ಒಂದು ಕಡೆ, ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಮತ್ತು ಆ ಬಳಿಕದ ಬಾಲಾಕೋಟ್ ದಾಳಿಯನ್ನೇ ಬಳಸಿಕೊಂಡು 28 ಕ್ಷೇತ್ರಗಳ ಪೈಕಿ 22ರಲ್ಲಿ ಜಯ ಗಳಿಸುವ ಲೆಕ್ಕಾಚಾರದಲ್ಲಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮತ್ತೊಂದು ಕಡೆ, ಎಂಟು- ಹನ್ನೆರಡು ಕ್ಷೇತ್ರ ಹಂಚಿಕೆಯ ಹಗ್ಗಜಗ್ಗಾಟದಿಂದ ಹೊರಬರಲಾಗದ ಸ್ಥಿತಿಯಲ್ಲಿರುವ ಮೈತ್ರಿಪಕ್ಷಗಳು, ಸಭೆಯ ಮೇಲೆ ಸಭೆ ನಡೆಸುತ್ತಿದ್ದರೂ ಸ್ಪಷ್ಟ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗುತ್ತಿವೆ. ಹಾಗಾಗಿ ಚುನಾವಣಾ ದಿನಾಂಕ ಘೋಷಣೆ ಕ್ಷಣಗಣನೆ ಆರಂಭವಾಗಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ಯಾವ ಪಕ್ಷ ಕಣಕ್ಕಿಳಿಯಲಿದೆ ಎಂಬುದೇ ಇನ್ನೂ ಖಾತ್ರಿಯಾಗದ ಗೊಂದಲ ಮೈತ್ರಿಕೂಟದ್ದಾಗಿದೆ.
ಈ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂಬ ಭರವಸೆ ಹುಟ್ಟಿಸಿದ್ದ ಸೋಮವಾರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಮನ್ವಯ ಸಮಿತಿ ಸಭೆ ಕೂಡ ಕ್ಷೇತ್ರ ಹಂಚಿಕೆಯ ವಿಷಯದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ರಾಜ್ಯ ನಾಯಕತ್ವದ ಮಟ್ಟಕ್ಕೆ ಸೀಮಿತವಾಗಿದ್ದ ಸ್ಥಾನ ಹಂಚಿಕೆಯ ಸರ್ಕಸ್ ಇದೀಗ ದೆಹಲಿಗೆ ವರ್ಗಾವಣೆಯಾಗಿದೆ. ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ಈ ವಾರದಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಮಾತುಕತೆಯಲ್ಲಿ ಎಲ್ಲವೂ ಅಂತಿಮವಾಗಲಿದೆ ಎಂದು ಸಮನ್ವಯ ಸಮಿತಿ ಸಭೆಯ ಬಳಿಕ ಉಭಯ ಪಕ್ಷಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸ್ಥಾನ ಹಂಚಿಕೆ ಕುರಿತು ಈಗಾಗಲೇ ಎರಡು ಸುತ್ತಿನ ಮಾತುಕತೆಗಳು ನಡೆದಿದ್ದವು. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದು, ಪ್ರಮುಖವಾಗಿ ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ಮೈಸೂರು, ಕೋಲಾರ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ವಿಷಯದಲ್ಲಿ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯ ಸಮಸ್ಯೆ ತಲೆದೋರಿತ್ತು.
ಮುಖ್ಯವಾಗಿ ತನ್ನ ಪ್ರಾಬಲ್ಯದ ಹಳೇಮೈಸೂರು ಭಾಗದ 12 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಟ್ಟಲ್ಲಿ, ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯ ಎಂಬುದು ಜೆಡಿಎಸ್ ವಾದವಾಗಿತ್ತು. ಆದರೆ, ಆ ಪೈಕಿ ಎರಡು ಕಡೆ(ತುಮಕೂರು ಮತ್ತು ಚಿಕ್ಕಬಳ್ಳಾಫುರ) ಹಾಲಿ ತಮ್ಮ ಪಕ್ಷದ ಸಂಸದರೇ ಇದ್ದು, ತಮ್ಮ ವಶದಲ್ಲಿರುವ ಆ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಅಸಾಧ್ಯ ಎಂಬುದು ಕಾಂಗ್ರೆಸ್ ನಿಲುವಾಗಿತ್ತು. ಆ ಬಳಿಕ ಕಾಂಗ್ರೆಸ್ ನಾಯಕರ ನಡುವೆಯೇ ಹಲವು ಸುತ್ತಿನ ಮಾತುಕತೆ ನಡೆದು, ಪ್ರಮುಖವಾಗಿ ಬಿಜೆಪಿಯನ್ನು ಮಣಿಸುವುದು ಗುರಿಯಾಗಿರುವುದರಿಂದ ಕೆಲಮಟ್ಟಿನ ಹೊಂದಾಣಿಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದು, ಮಂಡ್ಯ ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರಕನ್ನಡ ಸೇರಿದಂತೆ ಎಂಟು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಪಕ್ಷದ ನಾಯಕರ ನಡುವೆ ಸಹಮತ ಉಂಟಾಗಿತ್ತು ಎನ್ನಲಾಗಿದೆ.
ಆದರೆ, ಪ್ರಮುಖವಾಗಿ ಜೆಡಿಎಸ್ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಮತ್ತು ಎಚ್ ಡಿ ರೇವಣ್ಣ ಅವರ ನಡುವೆ ನಡೆದ ಎರಡನೇ ಸುತ್ತಿನ ಮಾತುಕತೆ ಕೂಡ ಯಾವುದೇ ತೀರ್ಮಾನಕ್ಕೆ ಬರಲು ಸಫಲವಾಗಿರಲಿಲ್ಲ. ಇದೀಗ ಸಮನ್ವಯ ಸಮಿತಿ ಸಭೆಯಲ್ಲಿಯೂ ಇದೇ ಮೂರು ಕ್ಷೇತ್ರಗಳ ವಿಷಯದಲ್ಲಿಯೇ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕ್ಷೇತ್ರ ಹಂಚಿಕೆಯ ವಿಷಯವನ್ನು ಪಕ್ಷದ ಹೈಕಮಾಂಡಿಗೆ ವರ್ಗಾಯಿಸಿ ಕೈತೊಳೆದುಕೊಂಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
ಹಾಗಾದರೆ, ಯಾಕೆ ಆ ಮೂರು ಕ್ಷೇತ್ರಗಳ ವಿಷಯದಲ್ಲಿ ಜೆಡಿಎಸ್ ಅಷ್ಟು ಪಟ್ಟು ಹಿಡಿದಿದೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆ. ಪ್ರಮುಖವಾಗಿ ಪಕ್ಷದ ನೆಲೆಯನ್ನು ವಿಸ್ತರಿಸುವ ಮೂಲಕ ತನ್ನ ಭದ್ರಕೋಟೆಯನ್ನು ಗಟ್ಟಿಗೊಳಿಸುವ ಉದ್ದೇಶ ಜೆಡಿಎಸ್ನದ್ದು. ಈಗಾಗಲೇ ಪಕ್ಷ ಸಾಕಷ್ಟು ಪ್ರಭಾವ ಹೊಂದಿರುವ ಹಾಸನ, ಮಂಡ್ಯ, ರಾಮನಗರ, ಮೈಸೂರು ಜೊತೆಗೆ, ಕೆಲಮಟ್ಟಿಗೆ ವಿಧಾನಸಭಾ ಕ್ಷೇತ್ರವಾರು ಪ್ರಾಬಲ್ಯ ಹೊಂದಿರುವ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿಯೂ ತನ್ನದೇ ಸಂಸದರನ್ನು ಗೆಲ್ಲಿಸಿಕೊಂಡಲ್ಲಿ ಪಕ್ಷವನ್ನು ಇನ್ನಷ್ಟು ಸುಭದ್ರಗೊಳಿಸಲು ನೆರವಾಗಲಿದೆ ಎಂಬುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ.
ಜೊತೆಗೆ, ದೇವೇಗೌಡರ ಕುಟುಂಬದ ಒಳಗೇ ಈ ಬಾರಿಯ ಲೋಕಸಭಾ ಚುನಾವಣೆಯ ಸ್ಫರ್ಧೆಗಾಗಿ ಆಂತರಿಕ ಪೈಪೋಟಿ ಹೆಚ್ಚಾಗಿದೆ. ಸಿಎಂ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ತಮಗೆ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇನ್ನು ರೇವಣ್ಣ ಪುತ್ರರಿಬ್ಬರೂ ಸ್ಫರ್ಧೆಯ ಹುಮ್ಮಸ್ಸಿನಲ್ಲಿದ್ದಾರೆ. ಆ ಪೈಕಿ ಪ್ರಜ್ವಲ್ ರೇವಣ್ಣ ಈಗಾಗಲೇ ಹಾಸನದಲ್ಲಿ ಪ್ರಚಾರ ಕಾರ್ಯವನ್ನೂ ಆರಂಭಿಸಿಬಿಟ್ಟಿದ್ದಾರೆ. ಇನ್ನು ಸ್ವತಃ ವರಿಷ್ಠ ದೇವೇಗೌಡರು ಈ ಬಾರಿ ಮತ್ತೊಂದು ಕೈ ನೋಡುವ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಹಾಸನವನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟರೆ ತಮಗೆ ಯಾವ ಕ್ಷೇತ್ರ ಎಂಬ ಗೊಂದಲದಲ್ಲಿದ್ದಾರೆ. ಅವರು ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕಿಳಿಯುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿಖಿಲ್ ಅವರಿಗೆ ಮಂಡ್ಯದಿಂದ ಕಣಕ್ಕಿಳಿಸುವುದಾಗಿ ಈಗಾಗಲೇ ದೇವೇಗೌಡರು ಮತ್ತು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ, ಪ್ರಮುಖವಾಗಿ ಗೌಡರ ಕುಟುಂಬದ ಕೋಟಾ ಈ ಬಾರಿ ಹೆಚ್ಚಳವಾಗಿರುವುದರಿಂದ ಜೆಡಿಎಸ್ 12 ಸ್ಥಾನಗಳಿಗೆ ಪಟ್ಟುಹಿಡಿದಿದೆ. ಅದರಲ್ಲೂ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಜೆಡಿಎಸ್ ನಾಯಕರು ಬಿಗಿಪಟ್ಟು ಹಿಡಿದಿರುವುದರ ಹಿಂದೆ ಈ ಕುಟುಂಬ ಕೋಟಾದ ಬಿಕ್ಕಟ್ಟು ಕೆಲಸ ಮಾಡುತ್ತಿದೆ. ಹಾಗಾಗಿಯೇ ಇಡೀ ಮೈತ್ರಿ ಪಕ್ಷಗಳ ನಡುವಿನ ಸ್ಥಾನ ಹೊಂದಾಣಿಕೆಯೇ ಈಗ ಸಮಸ್ಯೆಗೆ ಸಿಲುಕಿದೆ ಎಂಬ ವಾದಗಳೂ ಇವೆ.
ಆದರೆ, ಈ ಕೌಟುಂಬಿಕ ಪೈಪೋಟಿ ದೋಸ್ತಿ ಪಕ್ಷಗಳ ಚುನಾವಣಾ ಹೊಂದಾಣಿಕೆ, ತಂತ್ರಗಾರಿಕೆ ಮತ್ತು ಪ್ರಚಾರ ಸಮಯಾವಕಾಶಕ್ಕೇ ಬರೆ ಎಳೆದು, ಅಂತಿಮವಾಗಿ ಬಿಜೆಪಿಗೆ ಲಾಭ ಮಾಡಿಕೊಡುವುದೇ ಎಂಬ ಅನುಮಾನಗಳೂ ಇವೆ. ಏಕೆಂದರೆ, ಮಂಡ್ಯ ಕ್ಷೇತ್ರದ ವಿಷಯದಲ್ಲಿ ಈಗಾಗಲೇ ಸುಮಲತಾ ಅಂಬರೀಶ್ ಅವರು ಟಿಕೆಟ್ ತಮಗೆ ಸಿಗಲಾರದು ಎಂಬುದು ಖಾತ್ರಿಯಾಗುತ್ತಲೇ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದಾರೆ. ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಷಯದಲ್ಲಿಯೂ ಹಾಲಿ ಕಾಂಗ್ರೆಸ್ ಸಂಸದರು, ಅದೇ ಬಂಡಾಯದ ಹಾದಿ ಹಿಡಿದರೆ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭವಾಗುವ ಸಾಧ್ಯತೆ ನಿಚ್ಛಳವಾಗಿದೆ.