‘ಮಾಲ್ಗುಡಿ ಡೇಸ್’ ಎಂಬ ಹೆಸರು ಕೇಳುತ್ತಲೇ ಕನ್ನಡಿಗರಿಗೆ ನೆನಪಾಗುವುದು ‘ಮಿಂಚಿನ ಓಟ’ದ ಪ್ರತಿಭೆಯ ನಟ ಮತ್ತು ನಿರ್ದೇಶಕ ಶಂಕರ್ ನಾಗ್ ಮತ್ತು ಮಳೆಯ ತವರು ಆಗುಂಬೆ. ಖ್ಯಾತ ಲೇಖಕ ಆರ್ ಕೆ ನಾರಾಯಣ್ ಅವರ ಜನಪ್ರಿಯ ಕಥಾಸಂಕಲನ ‘ಮಾಲ್ಗುಡಿ ಡೇಸ್’ನ್ನು ಅದೇ ಹೆಸರಿನಲ್ಲಿ ಧಾರಾವಾಹಿಯಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕಿರುತೆರೆಗೆ ಅಳವಡಿಸಿದ ಶಂಕರ್ ನಾಗ್ ಮತ್ತು ಅವರ ಮಾಲ್ಗುಡಿ ಎಂಬ ಕಲ್ಪನಾಲೋಕಕ್ಕೆ ವಾಸ್ತವದ ನೆಲೆಯಾದ ಆಗುಂಬೆ ಇಂದಿಗೂ ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ.
ಮಾಲ್ಗುಡಿ, ಶಂಕರ್ ನಾಗ್, ಆಗುಂಬೆ, ಎಂಬ ಈ ಮರೆಯದ ನಂಟಿನ ಸರಣಿಗೆ ಮತ್ತೊಂದು ಹೊಸ ಸೇರ್ಪಡೆಯಾಗಲು ಈಗ ಮಲೆನಾಡಿನ ಮತ್ತೊಂದು ಪುಟ್ಟ ಊರು ಸಜ್ಜಾಗಿದೆ. ಅದು ಅರಸಾಳು. ಹೌದು, 1980ರ ದಶಕದ ಕೊನೆಯ ಹೊತ್ತಿಗೆ, ಶಂಕರ್ ನಾಗ್ ಮಾಲ್ಗುಡಿ ಡೇಸ್ ಧಾರಾವಾಹಿ ಶೂಟಿಂಗ್ ಆರಂಭಿಸಿದಾಗ, ಅವರಿಗೆ ಕಥೆಯಲ್ಲಿನ ಮಾಲ್ಗುಡಿ ಎಂಬ ಕಾಲ್ಪನಿಕ ಊರಾಗಿ ಆಗುಂಬೆ ಕಾಣಿಸಿದರೆ, ಅದರ ರೈಲು ನಿಲ್ದಾಣವಾಗಿ ಕಂಡಿದ್ದು ಇದೇ ಅರಸಾಳು ರೈಲು ನಿಲ್ದಾಣ. ಹಾಗಾಗಿ, ಅವರು ಧಾರಾವಾಹಿಯ ಉದ್ದಕ್ಕೂ ಬರುವ ಮಾಲ್ಗುಡಿ ರೈಲು ನಿಲ್ದಾಣದ ಚಿತ್ರೀಕರಣವನ್ನು ಮಾಡಿದ್ದು ಶಿವಮೊಗ್ಗ ತಾಳಗುಪ್ಪಾ ರೈಲು ಮಾರ್ಗದಲ್ಲಿ ಬರುವ, ಹೊಸನಗರ ತಾಲೂಕು ವ್ಯಾಪ್ತಿಯ ಈ ಅರಸಾಳು ರೈಲು ನಿಲ್ದಾಣದಲ್ಲಿಯೇ.
ಆ ಐತಿಹಾಸಿಕ ನೆನಪಿಗಾಗಿ ಇದೀಗ, ಭಾರತೀಯ ರೈಲ್ವೆ ಅರಸಾಳು ರೈಲು ನಿಲ್ದಾಣಕ್ಕೆ ‘ಮಾಲ್ಗುಡಿ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದೆ. ಈಗಾಗಲೇ ಈ ಕುರಿತು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರೂ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ದಿನಗಳಲ್ಲಿ ಅರಸಾಳು ನಿಲ್ದಾಣ ಮಾಲ್ಗುಡಿ ನಿಲ್ದಾಣವಾಗಲಿದ್ದು, ನೀವು ಇನ್ನು ‘ಮಾಲ್ಗುಡಿ’ ನಿಲ್ದಾಣದಲ್ಲಿ ಅಕ್ಷರಶಃ ನಡೆದಾಡಬಹುದು, ರೈಲು ಹತ್ತಿಳಿಯಬಹುದು!
ಶಿವಮೊಗ್ಗ ಸಂಸದರು ಈಗಾಗಲೇ ಈ ವಿಷಯವನ್ನು ಖಚಿತಪಡಿಸಿದ್ದು, ರೈಲ್ವೆ ಇಲಾಖೆ ತಮ್ಮ ಪ್ರಸ್ತಾವನೆಗೆ ಪೂರಕವಾಗಿ ಸ್ಪಂದಿಸಿದೆ. ಕೆಲವೇ ದಿನಗಳಲ್ಲಿ ಹೆಸರು ಬದಲಾವಣೆಯ ಘೋಷಣೆಯಾಗಬಹುದು. ಜೊತೆಗೆ 1.3 ಕೋಟಿ ರೂ. ವೆಚ್ಚದಲ್ಲಿ ಈಗಿರುವ ಹಾಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜೊತೆಗೆ, ಮಾಲ್ಗುಡಿ ಡೇಸ್ ಚಿತ್ರೀಕರಣ ನಡೆದಿದ್ದ ಶಿಥಿಲ ನಿಲ್ದಾಣವನ್ನೂ ಅಭಿವೃದ್ಧಿಪಡಿಸಿ ಅದನ್ನು ಮ್ಯೂಸಿಯಂ ಆಗಿ ಮಾಡುವ ಯೋಜನೆ ಕೂಡ ರೈಲ್ವೆ ಇಲಾಖೆಗೆ ಇದೆ ಎಂದಿದ್ದಾರೆ. ಅದಕ್ಕೆ ಪೂರಕವಾಗಿ, ನೈರುತ್ಯ ರೈಲ್ವೆ ವಲಯದ ಡಿಜಿಎಂ ಇ ವಿಜಯ ಅವರು ಕೂಡ,” ಜನಪ್ರತಿನಿಧಿಗಳು ಮತ್ತು ಸ್ಥಳೀಯ ಜನರ ಬೇಡಿಕೆ ಬಂದಲ್ಲಿ, ನಿಯಮಾವಳಿ ಪ್ರಕಾರ ಯಾವುದೇ ನಿಲ್ದಾಣದ ಹೆಸರು ಬದಲಿಸಲು ಅವಕಾಶವಿದೆ. ಅಂತಹ ಬೇಡಿಕೆಯನ್ನು ರಾಜ್ಯ ಸರ್ಕಾರಕ್ಕೆ ಕಳಿಸಿ, ಅವರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳುತ್ತೇವೆ” ಎಂದಿರುವುದಾಗಿ ’ದಿ ನ್ಯೂಸ್ ಮಿನಿಟ್’ ವೆಬ್ ಮಾಧ್ಯಮ ವರದಿ ಮಾಡಿದೆ.
ತಮ್ಮೂರಿನ ರೈಲು ನಿಲ್ದಾಣಕ್ಕೆ ಮಾಲ್ಗುಡಿ ಹೆಸರಿಡುವ ಕುರಿತು ಅರಸಾಳು ಗ್ರಾಮಸ್ಥರನ್ನು ಮಾತನಾಡಿಸಿದಾಗ, ಬಹುತೇಕ ಎಲ್ಲರೂ ಆ ಬಗ್ಗೆ ಸಂತಸ ವ್ಯಕ್ತಪಡಿಸಿದರು ಮತ್ತು ಅದನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಹೇಳಿದರು. ಆದರೆ, ಅರಸಾಳು ಹೆಸರನ್ನು ಪೂರ್ಣ ಕೈಬಿಟ್ಟು ಮಾಲ್ಗುಡಿ ಎಂದಷ್ಟೇ ಹೆಸರಿಸುವ ಬಗ್ಗೆ ತಮ್ಮ ಆಕ್ಷೇಪವಿದೆ.
“ಶಂಕರ ನಾಗ್ ಅವರ ಬಗ್ಗೆ ನಮಗೆ ಅಪಾರ ಗೌರವಿದೆ, ಅಭಿಮಾನವಿದೆ. ಅವರಿಂದಾಗಿ ನಮ್ಮೂರಿನ ರೈಲು ನಿಲ್ದಾಣ ಮತ್ತು ಊರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವುದಾದರೆ ಅದು ಇನ್ನಷ್ಟು ಹೆಮ್ಮೆಯ ಸಂಗತಿಯೇ. ಆದರೆ, ತನ್ನದೇ ಆದ ಐತಿಹಾಸಿಕ ಹಿನ್ನೆಲೆಯ ಇರುವ ಅರಸಾಳು ಎಂಬ ಹೆಸರನ್ನು ಬಿಟ್ಟು ಮಾಲ್ಗುಡಿ ಎಂದಷ್ಟೇ ನಾಮಕರಣ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ” ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಅರಣ್.
ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತ ಎಸ್ ಜಿ ರಂಗನಾಥ್ ಅವರು, “ಶಂಕರ್ ನಾಗ್ ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕೆ ಬಂದಾಗ ಹಲವು ಹಳೆಯ ಕಾಲದ ಪರಿಕರಗಳನ್ನು ನಮ್ಮ ಮನೆಯಿಂದಲೇ ತೆಗೆದುಕೊಂಡು ಹೋಗಿದ್ದರು. ಅವರ ನೆನಪಿಗಾಗಿ ಈ ನಿಲ್ದಾಣಕ್ಕೆ ಮಾಲ್ಗುಡಿ ಹೆಸರಿಡುವುದು ನಮಗೆ ಸಂತೋಷದ ವಿಷಯವೇ. ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ, ಕೆಳದಿಯ ಶಿವಪ್ಪನಾಯಕನ ಕಾಲದಿಂದಲೂ ಐತಿಹಾಸಿಕ ಮಹತ್ವ ಹೊಂದಿರುವ ಅರಸಾಳು ಎಂಬ ಹೆಸರನ್ನೂ ಉಳಿಸಿಕೊಂಡು ಮಾಲ್ಗುಡಿ ಹೆಸರಿಡಲಿ. ಊರಿನ ಹೆಸರನ್ನು ಕೈಬಿಟ್ಟು ಮಾಲ್ಗುಡಿ ಎಂದಷ್ಟೇ ಇಡುವುದು ಸರಿಯಲ್ಲ” ಎನ್ನುತ್ತಾರೆ.
“ಇಲ್ಲಿನ ಹಳೆಯ ನಿಲ್ದಾಣವನ್ನು ನವೀಕರಿಸಿ, ಮಾಲ್ಗುಡಿ ಹೆಸರಲ್ಲಿ ಮ್ಯೂಸಿಯಂ ಮಾಡಬೇಕು ಮತ್ತು ಹಾಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂದು ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳ ಗಮನ ಸೆಳೆದದ್ದೇ ನಾನು. ಆ ದೃಷ್ಟಿಯಲ್ಲಿ ನಮ್ಮ ಬೇಡಿಕೆಯನ್ನು ಮಾನ್ಯ ಮಾಡಿದ ರೈಲ್ವೆ ಇಲಾಖೆ ಮತ್ತು ಸಂಸದರಿಗೆ ಧನ್ಯವಾದ ಹೇಳುತ್ತೇವೆ. ಆದರೆ, ಊರಿನ ಹೆಸರನ್ನು ಉಳಿಸಿಕೊಂಡು ಜನರ ಭಾವನೆಗೆ ಧಕ್ಕೆಯಾಗದಂತೆ ‘ಮಾಲ್ಗುಡಿ’ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು” ಎಂಬುದು 87 ವರ್ಷ ವಯಸ್ಸಿನ ಹಿರಿಯ ಪತ್ರಕರ್ತರ ಆಗ್ರಹ.
ಆಗುಂಬೆಯನ್ನು ಮಾಲ್ಗುಡಿ ಪಟ್ಟಣವನ್ನಾಗಿಸಿ ಧಾರಾವಾಹಿಯ ಬಹುಪಾಲನ್ನು ಅಲ್ಲಿಯೇ ಚಿತ್ರೀಕರಿಸಿದ್ದ ಶಂಕರ್ ನಾಗ್, ರೈಲ್ವೆ ನಿಲ್ದಾಣದ ದೃಶ್ಯಗಳನ್ನು ಅರಸಾಳು ನಿಲ್ದಾಣದಲ್ಲಿ ಚಿತ್ರೀಕರಿಸಿದ್ದರು. ಆ ಸಂದರ್ಭದಲ್ಲಿ ಕೇವಲ ಒಂದೇ ರೈಲು ಈ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಹಾಗಾಗಿ ರೈಲು ಬರುವಾಗ ಮತ್ತು ತಾಳಗುಪ್ಪಾ ತಲುಪು ವಾಪಸು ಹೋಗುವಾಗ ಇಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಸುಮಾರು ಒಂದು ತಿಂಗಳ ಕಾಲ ನಿಲ್ದಾಣದಲ್ಲಿ ಚಿತ್ರೀಕರಣವಾಗಿತ್ತು ಮತ್ತು ಆ ಸಂದರ್ಭದಲ್ಲಿ ಶಂಕರ್ ನಾಗ್ ಅವರು ಸಮೀಪದ ರಿಪ್ಪನ್ ಪೇಟೆಯಲ್ಲಿಯೇ ಉಳಿದುಕೊಂಡಿದ್ದರು ಎಂದು ಹಳೆಯ ನೆನಪುಗಳನ್ನು ರಂಗನಾಥ್ ಅವರು ಮೆಲುಕು ಹಾಕಿದರು.
ಶಿವಮೊಗ್ಗ ನಗರದಿಂದ 34 ಕಿ.ಮೀ ದೂರದಲ್ಲಿ ಸಹ್ಯಾದ್ರಿಯ ಹಚ್ಚಹಸಿರು ಹೊದಿಕೆಯ ನಡುವೆ ಈಗಲೂ ಮಲೆನಾಡಿನ ಸೊಗಸಿನ ಊರಾಗಿರುವ ಅರಸಾಳು ರೈಲು ನಿಲ್ದಾಣದ ಮೂಲಕ ಸದ್ಯ ನಿತ್ಯ ಐದು ರೈಲುಗಳು ಹಾದುಹೋಗುತ್ತಿದ್ದು, ಆ ಪೈಕಿ ಒಂದು ರೈಲು ಮಾತ್ರ ನಿಲುಗಡೆಯಾಗುತ್ತಿದೆ. ಎಲ್ಲಾ ರೈಲುಗಳು ನಿಲುಗಡೆಯಾಗುವಂತೆ ಮಾಡಬೇಕು. ಆ ಮೂಲಕ ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲ ನೂರಾರು ಹಳ್ಳಿಗರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆಯೂ ಗ್ರಾಮಸ್ಥರದ್ದಾಗಿದೆ.