ಪಾಕಿಸ್ತಾನದಿಂದ ಬಿಡುಗಡೆಗೊಂಡಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಇದೀಗ ಭಾರತೀಯ ಯೋಧರ ಸ್ಥೈರ್ಯ ಮತ್ತು ಸಾಹಸಕ್ಕೆ ಒಂದು ಹೆಗ್ಗುರುತಾಗಿದ್ದಾರೆ. ಅದೇ ಹೊತ್ತಿಗೆ, ಬಿಡುಗಡೆಗೆ ಮುನ್ನ ಅವರು ಆಡಿರುವ ಮಾತುಗಳು ಇದೀಗ ವೈರಲ್ ಆಗಿದ್ದು, ದೇಶದ ಮಾಧ್ಯಮಗಳು ಮತ್ತು ಸ್ವಯಂಘೋಷಿತ ದೇಶಭಕ್ತರ ಪೊಳ್ಳುತನವನ್ನೂ ಬಯಲುಮಾಡಿವೆ.
ಅಭಿನಂದನ್ ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಲೇ, ಪುಲ್ವಾಮಾ, ಆ ಬಳಿಕದ ವಾಯುದಾಳಿ ಮತ್ತು ಪಾಕ್ ಪಡೆಗಳಿಂದ ಅಭಿನಂದನ್ ಬಂಧನ ಸೇರಿದಂತೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಆತಂಕಕಾರಿ ಬೆಳವಣಿಗೆಗಳ ಕುರಿತ ಶಂಕೆ, ಪ್ರಶ್ನೆಗಳು ಮತ್ತೆ ಮುನ್ನಲೆಗೆ ಬಂದಿವೆ.
ಸ್ವತಃ ಅಭಿನಂದನ್ ಅವರು ಪಾಕಿಸ್ತಾನದ ಸೇನೆಯ ವಶವಾಗಿದ್ದಾರೆ ಎಂಬ ಸುದ್ದಿ ತಿಳಿದ ಕ್ಷಣದಿಂದ ಶುಕ್ರವಾರ ರಾತ್ರಿ ಅವರ ಬಿಡುಗಡೆಯಾಗಿ, ವಾಘಾ ಗಡಿಯಲ್ಲಿ ಅವರು ಭಾರತದ ನೆಲದೊಳಕ್ಕೆ ಸುರಕ್ಷಿತವಾಗಿ ಪದಾರ್ಪಣೆ ಮಾಡುವವರೆಗೆ ಇಡೀ ದೇಶ ತುದಿಗಾಲಲ್ಲಿ ನಿಂತಿತ್ತು. ಪಾಕಿಸ್ತಾನ ನಮ್ಮ ಯೋಧನಿಗೆ ಏನು ಮಾಡಿಬಿಡುವುದೋ? ಯಾವ ಕ್ಷಣದಲ್ಲಿ ಯಾವ ಕೆಟ್ಟ ಸುದ್ದಿ ಗಡಿಯಾಚೆಯಿಂದ ಬರುವುದೋ ಎಂಬ ಆತಂಕ ಪ್ರತಿಯೊಬ್ಬರಲ್ಲೂ ಇತ್ತು. ಹಾಗಾಗಿಯೇ ಅಂತಿಮವಾಗಿ ಅವರು ಸುರಕ್ಷಿತವಾಗಿ ಬರುತ್ತಿದ್ದಾರೆ ಎಂದಾಗ, ಕ್ಷಣಗಳಿಗಾಗಿ ಎಲ್ಲರೂ ಕಾತರದಿಂದ ಕಾದಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿಯವರು, ಅಭಿನಂದನ್ ಬಿಡುಗಡೆಯ ವಿಷಯದಲ್ಲಿ ಪಾಕಿಸ್ತಾನ ಪ್ರಧಾನಿ ಮಾತುಕತೆಯ ಪ್ರಸ್ತಾಪವಿಟ್ಟ ಸಂದರ್ಭವೂ ಸೇರಿದಂತೆ, ಅವರ ಬಿಡುಗಡೆಯ ಕ್ಷಣದವರೆಗೆ ನಡೆದುಕೊಂಡ ರೀತಿ ಇದೀಗ ಪ್ರತಿಪಕ್ಷಗಳಷ್ಟೇ ಅಲ್ಲದೆ, ಜನಸಾಮಾನ್ಯರ ಟೀಕೆಗೂ ಗುರಿಯಾಗಿದೆ. ಅಭಿನಂದನ್ ಬಿಡುಗಡೆ ಮಾಡುವುದಾಗಿ ಗುರುವಾರ ಹೇಳಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಆ ಮುನ್ನ ಭಾರತದೊಂದಿಗೆ ಮಾತುಕತೆ ನಡೆಸಲು ಬಯಸುವುದಾಗಿ ಹೇಳಿದ್ದರು. ಆದರೆ, ಆ ವಿಷಯದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿಯವರು, “ಈಗ ಒಂದು ಪೈಲಟ್ ಪ್ರಾಜೆಕ್ಟ್ ಮುಗಿಸಿದ್ದೇವೆ. ನಿಜವಾದ ಪ್ರಾಜೆಕ್ಟ್ ಇನ್ನೂ ಬಾಕಿ ಇದೆ” ಎಂದು ಹೇಳಿದ್ದರು. ಆ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆದರೆ, ನಮ್ಮ ಯೋಧ ಅವರ ವಶದಲ್ಲಿದ್ದಾನೆ ಎಂಬ ಸೂಕ್ಷ್ಮ ಸಂಗತಿಯ ಹೊರತಾಗಿಯೂ ಇಂತಹ ಹೇಳಿಕೆ ನೀಡಿದ ಪ್ರಧಾನಿಗಳ ವರಸೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು.
ಇಂತಹ ಹೇಳಿಕೆಗಳು ಪಾಕಿಸ್ತಾನ ಸೇನೆಯನ್ನು ಕೆರಳಿಸಬಹುದು. ಪರಿಣಾಮವಾಗಿ ಅಲ್ಲಿನ ಸೇನೆಯ ಕೈಗೊಂಬೆಯಾಗಿರುವ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬದಿಗೆ ಸರಿಸಿ, ಸೇನೆ ಏಕಪಕ್ಷೀಯವಾಗಿ ಅಭಿನಂದನ್ ಅವರ ಜೀವಕ್ಕೆ ಅಪಾಯ ಉಂಟುಮಾಡಬಹುದು ಎಂಬುದು ಸಹಜವಾಗೇ ಎಲ್ಲರ ಆತಂಕವಾಗಿತ್ತು. ಹಾಗಾಗಿ ಉಭಯ ರಾಷ್ಟ್ರಗಳ ಸಂಬಂಧ ಮತ್ತು ರಾಜತಾಂತ್ರಿಕ ತಜ್ಞರು, ಸಂಯಮ ಕಾಯ್ದುಕೊಳ್ಳುವಂತೆ ಮತ್ತೆ ಮತ್ತೆ ಕಿವಿಮಾತು ಹೇಳುತ್ತಿದ್ದರು. ಆದರೆ, ಮೋದಿಯವರು ಆ ಮಾತುಗಳನ್ನು ಕಡೆಗಣಿಸಿ, ತಮ್ಮ ಎದುರಿನ ಚುನಾವಣಾ ಪ್ರಚಾರ ಸಭೆಯಲ್ಲಿ ಹೂಂಕರಿಸುತ್ತಿದ್ದ ಜನಸಮೂಹವನ್ನು ರಂಜಿಸುವ ವರಸೆಯನ್ನು ಮುಂದುವರಿಸಿದರು.
ಹೆಮ್ಮೆಯ ಯೋಧನೊಬ್ಬ ಶತ್ರುಸೇನೆಯ ವಶದಲ್ಲಿರುವಾಗ, ಇಡೀ ದೇಶ ಆತನ ಸುರಕ್ಷತೆಯ ಬಗ್ಗೆ ಆತಂಕಕ್ಕೊಳಗಾಗಿರುವಾಗ, ದೇಶದ ಪ್ರಧಾನಿಯಾಗಿ ಮೋದಿಯವರು ಆ ಬಗ್ಗೆ ಗಮನ ಹರಿಸುವ ಬದಲಾಗಿ, ತಮ್ಮ ಪಕ್ಷದ ಚುನಾವಣಾ ರ್ಯಾಲಿಗಳಲ್ಲಿ ಬಿಡುವಿಲ್ಲದಷ್ಟು ವ್ಯಸ್ತರಾಗಿರುವುದು ಕೂಡ ಸಾರ್ವಜನಿಕ ಟೀಕೆಗೆ ಗುರಿಯಾಯಿತು. ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಕೇವಲ ಕೆಲವೇ ತಿಂಗಳ ಹಿಂದೆ ಮೋದಿಯವರ ಸರ್ಕಾರದ ಭಾಗವೂ ಆಗಿದ್ದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ದು ಅವರಂತೂ, ಸೌದಿ ದೊರೆಯನ್ನು ಸ್ವಾಗತಿಸಲು ಪ್ರಧಾನಿ ಸ್ಥಾನಮಾನದ ಶಿಷ್ಟಾಚಾರಗಳನ್ನು ಬದಿಗೊತ್ತಿ ವಿಮಾನ ನಿಲ್ದಾಣಕ್ಕೇ ಹೋಗಿದ್ದ ಪ್ರಧಾನಿ ಮೋದಿಯವರು, ದೇಶದ ಹೆಮ್ಮೆಯ ‘ದೇಶಭಕ್ತ’ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬರಮಾಡಿಕೊಳ್ಳಲು ಯಾಕೆ ಹೋಗಲಿಲ್ಲ. ಯೋಧನ ಜೀವಕ್ಕಿಂತ ಅವರಿಗೆ ಆಂಧ್ರಪ್ರದೇಶ, ತಮಿಳುನಾಡಿನ ಚುನಾವಣಾ ಪ್ರಚಾರವೇ ಮುಖ್ಯವಾಯಿತೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಾಯ್ದು ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದು, ಅದರೊಂದಿಗೆ ಅಭಿನಂದನ್ ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ವಿಷಯದಲ್ಲಿ ಪ್ರಧಾನಿಯವರು ವಹಿಸಬೇಕಾದ ಪ್ರಮಾಣದ ಕಾಳಜಿ ವಹಿಸಿಲ್ಲ ಎಂಬ ಟೀಕೆಗಳು, ಪ್ರಮುಖವಾಗಿ ಕೇಳಿಬಂದಿವೆ. ಅದೇ ಹೊತ್ತಿಗೆ, ಕಳೆದ ಮಂಗಳವಾರ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಸುಮಾರು 300 ಮಂದಿ ಪಾಕಿಸ್ತಾನಿ ಉಗ್ರರು ನಾಶವಾಗಿದ್ದಾರೆ ಎಂಬ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಹೇಳಿಕೆ ಮತ್ತು ಸ್ವತಃ ಮೋದಿಯವರು ಆ ಘಟನೆಯನ್ನು ರಾಜಸ್ತಾನ ಮತ್ತಿತರ ಕಡೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಕ್ರಮ ಕೂಡ ಈಗ ಚರ್ಚೆಗೆ ಬಂದಿದೆ.
ದಿ ರಾಯಿಟರ್ಸ್, ದ ಗಾರ್ಡಿಯನ್ ಮತ್ತಿತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ವಿಶ್ವಾಸಾರ್ಹತೆ ಹೊಂದಿರುವ ಮಾಧ್ಯಮಗಳು, ವಾಯುದಾಳಿ ನಡೆದ ಪಾಕಿಸ್ತಾನದ ಬಾಲಾಕೋಟ್ ಪ್ರದೇಶಕ್ಕೆ ಭೇಟಿ ನೀಡಿ ಸಾಕ್ಷಾತ್ ವರದಿ ಮಾಡಿದ್ದು, “ಬಾಂಬ್ ದಾಳಿಯಲ್ಲಿ ದಟ್ಟ ಅರಣ್ಯದ ನಡುವೆ ಗಿಡಮರಗಳು ಮುರಿದಿವೆ. ನೆಲದಲ್ಲಿ ಗುಂಡಿ ಬಿದ್ದಿದೆ. ಅಲ್ಲಿನ ಸುತ್ತಮುತ್ತಲ ನಿವಾಸಿಗಳನ್ನು ಮಾತನಾಡಿಸಿದಾಗ, ಅಂದು ರಾತ್ರಿ ಬಾಂಬ್ ದಾಳಿ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದರಲ್ಲಿ ಯಾವುದೇ ವ್ಯಕ್ತಿಗಳಿಗಾಗಲೀ, ಆಸ್ತಿಪಾಸ್ತಿಯಾಗಲೀ ಹಾನಿಯಾದ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ” ಎಂದು ಹೇಳಿರುವುದಾಗಿ ವರದಿ ಮಾಡಿವೆ.
ಬಾಲಾಕೋಟ್ ದಾಳಿಯ ಕುರಿತು ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಪ್ರತಿ ಬಾರಿ ಹೇಳಿಕೆ ನೀಡುವಾಗಲೂ ಅದು ತಮ್ಮ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡಿವೆ. ದೇಶದ ಭದ್ರತೆ ಮತ್ತು ಸೇನಾ ಪಡೆಗಳ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎನ್ನುವ ಬಿಜೆಪಿ ಮತ್ತು ಮೋದಿಯವರೇ ಸ್ವತಃ ಆ ಕೆಲಸ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ದೇಶಕ್ಕಿಂತ ಅವರಿಗೆ ಮತ ಮುಖ್ಯ. ಹಾಗಾಗಿಯೇ, ದೇಶದಾದ್ಯಂತ ಗುರುವಾರ ಮತ್ತು ಶುಕ್ರವಾರ ಅಭಿನಂದನ್ ಬಿಡುಗಡೆಗಾಗಿ ಜನ ಪೂಜೆ, ಪ್ರಾರ್ಥನೆ, ಶಾಂತಿಗಾಗಿ ಘೋಷಣೆಗಳು ಮೊಳಗುತ್ತಿದ್ದರೆ, ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ‘ಮೆರಾ ಭೂತ್ ಸಬ್ ಸೇ ಮಜಬೂತ್(ಎಲ್ಲಕ್ಕಿಂತ ನನ್ನ ಮತಗಟ್ಟೆ ಅದ್ಭುತ)’ ಅಭಿಯಾನ ನಡೆಸುತ್ತಿದ್ದರು ಎಂಬ ಟೀಕೆಗಳು ವ್ಯಕ್ತವಾಗಿವೆ.
ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದಿರುವಾಗ, ಗಡಿಯಲ್ಲಿ ನಿರಂತರ ದಾಳಿಗಳು ನಡೆಯುತ್ತಿರುವಾಗ, ಭದ್ರತೆ ಮತ್ತು ಸುರಕ್ಷತೆಯ ವಿಷಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಲ್ಲಿ, ದೇಶದ ಪ್ರಧಾನಿಯಾಗಿ ಆ ಬಗ್ಗೆ ನಿರಂತರ ನಿಗಾ ಇಡುವ, ಕಾಳಜಿ ವಹಿಸುವ ಬದಲಾಗಿ, ಮೋದಿ ಸರಣಿ ಚುನಾವಣಾ ರ್ಯಾಲಿಗಳಲ್ಲಿ, ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಷಯವನ್ನೇ ಚುನಾವಣಾ ದಾಳವಾಗಿ ಉರುಳಿಸುತ್ತಿದ್ದಾರೆ ಎಂಬ ಕಟುಟೀಕೆಗಳು ರಾಜಕೀಯ ಪಕ್ಷಗಳಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಮಾರ್ದನಿಸುತ್ತಿದೆ.