ದಿನಾಂಕ 28.2.2019 ರಂದು ದೆಹಲಿಯ ಮುಖ್ಯಮ್ಂತ್ರಿ ಕೇಜ್ರಿವಾಲ್ ಅವರು 200 ’ಒಳಚರಂಡಿ ಸ್ವಚ್ಚಗೊಳಿಸುವ ಯಾಂತ್ರೀಕೃತ ವಾಹನ’ (sewer cleaning machines) ಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನುವ ಸುದ್ದಿ ಮಾಮೂಲಿ ಸಂದರ್ಬದಲ್ಲಿ ದಿನನಿತ್ಯದ ಸಂಗತಿ ಆಗಬೇಕಿತ್ತು. ಆದರೆ ಈ ಇಪ್ಪತ್ತೊಂದನೆ ಶತಮಾನದಲ್ಲಿಯೂ ಒಳಚರಂಡಿ ಸ್ವಚ್ಚಗೊಳಿಸುವಿಕೆಯು ಮುನುಶ್ಯನ ದೈಹಿಕ ಶ್ರಮವನ್ನಾದರಿಸಿರುವುದು ಮತ್ತು ಅದು ಶೋಷಿತರ ಪಾಲಿನ ಕಸುಬು ಆಗಿರುವುದು ಇಂದಿನ ಭಾರತದ ದುರಂತಗಳಲ್ಲಿ ಒಂದಾಗಿರುವ ಸಂದರ್ಬದಲ್ಲಿ ಇದಕ್ಕೊಂದು ಬದಲಿ ಯಂತ್ರ ಬಂದಿದೆ ಎಂದರೆ ಅದು ಅಚ್ಚರಿಯ ಘಟನೆ ಮತ್ತು ಶೋಷಣೆಯಿಂದ ಬಿಡುಗಡೆಯ ಸುದ್ದಿಯೂ ಹೌದು.
ಚರಂಡಿ ಮತ್ತು ವಿಶಯುಕ್ತ ಟ್ಯಾಂಕ್ ಗಳನ್ನು ಸ್ವಚ್ಚಗೊಳಿಸುವ ಸಂದರ್ಬದಲ್ಲಿ ನಿದನರಾದ ದಲಿತ ಸಮುದಾಯದ ಪೌರ ಕಾರ್ಮಿಕರ ಕುಟುಂಬಗಳಿಗೆ ಈ 200 ’ಒಳಚರಂಡಿ ಸ್ವಚ್ಚಗೊಳಿಸುವ ಯಾಂತ್ರೀಕೃತ ವಾಹನ’ಗಳನ್ನು ವಿತರಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಈ ಯಾಂತ್ರೀಕೃತ ವಾಹನಗಳ ಮೂಲಕ ಗಟಾರಗಳಲ್ಲಿ ಇಳಿಯದೆ ಚರಂಡಿಗಳನ್ನು ಸ್ವಚ್ಚಗೊಳಿಸಬಹುದಾಗಿದೆ.
ಇದು ಒಂದು ಆಶಾದಾಯಕ ಬೆಳವಣಿಗೆ. ಮನುಶ್ಯನ ಘನತೆಯನ್ನು ಕಾಪಾಡುವ ಈ ಬದಲಾವಣೆಯನ್ನು ಜಾರಿಗೊಳಿಸಿದ ಕೇಜ್ರಿವಾಲ್ ಅಬಿನಂದನಾರ್ಹರು.
ಮೊನ್ನೆ ತಾನೆ ಪ್ರದಾನಮಂತ್ರಿ ಮೋದಿ ವಾರಣಾಸಿಯ ಕುಂಬಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆಯುವುದರ ಮೂಲಕ ನಿರ್ಲಜ್ಜ ಮತ್ತು ಕ್ರೌರ್ಯ ಮನಸ್ಥಿತಿಯ ಪ್ರದರ್ಶನ ಮಾಡಿದ್ದರು. ತನ್ನ ಐದು ವರ್ಶಗಳ ಅದಿಕಾರದ ಅವದಿಯಲ್ಲಿ ಒಳಚರಂಡಿಯನ್ನು ಸ್ವಚ್ಚಗೊಳಿಸುವ ಈ ಪೌರ ಕಾರ್ಮಿಕರ ಶೋಷಣೆಯನ್ನು ಪರಿಹರಿಸಲು ವಿಫಲರಾದ ಮೋದಿ ಕನಿಶ್ಟ ಸುಮ್ಮನಿದ್ದರೂ ಅದನ್ನು ಒಂದು ಸೋಲು ಎಂದು ಪರಿಗಣಿಸಬಹುದಾಗಿತ್ತು. ಆದರೆ ತಮ್ಮ ನಿರ್ಲಜ್ಯತೆಗೆ ಕೊನೆ ಇಲ್ಲದ ಮೋದಿ ಪೌರ ಕಾರ್ಮಿಕರ ಪಾದ ತೊಳೆಯುವ ಬೂಟಾಟಿಕೆಯ ಮೂಲಕ ಆ ಕೀಳುವೃತ್ತಿಯನ್ನು ಮಾನ್ಯಗೊಳಿಸಿದರು ಮತ್ತು ಇದರಿಂದ ಪ್ರಚಾರ ಪಡೆಯಲು ಯತ್ನಿಸಿ ನಗೆಪಾಟಿಲಿಗೀಡಾದರು. ಆದರೆ ಹೋರಾಟಗಾರ ಬೆಜವಾಡ ವಿಲ್ಸನ್ ಅವರು ಮೋದಿಯವರ ಈ ದುಶ್ಕೃತ್ಯವನ್ನು ತೀವ್ರವಾಗಿ ಖಂಡಿಸಿ ’ಮೊದಲು ನಿಮ್ಮ ಮನಸ್ಸನ್ನು ಸ್ವಚ್ಚಗೊಳಿಸಿಕೊಳ್ಳಿ’ ಎಂದು ಮಾರ್ಮಿಕವಾಗಿ ನುಡಿದರು. ಆದರೆ ಎಲ್ಲವನ್ನು ಬಿಟ್ಟ ಮೋದಿ ಪಟಾಲಂಗೆ ಮತ್ತು ಕೂಗುಮಾರಿ ಮಾದ್ಯಮಗಳಿಗೆ ವಿಲ್ಸನ ಅವರ ಮಾತುಗಳು ತಾಕಲೆ ಇಲ್ಲ. ಮನುಶ್ಯ ಮೂಲಬೂತವಾಗಿ ನೀಚ ಎಂದು ಇವರೆಲ್ಲ ಸಾಬೀತುಪಡಿಸಿದ್ದಾರೆ
ಆದರೆ ಮತ್ತೊಂದೆಡೆ ಕನಿಶ್ಟ ಮಾನವೀಯತೆ ಮತ್ತು ಬದ್ದತೆ ಇದ್ದರೆ ವ್ಯವಸ್ಥೆಯಲ್ಲಿ ಮೂಲಬೂತ ಬದಲಾವಣೆಗಳನ್ನು ತರಲು ಸಾದ್ಯ ಎಂದು ಕೇಜ್ರಿವಾಲ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಮೊದಲು ಸರಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸಬಲೀಕರಣ ಮಾಡುವುದರಲ್ಲಿ ಅವರ ಸರಕಾರ ಪ್ರದರ್ಶಿಸಿದ ರಾಜಕೀಯ ಇಚ್ಚಾಶಕ್ತಿ ಬೇರೆ ಪಕ್ಷಗಳಿಗೆ ಮಾದರಿಯಾಗಿದೆ. ಈ ಸಬಲೀಕರಣದ ಪ್ರಕ್ರಿಯೆಯಲ್ಲಿ ಅನೇಕ ಗೊಂದಲಗಳಿವೆ, ಬಿಕ್ಕಟ್ಟುಗಳಿವೆ ಮತ್ತು ಪ್ರಶ್ನಾರ್ಹ ಸಂಗತಿಗಳಿವೆ. ಅದರೆ ಇದೆಲ್ಲವನ್ನ ಚರ್ಚಿಸುತ್ತಲೆ ಸರಕಾರಿ ಶಾಲೆ, ಆಸ್ಪತ್ರೆಗಳನ್ನು ಸಬಲೀಕರಣಗೊಳಿಸಬೇಕು ಎಂದು ಕೇಜ್ರಿವಾಲ್ ಸರಕಾರಕ್ಕೆ ಮನದಟ್ಟಾಗಿರುವ ಸಂಗತಿಯೆ ಇಂದಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.
ಹಾಗೆಯೆ ಶೋಷಣೆಯನ್ನು ಮುಕ್ತಗೊಳಿಸುವ ಈ ’ಒಳಚರಂಡಿ ಸ್ವಚ್ಚಗೊಳಿಸುವ ಯಾಂತ್ರೀಕೃತ ವಾಹನ’ದ ನಿರ್ದಾರವೂ ಸಹ ದಿಟ್ಟ ಹೆಜ್ಜೆ. ಆದರೆ ಇದು ಇಲ್ಲಿಗೆ ನಿಲ್ಲಬಾರದು. ಸ್ವಚ್ಚಗೊಳಿಸುವ ಈ ವೃತ್ತಿ ಪ್ರತಿಯೊಂದು ಜಾತಿ ಸಮುದಾಯಗಳಿಗೂ ಅನ್ವಯಿಸುತ್ತದೆ ಎನ್ನುವ ವಾತಾವರಣ ನಿರ್ಮಿಸಬೇಕು. ದಲಿತ ಸಮುದಾಯ ಈ ವೃತ್ತಿಯಿಂದ ಬಿಡುಗಡೆಯಾಗಿ ಪರ್ಯಾಯ ವೃತ್ತಿಗಳಲ್ಲಿ ತೊಡಗುವಂತಾಗಬೇಕು. ಇದಕ್ಕೆ ಅನುವಾಗುವಂತಹ ಕಾರ್ಯಯೋಜನೆಗಳನ್ನು ರೂಪಿಸುವ ಜವಬ್ದಾರಿ ಪ್ರಜ್ನಾವಂತರು ಮತ್ತು ಕೇಜ್ರಿವಾಲ್ ರಂತಹ ರಾಜಕಾರಣಿಗಳ ಜವಬ್ದಾರಿಯಾಗಿದೆ.
ದಲಿತ ಸಮುದಾಯದ ಬದುಕನ್ನು ನರಕಸದೃಶಗೊಳಿಸುವ ಈ ಒಳಚರಂಡಿ ಸ್ವಚ್ಛತೆ ಹಾಗೂ ಮಲಹೊರುವ ಕೆಲಸಗಳಿಗೆ ಒಂದು ಕೊನೆ ಹಾಡುವ ಪ್ರಯತ್ನ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ನಡೆದಿದ್ದು ಕರ್ನಾಟಕದಲ್ಲೇ. 1978ರಲ್ಲೇ ದಲಿತ ಸಮುದಾಯವನ್ನು ಈ ಕೆಲಸದಿಂದ ಬಿಡುಗಡೆಗೊಳಿಸುವ ಪ್ರಯತ್ನವನ್ನು ಅಂದಿನ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಮಾಡಿದ್ದರು. ಇದಾಗಿ 16 ವರ್ಶಗಳ ನಂತರದಲ್ಲಷ್ಟೇ ಅಖಿಲ ಬಾರತ ಮಟ್ಟದಲ್ಲಿ 1993ರಲ್ಲಿ ಕಾಯಿದೆ ಜಾರಿಗೆ ಬಂದಿತು. ನಂತರದಲ್ಲಿ ಆಳಿದ ಒಬ್ಬರೂ ಈ ವಿಷಯದಲ್ಲಿ ಕನಿಷ್ಠ ಇಚ್ಚಾಶಕ್ತಿ ತೋರದ ಕಾರಣ ಇಂದಿಗೂ ಕರ್ನಾಟದಲ್ಲಿ ಈ ಮ್ಯಾನ್ಹೋಲ್ಗಳಲ್ಲಿ ಸಾಯುವವರು ಸಾಯುತ್ತಲೇ ಇದ್ದಾರೆ. ಕರ್ನಾಟಕವೊಂದರಲ್ಲೇ ಏನಿಲ್ಲೆಂದರೂ ವರ್ಷಕ್ಕೆ ನೂರು ಮಂದಿ ದಾರುಣ ಸಾವನ್ನಪ್ಪುತ್ತಿದ್ದಾರೆ
ಈ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಕೇಜ್ರೀವಾಲರ ನಡೆಗೆ ಬಹಳ ಮಹತ್ವವಿದೆ. ಹಾಗೆಯೇ ಈ ಸಂದರ್ಬದಲ್ಲಿ ಕೇಜ್ರಿವಾಲ್ ತಮ್ಮ ಮಿತಿಗಳಾದ ಪ್ರಚಾರಪ್ರಿಯತೆ ಮತ್ತು ನಿರಂಕುಶ ನಡೆಗಳನ್ನು ಮೀರಬೇಕಾಗಿದೆ. ಮತ್ತು ಶೋಷಿತರ ಸಮುದಾಯಗಳ ಸಬಲೀಕರಣವು ಎಂದಿಗೂ ಸಾಂಕೇತಿಕ ಮಟ್ಟಕ್ಕೆ ನಿಲ್ಲಬಾರದು ಎನ್ನುವ ಪ್ರಜ್ನೆ ಕೇಜ್ರಿವಾಲ್ ರಂತಹ ಹೊಸ ತಲೆಮಾರಿನ ರಾಜಕಾರಣಿ ಬೆಳೆಸಿಕೊಳ್ಳಬೇಕಾಗಿದೆ. ಕಳೆದ ಏಳು ದಶಕಗಳಲ್ಲಿ ತನ್ನ ಈ ಸಾಂಕೇತಿಕ ನಡೆಗಳ ಮೂಲಕ ಕಾಂಗ್ರೆಸ್ ಪಕ್ಷದಿಂದ ಶೋಷಿತ ಸಮುದಾಯಗಳಿಗೆ ಯಾವುದೆ ನ್ಯಾಯ ಒದಗಿಸಲು ಸಾದ್ಯವಾಗಿಲ್ಲ. ಇಂದು ಬದಲಾವಣೆ ಬಯಸುವ ಎಲ್ಲರಿಗೂ ಕಾಂಗ್ರೆಸ್ ನ ಈ ವಿಫಲತೆ ಪಾಟವಾಗಬೇಕು. ಈಗ ತಾನೆ ರಾಜಕಾರಣದ ಪಟ್ಟುಗಳನ್ನು ಕಲಿಯುತ್ತಿರುವ ಕೇಜ್ರಿವಾಲ್ ರಂತಹ ರಾಜಕಾರಣಿಗಳು ಈ ಸಾಂಕೇತಿಕ ಎನ್ನುವ ಬಲೆಯಿಂದ ಆದಶ್ಟು ಬೇಗ ಹೊರಬರುತ್ತಾರೆ ಎಂದು ಆಶಿಸೋಣ.
ಈ ’ಒಳಚರಂಡಿ ಸ್ವಚ್ಚಗೊಳಿಸುವ ಯಾಂತ್ರೀಕೃತ ವಾಹನ’ ಈ ದಿಕ್ಕಿನಲ್ಲಿ ಇಟ್ಟ ಮೊದಲ ಹೆಜ್ಜೆ ಎನ್ನುವುದರಲ್ಲಿ ಅನುಮಾನವಿಲ್ಲ