ತೋ ಬಂಗಾಳಿ ಸೈನ್ಯ, ಜನರ ಪ್ರತಿರೋಧವೂ ಅಷ್ಟೇ ಪ್ರಬಲವಾಗಿತ್ತು. ಇದರ ಪರಿಣಾಮವೇ ಭಯಾನಕ ನರಮೇಧಗಳು…
(ಮುಂದುವರೆಯುತ್ತದೆ..)
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 3 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 2 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia