ಎ.ಎಸ್. ದುಲತ್ ಅವರು ಭಾರತ-ಪಾಕಿಸ್ತಾನ ಸಂಬಂಧಗಳ ವಿಷಯದಲ್ಲಿ ಆಳವಾದ ತಿಳುವಳಿಕೆಯುಳ್ಳ ತಜ್ಞರು. 1965ರಲ್ಲಿ IPS ರಾಜಾಸ್ತಾನದ ಕೇಡರ್ ಆಗಿ ಸೇವೆ ಆರಂಭಿಸಿದ್ದ ದುಲತ್, 1980ರ ದಶಕದ ಕೊನೆಯ ಭಾಗದಿಂದ ಜಮ್ಮು-ಕಾಶ್ಮೀರದಲ್ಲಿ ಸರ್ಕಾರದ ಹಲವಾರು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದವರು.; ಮಾತ್ರವಲ್ಲ 1999 ಮತ್ತು 2000ನೇ ಇಸವಿಯಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತದ ಬೇಹುಗಾರಿಕಾ ಸಂಸ್ಥೆಯಾದ ರಾ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ನ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸಿದವರು. ನಿವೃತ್ತಿಯ ನಂತರದಲ್ಲಿ 2000ನೇ ಇಸವಿಯಿಂದ 2004ರವರೆಗೆ ಭಾರತದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರಿಗೆ ಕಾಶ್ಮೀರದ ಕುರಿತು ಸಲಹೆಗಾರರಾಗಿಯೂ ನೇಮಕಗೊಂಡಿದ್ದವರು.
ಕ್ಯಾರವಾನ್ ಪತ್ರಿಕೆಯ ಪತ್ರಕರ್ತ ಅರ್ಶು ಜಾನ್ ಅವರೊಂದಿಗೆ ನಡೆಸಿರುವ ಮಾತುಕತೆಯಲ್ಲಿ ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉಂಟಾಗಿರುವ ಯುದ್ಧೋನ್ಮಾದ ಸಂಘರ್ಷದ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಈ ಮಾಜಿ ‘ರಾ’ ಮುಖ್ಯಸ್ಥ ಹಂಚಿಕೊಂಡಿದ್ದಾರೆ. ಟ್ರೂಥ್ ಇಂಡಿಯಾ ಕನ್ನಡ ಇದನ್ನು ಅನುವಾದಿಸಿ ನೀಡಿದೆ
ಫೆ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿ ಎಫ್ನ ವಾಹನದ ಮೇಲೆ ಉಗ್ರರ ದಾಳಿ ನಡೆದು 42 ಯೋಧರು ಪ್ರಾಣ ಕಳೆದುಕೊಂಡರು. ಇದರ ಬೆನ್ನಲ್ಲೇ ಫೆ. 26ರಂದು ಭಾರತವು ಪಾಕಿಸ್ತಾನದ ಖೈಬರ್ ಪಕ್ತುನ್ಕ್ವಾ ಪ್ರಾಂತ್ಯದ ಬಾಲಕೋಟ್ನಲ್ಲಿ ವಾಯುದಾಳಿ ನಡೆಸಿತು. ಇದಾದ ಮರುದಿನದಿಂದ ಎರಡೂ ದೇಶಗಳ ನಡುವೆ ಸಶಸ್ತ್ರ ಸಂಘರ್ಷದ ವಾತಾವರಣ ಉಂಟಾಗಿ ಭಾರತದ ಒಬ್ಬ ಪೈಲಟ್ ಪಾಕಿಸ್ತಾನದ ವಶಕ್ಕೆ ಹೋಗುವಂತಾಯಿತು. ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮಾರ್ಚ್ 1ರಂದು ಬೇಷರತ್ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಘೋಷಿಸಿದೆ. ಭಾರತ ನಡೆಸಿದ ವಾಯು ದಾಳಿಯ ಕುರಿತು ಪ್ರತಿಕ್ರಿಯಿಸಿರುವ ದುಲತ್ ಅವರ ಅಭಿಪ್ರಾಯಗಳು ಹೀಗಿವೆ.
“ನಾನಿಂತದನ್ನು ನಿರೀಕ್ಷಿಸಿಯೇ ಇರಲಿಲ್ಲ. ಮುಂಬರಲಿರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಇದು ನಡೆದಿದೆ. ಪುಲ್ವಾಮಾ ಒಂದು ಭಯಂಕರ ದುರಂತ. ಅದಾದ ತಕ್ಷಣದಲ್ಲಿ ಸರ್ಕಾರವು “ನೀವು ಹೀಗೆ ಮಾಡಿದರೆ ನಾವೂ ನಿಮಗೆ ತೋರಿಸುತ್ತೇವೆ” ಎಂದು ಪ್ರತಿಕ್ರಿಯಿಸಿತ್ತು. ಹೀಗಾಗಿ ಏನಾದರೊಂದು ನಡೆದೇ ನಡೆಯುತ್ತದೆ ಎಂದು ಅನಿಸಿತ್ತು ಮತ್ತು ಅದು ಈ ಹಿಂದೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ಗಿಂತಲೂ ದೊಡ್ಡ ಸ್ವರೂಪದ್ದೇ ಆಗಿರುತ್ತದೆ ಎಂದೂ ಅನಿಸಿತ್ತು. ಈ ಸನ್ನಿವೇಶದಲ್ಲೇ ಬಾಲಕೋಟ್ ವಾಯುದಾಳಿ ನಡೆದಿದ್ದು. ಆದರೆ ಭಾರತ ನಡೆಸಿದ ಇಂತಹ ಒಂದು ದಾಳಿಗೆ ಪಾಕಿಸ್ತಾನವು ತಕ್ಷಣದಲ್ಲಿ ಪ್ರತಿಕ್ರಿಯಿಸುವುದೂ ಅಷ್ಟೇ ಖಚಿತವಾಗಿತ್ತು. ಅದರಂತೆಯೇ ದಾಳಿಯ ಮರುದಿನವೇ ಪಾಕಿಸ್ತಾನವೂ ದಾಳಿ ನಡೆಸಿತು.
ಪುಲ್ವಾಮಾ ಘಟನೆಗೆ ಇಂತಹ ಒಂದು ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಇದರಲ್ಲಿ ಸರ್ಕಾರದ ನಡೆ ಸರಿಯೇ ತಪ್ಪೇ ಎಂದು ವಿಮರ್ಶೆ ನಡೆಸಲು ನಾನು ಯಾರೂ ಅಲ್ಲ. ಆದರೆ ಬಾಲಕೋಟ್ ವಾಯುದಾಳಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರತಿಕ್ರಿಯೆ ಮಾತ್ರ ಬಹಳ ಕುತೂಹಲಕರವಾಗಿದೆ. ಅದರಲ್ಲೂ ಅವರು ಶಾಂತಿ ಮಾತುಕತೆಗೆ ನಮ್ಮನ್ನು ಆಹ್ವಾನಿಸುತ್ತಿರುವುದು, ಭಯೋತ್ಪಾದನೆಯನ್ನೂ ಸೇರಿದಂತೆ ಎಲ್ಲವನ್ನೂ ಚರ್ಚಿಸೋಣ ಎಂದು ಪಂಥಾಹ್ವಾನ ನೀಡಿರುವುದು ಗಮನಾರ್ಹ. ಇದರ ಮೂಲಕ ಖಾನ್, ವಾಯುದಾಳಿಯ ನಂತರದಲ್ಲಿ ಪಾಕಿಸ್ತಾನ ಮಾಡಬೇಕೋ ಅದನ್ನು ಮಾಡಿದೆ ಎಂಬ ಸಂದೇಶ ನೀಡುತ್ತಿದ್ದಾರೆ. ಇದರಲ್ಲಿರುವ ಸಂದೇಶ ಏನೆಂದರೆ: “ನಮಗೆ ಇದನ್ನು ಮಾಡಲು ಇಷ್ಟವಿರಲಿಲ್ಲ. ಭಾರತವೇ ನಮ್ಮನ್ನು ಪ್ರಚೋದಿಸಿತು, ಹಾಗಾಗಿ ನಾವು ಇದನ್ನು ಮಾಡಿದೆವು” ಎಂದು ಹೇಳುವುದು. ಇದರ ನಂತರದಲ್ಲಿ ಅಂತರರಾಷ್ಟ್ರೀಯ ಸಮುದಾಯವೂ ಎರಡೂ ದೇಶಗಳ ನಡುವೆ ಸಂಯಮಕ್ಕೆ ಒತ್ತಾಯಿಸಿದೆ. ಯುದ್ಧದ ಸನ್ನಿವೇಶವನ್ನು ತಂದುಕೊಳ್ಳದಿರಲು ಎಲ್ಲರೂ ಒತ್ತಾಯಪಡಿಸುತ್ತಿದ್ದಾರೆ. ಪರಿಣಾಮವಾಗಿ, ಇಮ್ರಾನ್ ಖಾನ್ ಅವರ ಸ್ಟೇಚರ್ ಪಾಕಿಸ್ತಾನದೊಳಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಾಗಿದೆ.
ನರೇಂದ್ರ ಮೋದಿಯವರ ವಿಷಯದಲ್ಲಿ, ವಾಯುದಾಳಿಯ ಪರಿಣಾಮ ಅಂತರರಾಷ್ಟ್ರೀಯ ಮಟ್ಟದಲ್ಲಿ ಏನಾಗಲಿದೆ ಎಂದು ನೋಡಬೇಕಿದೆ. ಈ ದಾಳಿಯಿಂದಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಲಾಭವಾಗಲಿದೆ ಎಂಬ ಅಭಿಪ್ರಾಯ ದೇಶದ ಒಳಗೆ ಮೂಡಿದೆ. ಕೆಲವರ ತಲೆಯಲ್ಲಿ ಯಾವಾಗಲೂ ಚುನಾವಣೆಯೇ ಓಡುತ್ತಿರುತ್ತದೆ- ಹಾಗಾಗಿಯೇ ಈ ಸಲ ಏನಾದರೂ ನಡೆದೇ ನಡೆಯುತ್ತದೆ ಹಾಗೂ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಏನಾದರೊಂದು ನಡೆಯುವುದು ಅನಿವಾರ್ಯವಾಗಿದೆ ಎಂದು ನಾನು ಯೋಚಿಸಿದ್ದು.
ನನ್ನ ಅಭಿಪ್ರಾಯದಲ್ಲಿ ಈಗ ಉಭಯ ದೇಶದಗಳ ನಡುವೆ ಈ ಉದ್ವಿಗ್ನ ಸ್ಥಿತಿಯನ್ನು ಸುಧಾರಿಸಲು ಭಾರತವು ಇಮ್ರಾನ್ ಖಾನ್ ಅವರ ಮಾತುಕತೆ ಆಹ್ವಾನವನ್ನು ಸ್ವೀಕರಿಸಬೇಕು. ಏನು ಮಾಡಬೇಕಾಗಿತ್ತೋ ಮಾಡಿಯಾಗಿದೆ. ಈಗ ಕೆಲಸಕ್ಕೆ ಬರುವುದು ರಾಜತಾಂತ್ರಿಕ ನಡೆಯಷ್ಟೆ. ಆದಷ್ಟು ಬೇಗನೇ ಈಗಿನ ಸ್ಥಿತಿ ಕೊನೆಗಾಣಬೇಕು. ಪಾಕಿಸ್ತಾನದ ಜೊತೆ ಮಾತುಕತೆ ಮಾಡುತ್ತೇವೋ, ಸುಮ್ಮನೇ ಉಳಿಯುತ್ತೇವೆಯೋ ಅದು ಸರ್ಕಾರಕ್ಕೆ ಬಿಟ್ಟ ವಿಷಯ. ಬಾಕ್ಸಿಂಗ್ನಲ್ಲಿ ಮೂರು ಸುತ್ತುಗಳಿರುತ್ತವೆ. ಈಗ ಒಂದು ಸುತ್ತಾಗಿದೆ. ಮುಂದೆ ಚುನಾವಣೆಗಳಿವೆ. ಮೇಲೆ ಕುಳಿತ ದೊಡ್ಡ ಜನ ಏನು ಯೋಚಿಸುತ್ತಾರೋ ಯಾರಿಗೆ ಗೊತ್ತು?
ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ಕ್ರಮಗಳಿಗೂ ಮೋದಿಯವರು ಕೈಗೊಂಡ ಕ್ರಮಗಳಿಗೂ ನೋಡಿದಾಗ ಹೋಲಿಕೆಯೇ ಕಂಡುಬರುವುದಿಲ್ಲ. ಇದು ಮೇಲ್ನೋಟಕ್ಕೇ ಕಾಣುತ್ತಿದೆ. ಇಂದಿಗೂ ಕಾಶ್ಮೀರ ಕಣಿವೆಯ ಜನ ವಾಜಪೇಯಿಯವರನ್ನು ಸ್ಮರಿಸುವುದು ಸುಮ್ಮನೇ ಅಲ್ಲ. ಆದರೆ ಈಗ ಏನಾಗುತ್ತಿದೆ ನೋಡಿ. ಕಾಶ್ಮೀರಕ್ಕೆ ಸೈನಿಕ ಪರಿಹಾರ ಎಂಬುದಿಲ್ಲ ಎಂಬುದು ವಾಸ್ತವ. 2014ರಲ್ಲಿ ಮೋದಿ ಪ್ರಧಾನಿಯಾದಾಗಲೂ ಕಾಶ್ಮೀರದಲ್ಲಿ ಬಹಳಷ್ಟು ವಿಶ್ವಾಸವಿತ್ತು. ಆದರೆ ಕಳೆದ ಎರಡು- ಎರಡೂವರೆ ವರ್ಷಗಳಲ್ಲಿ ಅಲ್ಲಿ ಆದ್ವಾನವನ್ನೇ ಸೃಷ್ಟಿಸಿಕೊಂಡಿದ್ದೇವೆ.
ಕಳೆದ ಮೂವತ್ತು ವರ್ಷಗಳಿಗೂ ಆಧಿಕ ವರ್ಷಗಳಲ್ಲಿ ಭಾರತವು ಭಯೋತ್ಪಾದನೆಯನ್ನು ಎದುರಿಸುತ್ತಲೇ ಬಂದಿದೆ. ಭಯೋತ್ಪಾದನೆಯ ಕಾರ್ಖಾನೆ ಇರುವುದು ಪಾಕಿಸ್ತಾನದಲ್ಲಿ ಎಂಬ ಬಗ್ಗೆ ಅನುಮಾನವಿಲ್ಲ. ಇವರೆಲ್ಲಾ ಉತ್ಪಾದನೆಯಾಗುವುದು ಅಲ್ಲೇ. ಇದರಿಂದಾಗಿ ನರಕ ಯಾತನೆ ಅನುಭವಿಸುತ್ತಿರುವುದು ಸಹ ಪಾಕಿಸ್ತಾನವೇ. ಜಗತ್ತಿನ ಯಾವುದೇ ದೇಶಕ್ಕಿಂತಲೂ ಹೆಚ್ಚು ಭಯೋತ್ಪಾದನೆಯಿಂದ ನರಳಿರುವುದು ಪಾಕಿಸ್ತಾನ.
ನಾವೊಂದು ಅಪಾಯಕಾರಿ ನೆರೆಮನೆಯವನೊಂದಿಗೆ ಇರುವ ಸಂದರ್ಭದಲ್ಲಿ ಅಧಿಕಾರ ನಡೆಸುವ ಪ್ರತಿಯೊಬ್ಬ ಪ್ರಧಾನಿಯೂ ಒಂದಲ್ಲಾ ಒಂದು ರೀತಿಯಲ್ಲಿ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾನೆ. ಈ ಪರೀಕ್ಷೆಗಳಿಗೆ ಪ್ರತಿ ಪ್ರಧಾನಿ ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದೇ ಅವನೆಷ್ಟು ಮಹಾನ್ ಜನ ಎಂಬುದನ್ನು ತಿಳಿಸುತ್ತದೆ.
ವಾಜಪೇಯಿಯವರು ಮೂರು-ನಾಲ್ಕು ಸಲ ಇಂತಹ ಪರೀಕ್ಷೆ ಎದುರಿಸಿದರು. 1999ರಲ್ಲಿ ಅವರು ಕಾರ್ಗಿಲ್ ಯುದ್ಧ ಎದುರಿಸಿದರು. ಅದೇ ವರ್ಷ ವಿಮಾನ ಹೈಜಾಕ್ ಪ್ರಕರಣವನ್ನೆದುರಿಸಿದರು. 2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿಯನ್ನೂ ಎದುರಿಸಿದರು. 2003ರ ಏಪ್ರಿಲ್ ನಲ್ಲಿ ಅವರು ಕಾಶ್ಮೀರಿಗಳಿಗೆ ಹೀಗೆ ಹೇಳಿದ್ದರು, “ನಾನು ಪಾಕಿಸ್ತಾನಕ್ಕೆ ಎರಡು ಸಲ ಸ್ನೇಹ ಹಸ್ತ ಚಾಚಿದ್ದೇನೆ, ಎರಡೂ ಸಲವೂ ಸೋತಿದ್ದೇನೆ. ಆದರೆ ನನ್ನ ಪ್ರಯತ್ನವನ್ನು ನಾನು ಬಿಡುವವನಲ್ಲ” ಎಂದು. 2004ರ ಜನವರಿಯಲ್ಲಿ, ಅವರು ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭದಲ್ಲಿ ಮಾತ್ರವೇ ಪರ್ವೇಜ್ ಮುಷರಫ್ ಅವರಿಂದ, ‘ಭಾರತದ ವಿರುದ್ಧ ಚಟುವಟಿಕೆಗಳಿಗೆ ಪಾಕಿಸ್ತಾನ ಬಳಕೆಯಾಗಲು ಬಿಡುವುದಿಲ್ಲ’ ಎಂಬ ಆಶ್ವಾಸನೆ ಸಿಕ್ಕಿದ್ದು.
2008ರ ನವೆಂಬರ್ನಲ್ಲಿ ನಡೆದ ಮುಂಬೈ ದಾಳಿಯ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರಿಗೂ ದೊಡ್ಡ ಪರೀಕ್ಷೆ ಎದುರಾಯಿತು. ಹಾಗೆ ನೋಡಿದರೆ ಮೋದಿಯೇ ಹೆಚ್ಚು ಅದೃಷ್ಟವಂತರು. ಅವರಿಗೆ ಪುಲ್ವಾಮಾ ಮಾತ್ರವೇ ದೊಡ್ಡ ಪರೀಕ್ಷೆಯಾಗಿ ಎದುರಾದದ್ದು. ವಾಜಪೇಯಿಯವರಾಗಲೀ ಮನಮೋಹನ್ ಸಿಂಗ್ ಅವರಾಗಲೀ ಬಾಯಿಯಲ್ಲಿ ಮಾತಾಡಿದ್ದು ಕಡಿಮೆ. ಏನು ಮಾಡಬೇಕಾಗಿತ್ತೋ ಅದನ್ನು ಮೌನವಾಗಿಯೇ ಅವರು ಮಾಡಿದ್ದರು. ಮೋದಿ ಮಾತ್ರ ಅತಿಯೆನಿಸುಷ್ಟು ಮಟ್ಟದಲ್ಲಿ ಈಗ ಉಂಟಾಗಿರುವ ಸನ್ನಿವೇಶದ ದುರ್ಲಾಭ ಪಡೆಯುತ್ತಿದ್ದಾರೆ.
(ಮೂಲ: ಕ್ಯಾರವಾನ್ ಪತ್ರಿಕೆ. ನಿರೂಪಣೆ: ಅರ್ಶು ಜಾನ್)
4 Comments
Yes this is fact
I don’t think Your Cock and Bull Stories Will Convince Anyone in INDIA… HOWEVER U PUT MASAL and Twist it… Thq.
hold on..The opinions are of former RAW chief…not ours
if a person of high reputation in Indian security forces speaks out and we publish it sounds cock and bull story for u…interesting