“ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ…, ಪುರಂದರ ದಾಸರು ರಚಿಸಿದ ಈ ಹಾಡನ್ನು ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲರು ತಮ್ಮ ‘ಉಪಾಸನೆ’ ಚಲನಚಿತ್ರದಲ್ಲಿ ಬಳಸಿಕೊಂಡಿದ್ದರು. ಕಳೆದ ಶನಿವಾರ ನಮ್ಮ ಮಾನ್ಯ ಪ್ರಧಾನಿ ಮೋದಿಯವರು ನೀಡಿದ ಒಂದು ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ಹಾಡು ನೆನಪಾಯಿತು!
ಪ್ರಧಾನಿ ಮೋದಿ ಒಂದು ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಮಕ್ಕಳು ಮತ್ತು ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಪರಿಹಾರಗಳತ್ತ ಗಮನವನ್ನು ಹರಿಸುವ ಒಂದು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕಳೆದ ಶನಿವಾರ ಜರುಗಿದ ಈ ವಿಡಿಯೋ ಸಂವಾದದಲ್ಲಿ ಡೆಹರಾಡೂನಿನ ವಿದ್ಯಾರ್ಥಿನಿಯೊಬ್ಬಳು ಮಾತಾಡುತ್ತಾ, ‘ಓದುವ ಮತ್ತು ಬರೆಯುವ ಸಮಸ್ಯೆಯ ಡಿಸ್ಲೆಕ್ಷಿಯಾದಿಂದ (ಮೆದುಳಿನ ದೋಷದಿಂದಾಗಿ ನೋಡಿದ ಅಥವಾ ಕೇಳಿದ ಮಾತು ಅರ್ಥವಾಗದಿರುವ ‘ಮಾತುಗುರುಡುತನ’ದ ತೊಂದರೆ) ಬಾಧಿತರಾಗಿರುವ ಮಕ್ಕಳಿಗೆ ಸಹಾಯಹಸ್ತವನ್ನು ನೀಡಬಲ್ಲ ಒಂದು ಯೋಜನೆ ನಮ್ಮ ಬಳಿಯಿದೆ. ಇಂತಹ ಮಕ್ಕಳಲ್ಲಿ ಕಲಿಯುವಿಕೆ ಮತ್ತು ಬರವಣಿಗೆ ನಿಧಾನವಾಗಿರುತ್ತದೆ. ಆದರೆ ಅವರ ಬುದ್ಧಿಮತ್ತೆ ಮತ್ತು ಸೃಜನಶೀಲತೆ ಉತ್ತಮ ಮಟ್ಟದಲ್ಲಿರುತ್ತವೆ. ನೀವದನ್ನು ’ತಾರೆ ಝಮೀನ್ ಪರ್’ ಹಿಂದಿ ಚಲನಚಿತ್ರದಲ್ಲಿ ವೀಕ್ಷಿಸಿರಬಹುದು…’ ಎಂದು ಹೇಳುತ್ತಿದ್ದಾಗಲೇ ಪ್ರಧಾನಿ ಮೋದಿ ನಗುತ್ತ ಮಧ್ಯಪ್ರವೇಶಿಸಿ, ಈ ಯೋಜನೆಬ 40-45 ವರ್ಷಗಳಾಗಿರುವ ಮಕ್ಕಳಿಗೂ ಕೆಲಸ ಮಾಡುತ್ತದೆಯೇ? ಎಂದು ಪ್ರಶ್ನಿಸಿದರು. ಇದನ್ನು ಆಲಿಸಿದ ವಿದ್ಯಾರ್ಥಿಗಳು (ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2019 ಕಾರ್ಯಕ್ರಮ)ನಕ್ಕರು, ಚಪ್ಪಾಳೆ ತಟ್ಟಿದರು! ವಿವರಣೆಯನ್ನು ನೀಡುತ್ತಿದ್ದ ಹುಡುಗಿ ಹೂಂಗುಟ್ಟಿದಳು! ಅಷ್ಟಕ್ಕೆ ನಿಲ್ಲಿಸದ ಪ್ರಧಾನಿ ಮೋದಿ ಇಂತಹ ಮಕ್ಕಳ ತಾಯಂದರಿಗೆ ಇದರಿಂದ ಖುಷಿಯಾಗಬಹುದು ಎಂದರು. ಇದಕ್ಕೂ ಸಭೆಯಲ್ಲಿ ನಗುವಿನ ಪ್ರತಿಕ್ರಿಯೆ ದೊರಕಿತು!
ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಕೀಳಾಗಿ ತಮಾಷೆ ಮಾಡುವ ಭರದಲ್ಲಿ ಪ್ರಧಾನಿ ಮೋದಿ ಈ ಅಸೂಕ್ಷ್ಮ ಹಾಗೂ ಹೇವರಿಕೆಯ ಮಾತುಗಳನ್ನು ಹರಿಬಿಟ್ಟರು. ನಮ್ಮ ನಡುವೆ ಅನೇಕ ಮಾತುಗುರುಡು (ಡಿಸ್ಲೆಕ್ಷಿಯಾ) ಪೀಡಿತ ಮಕ್ಕಳಿದ್ದಾರೆ. ಲಿಯೊನಾರ್ಡೊ ಡ ವಿನ್ಸಿ, ಆಲ್ಬರ್ಟ್ ಐನ್ಸ್ಟೀನ್, ಪಾಬ್ಲೊ ಪಿಕಾಸೊ, ಅಲೆಕ್ಸಾಂಡರ್ ಗ್ರಹಂ ಬೆಲ್, ಟಾಮ್ ಕ್ರೂಸ್ ಮುಂತಾದ ಖ್ಯಾತನಾಮರು ಈ ತೊಂದರೆಯಿಂದ ಚಿಕ್ಕಂದಿನಲ್ಲಿ ಬಾಧಿತರಾಗಿದ್ದರು ಎನ್ನಲಾಗಿದೆ. ನಂತರ ಅವರು ಅದನ್ನು ಹಿಮ್ಮೆಟ್ಟಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದರು. ಹೀಗಿರುವಾಗ, ಇಂತಹ ಮಕ್ಕಳ ಬಗೆಗೆ ಕಡೇಪಕ್ಷ ಮಾತುಗಳಲ್ಲಾದರೂ ಅನುಭೂತಿಯನ್ನು ವ್ಯಕ್ತಪಡಿದುವ ವಿವೇಕ, ವಿನಯತೆ ಇರಬೇಕಲ್ಲವೇ?
ಆದರೆ ಪ್ರಧಾನಿ ಮೋದಿ ಇಂತಹ ಕೊಂಕು ಮಾತುಗಳನ್ನು ಬಳಸಿರುವುದು ಇದೇನೂ ಪ್ರಥಮ ಬಾರಿಯಲ್ಲ. ಸಂದರ್ಭ ಯಾವುದೇ ಇರಲಿ, ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷಗಳನ್ನು ಹೀಯಾಳಿಸುವುದರಲ್ಲಿ ಮುಂದಾಗುವ ಅವರ ಇಂತಹ ನಡವಳಿಕೆಗಳು ಪ್ರಧಾನಿ ಸ್ಥಾನಕ್ಕೆ ತಕ್ಕುದಾಗಿಲ್ಲ; ಘನತೆಯನ್ನು ತರುವುದಿಲ್ಲ. ಹಿಂದಿನ ಯಾವ ಪ್ರಧಾನಿ ಕೂಡ ಇಂತಹ ಅಧೋಮಟ್ಟದ ಮಾತುಗಳನ್ನು ಆಡಿದ್ದಿಲ್ಲ! ಸಂಸತ್ನಲ್ಲಿ ಮೋದಿ ಮಾತನಾಡಿರುವುದೇ ಕಡಿಮೆ. ಕಳೆದ ಅಧಿವೇಶನದಲ್ಲಿ ಭಾಷಣ ಮಾಡುತ್ತ, ಇತಿಹಾಸದಲ್ಲಿ ಕಾಲಘಟ್ಟಗಳನ್ನು ಸೂಚಿಸುವ BC ಮತ್ತು AD ಪದಗಳನ್ನು ಉಚ್ಚರಿಸುತ್ತ “BC ಎಂದರೆ Before Congress, AD ಎಂದರೆ After Dynasty…” ಎಂದು ವಿವರಿಸುತ್ತ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಗೇಲಿ ಮಾಡಿದರು.
ಈ ಹೇಳಿಕೆಗೆ ಆಳುವ ಪಕ್ಷದ ಸದಸ್ಯರು ಮೇಜನ್ನು ಗುದ್ದಿ, ಕರತಾಡನವನ್ನು ಮಾಡಿದರು! ಆದರೆ ಇತ್ತೀಚಿನ ದಶಕಗಳಲ್ಲಿ ಇಂತಹ ವಿಚಾರಶೂನ್ಯ, ಎರಡು ಸಾಲುಗಳ ಪಂಚಿಂಗ್ ಹೇಳಿಕೆಗಳುಳ್ಳ ಬಾಷಣಗಳು ಹೇರಳವಾಗುತ್ತಿರುವುದು ನಮ್ಮ ಸಂಸದೀಯ ಚರ್ಚೆಗಳ ಮಟ್ಟದ ಕುಸಿತವನ್ನು ಸೂಚಿಸುತ್ತವೆ.
ಡಿಸ್ಲೆಕ್ಷಿಯಾ ಸಮಸ್ಯೆಗೆ ಸಂಬಂಧಿಸಿದ ಪ್ರಧಾನಿ ಮೋದಿಯವರ ಮೇಲಿನ ನುಡಿಗಳು ಸಾಮಾಜಿಕ ಜಾಲತಾಣUಳಲ್ಲಿ ವ್ಯಾಪಕ ಠೀಕೆಗಳಿಗೆ ಗುರಿಯಾಗಿವೆ.
ನೀವು ಸರಿಯಾಗಿ ಹೇಳಿದಿರಿ ಕಳೆದ ಗುಜರಾತ್ ಚುನಾವಣೆಯಲ್ಲಿ ಅನವಶ್ಯಕವಾಗಿ ದಿವಗಂತ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಕೀಳಾಗಿ ಮಾತನಾಡಿದಾರೆ