ಶುಕ್ರವಾರ ಒಂದು ಕಡೆ; ಪಾಕ್ ಸೆರೆ ಹಿಡಿದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗಾಗಿ ದೇಶದ ವಾಘಾ ಗಡಿಯಲ್ಲಿ ಕ್ಷಣಗಣನೆ ಆರಂಭವಾಗಿತ್ತು. ಇಡೀ ದೇಶವೇ ವೀರ ಯೋಧ ಸುರಕ್ಷಿತವಾಗಿ ಮರಳಿಬರಲಿ ಎಂಬ ನಿರೀಕ್ಷೆಯಲ್ಲಿ ವಾಘಾ ಗಡಿಯತ್ತ ಕಣ್ಣು ನೆಟ್ಟಿತ್ತು. ಮತ್ತೊಂದು ಕಡೆ; ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ದಿನವಿಡೀ ಬಿಡುವಿಲ್ಲದಂತೆ ಭಾಗಿಯಾಗಿದ್ದ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ಟೀಕಾಸ್ತ್ರ ಪ್ರಯೋಗದಲ್ಲಿ ನಿರತರಾಗಿದ್ದರು.
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ವಾಯು ದಾಳಿಯನ್ನು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಚುನಾವಣಾ ಲಾಭಕ್ಕೆ ಬಳಸುತ್ತಿರುವುದು ದೇಶದ ಹಿತದೃಷ್ಟಿಯಿಂದ ಅಪಾಯಕಾರಿ ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಜಂಟಿ ಹೇಳಿಕೆ ನೀಡಿದ್ದವು. ಆ ಹೇಳಿಕೆಗೆ ಪ್ರಮುಖವಾಗಿ ಕಾರಣವಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ, “ಬಾಲಾಕೋಟ್ ದಾಳಿಯಿಂದಾಗಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗಿದೆ. ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲಲು ಬಿಜೆಪಿಗೆ ಈ ದಾಳಿ ನೆರವಾಗಲಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂಬ ಹೇಳಿಕೆ.
ಆ ಹೇಳಿಕೆಯ ಬಳಿಕ, ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ; ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ದೇಶದ ಭದ್ರತೆ ಮತ್ತು ಸುರಕ್ಷತೆಯಂತಹ ಸೂಕ್ಷ್ಮ ವಿಷಯದಲ್ಲಿ ಬಿಜೆಪಿ ನಾಯಕರು ಹೇಗೆ ರಾಜಕೀಯ ಮಾಡುತ್ತಿದ್ದಾರೆ. ಯುದ್ಧವನ್ನು ಕೂಡ ಹೇಗೆ ಚುನಾವಣೆಗೆ ಬಳಸಿಕೊಳ್ಳುವ ಲೆಕ್ಕಾಚಾರಗಳಿವೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪಾಕಿಸ್ತಾನ ಕೂಡ ಈ ಹೇಳಿಕೆಯನ್ನು ಮುಂದುಮಾಡಿ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಸಿಲುಕಿಸಿತ್ತು.
ಇಂತಹ ಅವಿವೇಕಿತನದ ಹೇಳಿಕೆ ನೀಡಿದ ತಮ್ಮ ನಾಯಕರಿಗೆ ಎಚ್ಚರಿಕೆ ನೀಡಬೇಕಾಗಿದ್ದ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್, ಅದಕ್ಕೆ ಬದಲಾಗಿ ಇದೀಗ ಪ್ರತಿಪಕ್ಷಗಳ ವಿರುದ್ಧವೇ ದೇಶದ್ರೋಹದ ಆರೋಪ ಮಾಡಿದ್ದಾರೆ. ಪ್ರಮುಖವಾಗಿ ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರರು, “ನಮ್ಮ ಯೋಧ ಪಾಕಿಸ್ತಾನದಲ್ಲಿ ಸೆರೆಯಾಗಿರುವಾಗ, ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದಿರುವಾಗ, ಪ್ರಧಾನಿಯಾದವರು ಅಂತಹ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸುವ ಬದಲಾಗಿ, ‘ಮೆರಾ ಭೂತ್, ಸಬ್ ಸೇ ಮಜಭೂತ್’ ಘೋಷಣೆ ಮಾಡುತ್ತಾ, ಪಕ್ಷದ ಕಾರ್ಯಕರ್ತರ ವೀಡಿಯೋ ಕಾನ್ಫರೆನ್ಸ್ ಮಾಡುತ್ತಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಟೀಕಿಸಿದ್ದರು. ಜೊತೆಗೆ ಯಡಿಯೂರಪ್ಪ ಹೇಳಿಕೆಯ ಬಳಿಕವಂತೂ ಪ್ರತಿಪಕ್ಷಗಳು ಮಾತ್ರವಲ್ಲದೆ, ದೇಶದ ಜನಸಾಮಾನ್ಯರು ಕೂಡ ಬಿಜೆಪಿಯ ವರಸೆಯ ಬಗ್ಗೆ ಕಿಡಿಕಾರಿದ್ದರು.
ಆ ಹಿನ್ನೆಲೆಯಲ್ಲಿ; ಪಕ್ಷ ಮತ್ತು ತಮ್ಮ ವರ್ಚಸ್ಸಿಗೆ ಆಗುತ್ತಿರುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಇದೀಗ ಪ್ರತಿಪಕ್ಷಗಳನ್ನೇ ಪಾಕಿಸ್ತಾನದ ಬೆಂಬಲಿಗರು ಎಂಬಂತೆ ಬಿಂಬಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಶುಕ್ರವಾರ ತಮಿಳುನಾಡು ಮತ್ತು ಆಂಧ್ರಪ್ರದೇಶದ ಅವರ ಸಭೆಗಳಲ್ಲಿ ಪ್ರಮುಖವಾಗಿ ಕೇಳಿಬಂದದ್ದು “ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಕೆಲವು ರಾಜಕೀಯ ಪಕ್ಷಗಳು ಅನುಮಾನಿಸುತ್ತಿವೆ. ಇಂಥವರೇ ಪಾಕಿಸ್ತಾನದ ಪರ ಹೇಳಿಕೆ ನೀಡುತ್ತಿದ್ದಾರೆ. ನೀವು ನಮ್ಮ ಸೇನಾಪಡೆಗಳನ್ನು ಶಂಕಿಸುತ್ತಿದ್ದೀರೋ, ಅಥವಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದೀರೋ ಎಂದು ನಾನು ಅವರನ್ನು ಕೇಳಬಯಸುತ್ತೇನೆ. ರಾಜಕೀಯ ಕಾರಣಕ್ಕಾಗಿ ದೇಶವನ್ನು ದುರ್ಬಲಗೊಳಿಸುವ ಕೆಲಸ ಮಾಡಬೇಡಿ” ಎಂಬ ಮೋದಿಯವರ ಹೇಳಿಕೆಯೇ.
ಆ ಮೂಲಕ, ಈವರೆಗೆ ಮೋದಿ ಭಕ್ತರು ಮತ್ತು ಕಟ್ಟರ್ ಸಂಘಪರಿವಾರದವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ವಿರುದ್ಧದ ಟೀಕಾಕಾರರ ವಿರುದ್ಧ ಬಹುತೇಕ ಬಳಸುತ್ತಿದ್ದ, “ಮೋದಿ ಟೀಕಿಸುವುದೆಂದರೆ ಭಾರತವನ್ನು ಟೀಕಿಸಿದಂತೆ, ಸರ್ಕಾರದ ವಿರುದ್ಧ ಮಾತನಾಡಿದರೆ ಭಾರತದ ವಿರುದ್ಧ ಮಾತನಾಡಿದಂತೆ, ಪ್ರಧಾನಿಯನ್ನು ಅಥವಾ ಸರ್ಕಾರವನ್ನು ಟೀಕಿಸುವುದೇ ದೇಶದ್ರೋಹ” ಎಂಬ ವಾಗ್ವಾದವನ್ನು ಇದೀಗ ಸ್ವತಃ ಪ್ರಧಾನಿ ಮೋದಿಯವರೇ ಪ್ರಯೋಗಿಸಿದ್ದಾರೆ. ಅಂದರೆ, ತಮ್ಮ ವಿರುದ್ಧದ ಟೀಕೆಗಳು, ಪಾಕಿಸ್ತಾನದ ಪರ ಬೆಂಬಲವಾಗುತ್ತದೆ. ತಮ್ಮ ವಿರುದ್ಧದ ಟೀಕೆ, ದೇಶದ ವಿರುದ್ಧದ ಟೀಕೆ, ದೇಶದ ವಿರುದ್ಧದ ಟೀಕೆ ಎಂದರೆ ಅದು ದೇಶದ್ರೋಹ” ಎಂಬ ವಾದ ಸರಣಿಯನ್ನು ಮೋದಿಯವರು ಮುಂದಿಟ್ಟು, ಪ್ರತಿಪಕ್ಷಗಳನ್ನು ಚುನಾವಣಾ ಹೊಸ್ತಿಲಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಅಷ್ಟಕ್ಕೂ ಪ್ರತಿಪಕ್ಷಗಳು ಪ್ರಶ್ನಿಸಿದ್ದು, ಸೇನಾ ಪಡೆಗಳನ್ನಲ್ಲ ಮತ್ತು ಸೇನಾ ಪಡೆಗಳ ಸಾಮರ್ಥ್ಯವನ್ನೂ ಅಲ್ಲ ಎಂಬುದು ಗುಟ್ಟೇನಲ್ಲ. ಪುಲ್ವಾಮಾ ದಾಳಿಯ ಬಳಿಕದ ಎಲ್ಲಾ ವಿದ್ಯಮಾನಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಪ್ರತಿಪಕ್ಷಗಳಷ್ಟೇ ಅಲ್ಲ; ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ನಾಗರಿಕರೂ ಕೇಳಿದ್ದಾರೆ. ಪ್ರಮುಖವಾಗಿ, ಪುಲ್ವಾಮಾ ದಾಳಿಯಲ್ಲಿ ಗುಪ್ತಚರ ವೈಫಲ್ಯ, ಸ್ಥಳೀಯ ಭದ್ರತಾ ವ್ಯವಸ್ಥೆಯ ಲೋಪಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ನಡೆದ ದಿನವೇ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಆದರೆ, ಆ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಯಾವ ಪ್ರಶ್ನೆ, ಅನುಮಾನಗಳನ್ನು ವ್ಯಕ್ತಪಡಿಸದೇ, ಸರ್ಕಾರದ ಪರ ನಿಂತಿದ್ದವು ಮತ್ತು “ಸರ್ಕಾರದ ಯಾವುದೇ ಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ದೇಶದ ಭದ್ರತೆಯ ವಿಷಯದಲ್ಲಿ ನಾವೆಲ್ಲಾ ಸರ್ಕಾರದ ಒಟ್ಟಿಗೆ ಇದ್ದೇವೆ” ಎಂಬ ಐಕ್ಯಮಂತ್ರ ಪಠಿಸಿದ್ದವು.
ಅದಾದ 12 ದಿನಗಳ ಬಳಿಕ ನಡೆದ ಬಾಲಾಕೋಟ್ ದಾಳಿ ಸಂದರ್ಭದಲ್ಲಿಯೂ ಪ್ರತಿಪಕ್ಷಗಳು ಸೇನಾಪಡೆಗಳಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದವು ಮತ್ತು ಅಭಿನಂದನೆ ಹೇಳಿದ್ದವು. ಆದರೆ, ಆ ದಾಳಿಯ ಕುರಿತ ಸರ್ಕಾರದ ವಿವಿಧ ಹಂತದ ಅಧಿಕಾರಿಗಳು, ಸಚಿವರ ಟ್ವಿಟರ್ ಮತ್ತು ಮಾಧ್ಯಮ ಹೇಳಿಕೆಗಳು ಇಡೀ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆಯ ಬಗ್ಗೆ ಗೊಂದಲ ಹುಟ್ಟಿಸಿದ್ದವು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭಾರೀ ಸಂಖ್ಯೆಯಲ್ಲಿ ಉಗ್ರರು ಸತ್ತಿರುವ ಸಾಧ್ಯತೆ ಇದೆ ಎಂದು ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೆ, ಸಚಿವ ಅರುಣ್ ಜೇಟ್ಲಿ ಸೇರಿದಂತೆ ಪ್ರಧಾನಿ ಮೋದಿಯವರ ಹಲವು ಸಂಪುಟ ಸಹೋದ್ಯೋಗಿಗಳು ಸತ್ತವರ ಸಂಖ್ಯೆ 200, 300 ಎಂದು ಹೇಳಿದ್ದರು. ಆದರೆ, ಈ ನಡುವೆ, ಪಾಕಿಸ್ತಾನ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ದಾಳಿ ಸ್ಥಳಕ್ಕೆ ಕರೆದೊಯ್ದು ಸಾಕ್ಷಾತ್ ವರದಿ ಮಾಡಿಸಿತ್ತು. ‘ದಾಳಿ ಗುರಿತಪ್ಪಿತ್ತು ಮತ್ತು ಯಾವುದೇ ಜೀವ ಹಾನಿಯಾಗಲೀ, ಆಸ್ತಿಪಾಸ್ತಿ ಹಾನಿಯಾಗಲೀ ಸಂಭವಿಸಿಲ್ಲ’ ಎಂದು ಪಾಕಿಸ್ತಾನಕ್ಕಾಗಲೀ, ಭಾರತಕ್ಕಾಗಲೀ ಸೇರದ ಆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿಗಳ ಬಳಿಕ, ದೇಶದಲ್ಲಿ ‘ಬಾಲಾಕೋಟ್ ದಾಳಿಯ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ವಾಸ್ತವಾಂಶ ವಿವರಿಸಬೇಕು. ಅತ್ತ ಪಾಕ್ ಪ್ರಧಾನಿ ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಬೇರೆಯದೇ ಚಿತ್ರಣವನ್ನು ಜಗತ್ತಿನ ಮುಂದಿಡುತ್ತಿದ್ದಾರೆ. ಇಂತಹ ಹೊತ್ತಲ್ಲಿ, ಭಾರತ ಸುಮ್ಮನೇ ಇದ್ದರೆ, ಅದು ಅಂತಾರಾಷ್ಟ್ರೀಯ ಸಮುದಾಯಕ್ಕೂ, ದೇಶದ ಜನಸಾಮಾನ್ಯರಿಗೂ ಬೇರೆಯದೇ ಸಂದೇಶ ನೀಡುತ್ತದೆ. ಹಾಗಾಗಿ ಮೋದಿಯವರು ಆತಂಕದ ಹೊತ್ತಿನಲ್ಲಿ ದೇಶದ ಜನರಲ್ಲಿ ಭರವಸೆ ತುಂಬುವ ಉದ್ದೇಶಕ್ಕಾದರೂ ದೇಶವನ್ನು ಉದ್ದೇಶಿಸಿ ಮಾತನಾಡಬೇಕು’ ಎಂದು ಪ್ರತಿಪಕ್ಷಗಳು ಮತ್ತು ನಾಗರಿಕರು ಬಯಸಿದ್ದರು.
ಆದರೆ, ಪುಲ್ವಾಮಾ ದಾಳಿಯ ದಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಡಾಕ್ಯುಮೆಂಟರಿಯೊಂದರ ಶೂಟಿಂಗ್ ನಲ್ಲಿ ನಿರತರಾಗಿದ್ದ ಮೋದಿಯವರು, ಆ ಬಳಿಕವೂ ನಿರಂತರವಾಗಿ ಸರ್ಕಾರಿ ಕಾರ್ಯಕ್ರಮಗಳ ರಾಲಿಗಳಲ್ಲಿ, ಪಕ್ಷದ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಂಪೂರ್ಣ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ. ಶುಕ್ರವಾರ ಅಭಿನಂದನ್ ಅವರ ಬಿಡುಗಡೆಯ ವೇಳೆಯಲ್ಲಿ ಕೂಡ ಅವರು, ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ, ಯುದ್ಧದ ಹೊಸ್ತಿಲಲ್ಲಿ ನಿಂತ ದೇಶದ ಜನರನ್ನುದ್ದೇಶಿಸಿ ಮಾತನಾಡುವಷ್ಟೂ ಸಮಯವಿರದ ಪ್ರಧಾನಿ ಮೋದಿಯವರು, ಇದೀಗ ಪ್ರತಿಪಕ್ಷಗಳ ವಿರುದ್ಧ ದೇಶದ್ರೋಹದ ಆರೋಪ ಮಾಡುವ ಮೂಲಕ, ಹೊಸ ರಾಜಕೀಯ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಷಯವನ್ನೇ ಮುಂದಿಟ್ಟುಕೊಂಡು ರಾಜಕೀಯ ದಾಳ ಉರುಳಿಸಿದ್ದಾರೆ. ತಮ್ಮ ನಡೆ-ನುಡಿಯನ್ನು, ನೀತಿಯನ್ನು ಪ್ರಶ್ನಿಸುವುದು, ಅನುಮಾನಿಸುವುದು, ಪಾಕಿಸ್ತಾನಕ್ಕೆ ಬೆಂಬಲಿಸಿದಂತೆ, ದೇಶದ ವಿರುದ್ಧ ದ್ರೋಹ ಬಗೆದಂತೆ ಎಂಬ ಅವರ ವಾದ, ಈಗಾಗಲೇ ಚಾಲ್ತಿಯಲ್ಲಿದ್ದ ‘ಮೋದಿ ಎಂದರೆ ದೇಶ, ದೇಶವೆಂದರೆ ಮೋದಿ, ಹಾಗಾಗಿ ಮೋದಿ ಟೀಕಿಸಿದರೆ, ದೇಶದ್ರೋಹ’ ಎಂಬ ಅವರ ಭಕ್ತಪಡೆಯ ವಾದಕ್ಕೆ ಅಧಿಕೃತ ಮುದ್ರೆ ಒತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ದೇಶಪ್ರೇಮ ಮತ್ತು ದೇಶದ್ರೋಹದ ವ್ಯಾಖ್ಯಾನಗಳು ಪಡೆದುಕೊಳ್ಳುವ ರೂಪಗಳು ಕುತೂಹಲ ಹುಟ್ಟಿಸಿವೆ.
3 Comments
ಸಂಗ್ರಹ ಯೋಗ್ಯ ಬರಹಗಳು
ಹೀಗೆ ಮುಂದುವರಿಯಲಿ ನಿತ್ಯ ನಿರಂತರ.
thank you
ಮೋದಿ ಅವರು ಹಿಟ್ಲರನ ನಡೆಯನ್ನು, ನಡೆಯುವ ಲಕ್ಷಣಗಳು ಗೊಚಿರಿಸುತ್ತಿವೆ. ಮುಂದೆ ಭಾರತದಲ್ಲಿ ಒಂದು ದೊಡ್ಡ ಮಟ್ಟದ ಭಯವಂತು ಬಿತ್ತನೆ ಮಾಡುತ್ತಿದ್ದಾರೆ. ಅಧಿಕಾರ ಅವರನ್ನು ಅಂದಕ್ಕೆ ದಾರಿಮಾಡಿಕೊಟ್ಟಿತು. ಮುಂದೆ ಅದನ್ನು ಹೇಗಾದರು ಮಾಡಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ , ಅದಕ್ಕಾಗಿ ದೇಶದ ಜನರ ರಕ್ತ ಚಲ್ಲಿ ಆದರೂ ಸರಿ ಅನ್ನುವ ಮಟ್ಟಿಗೆ ಅವರ ನಿರ್ಣಯ ಕಾಣುತ್ತೇವೆ. ಶಾಂತಿ ಹಾರಿ ಹೋಗುವ ಲಕ್ಷಣಗಳು ಸಾದ್ಯತೆ