ರಾಜಸ್ತಾನದ ಜುನ್ಜುನು ಜಿಲ್ಲೆಯ ಧನೂರಿ ಎಂಬ ಹಳ್ಳಿ. ಇದರ ಇನ್ನೊಂದು ಹೆಸರೇ “ಯೋಧರ ಗ್ರಾಮ”. ಜಿಲ್ಲಾ ಕೇಂದ್ರದಿಂದ ಕೇವಲ 15 ಕಿಮೀ ದೂರದಲ್ಲಿರುವ ಧನೂರಿಯಲ್ಲಿ ಮನೆಮನೆಯದ್ದೂ ಒಂದೊಂದು ಕಥೆ. ಎದುರಾಳಿಯೊಡನೆ, ಉಗ್ರರ ವಿರುದ್ಧ ಸೆಣೆಸುವಾಗ, ದೇಶದ ಗಡಿ ಕಾಯುವಾಗ ಸೈನಿಕರು ಹುತಾತ್ಮರಾದ, ಗಾಯಗಳಾಗಿ ಹಿಂದಿರುಗಿದ, ಯುದ್ಧಖೈದಿಗಳಾಗಿ ಬಿಡುಗಡೆಯಾಗಿ ಬಂದಿರುವ, ಹೀಗೆ ಹತ್ತಾರು ಕಥನಗಳು ಸುರುಳಿಯಾಗಿ ಬಿಚ್ಚುತ್ತವೆ. ಇಲ್ಲಿನ ಬಹುಪಾಲು ಯುವಕರು ಸೇನೆಯಲ್ಲಿ ದುಡಿಯುತ್ತಿರುವರೇ, ದೇಶಕ್ಕಾಗಿ ಮಡಿದಿರುವವರೇ.
ಧನೂರಿಯ ಊರಿಗೆ ಊರೇ ಯೋಧರ ಕುಟುಂಬಗಳು! ಅಂದ ಹಾಗೆ ಇಲ್ಲಿರುವುದೆಲ್ಲವೂ ಮುಸ್ಲಿಂ ಕುಟುಂಬಗಳು! ಹೌದು ಧನೂರಿ ಸಂಪೂರ್ಣ ಮುಸ್ಲಿಮರೇ ವಾಸಿಸುವ ಹಳ್ಳಿ.
“ನನ್ನಜ್ಜ, ನನ್ನಪ್ಪ, ನಾನು, ಈಗ ನನ್ನ ಮಗ ನಾವೆಲ್ಲರೂ ಈ ಮಣ್ಣಿಗಾಗಿ ಶಸ್ತ್ರ ಹಿಡಿದವರೇ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಸ್ಲಿಂ ಕುಟುಂಬಗಳು ನಮಗಿಲ್ಲಿ ಸಾಲುಸಾಲಾಗಿ ಸಿಗುತ್ತವೆ. ದೇಶದ ಸೇವೆಯಲ್ಲಿದ್ದಾಗಲೇ ಹುತಾತ್ಮರಾದ ವೀರಯೋಧರ ಭಾವಚಿತ್ರಗಳೂ ಸಾಕಷ್ಟಿವೆ. ಧನೂರಿ ಗ್ರಾಮವು ಭಾರತೀಯ ಸ್ವಾತಂತ್ರ್ಯಸಂಗ್ರಾಮದ ರಕ್ತಸಿಕ್ತ ಚರಿತ್ರೆಯಲ್ಲಿ ಹಿಂದೂಮುಸ್ಲಿಮರೆನ್ನದೆ ದೇಶದ ಜನತೆ ಮಾಡಿದ ತ್ಯಾಗಬಲಿದಾನಗಳನ್ನು ಕಣ್ಮುಂದೆ ತರುತ್ತದೆ, ಭಾರತದ ಭವ್ಯ ಪರಂಪರೆಯನ್ನು ನೆನಪಿಸುತ್ತದೆ.
ಸ್ಥಳೀಯರ ಪ್ರಕಾರ ಈ ಪುಟ್ಟ ಗ್ರಾಮ ಸರಿಸುಮಾರು 600 ಮಂದಿ ಸೈನಿಕರನ್ನು ದೇಶಕ್ಕೆ ನೀಡಿದೆ. ಅಂದಾಜು 3500 ಜನಸಂಖ್ಯೆಯುಳ್ಳ ಈ ಹಳ್ಳಿಯಲ್ಲಿ 1000 ಕುಟುಂಬಗಳಷ್ಟು ವಾಸಿಸುತ್ತಿವೆ. ಇಲ್ಲಿ ನಾಲ್ಕು ತಲೆಮಾರುಗಳಿಂದಲೂ ಸೇನೆಯಲ್ಲಿ ಸೇವೆಸಲ್ಲಿಸಿರುವ ಕುಟುಂಬಗಳಿವೆ ಎಂದರೆ ಅಚ್ಚರಿಯಾಗುತ್ತದೆ. ಇವು ಸ್ವಾತಂತ್ರ್ಯಪೂರ್ವದ ಭಾರತೀಯ ಸೇನೆಯಲ್ಲಿಯೂ ದುಡಿದಿವೆ; ಇಂದಿನ ಭಾರತೀಯ ಸೇನಾಪಡೆಗಳಲ್ಲಿಯೂ ಬೆವರು-ರಕ್ತ ಹರಿಸುತ್ತಿವೆ. ಈ ನೆಲದ ಬರೋಬ್ಬರಿ 18 ಮಕ್ಕಳು ದೇಶರಕ್ಷಣೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ತಿಳಿಸುವ ಗ್ರಾಮದ ವಯೋವೃದ್ಧರು, ಮಹಿಳೆಯರು ಅಳುಕುವುದಿಲ್ಲ, ಬೇಸರಿಸುವುದಿಲ್ಲ. ನಾಡು-ಗ್ರಾಮ-ಕುಟುಂಬಗಳಿಗೆ ಹೆಮ್ಮೆ ತಂದುಕೊಟ್ಟ ಹುತಾತ್ಮರೆಂದು ಅವರ ಭಾವಚಿತ್ರಗಳನ್ನು ಹೊತ್ತು ಮೆರೆಯುತ್ತಾರೆ.
1947ರಲ್ಲಿ ಭಾರತವು ದೇಶವಿಭಜನೆಯ
ಕತ್ತಲಲ್ಲಿ ಮುಳುಗುತ್ತಲೇ ಬ್ರಿಟಿಷರಿಂದ ವಿಮೋಚನೆಯ ಬೆಳಕನ್ನೂ ಕಂಡಿದ್ದು. ಮತಧರ್ಮವನ್ನು ಆಧರಿಸಿ ವಿಭಜಿಸಿದ ಎರಡು ರಾಷ್ಟ್ರ ಸಿದ್ಧಾಂತಕ್ಕೆ ಗೆಲುವು ದೊರೆತು ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿತ್ತು. ಎರಡೂ ರಾಷ್ಟ್ರಗಳ ನಡುವೆ ಗಡಿರೇಖೆಯನ್ನು ಎಳೆಯಲಾಗಿತ್ತು; ಮನಸ್ಸುಗಳಿಗೆ ಅದಕ್ಕಿಂತಲೂ ಬಿರುಸಾದ ಸಂಕೋಲೆ ತೊಡಿಸಲಾಗಿತ್ತು. ಗಡಿಯ ಎರಡೂ ಬದಿಗಳಲ್ಲಿ ನೆತ್ತರು ಹೊಳೆಯಾಯಿತು. ಭಾರತದ ಮುಸ್ಲಿಮರು ಮತೀಯವಾದಿಗಳ ಒತ್ತಡಕ್ಕೆ ಹೆದರಿ ದೇಶ ತೊರೆದು ಪಾಕಿಸ್ತಾನ ಸೇರಬೇಕಾದ ವಿಷಮಸ್ಥಿತಿ ತಲೆದೋರಿತು. ದೇಶ ಕಂಡ ಅತ್ಯಂತ ಕರಾಳವಾದ, ನೆತ್ತರಲ್ಲಿ ನೆಂದ ಚರಿತ್ರೆಯ, ಮಾಸದ ಛಾಯೆಯಾಗಿ ನೆನಪುಗಳು ಮತ್ತೆಮತ್ತೆ ಮರುಕಳಿಸುತ್ತಿವೆ. ಅಂತಹ ಘೋರ ಪರಿಸ್ಥಿತಿಯೊಳಗೂ ದೇಶ ಬಿಟ್ಟು ಹೋಗದೆ, ತಾವು ತಲತಲಾಂತರಗಳಿಂದ ಬಾಳಿ ಬದುಕಿದ ಭಾರತದ ನೆಲದಲ್ಲೇ ಉಳಿದ ಮುಸ್ಲಿಂ ಕುಟುಂಬಗಳು ದೇಶಾದ್ಯಂತ ಸಹಸ್ರಸಹಸ್ರ ಸಂಖ್ಯೆಯಲ್ಲಿದ್ದು ಭಾರತೀಯರಾಗಿಯೇ ಉಳಿದಿದ್ದಾರೆ. ಧನೂರಿಯ ಮುಸ್ಲಿಮರೂ ಅಷ್ಟೇ. ಭಾರತೀಯರಾಗಿ ತಮ್ಮ ಸೈನಿಕ ಪರಂಪರೆಯನ್ನು ಮುಂದುವರಿಸಿ ದೇಶಕ್ಕೆ ಸೇವೆಸಲ್ಲಿಸುತ್ತಿದ್ದಾರೆ.
‘ಸರ್ಜಿಕಲ್ ಸರ್ಜಿಕಲ್ ಸ್ಟ್ರೈಕ್ ಗಳೇನೂ ಹೊಸದಲ್ಲ’
ಧನೂರಿಯ ಮಸೀದಿಯಲ್ಲಿ ಆಜಾನ್ ಮೊಳಗುವುದು ಅಲ್ಲಿನ ಯುವಜನರನ್ನು ದೇಶಸೇವೆಗೆ ಸಿದ್ಧರಾಗಿ ಎಂದು ಎಚ್ಚರಿಸಿದಂತೆಯೇ! ಸದ್ಯದಲ್ಲಿ ಗ್ರಾಮದಿಂದ ಭಾರತೀಯ ಸೇನಾಪಡೆಗಳಲ್ಲಿ 250 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸೇನೆಯಿಂದ ನಿವೃತ್ತರಾಗಿರುವ ಕ್ಯಾಪ್ಟನ್ ಹಸನ್ ಅಲಿ ಖಾನ್ ಅವರ ಸೇವಾ ವೃತ್ತಾಂತ ಹೀಗಿದೆ: 1965ರಲ್ಲಿ ಸೇನೆಗೆ ಸೇರಿದವರು, 1971ರಲ್ಲಿ ಪ್ಲಟೂನೊಂದರ ಮುಖ್ಯಸ್ಥರಾಗಿ ಬಾಂಗ್ಲಾ ಯುದ್ಧದಲ್ಲಿ ಹೋರಾಡಿರುತ್ತಾರೆ. 1971ರ ಡಿಸೆಂಬರ್ 14ರಂದು ಶತ್ರುಗಳ ಜೊತೆಗಿನ ಕಾದಾಟದಲ್ಲಿ ಕಾಲಿಗೆ ತೀವ್ರತರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಚಿಕಿತ್ಸೆಯ ನಂತರ ಚೇತರಿಸಿಕೊಂಡು ಸೇನೆಗೆ ವಾಪಸ್ಸಾಗಿ ನಂತರದಲ್ಲಿ ನಿವೃತ್ತಿ ಪಡೆಯುತ್ತಾರೆ. ಇದನ್ನು ವಿವರಿಸುವಾಗ ಅವರು ಹೆಮ್ಮೆಯಿಂದ ಮಿನುಗುತ್ತಾರೆ. ಮಾಧ್ಯಮದ ಜೊತೆ ಇವರು ಮಾತನಾಡುತ್ತಾ, “ಸರ್ಜಿಕಲ್ ಸ್ಟ್ರೈಕ್ ಗಳೇನೂ ಹೊಸದಲ್ಲ. ನಾವು ಸೇನೆಯಲ್ಲಿದ್ದ ಕಾಲದಲ್ಲೂ ಅವುಗಳನ್ನು ನಡೆಸಲಾಗಿತ್ತು. ಆದರೆ ಈಗಿನ ತರಹ ಗುಲ್ಲೆಬ್ಬಿಸುತ್ತಿರಲಿಲ್ಲ. ಉದಾಹರಣೆಗೆ, ನಮ್ಮ ‘14 ಗ್ರೆನೇಡ್ ಎ’ ಮೂಲಕ ಮೇಜರ್ ಅಹಮದ್ ಖಾನರ ಆದೇಶದ ಮೇರೆಗೆ ಪಾಕಿಸ್ತಾನದ ಗಡಿ ದಾಟಿ 7 ಕಿಮೀ ಒಳಗೆ ಸಾಗಿ ಅಲ್ಲಿ ಅವರ ಶಸ್ತ್ರಾಗಾರ ಮತ್ತು ಸೇನಾ ಉಗ್ರಾಣದ ಮೇಲೆ ದಾಳಿ ಮಾಡಿದ್ದೆವು. ಹಾಗೇ ಸುರಕ್ಷಿತವಾಗಿ ವಾಪಸ್ಸಾಗಿದ್ದೆವು. ಆದರೆ ಈ ಪರಿ ಎಂದೂ ದೊಂಬಿ ಎಬ್ಬಿಸಿರಲಿಲ್ಲ” ಎಂದು ಸಹಜವಾಗಿ ಉದ್ವೇಗವಿಲ್ಲದೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮುಂದುವರಿದು, “ನಾವೂ ಸಹ ಭಾರತೀಯರೇ, ನಮ್ಮನ್ನು ದೇಶಾಭಿಮಾನ ಇಲ್ಲದವರೆಂದು ಅಥವಾ ದೇಶದ್ರೋಹಿಗಳೆಂದು ಏಕೆ ತಿಳಿಯಬೇಕು?
ನಾವು ನಮ್ಮ ದೇಶಕ್ಕಾಗಿ ಸೇವೆ ಮಾಡಲು ಇಚ್ಛಿಸುತ್ತೇವೆ. ಇಂದುರಾಷ್ಟ್ರದಲ್ಲಿ ವಿಷ ಬಿತ್ತಲಾಗಿದೆ. ಹಿಂದೂ ಮುಸ್ಲಿಮ್ ಎಂದು ಸಮಾಜವನ್ನು ವಿಭಜಿಸಿ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ಈ ಕುತಂತ್ರವನ್ನು ಬ್ರಿಟಿಷರು ಆರಂಭಿಸಿದರು, ಇಂದಿನ ಸರ್ಕಾರ ಅದನ್ನು ಮುಂದುವರಿಸಿದೆ. ನಮ್ಮ ನಡುವೆ ನಿಜಕ್ಕೂ ಅಂತಹ ಕೆಟ್ಟ ಭಾವನೆಗಳೇನೂ ಇಲ್ಲ. ಸೇನೆಯೊಳಗೆ ಇಂತಹ ಮನಸ್ಥಿತಿ ಇಲ್ಲ. ಅಲ್ಲಿ ಹಿಂದೂ-ಮುಸ್ಲಿಮ್ ಎಂಬ ತಾರತಮ್ಯ ಇಲ್ಲವೇ ಇಲ್ಲ. ನಾವೆಲ್ಲರೂ ಒಂದಾಗಿ ಬದುಕುತ್ತೇವೆ, ಒಟ್ಟಾಗಿ ಹೋರಾಡುತ್ತೇವೆ” ಎಂದು ಹೇಳುವ ಕ್ಯಾಪ್ಟನ್ ರ ಮಾತುಗಳು ಅರ್ಥಗರ್ಭಿತ, ಚಿಂತನಾರ್ಹ.
ಭಾರತದ ಮುಸ್ಲಿಮರೂ ಈ ಮಣ್ಣಿನ ಮಕ್ಕಳೇ, ಭಾರತದಲ್ಲಿ ಸಮಾನ ಹಕ್ಕುಗಳುಳ್ಳವರು, ಈ ನಾಡಿಗಾಗಿ ಬೆವರು ಸುರಿಸಿ, ರಕ್ತ ಚೆಲ್ಲಿದ್ದಾರೆ ಎಂಬ ವಾಸ್ತವವನ್ನು ಮರೆತು, ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ತಲೆ ಕೆಟ್ಟವರಂತೆ ಕೂಗಾಡುವವರಿಗೆ ಧನೂರಿ ಗ್ರಾಮದ ಯೋಧರು ಮೌನವಾಗಿಯೇ ತಮ್ಮ ಪರಂಪರೆಯ ಮೂಲಕ ಉತ್ತರಿಸುತ್ತಿದ್ದಾರೆ. ಆದರೆ ಮತಧರ್ಮದ ಉನ್ಮಾದ ಸ್ಥಿತಿಯಲ್ಲಿರುವವರಿಗೆ ಇವುಗಳು ಅರ್ಥವಾಗುವುದೇನು?
ಸೈನಿಕರೆಂದರೆ ಬರೀ ಗಡಿ ಕಾಯುವುದೇ ಅಲ್ಲ
ಧನೂರಿಯಲ್ಲಿ ಯುದ್ಧಖೈದಿಗಳಾಗಿ ಬಿಡುಗಡೆ ಹೊಂದಿರುವ ಮೂವರಿದ್ದಾರೆ. ಗಂಭೀರ ಗಾಯಗಳಾಗಿ ಮೂರು ಯೋಧರು ಸ್ವಗ್ರಾಮಕ್ಕೆ ಮರಳಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಮತ್ತು ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ಸ್ ನಲ್ಲಿ ಸೆಣೆಸಾಡಿರುವ ಸೈನಿಕರೂ ಇಲ್ಲಿದ್ದಾರೆ. ಕಾರ್ಗಿಲ್ ಹುತಾತ್ಮ ಮೊಹಮದ್ ರಮಜಾನ್ ಇಲ್ಲಿಯವರೇ. ಸೈನಿಕರೆಂದರೆ ಭಾರತದ ಗಡಿ ಕಾಯುವುದೇ ಅಲ್ಲ, ಭಾರತದಾಚೆ ಶಾಂತಿಪಾಲನಾ ಪಡೆಗಳಲ್ಲಿ ಕಾರ್ಯನಿರ್ವಹಿಸಿರುವ ಯೋಧರೂ ಇದ್ದಾರೆ. ಮೊದಲನೇ ಮಹಾಯುದ್ಧದಲ್ಲಿ ಧನೂರಿಯ ಮೂವರು ಹಾಗೂ ಎರಡನೇ ಮಹಾಯುದ್ಧದಲ್ಲಿ ಇಬ್ಬರು ಸೈನಿಕರಾಗಿ ಭಾಗವಹಿಸಿದ್ದರೆಂದು ಸ್ಮರಿಸಿಕೊಳ್ಳಲಾಗುತ್ತದೆ. ಬಾಂಗ್ಲಾ ಯುದ್ಧದಲ್ಲಿ ಹುತಾತ್ಮರಾದ ಮೇಜರ್ ಎಮ್.ಎಚ್. ಖಾನ್ ಅವರ ಸ್ಮರಣಾರ್ಥ 72 ದಿನಗಳೊಳಗಾಗಿ ಗ್ರಾಮದ ಮಾಧ್ಯಮಿಕ ಶಾಲೆಯನ್ನು ಅವರ ಹೆಸರಿನಲ್ಲಿ ಮರುನಾಮಕರಣಗೊಳಿಸಲಾಯಿತು. ಹುತಾತ್ಮ ಮೊಹಮದ್ ಇಲಿಯಾಸ್ ಖಾನ್ ಅವರ 8 ಅಣ್ಣತಮ್ಮಂದಿರ ಪೈಕಿ 7 ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸಿರುವವರು. ಹುತಾತ್ಮ ಕುತುಬುದ್ದೀನ್ ಖಾನ್ರ ಕುಟುಂಬದಲ್ಲಿ ನಾಲ್ಕು ಪೀಳಿಗೆಗಳು ಸೇನೆಯಲ್ಲಿ ದುಡಿದವರು. ಬ್ರಿಗೆಡಿಯರ್ ಅಹಮದ್ ಅಲಿ ಖಾನ್ ಅವರ ಪರಿವಾರದಲ್ಲೂ ಮೂರು ಪೀಳಿಗೆಗಳ 5 ಮಂದಿ ಸೈನ್ಯದಲ್ಲಿದ್ದಾರೆ.

ಸೇನೆಯ ಸೇವೆ ಪುರುಷರ ಸ್ವತ್ತೆಂದು ಭಾವಿಸುವಂತಿಲ್ಲ. ರಾಜಸ್ತಾನದಲ್ಲಿ ಸರಾಸರಿ ಲಿಂಗಾನುಪಾತ ಕೇವಲ 928. ಧನೂರಿ ಗ್ರಾಮದಲ್ಲಿ ಇದು 1101 ಎಂದು ಹೇಳಲಾಗಿದೆ. ಅಂದರೆ, 1000 ಪುರುಷರಿಗೆ 1101 ಮಹಿಳೆಯರಿರುತ್ತಾರೆ. ಇಲ್ಲಿ ಈಗ ಶಾಲಾ ವಿದ್ಯಾರ್ಥಿನಿಯರೂ ಸೇನೆ ಸೇರಲು ಹಂಬಲಿಸುತ್ತಾರೆ. ನ್ಯಾಷನಲ್ ಡಿಫೆನ್ಸ್ ಅಕ್ಯಾಡೆಮಿಯಲ್ಲಿ ಆಯ್ಕೆಯಾಗಿ ಗ್ರಾಮದ ಯುವತಿಯೊಬ್ಬಳು ಸೇನಾಧಿಕಾರಿಯಾಗಿದ್ದಾಳೆ. ದೇಶಸೇವೆಯಲ್ಲಿ, ಹೋರಾಟದಲ್ಲಿ, ತ್ಯಾಗಬಲಿದಾನದಲ್ಲಿ ತಾವೂ ಹಿಂದೆ ಉಳಿದಿಲ್ಲ ಎನ್ನುವಂತೆ ಹೆಣ್ಣುಮಕ್ಕಳು ಮುನ್ನುಗ್ಗುತ್ತಿದ್ದಾರೆ. ಶಾಲೆಯಲ್ಲಿ ಎನ್ ಸಿ ಸಿ ಘಟಕ ಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸುತ್ತಾರೆ.
ಸ್ಮಾರಕವಿಲ್ಲದ 18 ಹುತಾತ್ಮರ ಗ್ರಾಮ
1971ರ ಯುದ್ಧದ ಹುತಾತ್ಮ ಮೊಹಮದ್ ಹಸನ್ ಖಾನ್ ರಿಗೆ ವೀರ್ ಚಕ್ರ ಸಮರ್ಪಿಸಲಾಗಿದೆ. ಇದೊಂದೇ ಗ್ರಾಮ 18 ಹುತಾತ್ಮರನ್ನು ದೇಶಕ್ಕಾಗಿ ನೀಡಿದ್ದರೂ, ಈ ತ್ಯಾಗವನ್ನು ಮುಂದಿನ ಪೀಳಿಗೆಗಳಿಗೆ ನೆನಪಿಸಲು ಇಲ್ಲಿ ಒಂದು ಸ್ಮಾರಕ ನಿರ್ಮಿಸಲು ಯಾವ ಸರ್ಕಾರವೂ, ಸ್ಥಳೀಯ ಆಡಳಿತವೂ ಗಮನ ಹರಿಸಿಲ್ಲ ಎಂದು ಸ್ಥಳೀಯರು ಬೇಸರಪಡುತ್ತಾರೆ. ಗ್ರಾಮದ ಶಾಲಾ ಗೋಡೆ ಶಿಥಿಲಗೊಂಡಿದ್ದರೂ ಅದನ್ನು ರಿಪೇರಿಪಡಿಸದಿದ್ದಾಗ ನಿವೃತ್ತ ಯೋಧ ಪರ್ವೀಜ್ ಖಾನ್ ತಮ್ಮ ಪೆನ್ಷನ್ ಹಣದಿಂದ ಗೇಟ್ ಹಾಕಿಸಿದ್ದನ್ನು ಜನ ನೆನಪಿಸಿಕೊಳ್ಳುತ್ತಾರೆ. ಇಲ್ಲಿನ ಯೋಧರು ಸರ್ಕಾರ ಮಾಡಬೇಕಿದ್ದ ಕೆಲಸವನ್ನೂ ಮಾಡಿ ಚುನಾಯಿತ ಜನಪ್ರತಿನಿಧಿಗಳ ಮುಖಕ್ಕೆ ಛೀಮಾರಿ ಹಾಕಿದ್ದಾರೆ. ಧನೂರಿಯ ಮಕ್ಕಳು ಕುಟುಂಬದ, ಗ್ರಾಮದ ವಾತಾವರಣದಿಂದ ಸ್ಫೂರ್ತಿಗೊಂಡು ತಾವೂ ಸೇನೆಯಲ್ಲಿ ದುಡಿಯಬೇಕೆಂಬ ಉತ್ಕಟ ಬಯಕೆ ಹೊಂದಿದ್ದಾರೆ. ಇಲ್ಲಿ ಮುಸ್ಲಿಮರು ಅಧಿಕವಾಗಿದ್ದರೂ ಕೆಲವೇ ಹಿಂದೂ ಕುಟುಂಬಗಳ ಜೊತೆಗೆ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಕೋಮು ಸೌಹಾರ್ದತೆಯ ಪ್ರತೀಕ ಧನೂರಿ. ಗ್ರಾಮದ ಹಿಂದೂ ಹೆಣ್ಣುಮಗಳೊಬ್ಬಳನ್ನು ಪರವೂರಿನ ಯೋಧನಿಗೆ ವಿವಾಹ ಮಾಡಿಕೊಡಲಾಗಿತ್ತು. ಕೆಲದಿನಗಳಲ್ಲಿ ಆತ ಹುತಾತ್ಮನಾದ; ಈಕೆ ಗ್ರಾಮಕ್ಕೆ ಮರಳಿಬಂದಳು. ಅವಳು 12ನೇ ತರಗತಿ ಓದಿದ್ದಳು. ಆಕೆ ತನ್ನ ಬದುಕು ಕಟ್ಟಿಕೊಳ್ಳಲು ತವರಿನವರು ಹೆಚ್ಚೇನೂ ನೆರವು ನೀಡಲು ಅಸಾಧ್ಯವಾದಾಗ ಗ್ರಾಮಸ್ಥರು (ಮುಸ್ಲಿಮರು) ಆಕೆಗೆ ಸಹಾಯಹಸ್ತ ಚಾಚಿ ಸ್ವಾವಲಂಬಿಯಾಗಲು ನೆರವಾದರು. ಆಕೆ ಈಗ ಸರ್ಕಾರಿ ನೌಕರಿಯಲ್ಲಿದ್ದಾಳೆ. ಬಂದೂಕು ಹಿಡಿದ ಯೋಧನ ಕೈಗಳು ನೆರೆಹೊರೆಯವರ ಬದುಕನ್ನು ಕಟ್ಟಲು ಒಂದಾಗುವುದೇ ನಿಜವಾದ ದೇಶಪ್ರೇಮ.

“ಸರ್ಜಿಕಲ್ ಸ್ಟ್ರೈಕ್ ಹೆಸರೇಳಿ ಚುನಾವಣೆ ಗೆಲ್ಲುತ್ತಾರೆ, ಯೋಧರ ಬದುಕಿನ ಬಗ್ಗೆ ಕೇಳಿದರೆ ನಮಗೆ ನಿರಾಶೆಯೇ ಕಟ್ಟಿಟ್ಟ ಬುತ್ತಿ” ಎಂದು ನುಡಿಯುವ ಯೋಧ ಸಾದಿಕ್ ಖಾನ್, ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒನ್ ರ್ಯಾಂಕ್ ಒನ್ ಪೆನ್ಷನ್_ ಯೋಜನೆಯ ಅನುಷ್ಠಾನ ಸರಿಯಾಗಿ ನಡೆದಿಲ್ಲ ಮತ್ತು ತಮಗೆ ತಲುಪಿಲ್ಲ ಎನ್ನುತ್ತಾರೆ. “ಉದ್ಯೋಗದಲ್ಲಿ ಮೀಸಲಾತಿ ಎಂದು ಸರ್ಕಾರ ಹೇಳುತ್ತದೆ, ಆದರೆ 100 ಹುದ್ದೆಗಳನ್ನು ಸೇನಾ ನಿವೃತ್ತರಿಗೆಂದು ಮೀಸಲಾಗಿಟ್ಟರೆ 10 ಹುದ್ದೆಗಳೂ ನಮಗೆ ಸಿಗದು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ದೇಶಾಭಿಮಾನ ಯಾರ ಪರಿವಾರದ ಸೊತ್ತೂ ಅಲ್ಲ. ದೇಶಪ್ರೇಮವನ್ನು ಅಳೆಯಲು ಯಾವ ಮಾಪಕವೂ ಇಲ್ಲ. ಜಾತಿಧರ್ಮದ ಹಂಗಿಲ್ಲದೆ ನೆರೆಹೊರೆಯವರನ್ನು ಪ್ರೀತಿಸಿ ಒಟ್ಟಾಗಿ ಬದುಕುವುದೇ ದೇಶಪ್ರೇಮ. ದೇಶಪ್ರೇಮದ ಪ್ರಮಾಣಪತ್ರ ನೀಡಲು ಯಾವ ಏಜೆಂಟನ್ನೂ ನಮ್ಮ ಸಂವಿಧಾನ ಅನುಮೋದಿಸಿಲ್ಲ. ಭಾರತದ ಇಂದಿನ ವಿಷಯುಕ್ತ ಸಾಮಾಜಿಕ ಪರಿಸ್ಥಿತಿಯಲ್ಲಿ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವ ವಿಕೃತರಿಗೆ ಧನೂರಿ ಗ್ರಾಮದ ಸಂಗತಿಗಳು ನೇರ ಉತ್ತರವಾಗಿವೆ. ದೇಶಕ್ಕಾಗಿ ತ್ಯಾಗ ಮಾಡಲು ನಿಂತವರ ಮತ್ತವರ ಕುಟುಂಬದ ಬದುಕಿನ ಬಗ್ಗೆ ಚಿಂತಿಸಿ ಪ್ರಾಮಾಣಿಕವಾಗಿ ಅದರತ್ತ ಕಾರ್ಯಪ್ರವೃತ್ತರಾಗುವುದು ನಿಜವಾದ ದೇಶಪ್ರೇಮವೇ ಹೊರತು ಯುದ್ಧೋನ್ಮಾದ ಸೃಷ್ಟಿಸಿ ಸೈನಿಕರನ್ನು ಸದಾಕಾಲ ಸಾವಿನ ದವಡೆಗೆ ಬೀಳಿಸಿ ಅವರ ಬಲಿದಾನದಲ್ಲಿ ರಾಜಕೀಯ ಮಾಡುವುದು ಖಂಡಿತಾ ದೇಶಪ್ರೇಮವಲ್ಲ!
ವರದಿ- ಜ್ಯೋತಿ ಎ.