‘ಲೋಕಸಭಾ ಚುನಾವಣೆಗೂ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ಪಕ್ಷ ಎರಡು ವರ್ಷಗಳ ಹಿಂದೆಯೇ ನನಗೆ ಹೇಳಿತ್ತು’ ಎಂಬ ಅಚ್ಚರಿಯ ವಿಷಯವನ್ನು ಜನಪ್ರಿಯ ತೆಲುಗು ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಬಹಿರಂಗಪಡಿಸಿದ್ದಾರೆ.
ಕಡಪ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಪವನ್ ಕಲ್ಯಾಣ್ ಅವರು ಬಿಜೆಪಿಯ ಮತ್ತೊಂದು ಮುಖವನ್ನು ಬಯಲಿಗೆಳೆದಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಯುದ್ಧ ನಡೆಯುತ್ತದೆ ಎಂಬ ಬಗ್ಗೆ ಬಿಜೆಪಿಯಿಂದ ನನಗೆ ಮಾಹಿತಿ ಬಂದಿತ್ತು. ಈ ಮೂಲಕ ನಮ್ಮ ದೇಶ ಯಾವ ಪರಿಸ್ಥಿತಿಯಲ್ಲಿ ಎಂಬ ಬಗ್ಗೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ವಿಷಾದಿಸಿದರು.
ಪವನ್ ಕಲ್ಯಾಣ್ ಆರಂಭದಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರೂ ನಂತರ ಕಾರಣಾಂತರಗಳಿಂದ ಪಕ್ಷ ತ್ಯಜಿಸಿ ಸ್ವತಃ ಜನಸೇನಾ ಎಂಬ ನೂತನ ಪಕ್ಷವನ್ನು ಸ್ಥಾಪಿಸಿದ್ದರು.
ಪುಲ್ವಾಮದಲ್ಲಿ ನಮ್ಮ ಸಿಪಿಆರ್ ಎಫ್ ಯೋಧರ ಮೇಲೆ ನಡೆದ ಹತ್ಯಾಕಾಂಡದಿಂದಾಗಿ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧ ಯಾವುದೇ ಸಮಸ್ಯೆಗೆ ಪರಿಹಾರವಲ್ಲ, ಅಲ್ಲದೇ ಇದರಿಂದ ಎರಡೂ ದೇಶಗಳಿಗೂ ಅಪಾರ ಹಾನಿ ಉಂಟಾಗುತ್ತದೆ ಎಂದೂ ಪವನ್ ಸಲಹೆ ನೀಡಿದರು.
ಬಿಜೆಪಿ ಪಕ್ಷ ದೇಶದಲ್ಲಿ ತಾನೊಂದೇ ದೇಶಭಕ್ತ ಎಂಬಂತೆ ವರ್ತಿಸುತ್ತಿದೆ. ದೇಶಭಕ್ತಿ ಬಿಜೆಪಿ ಒಂದೇ ಪಕ್ಷದ ಹಕ್ಕಲ್ಲ,ನಮ್ಮಲ್ಲಿ ಬಿಜೆಪಿಗಿಂತ 10 ಪಟ್ಟು ಹೆಚ್ಚು ದೇಶಭಕ್ತಿ ಇದೆ ಎಂದರು.
ಮುಸ್ಲೀಂಮರು ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸುವ ಅವಶ್ಯಕತೆ ಇಲ್ಲ. ಸಮಾಜದಲ್ಲಿ ಯಾವುದೇ ರೀತಿಯ ಕೋಮುವಾದ ಬಿತ್ತುವ ಕಾರ್ಯ ಮಾಡಿದರೆ ಜನಸೇನಾ ಕಾರ್ಯಕರ್ತರು ಅದನ್ನು ವಿಫಲಗೊಳಿಸುತ್ತಾರೆ ಎಂದು ಭರವಸೆ ನೀಡಿದರು.
ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಭಾರತದಲ್ಲಿ ಮುಸಲ್ಮಾನರಿಗೂ ಸಮಾನ ಹಕ್ಕಿದೆ, ಅವರನ್ನು ನಾವು ಹೃದಯದಲ್ಲಿಟ್ಟುಕೊಂಡಿದ್ದೇವೆ ಎಂದು ಬಣ್ಣಿಸಿದರು.
ಯುದ್ಧದ ಬಗ್ಗೆ ಬಿಜೆಪಿ ಎರಡು ವರ್ಷಗಳ ಹಿಂದೆಯೇ ಹೇಳಿತ್ತು: ಪವನ್ ಕಲ್ಯಾಣ್
"ಬಿಜೆಪಿ ಪಕ್ಷ ದೇಶದಲ್ಲಿ ತಾನೊಂದೇ ದೇಶಭಕ್ತ ಎಂಬಂತೆ ವರ್ತಿಸುತ್ತಿದೆ. ದೇಶಭಕ್ತಿ ಬಿಜೆಪಿ ಒಂದೇ ಪಕ್ಷದ ಹಕ್ಕಲ್ಲ, ನಮ್ಮಲ್ಲಿ ಬಿಜೆಪಿಗಿಂತ 10 ಪಟ್ಟು ಹೆಚ್ಚು ದೇಶಭಕ್ತಿ ಇದೆ''
