ನಾಯಕನಿಗಾಗಿ ಕಾಯುವ ನಾಡಿಗೆ ದುರಂತ ಖಾತ್ರಿ ಎಂದಿದ್ದ ಬ್ರೆಕ್ಟ್. ಮೊದಲ ಸಾರಿ ತುಂಬ ಹಿಂದೆ ಓದಿದಾಗ ಆ ಮಾತಿನ ಮಾರ್ಮಿಕ ಸತ್ಯ ಸಂಪೂರ್ಣ ಹೊಳೆದಿರಲಿಲ್ಲ. ನಿಧಾನಕ್ಕೆ ಅನಂತರ ತಿಳಿಯುತ್ತ ಬಂತು. ಆ ಮಾತು ಬಂದದ್ದು ಜರ್ಮನಿಯಿಂದ. ನಾಯಕನಿಗಾಗಿ ಕಾದು, ಹಂಬಲಿಸಿ ಕಡೆಗೆ ಹಿಟ್ಲರನಂಥ ಪಿಶಾಚಿಯನ್ನು ಆ ನಾಡು ಪಡೆಯಿತು. ಸಮಾಜದ ಉಳಿದೆಲ್ಲ ಅಂಗಗಳಿಗೂ ಲಕ್ವ ಹೊಡೆದ ಸ್ಥಿತಿಯಲ್ಲಿ ಮಾತ್ರ ನಾಯಕನೊಬ್ಬ ಹುಟ್ಟುತ್ತಾನೆ ಎಂಬ ಮಾತನ್ನು ಜರ್ಮನಿ ಸಾಬೀತುಗೊಳಿಸಿತು. ಸಮಕಾಲೀನ ಭಾರತೀಯ ಬದುಕನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಮತ್ತೆ ನಾವು ಕೂಡ ನಾಯಕನ ಬರವಿಗಾಗಿ ಕಾಯುತ್ತಿದ್ದೇವೆಯೋ ಎಂದು ಭಯ ಪ್ರಾರಂಭವಾಗುತ್ತದೆ.
ನಾಯಕನ ಬರವಿಗಾಗಿ ಕಾಯುವ ಮನಃಸ್ಥಿತಿ ಎಲ್ಲಿಂದ ಪ್ರಾರಂಭವಾಗುತ್ತದೆ? ನಾಡಿನ ಜನ ತಮ್ಮ ತತ್ಕ್ಷಣದ ಬದುಕಿಗೆ ಮೀರಿದ ಪ್ರಶ್ನೆಗಳು ತಮಗೆ ಸಂಬಂಧಿಸಿದ್ದಲ್ಲ ಎಂದು ಭಾವಿಸಿದಾಗ, ಆ ನಾಡು ಕೊಳೆಯಲು ಪ್ರಾರಂಭವಾಗುತ್ತದೆ. ನಿಮ್ಮ ನೆರೆಮನೆಯ ನರೇಂದ್ರ ಕುಮಾರರನ್ನು ನಾಡಿನ ಸ್ಥಿತಿಯ ಬಗ್ಗೆ ಆಳವಾದ ಚರ್ಚೆಗಳೆಯಲು ಪ್ರಯತ್ನಿಸಿ. ಚರ್ಚೆ, ‘ಡರ್ಟಿ ಪಾಲಿಟಿಕ್ಸ್ ಯಾಕೆ ಬಿಡಿ’ ಎಂಬ ಮಾತಿ ನೊಂದಿಗೆ ಮುಕ್ತಾಯವಾಗುತ್ತದೆ. ಪಕ್ಕದ ಮನೆಯ ಪದ್ಮಾವತಿಯ ವಿದ್ಯಾವಂತ ಪ್ರತಿಕ್ರಿಯೆ ಕೂಡ ಹಾಗೆಯೇ. ನದಿಗಳು ಬತ್ತಿ ಹೋಗುತ್ತಿರುವ ಬಗ್ಗೆ ಮಾತನಾಡಲು ಪ್ರಯತ್ನಿಸಿ.
ತಮ್ಮ ನಲ್ಲಿಗಳಲ್ಲಿ ನೀರು ಬರುತ್ತಿರುವ ತನಕ ಈ ಮಂದಿಗೆ ಚಿಂತೆಯೇ ಇಲ್ಲ. ಕಾಡು ನಾಶವಾಗುತ್ತಿರುವ ಬಗ್ಗೆ ಮಾತನಾಡಿ. ತಮ್ಮ ತಕ್ಷಣದ ಸುಖದ ಆಚೆಗಿನ ಎಲ್ಲ ಸಂಗತಿಗಳೂ ಅಪ್ರಸ್ತುತ, ಈ ಜನಕ್ಕೆ.
ಈ ಕಾಲದ ಪ್ರಮುಖ ಧರ್ಮಜ್ಞರಲ್ಲೊಬ್ಬನಾದ ಪಾಲ್ ಟಿಲ್ಯಿಚ್ ಈ ಬಗೆಗೆ ಮಾರ್ಮಿವಾದ ಮಾತೊಂದನ್ನು ಹೇಳಿದ – “ಜನ ತಮ್ಮ ತತ್ ಕ್ಷಣದ ಬದುಕಿಗೆ ಮೀರಿದ ಪ್ರಶ್ನೆಗಳು ತಮಗೆ ಸಂಬಂಧಿಸಿದ್ದಲ್ಲ ಅಂದುಕೊಂಡರೆ, ಆ ನಾಡು ಧರ್ಮ ಉದಯಕ್ಕೆ ಸೂಕ್ತ ನೆಲ. ಆದರೆ, ಜೀವಂತ ಜನತಂತ್ರ ಅಲ್ಲಿ ಉಳಿಯುವುದಿಲ್ಲ.” ಒಂದು ನಿರ್ದಿಷ್ಟ ಬಗೆಯ ಧರ್ಮಕ್ಕೆ ಸೂಕ್ತ ನೆಲ ಎಂದು ಮೇಲಿನ ಮಾತಿಗೆ ನನ್ನ ತಿದ್ದುಪಡಿ ಇದೆ. ಎಂಥಾ ಧರ್ಮ ಗೊತ್ತೆ? ಮಾನವ ವ್ಯಕ್ತಿತ್ವದ ವಿವೇಚನೆ, ವಿಶ್ಲೇಷಣೆ, ಸಂಕಲ್ಪ ಕ್ರಿಯಾಶೀಲತೆ ಎಲ್ಲವೂ ಕೊಚ್ಚಿ ಹೋಗಿ ಗಾಢಕೊರತೆಯೊಂದು ಮಾತ್ರ ಅಲ್ಲಿ ಉಳಿದಿರುತ್ತದೆ. ಆ ಶೂನ್ಯದಲ್ಲಿ ಹುಟ್ಟುವ ಧರ್ಮವೇ ಸರ್ವಾಧಿಕಾರಿ. ಆಧುನಿಕ ರಾಜಕೀಯ ಜಗತ್ತಿನಲ್ಲಿ ಹುಟ್ಟುವ ಧರ್ಮ ಎಂದರೆ ನಾಯಕನ ಬರವಿಗಾಗಿ ಕಾಯುವ ಧರ್ಮ.
ನೆರೆಯ ರಾಜ್ಯಗಳಲ್ಲಿ ನೋಡಿ, ಈ ನಾಯಕತ್ವದ ಅನಾಹುತವನ್ನು. ತಮಿಳುನಾಡು, ಆಂದ್ರಗಳ ರಾಜಕೀಯ ಬದುಕು ಆ ಸಮಾಜಗಳ ಅನಾರೋಗ್ಯಕ್ಕೆ ಹಿಡಿದ ಕನ್ನಡಿ. ಅದಕ್ಕೇ ಎಂ.ಜಿ.ಆರ್. ಸತ್ತಾಗ ಪ್ರದರ್ಶಿತವಾದ ಸಾರ್ವಜನಿಕ ಶೋಕ ದಿಗ್ರಮೆ ಹುಟ್ಟಿಸುವಂಥದು. ನಾಯಕರ ಸಾವಿನ ಸನ್ನಿವೇಶದಲ್ಲಿ ಆತ್ಮಬಲಿ ತಮಿಳುನಾಡಿನಲ್ಲಿ ಸಾಮಾನ್ಯ ಸಂಗತಿ. ಆದರೆ, ಈ ರೀತಿಯ ಸಾವುಗಳು ಜೀವಂತ ಜನತಂತ್ರಕ್ಕೆ ಸರಿಯಲ್ಲ. ಭಯಾನಕವಾದ ಮಧ್ಯಯುಗೀನ ಪದ್ಧತಿ ಅದು. ಈ ರೀತಿಯ ‘ಗರುಡ’ರು ಆಧುನಿಕ ಜನತಂತ್ರದ ಕಟ್ಟಾಳುಗಳಲ್ಲ. ಅವರು ಫ್ಯಾಸಿಸ್ಟ್ ಸರ್ವಾಧಿಕಾರದ ಗರಡಿಯಾಳುಗಳು. ಅದಕ್ಕೇ ಇಂಥ ಕಡೆಗಳಲ್ಲಿ ತತ್ವ ಕಾರ್ಯಕ್ರಮ, ಸಾರ್ವಜನಿಕ ಚರ್ಚೆ ಯಾವುದೂ ಮುಖ್ಯವಲ್ಲ. ನಾಯಕನ ಪೂಜೆಯೇ ಏಕಮಾತ್ರ ಸತ್ಯ. ಜನತಂತ್ರದ ಮುಕ್ತತೆಯ ಬದಲಿಗೆ ನಾಯಕನ ನಿಗೂಢೀಕರಣ ಮುಖ್ಯ.
ಕರ್ನಾಟಕದಲ್ಲಿ ನಿಧಾನವಾಗಿ ಈ ಮಂಪರು ಹೇಗೆ ಕವಿಯುತ್ತ ಬರುತ್ತಿದೆ. ಗಮನಿಸಿ: ಸರ್ಕಸ್ ದುರಂತ, ಕಳ್ಳಭಟ್ಟಿ ದುರಂತ, ಗಂಗಾರಾಂ ಕಟ್ಟಡದ ದುರಂತಗಳಲ್ಲಿ ಹತರಾದ ಅಮಾಯಕರನ್ನು ನಾವು ಮರೆತೇ ಬಿಟ್ಟಿದ್ದೇವೆ. ಜನತಂತ್ರದ ಮುಖ್ಯ ಪ್ರಾಣವೆಂದರೆ, ಇಂಥ ಅನಾಹುತಗಳ ಕೊಲೆಗಡುಕರಿಗೆ ಶಿಕ್ಷೆ ಆಗುವುದು ಮತ್ತು ಇದರ ಪುನರಾವರ್ತನೆಯಾಗದಂಥ ಸ್ಥಿತಿಯ ನಿರ್ಮಾಣ, ಇಂಥವು ನೆನಪಿನಲ್ಲಿ ಎದ್ದು ತೇಲುವ ದುರಂತಗಳು. ಆದರೆ, ಈಗಲೂ ದಿನನಿತ್ಯದ ಬದುಕಿನಲ್ಲಿ ಇಂಥ ನೂರು ನಿಧಾನ ದುರಂತಗಳು ನಡೆಯುತ್ತಲೇ ಇವೆ. ನಮ್ಮ ಶಾಲೆಗಳಲ್ಲಿಯ ನರಕ, ಸಾಯುತ್ತಿರುವ ನದಿಗಳು, ನಾಶವಾಗುತ್ತಿರುವ ಕಾಡುಗಳು, ಔಷಧದ ಹೆಸರಿನಲ್ಲಿ ವಿಷ ಸೇವನೆ-ಹೀಗೆ ಹತ್ತು ದುರಂತಗಳ ಬಗ್ಗೆ ನಿರ್ಲಕ್ಷ್ಯ.
ಎಲ್ಲಕ್ಕಿಂತ ಹೆಚ್ಚಾಗಿ ನಿಧಾನಕ್ಕೆ ಏರುತ್ತಿರುವ ನಾಯಕನ ಗುಣಗಳ ಪ್ರಸ್ತಾಪ. ‘ಚರಿಷ್ಮ್ಯಾಟಿಕ್’ ಲೀಡರ್ ಎಂದು ಒಂದು ಕಡೆ ಚರ್ಚೆ. ನಮ್ಮ ನಾಯಕರು ‘ಚರಿಸ್ಮಾ’ ಬೆಳೆಸಿಕೊಳ್ಳಬೇಕು ಎಂಬ ಚರ್ಚೆ ಇನ್ನೊಂದು ಕಡೆ. ಮತ್ತೆ ಮೂರನೇ ಶಕ್ತಿ ಬಗ್ಗೆ ಪ್ರಸ್ತಾಪವಾದಾಗಲೂ ಇದೇ ಮಾತು. ಅಲ್ಲಿ ನಾಯಕರು ಯಾರಿದ್ದಾರೆ? ಕರ್ನಾಟಕ ಕೂಡ ನಿಧಾನವಾಗಿ ನಾಯಕನ ಬರವಿಗಾಗಿ ಕಾಯುತ್ತಿರುವ ಸ್ಥಿಗೆ ಬರುವ ಹಾಗೆ ಜನತಂತ್ರದ ಸಮಾಧಿ ಖಾತ್ರಿ. ರಾಜಕಾರಣ, ವರ್ಚಸ್ಸಿನ ಪ್ರಶ್ನೆಯಾಗಿ ಮಾತ್ರ ಉಳಿದರೆ, ಅಲ್ಲಿಯ ಬಡವರ ಬದುಕು ನರಕ, ಬಡವರ ಬದುಕಿನ ಸಮಸ್ಯೆಗಳು ಪರಿಹಾರವಾಗುವುದು ದೀರ್ಘ ಸಂಘಟನೆಗಳಿಂದ, ಹೋರಾಟಗಳಿಂದ. ಹೀರೋಗಳಿಗಾಗಿ ರಾಜಕೀಯ ಕಾದರೆ, ಅದು ಮೂರನೇ ದರ್ಜೆ ಸಿನಿಮಾ ಆಗಿಬಿಡುತ್ತದೆ. ಅದಕ್ಕೇ ನನಗೆ ಚರಿಸ್ಮಾಟಿಕ್ ನಾಯಕರಿಗಿಂತ ಹೋರಾಟದ ಕುಲುಮೆಯಲ್ಲಿ ಬೆಂದ ಮಾಸಲು ಬಣ್ಣದ ಮಂದಿಯೇ ಇಷ್ಟ ಮತ್ತು ಮುಖ್ಯ ಕೂಡ.
ಇಂಥ ಸಮಾಜಗಳಲ್ಲಿ ಬಡತನ ತೀವ್ರವಾಗಿ ಬೆಳೆಯುತ್ತ ಹೋಗುತ್ತದೆ. ನಿರುದ್ಯೋಗ ಹಬ್ಬುತ್ತಾ ಹೋಗುತ್ತದೆ. ನಾಡಿನ ಗರ್ಭದಲ್ಲಿ ಹತಾಶ ಹೆಪ್ಪುಗಟ್ಟುತ್ತದೆ. ಆಗ ಹುಟ್ಟುವ ದೈತ್ಯ ನಾಯಕನೆ ಹಿಟ್ಟರ್ ರೂಪಿ. ಫ್ಯಾಸಿಸಂಗೊಂದು ಸಿದ್ದಾಂತವಿಲ್ಲ, ಇರುವುದು ಮನೋವಿಶ್ಲೇಷಣೆ ಮಾತ್ರ ಎನ್ನುವುದು ನಿಜವಾಗುವುದು ಇಲ್ಲಿಯೇ. ಹಿಟ್ಲರ್ ಯುಗದ ಜರ್ಮನಿ ಬಗೆಗೆ ವ್ಯಾಪಕವಾಗಿ ಬರೆದ ವಿಲಿಯಂ ಶೆರಿರ್, ಮೊದಲ ಬಾರಿಗೆ ತಾನು ಹಿಟ್ಲರ್ನನ್ನು ಕಂಡ ದೃಶ್ಯದ ಬಗೆಗೆ ಬರೆಯುವಾಗ ಸೂಚಿತವಾಗುವುದು ಈ ಅನುಭವವೆ. ಗಂಡು ಹೆಣ್ಣುಗಳು ಹಿಟ್ಲರನ ದರ್ಶನದಿಂದಲೇ ರೋಮಾಂಚಿತರಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರಂತೆ! ಅದನ್ನು ಕಂಡ ಶೆರಿರ್ ಬೆದರಿದ. ಆ ರೋಮಾಂಚನದಲ್ಲಿಯೇ ಪೈಶಾಚಿಕ ಕ್ರೌರ್ಯದ ಉಗಮವನ್ನು ಬ್ರೆಕ್ಟ್ ಕಂಡ. ನಾಯಕರನ್ನು ಕಂಡು ರೋಮಾಂಚನಕ್ಕೆ ಒಳಗಾಗುವ ಜನ ಆ ಮೂಲಕ ಜನತಂತ್ರದ ಸಾವಿಗೆ ಅಣಿಮಾಡುತ್ತಾರೆ.

ರಾಜೀವರಲ್ಲೂ ಈ ನಾಡು ನಾಯಕನೊಬ್ಬನನ್ನು ಕಾಣಬಯಸಿತು. ಅವತಾರಗಳಲ್ಲಿ ನಂಬಿಕೆ ಇಟ್ಟಿರುವ ಈ ನಾಡಿನಲ್ಲಿ ಜನತಂತ್ರ ಯಾವತ್ತೂ ಅಭದ್ರವೇ. ನಿರೀಕ್ಷಿಸಿದ ಪವಾಡಗಳನ್ನು ರಾಜೀವರು ನಡೆಸದಿದ್ದಾಗ ಜನ ಕೊಂಚ ವಿಚಲಿತರಾಗಿದ್ದಾರೆ. ಆದರೆ, ಅದು ಇನ್ನಷ್ಟು ಸಂಕಲ್ಪ ಶೀಲ ‘ಪವಾಡಪುರುಷ’ನೊಬ್ಬನ ಅವತಾರಕ್ಕೆ ಆಹ್ವಾನವಾಗಬಾರದಷ್ಟೇ. ಹೆಗಡೆಯವರನ್ನು ‘ಆಧುನಿಕ ಬಸವಣ್ಣ’ ಎನ್ನುವಾಗಲೂ ಇದೇ ಮನಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ಬ್ರೆಕ್ಟ್ ಹಿಟ್ಲರನನ್ನು ಸುಣ್ಣ ಬಣ್ಣದವನು ಎಂದು ಲೇವಡಿಮಾಡಿದ. ಆ ಮೂಲಕ ಎಲ್ಲ ‘ನಾಯಕರ’ ಸ್ವಭಾವದ ಬಗ್ಗೆ ಬೆಳಕು ಚೆಲ್ಲಿದ. ಈ ಸಣ್ಣ ಬಣ್ಣದವರು ಮೂಲತಃ ಮಹಾ ಪಟಿಂಗರು. ಕೊಳಕು ಅಸ್ಥಿರ ಕಟ್ಟಡಗಳಿಗೆ ಬಣ್ಣ ಬಳಿದ ಷೋ ಮಾಡುತ್ತಾರೆ. ಹೊಸಹೊಸ ಆಕರ್ಷಕ ಬಣ್ಣಗಳ ಘೋಷಣೆಗಳನ್ನು ಮಾಡುತ್ತಾರೆ. ಜನರ ಮನಸ್ಸಿನಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತಾರೆ. ಕಿಂದರಿ ಜೋಗಿಯನ್ನು ಬೆನ್ನು ಹತ್ತಿದ ಹಾಗೆ ಜನರು ಹೋಗಿಬಿಡುತ್ತಾರೆ.
ಜನತಂತ್ರ ಉಳಿಯಬೇಕಾದರೆ ಈ ನಾಯಕರುಗಳನ್ನು ನಿರಂತರವಾಗಿ ನಿರಾಕರಿಸುತ್ತಾ ಇರಬೇಕು. ಪಕ್ಷ, ಸಂಘಟನೆ, ತತ್ವಗಳೇ ಸಾರ್ವಕಾಲಿಕ ಮಾನದಂಡಗಳಾಗಿ ಬೆಳೆಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಜನರು ದೈನಂದಿನ ಸಮಸ್ಯೆಗಳಾಚೆಗೂ ಪ್ರತಿಸ್ಪಂದಿಸುವ ಹಾಗಾಗಬೇಕು. ಕ್ರಿಯಾಶೀಲತೆ ಹಬ್ಬಬೇಕು. ನಾಯಕರುಗಳನ್ನು ಲೇವಡಿ ಮಾಡಬೇಕು. ತಾವು ದೇವತೆಗಳು ಎಂದು ಬಂದಾಗ, ಅವರ ಪಾದ ನಿಜಕ್ಕೂ ತಿರುವುಮುರುವಾಗಿರುವುದನ್ನು ಹೇಳುವಾಗ ಮಾತ್ರ ಅ ಸಮಾಜಕ್ಕೆ ವಿವೇಕ ಇನ್ನು ಉಳಿದಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ನಾಯಕನಿಗಾಗಿ ಕಾಯುವ ನಾಡಿಗೆ ದುರಂತ ಖಾತ್ರಿ ಎನ್ನುವ ಸತ್ಯ, ಸಮಾಜದ ಎಲ್ಲ ಮೂಲೆಗಳಿಗೂ ತಿಳಿದ್ದಾಗ ಮಾತ್ರ ಜಾರುತ್ತಿರುವ ದಾರಿಯಲ್ಲಿರುವ ನಾವು ಬಚಾವಾಗುತ್ತೇವೆ.
– ಡಿ.ಆರ್ ನಾಗರಾಜ್
( 26- ಜೂನ್ 1988ರಲ್ಲಿ ‘ನಾವು–ನೀವು’ ವಾರಪತ್ರಿಕೆಗೆ ಬರೆದ ‘ಇಷ್ಟಾರ್ಥ’ ಅಂಕಣದ ಬರಹ. ಸಂಸ್ಕೃತಿ ಕಥನ ಕೃತಿಯಿಂದ– ಸಂ. ಅಗ್ರಹಾರ ಕೃಷ್ಣಮೂರ್ತಿ)
(ಗಮನಿಸಿ: ಡಿ.ಆರ್.ನಾಗರಾಜ್ ಅವರ ಈ ಬರೆಹವು ಕಾಪಿರೈಟ್ ಹೊಂದಿದ್ದು, ಟ್ರೂಥ್ ಇಂಡಿಯಾದಲ್ಲಿ ಪ್ರಕಟಿಸಲು ಅಗತ್ಯ ಪರವಾನಗಿ ಪಡೆಯಲಾಗಿದೆ)