ಮೇ ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತಯಾಚಿಸುವ ಸ್ಥಿತಿಯಲ್ಲಿ ಇಲ್ಲ. ಹೇಗಾದರೂ ಸರಿಯೇ ಅಧಿಕಾರ ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿರುವ ಅವರು ಅಭಿವೃದ್ಧಿ ಮಂತ್ರ ಜಪಿಸುವ ಬದಲು ಯುದ್ಧೋನ್ಮಾದದಿಂದ ಹೂಂಕರಿಸುತ್ತಿದ್ದಾರೆಯೇ?
ಹೌದು ಎನ್ನಲು ಪುರಾವೆಗಳು ಇಲ್ಲಿವೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನದಿಂದ ಸುರಕ್ಷಿತವಾಗಿ ಕರೆತರುವ ಸುದ್ಧಿಸಾಗರಗಳ ನಡುವೆ ಭಾರತದ ಜಿಡಿಪಿ ಕುಸಿದಿರುವ ಪ್ರಮುಖ ಸುದ್ದಿಗೆ ಮಹತ್ವವೇ ಸಿಗಲಿಲ್ಲ. ಭಾರತ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಅಭಿವೃದ್ಧಿವು ಶೇ.6.6ಕ್ಕೆ ಕುಸಿದಿದೆ. ಇದು ಹಿಂದಿನ ಆರು ತ್ರೈಮಾಸಿಕಗಳಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದರ. ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.6.3ಕ್ಕೆ ಕುಸಿಯುವ ಮುನ್ನಂದಾಜು ಮಾಡಲಾಗಿದೆ.
ಇದರರ್ಥ, ಪ್ರಸಕ್ತ ವಿತ್ತೀಯ ವರ್ಷದ ಒಟ್ಟಾರೆ ಜಿಡಿಪಿ ಅಭಿವೃದ್ಧಿ ದರವು ಶೇ.7ಕ್ಕೆ ಕುಸಿಯಲಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದರವಾಗಲಿದೆ. ನರೇಂದ್ರ ಮೋದಿ 2014ರ ಚುನಾವಣಾ ಪ್ರಚಾರದಲ್ಲಿ ಜಪಿಸಿದ್ದು ಬರೀ ಅಭಿವೃದ್ಧಿ ಮಂತ್ರ. ತಾನು ದೇಶದ ಜಿಡಿಪಿ ದರವನ್ನು ಎರಡಂಕಿಗೆ ಏರಿಸುವುದಾಗಿ ಡಂಗೂರ ಸಾರಿದ್ದರು. ಈಗ ಮತ್ತೆ ಚುನಾವಣೆ ಬಂದಿದೆ. ಕಳೆದ ನಾಲ್ಕುಮುಕ್ಕಾಲು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಧಿಸಿದ್ದೇನೂ ಇಲ್ಲ. ಯುಪಿಎ ಸರ್ಕಾರದ ಯಶಸ್ವಿ ಯೋಜನೆಗಳಿಗೆ ಮರುನಾಮಕರಣ ಮಾಡಿ ತಮ್ಮದೇ ಯೋಜನೆಗಳೆಂಬಂತೆ ಬಿಂಬಿಸುತ್ತಾ, ಜನರನ್ನು ನಂಬಿಸುತ್ತಾ ಬಂದ ಮೋದಿ ಸರ್ಕಾರಕ್ಕೆ ಜನರನ್ನು ನಂಬಿಸಲು ಮತ್ತೇನೂ ಉಳಿದಿಲ್ಲ.
ಅದು ಖುದ್ಧು ಪ್ರಧಾನಿ ಮೋದಿಗೂ ಅರಿವಾದ ನಂತರ ಇದ್ಧಕ್ಕಿದ್ದಂತೆ ರಾಮಮಂದಿರ ನಿರ್ಮಾಣ ವಿಚಾರವನ್ನು ಮುನ್ನೆಲೆಗೆ ಎಳೆದು ತಂದರು. ದೇಶಾದ್ಯಂತ ರಾಮಜನ್ಮಭೂಮಿಯ ಉನ್ಮಾದ ತುಂಬುವ ಪ್ರಯತ್ನ ಮಾಡಲಾಯಿತು. ಎಲ್ಲಾ ಕಡೆಗಳಲ್ಲೂ ರಾಮಮಂದಿರ ನಿರ್ಣಾಣಕ್ಕಾಗಿ ಒತ್ತಾಯಿಸುವ ಮೆರವಣಿಗೆಗಳು ನಡೆದವು.
ರಾಮನ ಕೃಪೆಯು ವಾಜಪೇಯಿಗೆ ದಕ್ಕಿದಷ್ಟು ನರೇಂದ್ರಮೋದಿಗೆ ದಕ್ಕುವುದಿಲ್ಲ ಎಂಬ ಕಟು ಸತ್ಯವು ಸರ್ಕಾರಿ ಸ್ನೇಹಿ ಮಾಧ್ಯಮಗಳು ಸೇರಿದಂತೆ ಬಹುತೇಕ ಮಾಧ್ಯಮಗಳು ನಡೆಸಿದ ಸಮೀಕ್ಷೆಯಿಂದ ಗೊತ್ತಾಯಿತು.
ಅತ್ತ ಅಭಿವೃದ್ಧಿ ಮಂತ್ರದಿಂದಲೂ ಮತ ಲಾಭ ದಕ್ಕುವುದಿಲ್ಲ. ಅಧಿಕಾರ ಉಳಿಸಿಕೊಳ್ಳಲು ರಾಮನಕೃಪೆಯಿಂದಲೂ ಸಾಧ್ಯವಾಗುವುದಿಲ್ಲ ಎಂಬ ಅಸಹಾಯಕ ಸ್ಥಿತಿಯಲ್ಲಿದ್ದ ನರೇಂದ್ರಮೋದಿ ಸರ್ಕಾರಕ್ಕೆ ಪುಲ್ವಾಮ ದಾಳಿಯು ಚುನಾವಣಾ ರಣಕಣಕ್ಕೊಂದು ದಾಳವಾಗಿ ಬಿಟ್ಟಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ಮುಂದಾಗಿದೆ. ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪರೋಕ್ಷ ಯುದ್ಧ ಸಾರಿದೆ. ನಂತರದ ಬೆಳವಣಿಗೆಯಲ್ಲಿ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದರು. ಈ ಹಂತದಲ್ಲಿ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಯುದ್ಧದ ಮಾತುಗಳನ್ನಾಡಿದರೂ ಪಾಕಿಸ್ತಾನ ಶಾಂತಿಯತ್ತ ವಾಲಿತು. ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಒಪ್ಪಿತು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ, ಸಂಸತ್ತಿನಲ್ಲಿ ಚರ್ಚಿಸಿ ನಿರ್ಧಾರಕೈಗೊಂಡರು. ವಿಂಗ್ ಕಮಾಂಡರ್ ಅಭಿನಂದನ್ ಶತ್ರು ರಾಷ್ಟ್ರದ ಸೈನಿಕರ ಸೆರೆಗೆ ಸಿಕ್ಕ ಹೊತ್ತಿನಲ್ಲಿ ಇಡೀ ದೇಶವೇ ಅವರ ಬಿಡುಗಡೆಗಾಗಿ ಹಪಹಪಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಂಡರು. ಅಲ್ಲಿ ಯುದ್ದೋನ್ಮಾದದಿಂದ ಹೂಂಕರಿಸಿದರು.
ಅದು ಕ್ರಿಕೆಟ್ ಆಗಲೀ, ಯುದ್ಧವೇ ಆಗಲೀ ಪಾಕಿಸ್ತಾನದ ವಿರುದ್ಧದ ಗೆಲುವಿನಲ್ಲೇ ಭಾವಪ್ರಾಪ್ತಿ ಕಾಣುವ ಭಾವನೆಯನ್ನು ನಾಡಿನ ಜನತೆಯ ಮನದಲ್ಲಿ ಬಿತ್ತಿ ಬೆಳೆಯಲಾಗಿದೆ. ಅದರ ಫಲವನ್ನು ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಪಡೆಯುತ್ತಿವೆ. ಅಭಿವೃದ್ಧಿ ಮೂಲಕ ಗೆಲ್ಲಲಾಗದ್ದನ್ನು ಜನರ ಭಾವನೆಗಳನ್ನು ಕೆರಳಿಸಿ ಗೆಲುವು ಸಾಧಿಸುವ ಹತಾಶ ಪ್ರಯತ್ನ ಮಾಡಲಾಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಮುಂದಾಗಿರುವ ಮೋದಿ ಅವರೂ ಈಗ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಅಭಿವೃದ್ಧಿಯನ್ನು ಬದಿಗೆ ಸರಿಸಿ ಯುದ್ಧೋನ್ಮಾದವನ್ನು ಕೆರಳಿಸುತ್ತಿದ್ದಾರೆ. ಅದು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಹತಾಶೆಯೋ ಅಥವಾ ಚುನಾವಣೆ ಗೆಲ್ಲುವ ರಣತಂತ್ರವೋ?
2014ರಲ್ಲಿ ಅಭಿವೃದ್ಧಿ ಮಂತ್ರದಿಂದಲೇ ಅಧಿಕಾರಕ್ಕೇರಿದ್ದ ನರೇಂದ್ರ ಮೋದಿ ಈಗ ಏಕೆ ಅಭಿವೃದ್ಧಿಯನ್ನು ಬದಿಗೆ ಸರಿಸಿ ಯುದ್ದೋನ್ಮಾದವನ್ನು ಜನರ ಮನಸ್ಸಲ್ಲಿ ಬಿತ್ತುತ್ತಿದ್ದಾರೆ? ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ. ಅದು ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ದೃಢಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಅಪನಗದೀಕರಣ ಯೋಜನೆಯಿಂದ ಸಂಕಷ್ಟಕ್ಕೀಡಾದ ಅಸಂಘಟಿತ ವರ್ಗ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವರ್ಗ ಚೇತರಿಸಿಕೊಳ್ಳಲು ಇನ್ನು ಎರಡು ಮೂರು ವರ್ಷಗಳೇ ಬೇಕಾಗಬಹುದು. ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಇನ್ನೂ ಸ್ಥಿರಗೊಂಡಿಲ್ಲ. ಬಹುಹಂತದ ತೆರಿಗೆ ರೂಪಿಸಿ ಸಾಕಷ್ಟು ಗೊಂದಗಲಿಗೆ ಕಾರಣವಾಗಿದೆ. ತೆರಿಗೆದಾರರ ಪಾಲಿಗೆ ದುಸ್ವಪ್ನವಾಗಿದೆ ನೂತನ ವ್ಯವಸ್ಥೆ.
2016 ನವೆಂಬರ್ 8 ರಂದು ಜಾರಿಗೆ ತಂದ ಅಪನಗದೀಕರಣ ಯೋಜನೆ ಸಂಕಷ್ಟಗಳು 50 ದಿನಗಳಲ್ಲಿ ಮುಗಿಯುತ್ತವೆಂದು ಪ್ರಧಾನಿ ಮೋದಿ ನೀಡಿದ್ದ ಭರವಸೆ ಹುಸಿಯಾಗಿದೆ. ಆರ್ಥಿಕ ತುರ್ತು ಪರಿಸ್ಥಿತಿಯ ಆ ದಿನಗಳ ಕರಾಳ ಛಾಯೆ ಇನ್ನು ದಟ್ಟವಾಗಿ ಉಳಿದುಕೊಂಡಿದೆ. ನಗದು ಕೊರತೆ ದೇಶವ್ಯಾಪಿ ಇದೆ. ಎಟಿಎಂಗಳಲ್ಲಿ ಸಹ ನಗದು ಸಿಗದು. ನಿಮ್ಮದೇ ಹಣ ನೀವು ಪಡೆಯಲಾಗದ ಅಸಹಾಯಕ ಸ್ಥಿತಿಯನ್ನು ಪ್ರಧಾನಿ ಮೋದಿ ಸರ್ಕಾರ ಸೃಷ್ಟಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ, ಆಸ್ಪತ್ರೆ, ಶಾಲೆ ಕಟ್ಟಿಸುವ ಬದಲು ಗ್ರಾಮೀಣ ಜನರಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಕೊಟ್ಟು ಡಿಜಿಟಲ್ ಸಮಾಜ ಸೃಷ್ಟಿಸುವ ಲೆಕ್ಕಾಚಾರ ತಲೆಕೆಳಗಾಗಿದೆ.
ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರ ಆರ್ಥಿಕ ಯೋಜನೆಗಳಿಂದ ನಿರುದ್ಯೋಗ ಸಮಸ್ಯೆ ಭುಗಿಲೆದ್ದಿದೆ. ಅಂಕಿ ಅಂಶಗಳನ್ನು ತಿದ್ದುವ ಮೂಲಕ ಉದ್ಯೋಗ ಸೃಷ್ಟಿಸುವ ಹತಾಶ ಪ್ರಯತ್ನ ನಡೆದಿದೆ. 2018ರಲ್ಲಿ ದೇಶದ ನಿರುದ್ಯೋಗ ಅತಿ ಗರಿಷ್ಠಮಟ್ಟ ಮುಟ್ಟಿತ್ತು. ಹಿಂದಿನ 45 ವರ್ಷಗಳಲ್ಲೇ ಅತಿ ಹೆಚ್ಚು ಜನರು ಉದ್ಯೋಗವಿಲ್ಲದೇ ಕಂಗಾಲಾಗಿದ್ದರೆಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ. ಸ್ಕಿಲ್ ಇಂಡಿಯಾ ಸೇರಿದಂತೆ ಮೋದಿ ಸರ್ಕಾರ ಘೋಷಿಸಿದ ಬಹುತೇಕ ಯೋಜನೆಗಳು ಫಲ ನೀಡಿಲ್ಲ. ಆದರೆ, ಆ ಯೋಜನೆಗಳಿಂದ ಮೋದಿ ಸರ್ಕಾರ ಪಡೆದ ಪ್ರಚಾರ ಬಹುದೊಡ್ಡದು. ಈಗಲೂ ವಿಫಲಗೊಂಡ ಯೋಜನೆಗಳೆಲ್ಲವನ್ನೂ ಯಶಸ್ವಿಯೋಜನೆಗಳೆಂದು ಬಿಂಬಿಸುತ್ತಿರುವ ಮೋದಿ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಮುಳುವಾದ ಇಂಡಿಯಾ ಶೈನಿಂಗ್ ಪ್ರಚಾರಾಂದೋಲ ನೆನಪಾಗುತ್ತಿಲ್ಲ.
ಪ್ರಧಾನಿ ಮೋದಿ ಚುನಾವಣಾ ಹೊಸ್ತಿಲಲ್ಲಿ ಕುಳಿತು ಸೈನಿಕರ ಗುಣಗಾನ ಮಾಡುತ್ತಿದ್ದಾರೆ. ಯುದ್ದೋನ್ಮಾದವನ್ನು ಉದ್ದೀಪಿಸುತ್ತಿದ್ದಾರೆ.