ಭಾರತೀಯ ಜನತಾ ಪಕ್ಷದ ಅಧಿಕೃತ ಜಾಲತಾಣವನ್ನು – http://www.bjp.org/– ಹ್ಯಾಕರ್ ಗಳು ಹ್ಯಾಕ್ ಮಾಡಿದ್ದಾರೆ. ಇದು ಗಮನಕ್ಕೆ ಬಂದ ಕೂಡಲೇ ಬಿಜೆಪಿಯ ಸಾಮಾಜಿಕ IT ಘಟಕವು ಜಾಲತಾಣವನ್ನು ಸ್ಥಗಿತಗೊಳಿಸಿದೆ.
ಒಂದು ತಾಸಿನ ಹಿಂದೆ ಬಿಜೆಪಿ ಜಾಲತಾಣವನ್ನು ನೋಡದವರಿಗೆ ಆಘಾತ ಕಾದಿತ್ತು. ಅದರಲ್ಲಿ ಕೆಲವು ಅಶ್ಲೀಲ ಪದಗಳಿರುವ, ಬಿಜೆಪಿಯು ದೇಶದ ನಾಗರಿಕರಿಗೆ ವಂಚನೆ ಮಾಡುತ್ತಿದೆ ಎಂಬರ್ಥದ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು. ಅದರ ನಂತರದಲ್ಲಿ ಮೋದಿಯವರು ಜರ್ಮನಿಯ ಚಾನ್ಸಲರ್ ಅಂಜೆಲಾ ಮರ್ಕೆಲ್ ಅವರೊಂದಿಗಿದ್ದ ಫೋಟೋ ಹಾಕಲಾಗತ್ತಲ್ಲದೆ ಒಂದು ಯೂಟ್ಯೂಬ್ ವಿಡಿಯೋವನ್ನು ಕೂಡಾ ಹಾಕಲಾಗಿತ್ತು.
ಬಿಜೆಪಿಯ ಜಾಲತಾಣವು ಹ್ಯಾಕ್ ಆಗಿರುವ ಚಿತ್ರಪಟಗಳು ಟ್ವಿಟರಿನಲ್ಲಿ ಹರಿದಾಡತೊಡಗುತ್ತಿದ್ದಂತೆ ಬಿಜೆಪಿಯ ಐಟಿ ಘಟಕವು ಎಚ್ಚೆತ್ತುಕೊಂಡು ಕೂಡಲೇ ಜಾಲತಾಣವನ್ನು ಸ್ಥಗಿತಗೊಳಿಸಿದೆ. ಈಗ ಅದರಲ್ಲಿ ಯಾವುದೇ ಮಾಹಿತಿ ಕಾಣಸಿಗುವುದಿಲ್ಲ.

ಪುನಃ ಮರಳಿ ಬರುತ್ತೇವೆ, ಅಡಚಣೆಗಾಗಿ ಕ್ಷಮಿಸಿ ಎನ್ನುವ ಸಂದೇಶ ಮಾತ್ರ ಕಾಣುತ್ತದೆ.
ಆಡಳಿತ ಪಕ್ಷವಾದ ಬಿಜೆಪಿಯ ಜಾಲತಾಣ ಹ್ಯಾಕ್ ಆಗಿರುವ ಹಿನ್ನೆಲೆಯಲ್ಲಿ ನಾನಾ ಬಗೆಯ ಟ್ರೋಲ್ಗಳೂ ಆರಂಭವಾಗಿವೆ
‘ತಮ್ಮ ಜಾಲತಾಣವನ್ನೇ ರಕ್ಷಿಸಿಕೊಳ್ಳದವರು ದೇಶ ರಕ್ಷಿಸುವರೇ?’
ತನ್ನ ಅಧಿಕೃತ ಜಾಲತಾಣ ಹ್ಯಾಕ್ ಆಗುವುದನ್ನೇ ತಡೆಯಲು ಆಗದ ಬಿಜೆಪಿ ದೇಶದ ರಕ್ಷಣೆ ಮಾಡುತ್ತದೆಯೇ? ಎಂಬ ಪ್ರಶ್ನೆಯನ್ನು ಒಬ್ಬರು ಕೇಳಿದ್ದಾರೆ. ಆಡಳಿತ ಪಕ್ಷವು ತನ್ನ ಸ್ವಂತ ಜಾಲತಾಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ನಾವು ಡಿಜಿಟಲ್ ಇಂಡಿಯಾದ ಬಗ್ಗೆ ಮಾತಾಡುತ್ತೇವೆ’ ಎಂಬ ಅಭಿಪ್ರಾಯವನ್ನು ಮತ್ತೊಬ್ಬ ಟ್ವಿಟ್ಟಿಗರು ವ್ಯಕ್ತಪಡಿಸಿದ್ದಾರೆ.
BJP ಜಾಲತಾಣವೇ ಹ್ಯಾಕ್ ಆಗುತ್ತದೆ ಎಂದರೆ EVM ಯಾಕೆ ಹ್ಯಾಕ್ ಆಗುವುದಿಲ್ಲ ಎಂಬ ಪ್ರಶ್ನೆಯನ್ನೂ ಒಬ್ಬರು ಕೇಳಿದ್ದಾರೆ
If BJP website can be hacked then why not EVM????
— Ricky Rajkumar (@Rickyrajkumar) March 5, 2019
ಹ್ಯಾಕ್ ಮಾಡಿದ್ದು ಯಾರು?
ಬಿಜೆಪಿಯ ಅಧಿಕೃತ ಜಾಲತಾಣವು ಹ್ಯಾಕ್ ಆಗಿರುವ ಹಿನ್ನೆಲೆಯಲ್ಲೇ ಈಗ ಹ್ಯಾಕ್ ಮಾಡಿರುವುದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಎಥಿಕಲ್ ಹ್ಯಾಕರ್ಗಳೇ, ಪಾಕಿಸ್ತಾನದವರೇ? ವಿರೋಧ ಪಕ್ಷದವರೇ? ಅಥವಾ ಯಾರಾದರೂ ತಲೆಹರಟೆಕೋರರೇ? ಇತ್ಯಾದಿ ಪ್ರಶ್ನೆಗಳೂ ಚರ್ಚೆಯಾಗುತ್ತಿವೆ.
ಇತ್ತೀಚೆಗೆ ಪಾಕಿಸ್ತಾನದ ಸರ್ಕಾರದ ಕೆಲವು ಜಾಲತಾಣಗಳು ಸಹ ಹ್ಯಾಕ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗಿತ್ತು. ಇಂದು ದೇಶಗಳ ನಡುವಿನ ಯುದ್ಧಗಳಿರಲಿ, ದೇಶದ ಒಳಗೆಯೇ ಪಕ್ಷಗಳ ನಡುವಿನ ಚುನಾವಣಾ ಸಮರಗಳಿರಲಿ ಅಂತರ್ಜಾಲವನ್ನೂ ರಣರಂಗಗಳಾಗಿ ಮಾಡಿಕೊಂಡಿರುವುದು ಆಧುನಿಕ ವಿದ್ಯಮಾನ. ನುರಿತ ಹ್ಯಾಕರ್ಗಳು ಯಾವ ಜಾಲತಾಣವನ್ನಾದರೂ ಹ್ಯಾಕ್ ಮಾಡಬಹುದು ಏನನ್ನಾದರೂ ಪೋಸ್ಟ್ಮಾಡಬಹುದು. ಪಕ್ಷಗಳ, ವ್ಯಕ್ತಿಗಳ ಗೌರವ, ಮರ್ಯಾದೆಗಳನ್ನು ಕ್ಷಣಾರ್ಧದಲ್ಲಿ ಕಳೆಯಬಲ್ಲರು. ಇದರಿಂದ ಬಾಧಿತರಾದ ಪಕ್ಷ,ವ್ಯಕ್ತಿ,ಕಂಪನಿಗಳು ಭಾರೀ ಮುಜುಗರ ಅನುಭವಿಸುವ ಸ್ಥಿತಿ ಬರುತ್ತದೆ. ಈ ಹ್ಯಾಕಿಂಗ್ ಸಮರಗಳು ಆಧುನಿಕ ಕಾಲದ ಅಸಹ್ಯಗಳು ಎಂದರೆ ಸರಿಯಾದೀತು. ಈ ಹ್ಯಾಕಿಂಗ್ ಸಮರದಲ್ಲಿ ಬಿಜೆಪಿಯೂ ಸುರಕ್ಷಿತವಲ್ಲ, ಕಾಂಗ್ರೆಸ್, ಆಪ್, ಯಾರೂ ಸುರಕ್ಷಿತವಲ್ಲ, ಪಾಕಿಸ್ತಾನ, ಭಾರತ, ಇರಾನ್, ಅಮೆರಿಕ ಯಾರೂ ನೆಮ್ಮದಿಯಿಂದರಲು ಸಾಧ್ಯವಿಲ್ಲ.
TruthIndia ಕನ್ನಡ