ಕಳೆದೆರಡು ದಿನಗಳಿಂದಲೂ ಇಡೀ ಭಾರತ ನಿರೀಕ್ಷಿಸುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು! ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಮರಳಿದ್ದಾರೆ..
ಪಾಕಿಸ್ತಾನ ಸೆರೆಹಿಡಿದಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶುಕ್ರವಾರ ರಾತ್ರಿ 9.20ಕ್ಕೆ ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.
ಶುಕ್ರವಾರ ಅಭಿನಂದನ್ ಅವರನ್ನು ಹಸ್ತಾಂತರ ಮಾಡುವುದಾಗಿ ಪಾಕ್ ಹೇಳಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇಶಾದ್ಯಂತ ಅವರ ಬಿಡುಗಡೆಯನ್ನು ಎದುರುನೋಡಲಾಗುತ್ತಿತ್ತು. ಜನಸಾಮಾನ್ಯರು ಮತ್ತು ಮಾಧ್ಯಮಗಳು ದಿನವಿಡೀ ಅಭಿನಂದನ್ ಆಗಮನಕ್ಕಾಗಿ ಕಾದಿದ್ದರು. ಸಂಜೆ ಹೊತ್ತಿಗೆ, ಸಂಜೆ ಆರು ಗಂಟೆಗೆ ಅವರನ್ನು ವಾಘಾ ಗಡಿಯಲ್ಲಿ ಭಾರತೀಯ ಉನ್ನತಾಧಿಕಾರಿಗಳಿಗೆ ಹಸ್ತಾಂತರಿಸಬಹುದು ಎಂಬ ನಿರೀಕ್ಷೆ ಇತ್ತು. ಬಳಿಕ ಏಳು ಗಂಟೆಗೆ ಎಂದು ಹೇಳಲಾಗಿತ್ತು. ಅಂತಿಮವಾಗಿ 9.22 ನಿಮಿಷಕ್ಕೆ ಅಭಿನಂದನ್, ಪಾಕಿಸ್ತಾನದ ಗಡಿ ದಾಟಿ ತಾಯ್ನೆಲಕ್ಕೆ ಕಾಲಿಟ್ಟರು.
ಅಭಿನಂದನ್ ಅವರು ಭಾರತದ ನೆಲದೊಳಗೆ ಕಾಲಿಡುವ ಮೂಲಕ, ಒಂದು ಅಂತಾರಾಷ್ಟ್ರೀಯ ಒಪ್ಪಂದ, ಅಂತಾರಾಷ್ಟ್ರೀಯ ಒತ್ತಡ ಎಂತಹ ಫಲಿತಾಂಶ ನೀಡಬಲ್ಲವು ಎಂಬುದಕ್ಕೆ ವಾಘಾ ಗಡಿ ಸಾಕ್ಷಿಯಾಯಿತು. ವೀರ ಯೋಧ ಆಗಮಿಸುತ್ತಿದ್ದಂತೆ ವಾಘಾ ಗಡಿ ಬಳಿ ನೆರೆದಿದ್ದ ಸಾವಿರಾರು ಭಾರತೀಯರು ಮಾತ್ರವಲ್ಲದೆ, ದೇಶದ ಉದ್ದಗಲಕ್ಕೂ ಸಂಭ್ರಮದ ಮೂಲಕ ಸ್ವಾಗತಿಸಲಾಯಿತು.
ಭಾರತೀಯ ವಾಯುಪಡೆ ಕಳೆದ ಮಂಗಳವಾರ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಲಾಕೋಟ್ ಪ್ರದೇಶದ ಉಗ್ರರ ನೆಲೆ ಮೇಲೆ ವಾಯುದಾಳಿ ನಡೆಸಿ, ಉಗ್ರ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿತ್ತು. ಅದಾದ ಮಾರನೇ ದಿನ, ಬುಧವಾರ ಗಡಿನಿಯಂತ್ರಣ ರೇಖೆ ಬಳಿ ಪಾಕ್ ಯುದ್ಧ ವಿಮಾನ ಎಫ್ 26ನ್ನು ಹೊಡೆದುರುಳಿಸಿದ್ದ ಮಿಗ್ 21 ವಿಮಾನದ ವಿಂಗ್ ಕಮಾಂಡರ್ ಅಭಿನಂದನ್, ಪ್ಯಾರಾಚೂಟ್ ಮೂಲಕ ಪಾಕ್ ಗಡಿಯೊಳಗೆ ಬಿದ್ದಿದ್ದರು. ಅವರನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪಾಕ್ ಸೇನೆಗೆ ಒಪ್ಪಿಸಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು.
ಆದರೆ, ರಾಜತಾಂತ್ರಿಕ ಒತ್ತಡ, ವಿಶ್ವದ ಪ್ರಮುಖ ರಾಷ್ಟ್ರಗಳ ಕಿವಿಮಾತು ಹಾಗೂ ಮುಖ್ಯವಾಗಿ ಯುದ್ಧ ಕೈದಿಗಳನ್ನು ಪರಸ್ಪರ ಗೌರವದಿಂದ ನಡೆಸಿಕೊಳ್ಳುವ ಮತ್ತು ಆಯಾ ದೇಶಕ್ಕೆ ಹಸ್ತಾಂತರಿಸುವ ಕುರಿತ ಜಿನೇವಾ ಒಪ್ಪಂದಕ್ಕೆ ತಲೆಬಾಗಿದ ಪಾಕ್ ಪ್ರಧಾನಿ, ಇಮ್ರಾನ್ ಖಾನ್ ಅಭಿನಂದನ್ ಅವರನ್ನು ಶಾಂತಿಯ ನಡೆಯ ಸಂಕೇತವಾಗಿ ಶುಕ್ರವಾರ ಭಾರತಕ್ಕೆ ಹಸ್ತಾಂತರಿಸುವುದಾಗಿ ಘೋಷಿಸಿದ್ದರು.
ಶುಕ್ರವಾರ ವಾಘಾ ಗಡಿಯಲ್ಲಿ ಕೂಡ ಸಾವಿರಾರು ಮಂದಿ ವೀರ ಯೋಧನ ಸ್ವಾಗತಕ್ಕೆ ದಿನವಿಡೀ ಕಾದಿದ್ದರು ಸಂಜೆ ಏಳರ ಹೊತ್ತಿಗೆ ಅಭಿನಂದನ್ ಅವರನ್ನು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ವಾಘಾ ಗಡಿಗೆ ಕರೆತರಲಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅವರು ವಾಘಾದಿಂದ ದೆಹಲಿಗೆ ತೆರಳಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿದ್ದರೂ, ಗಂಟೆಗಳ ಬಳಿಕ ವಾಸ್ತವವಾಗಿ ಅವರನ್ನು ಹಸ್ತಾಂತರ ಮಾಡಲಾಯಿತು.
ವಿಳಂಬಕ್ಕೆ ಕಾರಣವೇನು ಎಂದು ಹಸ್ತಾಂತರ ಸಂದರ್ಭದಲ್ಲಿ ಹಾಜರಿದ್ದ ವಾಯುಪಡೆ ಹಿರಿಯ ಅಧಿಕಾರಿಗಳು ಮತ್ತು ಅಮೃತಸರ ಜಿಲ್ಲಾಧಿಕಾರಿಗಳನ್ನು ಮಾಧ್ಯಮಗಳು ಕೇಳಿದರೂ, ಆ ಬಗ್ಗೆ ಭಾರತ ಯಾವುದೇ ವಿವರವನ್ನು ಪಾಕ್ ನಿಂದ ಕೋರಿಲ್ಲ ಎಂದಷ್ಟೇ ಅವರು ಹೇಳಿದರು. ಅಷ್ಟಕ್ಕೂ ಅಭಿನಂದನ್ ಹಸ್ತಾಂತರದ ಸಮಯದ ಬಗ್ಗೆಯಾಗಲೀ, ವಿಳಂಬದ ಬಗ್ಗೆಯಾಗಲೀ, ಅವರನ್ನು ನೇರವಾಗಿ ದೇಶದ ಉನ್ನತ ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಲಾಗುತ್ತದೆಯೇ ಅಥವಾ ರೆಡ್ ಕ್ರಾಸ್ ಮೂಲಕ ಹಸ್ತಾಂತರ ನಡೆಯುತ್ತದೆಯೇ? ಎಂಬ ಬಗ್ಗೆ ಭಾರತ ಅಥವಾ ಪಾಕಿಸ್ತಾನ ಅಧಿಕೃತವಾಗಿ ಏನನ್ನೂ ಹೇಳಿರಲಿಲ್ಲ ಎಂಬುದು ಗಮನಾರ್ಹ.
ಇದೀಗ ಅಭಿನಂದನ್ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ.
ಫೆ. 28ರಂದು ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ವಾಯುಪಡೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಭಾರತಕ್ಕೆ ಕಳಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಭಾರತ ಗಡಿ ಪ್ರವೇಶಿಸುತ್ತಿರುವ ವಿಡಿಯೋ ನೋಡಲು ಕ್ಲಿಕ್ ಮಾಡಿ