ಸರ್ಕಾರವೊಂದರ ಸಾಧನೆ ವೈಫಲ್ಯವನ್ನು ಅಳೆಯಬೇಕಾದರೆ ನಿಮ್ಮ ಬಳಿ ಸರಿಯಾದ ಡೇಟಾ ಇರಬೇಕು ಅಲ್ಲವೇ? ಉದ್ಯೋಗ, ಕೃಷಿ ಬಿಕ್ಕಟ್ಟು, ಮಾಹಿತಿ ಹಕ್ಕು ಅಂತೇನಾದರೂ ನೀವು ಮಾತನಾಡಬೇಕು ಅಂದರೆನಿಮ್ಮ ಬಳಿ ಮಾಹಿತಿ ಇರಬೇಕು; ಪ್ರಶ್ನೆ ಮಾಡಬೇಕು ಅಂದರೆ ಅಂಕಿಅಂಶ ಇರಬೇಕು. ಭ್ರಷ್ಟ ಅಧಿಕಾರಿಗಳು ಜೈಲಿಗೆ ಹೋದ ಬಗ್ಗೆ, ಕಪ್ಪು ಹಣದ ಲೆಕ್ಕದ ಬಗ್ಗೆ, ವಿಕಾಸ-ಅಚ್ಚೆ ದಿನ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವಾಗುವುದೂ ನಿಮ್ಮ ಬಳಿ ಮಾಹಿತಿ ಇದ್ದಾಗಲೇ ತಾನೆ? ನಿಮ್ಮ ಬಳಿ ಈ ಯಾವ ಮಾಹಿತಿಯೇ ಇಲ್ಲದಂತೆ ಮಾಡಿದರೆ? ಆಗ ಆಲ್ ಈಸ್ ವೆಲ್ ಇಂಡಿಯಾ ತಾನೆ?
ಈ ಹಿಂದಿನ ಯಾವುದೇ ಸರ್ಕಾರ ಮಾಹಿತಿಯ ಮೇಲೆಯೇ ಈ ಪರಿಯಾದ ಹಲ್ಲೆ ನಡೆಸಿಲ್ಲ. ಆದರೆ ಮೋದಿಯ ಸರ್ಕಾರ ನಡೆಸಿದೆ.
ಹಿಂದಿನ ಯುಪಿಎ ಸರ್ಕಾರದ ಗಂಭೀರ ವೈಫಲ್ಯ, ಭ್ರಷ್ಟಾಚಾರ ಹಗರಣಗಳಿಂದಲಾಗಿ, ಕಾರ್ಪೊರೇಟ್ ಪರ- ಜನವಿರೋಧಿ ಆರ್ಥಿಕ ನೀತಿಗಳಿಂದಾಗಿ ಕಾಂಗ್ರೆಸ್ ಹೀನಾಯವಾಗಿ ಪರಾಭವಗೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಿತು. ಅಂದು ಕಾಂಗ್ರೆಸ್ ಸೋಲಿಗೆ ಒಂದು ಮುಖ್ಯ ಪಾತ್ರ ವಹಿಸಿದ್ದು ಡೇಟಾಗಳು ಅಥವಾ ಅಂಕಿಅಂಶಗಳು! ಹೌದು ಇಂದು ನಿರುದ್ಯೋಗ ಕಳೆದ 45 ವರ್ಷದಲ್ಲಿಯೇ ಹೆಚ್ಚಾಗಿದೆ ಎಂದು ವರದಿ ಮಾಡಿದ್ದ NSSO ಅನ್ನು ಒಳಗೊಂಡಂತೆ ಹಲವಾರು ಸಂಸ್ಥೆಗಳು ಕಾಂಗ್ರೆಸ್ ಸರ್ಕಾರದ ಕೆಲಸ ಕಾರ್ಯಗಳ ಕುರಿತು ಹಲವು ಅಂಕಿಅಂಶಗಳನ್ನು ಹೊರಹಾಕಿತ್ತು. ಇದರ ಲಾಭವನ್ನು ಪಡೆದ ಮೋದಿ ಅಧಿಕಾರವಹಿಸಿದ ಮೊದಲ ವರ್ಷದಲ್ಲಿ ಜನರಿಗೆ ಕಾಂಗ್ರೆಸ್ ಮುಕ್ತ ಭಾರತ ಹಾಗೂ ‘ಅಚ್ಚೇ ದಿನ’ದ ಕನಸು ತೋರಿಸಿತ್ತು. ನಂತರದಲ್ಲಿ, ‘ಧರ್ಮ ಅಪಾಯದಲ್ಲಿದೆ, ರಾಮ ಮಂದಿರ ಕಟ್ಟಿಸುತ್ತೇವೆ’ ಎಂದು ಜನರಿಗೆ ದಿಕ್ಕು ತಪ್ಪಿಸುತ್ತಾ ಬಂದಿತು. ಇದರ ವಿರುದ್ಧ ಅಚ್ಚೆ ದಿನ್ ಎಲ್ಲಿ, ವಿಕಾಸ ಎಲ್ಲಿ ಎಂದು ಪ್ರಶ್ನೆಗಳು ಬರುವ ಸಮಯದಲ್ಲೇ ನಮಗೆ ಸಮಯ ಬೇಕು ಎನ್ನುವ ಸಬೂಬು ನೀಡಲಾಯಿತು. ಇದೀಗ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರನ್ನು ಚಿತ್ರಗಳನ್ನು ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಬಳಸಿಕೊಂಡು, ಸೈನಿಕರ ತ್ಯಾಗಗಳನ್ನೂ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾ ಚುನಾವಣೆ ಪೂರ್ವದಲ್ಲಿ ತೋರಿಸಿದ ಕನಸಿನ ಗೋಪುರವನ್ನು ಹಾಗೇ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.
ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ:
ಮಹಾರಾಷ್ಟ್ರ ರಾಜ್ಯದ ವಿಧಾನಸಭೆಯಲ್ಲಿ ಸರ್ಕಾರ ಹೇಳಿಕೊಂಡ ಪ್ರಕಾರ 2018 ರ ಮಾರ್ಚ್ ನಿಂದ ಮೇ ವರೆಗಿನ ಮೂರು ತಿಂಗಳಲ್ಲಿ ಒಟ್ಟು 639 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ ಒಂದೇ ರಾಜ್ಯದ 600 ಕ್ಕೂ ಹೆಚ್ಚು ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಒಟ್ಟಾರೆ ದೇಶದ ಲೆಕ್ಕ? ಆದರೆ ಕೇಂದ್ರ ಸರ್ಕಾರದ ಪ್ರಕಾರ ಅವರ ಬಳಿ ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾವುದೇ ಅಂಕಿಅಂಶ ಇಲ್ಲವಂತೆ! ಇನ್ನು ನೀವು ರೈತರ ಆತ್ಮಹತ್ಯೆ ಬಗ್ಗೆ ಹೇಗೆ ಪ್ರಶ್ನೆ ಮಾಡುತ್ತೀರಿ?
ನಿರುದ್ಯೋಗದ ಬಗ್ಗೆ ಲೆಕ್ಕ ಇಲ್ಲ:
ಅಕಾರ್ಡಿಂಗ್ ಟು ಮೋದಿ ಭಾರತದಲ್ಲಿ ಅದೆಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎಂದರೆ ಸ್ವತಃ ಅವರಿಗೂ ಎಣಿಸಲು ಆಗದೇ ಲೆಕ್ಕ ಕೊಡಲು ಆಗುತ್ತಿಲ್ಲ. ನಿರುದ್ಯೋಗಿಗಳು ಎಷ್ಟಿದ್ದಾರೆ ಎನ್ನು ಅಧಿಕೃತ ಡೇಟಾ ಕೊಡುತ್ತಿಲ್ಲ. ಇತ್ತಿಚಿಗಷ್ಟೇ ಭಾರೀ ಸಂಚಲನ ಮೂಡಿಸಿದ NSSO ನ ಸೋರಿಕೆಯಾದ ಮಾಹಿತಿಯ ಕುರಿತು ನಿಮಗೆ ಈಗಾಗಲೇ ತಿಳಿದಿರಬಹುದು. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಅಧಿಕೃತ ಸಂಸ್ಥೆಯಾದ NSSO ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆ ಗಳಿಸಿದೆ. ಇಡೀ ದೇಶದಲ್ಲಿ ಸಮೀಕ್ಷೆ ನಡೆಸಿ ನಿರುದ್ಯೋಗದ ಕುರಿತು ಅದು ಅಂತಿಮಗೊಳಿಸಿ, ಅಂಕಿಅಂಶ ಆಯೋಗದ ಅಂಕಿತ ಬಿದ್ದ ನಂತರವೂ ಆ ವರದಿಯನ್ನು ಸರ್ಕಾರವೇ ತಡೆ ಹಿಡಿಯಿತು. ಹೀಗೆ ತಡೆ ಹಿಡಿಯಲು ಸೂಕ್ತ ಸಮಜಾಯಿಷಿಯೂ ಅದರ ಬಳಿ ಇರಲಿಲ್ಲ. ಇದರಿಂದ ಮನನೊಂದು ಆಯೋಗದ ಮುಖ್ಯಸ್ಥರಾದ ಪಿ.ಸಿ. ಮೋಹನನ್ ಹಾಗೂ ಜೆವಿ ಮೀನಾಕ್ಷಿ ಅವರು ರಾಜಿನಾಮೆ ನೀಡಿ ಹೊರಬಂದರು. ಇದು ದೊಡ್ಡ ಸುದ್ಧಿಯಾದ ಹಿನ್ನಲೆಯಲ್ಲಿ ನೀತಿ ಆಯೋಗದವರನ್ನು ತಿಪ್ಪೆ ಸಾರಿಸುವ ಸುದ್ಧಿ ಗೋಷ್ಠಿ ನಡೆಸಿದರು. ಅಲ್ಲಿಯೂ ನಿರುದ್ಯೋಗದ ಕುರಿತು ಸರಿಯಾದ ಅಂಕಿಅಂಶ ಇಲ್ಲ ಎಂದು ಒಪ್ಪಿಕೊಂಡು ಸರ್ಕಾರ ಮುಜುಗರಕ್ಕೆ ಒಳಗಾಯಿತು. ಕೆಲವು ತಿಂಗಳ ಕಾಲಾವಕಾಶ ಕೇಳಿರುವ ಕೇಂದ್ರ ಸರ್ಕಾರ ಉದ್ಯೋಗದ ಕುರಿತು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪಕೋಡ ಬೇಯಿಸಿ ಹಂಚಲಿದೆ.
ಮಾಬ್ ಲಿಂಚಿಂಗ್ (ಹೊಡಿಬಡಿ ಗುಂಪುಗಳು ನಡೆಸುವ ಕೊಲೆ) ಕುರಿತು ಮಾಹಿತಿ ಇಲ್ಲ:
ಭಾರತದಲ್ಲಿ ಕಳೆದ ಒಂದೆರಡು ವರ್ಷಗಳಿಂದ ಒಂದು ವಿದ್ಯಮಾನವಾಗಿ ನಡೆಯುತ್ತಿರುವ ಮಾಬ್ ಲಿಂಚಿಂಗ್ ಕುರಿತು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಖಭಂಗವಾಗಿತ್ತು. ಈ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಸಚಿವರಾದ ಹಂಸರಾಜ್ ಆಹಿರ್ ಅವರು ಜುಲೈ 2018 ರಲ್ಲಿ, “ಮಾಬ್ ಲಿಂಚಿಂಗ್ ಕುರಿತು ಸರ್ಕಾರದ ಬಳಿ ಯಾವುದೇ ನಿರ್ಧಿಷ್ಟ ಅಂಕಿಅಂಶದ ಮಾಹಿತಿ ಇಲ್ಲ. ಅದಕ್ಕಾಗಿ ಹೊಸ ಕಾಯಿದೆ ಮಾಡುವ ಅವಶ್ಯಕತೆಯೇ ಇಲ್ಲ ಎಂದರು. ಇನ್ನು ಧರ್ಮದ ಹೆಸರಲ್ಲಿ, ಆಹಾರದ ಹೆಸರಲ್ಲಿ, ಆಯ್ಕೆಯ ಸ್ವಾತಂತ್ರದ ಮೇಲೆ ನಡೆಯುತ್ತಿರುವ ದಾಳಿ ಕೊಲೆಗಳ ಬಗ್ಗೆ ನೀವು ಪ್ರಶ್ನೆ ಮಾಡುವುದಾದರೂ ಹೇಗೆ? ಸರ್ಕಾರ ಸ್ವಾತಂತ್ರದ ರಕ್ಷಣೆಯಲ್ಲಿ ಸೋತಿದೆ ಎಂದು ಯಾರು ಹೇಳುವ ಹಾಗೂ ಇಲ್ಲ!
ಮಾಹಿತಿ ಹಕ್ಕಿಗೂ ಇಲ್ಲಿ ಬೆಲೆ ಇಲ್ಲ!:
2016-17 ಅವಧಿ ಒಂದರಲ್ಲೆ 12,500 ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳು ಪ್ರಧಾನಿ ಅವರ ಕಛೇರಿಗೆ ಬಂದಿದ್ದು ಇದು ಅತಿಹೆಚ್ಚು ಅರ್ಜಿಸ್ವೀಕೃತ ಎಂಬ ದಾಖಲೆಯೂ ಆಗಿದೆ. ಹಲವಾರು ಅರ್ಜಿಗಳಿಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಪ್ರಧಾನ ಮಂತ್ರಿಗಳ ಕಛೇರಿಯಿಂದ ಉತ್ತರಿಸಲಾಗಿದೆ. ಮಾಜಿ ಕೇಂದ್ರ ಮಹಿತಿ ಆಯುಕ್ತರಾದ ಸತೀಶ್ ಗಾಂಧಿಯವರಿಗೇ ಮಾಹಿತಿಯನ್ನು ನಿರಾಕರಿಸಿದೆ. ಮೋದಿ ಅವರಿಗೆ ಸಂಬಂಧಪಟ್ಟ ನೂರಾರು ನಿರ್ಧಿಷ್ಟ ಪ್ರಶ್ನೆಗಳಿಗೆ ಮಾಹಿತಿಯನ್ನು ನಿರಾಕರಿಸಿದೆ. ಅದರಲ್ಲಿ ಮೋದಿ ಅವರ ವಿದ್ಯಾರ್ಹತೆ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನಿಡಿಯೇ ಇಲ್ಲ.
ರಿಸರ್ವ್ ಬ್ಯಾಂಕ್ ಗವರ್ನರ್ ಗೂ ಮಾಹಿತಿ ಪಡೆಯುವ ಹಕ್ಕಿಲ್ಲ!
ಮಾಜಿ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ದೊಡ್ಡ ದೊಡ್ಡ ಕುಬೇರರಿಗೆ ನೀಡಲಾದ ಸವಲತ್ತು ಎನ್.ಪಿ.ಎ (ಮರುಪಾವತಿ ಆಗದ ಸಾಲ) ಕುರಿತು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನ ಮಂತ್ರಿ ಕಛೇರಿಯು ಉತ್ತರ ನೀಡಿಲ್ಲ.
ಏರ್ ಇಂಡಿಯಾಗೂ ತಟ್ಟಿದ ಬಿಸಿ:
ಇನ್ನು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಸುದ್ದಿ ಮಾಡಿದ್ದೆಂದರೆ ಪ್ರಧಾನಿ ಮೋದಿಯವರ ವಿದೇಶ ಪ್ರವಾಸಗಳು. ಜನರು ತಮಾಷೆ ಮಾಡಿಕೊಂಡು ನಗುವಷ್ಟರ ಮಟ್ಟಿಗೆ ಮೋದಿ ಟೂರ್ಹೊಡೆದರು, ಅದೂ ಸಾರ್ವಜನಿಕರ ಹಣದಲ್ಲಿ. ಮೋದಿ ನಡೆಸುವ ವಿದೇಶ ಪ್ರವಾಸ ಮತ್ತು ಅದರ ಖರ್ಚುವೆಚ್ಚಗಳ ಲೆಕ್ಕವನ್ನು ಬಹಿರಂಗಪಡಿಸಬಾರದು ಎಂದು ಪ್ರಧಾನ ಮಂತ್ರಿ ಕಛೇರಿಯಿಂದ ಏರ್ ಇಂಡಿಯಾ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆಯೆಂದರೆ ಯಾಕಿರಬಹುದು?
ನೋಟು ಅಮಾನ್ಯೀಕರಣ ರಾತ್ರೋರಾತ್ರಿ ನಡೆಸಿದ ಅಮಾನ್ಯೀಕರಣ ಎಂಬ ದಾಳಿಯಿಂದಾಗಿ ಕಪ್ಪು ಹಣ ಬರುತ್ತದೆ, ಕ್ಯಾಶ್ ಲೆಸ್ ಇಂಡಿಯಾ ಆಗುತ್ತೆ, ಭಯೋತ್ಪಾದನೆ ನಿರ್ಮೂಲನೆ ಆಗುತ್ತೆ, ಭ್ರಷ್ಟರು ಜೈಲಿಗೆ ಹೋಗುತ್ತಾರೆ, ನನಗೆ 50 ದಿನ ಸಮಯ ಕೊಡಿ ಎಂದು ಮೋದಿ ಹೇಳಿದ್ದರು. ಆದರೆ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ (2018 ಆಗಷ್ಟ್) ಬ್ಯಾಂಕಿಗೆ ಅಮಾನ್ಯವಾಗಿದ್ದ ಶೇಕಡಾ 99.3ರಷ್ಟು ನೋಟುಗಳು ವಾಪಾಸ್ ಆಗಿದ್ದವು. ಇದರ ಅರ್ಥ ಕಪ್ಪು ಹಣ ಬರಲೇ ಇಲ್ಲ. ಆದರೆ ಈ ವರಗೂ ಭಯೋತ್ಪಾದನೆ, ಭ್ರಷ್ಟರ ಬೇಟೆ, ಕಪ್ಪು ಹಣ, ಕುರಿತು ಯಾವ ಮಾಹಿತಿಯನ್ನು ಸರ್ಕಾರ ನೀಡುತ್ತಿಲ್ಲ. ಅಲ್ಲದೆ ಇದರಿಂದಾದ ಸಮಗ್ರ ಆರ್ಥಿಕ ಪರಿಣಾಮದ ಕುರಿತೂ ಆರ್.ಬಿ.ಐ/ಸರ್ಕಾರ ನಿರ್ಧಿಷ್ಟ ಅಂಕಿಸಂಖ್ಯೆಯ ಮಾಹಿತಿ ನೀಡಿಲ್ಲ, ಬದಲಾಗಿ 150ಕ್ಕೂ ಹೆಚ್ಚು ಬಡ ಅಮಾಯಕರು ಸರದಿ ಸಾಲಿನಲ್ಲಿ ನಿಂತು ಪ್ರಾಣ ಕಳೆದುಕೊಂಡರು. ಇನ್ನೂ ವಿಚಿತ್ರವೆಂದರೆ ಹೊಸ ನೋಟಿಗಾಗಿ ಸರದಿ ಸಾಲಿನಲ್ಲಿ ನಿಂತು ಮೃತಪಟ್ಟವರ ಕುರಿತು ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದೆಲ್ಲವೂ ಸರ್ಕಾರ ನಡೆಸಿದ ಆರ್ಥಿಕ ಭಯೋತ್ಪಾದನೆ ಅಲ್ಲದೇ ಮತ್ತೇನು? ಆದರೆ ಪ್ರಶ್ನೆ ಮಾಡಲು ಮಾಹಿತಿಯೇ ಇಲ್ಲವಲ್ಲ?
ಜಿಡಿಪಿ ಆಟ:
ಜಿಡಿಪಿಯನ್ನು ಲೆಕ್ಕ ಮಾಡುವ ವಿಧಾನವನ್ನು ಕೇಂದ್ರ ಈಗಾಗಲೇ ಬದಲಿಸಿದೆ. ಮೂಲ ವರ್ಷವನ್ನು (ಬೇಸ್ ಈಯರ್) 2004-05 ರಿಂದ 2017-18 ಕ್ಕೆ ಬದಲಾಯಿಸಿದೆ. ಅದರ ಪ್ರಕಾರ ಜಿಡಿಪಿಯ ಲೆಕ್ಕ ಹೇಗೆ ಅನ್ನುವ ವಿಧಾನದ ಕುರಿತು ನಿಖರವಾದ ಮಾಹಿತಿ ಸರ್ಕಾರದಿಂದ ಇಲ್ಲ. ಇದರಿಂದ ತಾವು ಯುಪಿಎ ಗಿಂತ ಉತ್ತಮ ಸಾಧನೆ ಮಾಡಿದ್ದೇವೆ ಎಂದು ಕೇಂದ್ರ ಹೇಳಿಕೊಂಡಿತ್ತು. ಆ ನಿಟ್ಟಿನಲ್ಲಿ ಬ್ಯಾಕ್ ಸಿರೀಸ್ ನ್ನು (ಹಿಂದಿನ ಅವಧಿಗೆ ಹೋಲಿಸಿ ನೋಡುವ ಕ್ರಮ) ಬಿಡುಗಡೆ ಮಾಡಿ ಎಂದು ಎಷ್ಟೇ ಒತ್ತಾಯಿಸಿದರೂ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಚುನಾವಣೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇದ್ದಾಗ ಮಾಹಿತಿ ಬಹಿರಂಗ ಪಡಿಸಿದ್ದು, ಯುಪಿಎಗಿಂತ ಉತ್ತಮ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಹೂಡಿಕೆಯು ಶೇಕಡಾ 38 ರಿಂದ ಶೇಕಡಾ 30.3ಕ್ಕೆ ಇಳಿಕೆಯಾಗಿರುವ ಸಂದರ್ಭದಲ್ಲಿ ಜಿಡಿಪಿ ಏರಿಕೆ ಆಗಿರುವುದು ಅಷ್ಟು ಸತ್ಯವಲ್ಲ; ಇದು ಸರಿಯಾದ ಪ್ರಯೋಗಕ್ಕೂ ಒಳಪಟ್ಟಿಲ್ಲ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಆಯೋಗದ ಮುಖ್ಯಸ್ಥರಾಗಿರುವ ಪ್ರಣವ್ ಸೇನ್ ಅವರು ಒಪ್ಪಿಕೊಂಡಿದ್ದಾರೆ.
ಜಂಟಿ ಲೂಟಿ
ರೆಪ್ರೆಸೆಂಟೇಷನ್ಸ್ ಆಫ್ ಪೀಪಲ್ಸ್ ಆಕ್ಟ್ ಪ್ರಕಾರ ರಾಜಕೀಯ ಪಕ್ಷಗಳು ಹೊರದೇಶಗಳಿಂದ ಹಣವನ್ನು ಪಡೆಯುವ ಹಾಗಿಲ್ಲ. ಇದನ್ನು ಮೀರಿ ಕಾನೂನನ್ನು ಉಲ್ಲಂಘನೆ ಮಾಡಿ ಹಣ ಪಡೆದಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ 2014 ರಲ್ಲಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಹಣ ಪಡೆಯುವುದನ್ನು ನಿಲ್ಲಿಸದೆ ಮಾರ್ಗವನ್ನು ಸುಗಮವಾಗಿಸಲು ಮಾರ್ಚ್ 2018ರಂದು ಪಾರ್ಲಿಮೆಂಟ್ ನಲ್ಲಿ ವಿದೇಶಗಳಿಂದ ರಾಜಕೀಯ ಪಕ್ಷಗಳು ಹಣ ಪಡೆಯಬಹುದೆಂಬ ವಿಧೇಯಕವನ್ನು ಯಾವುದೇ ಚರ್ಚೆ ಇಲ್ಲದೆ ಕಾಂಗ್ರೆಸ್ ಸಮ್ಮತಿಯಿಂದಲೂ ಜಾರಿ ಮಾಡಲಾಗಿದೆ. ಅಲ್ಲದೆ 1976ರಿಂದಲೂ ವಿದೇಶಿ ಹಣದ ಮೂಲವನ್ನು ಇದೀಗ ಕೇಂದ್ರದ ಹೊಸ ಕಾಯಿದೆ ಅನ್ವಯ ನಾವ್ಯಾರೂ ಪ್ರಶ್ನೆ ಮಾಡುವಂತಿಲ್ಲ. ಇನ್ನು ಚುನಾವಣೆಗೆ ಸ್ಪರ್ಥಿಸುವ ಪಕ್ಷಗಳಿಗೆ ಹಣ ಯಾರು ನೀಡುತ್ತಾರೆ ಎನ್ನುವ ಮಾಹಿತಿಯನ್ನು ಎಲೆಕ್ಟೋರಲ್ ಬಾಂಡ್ ನಲ್ಲಿ ಇನ್ನುಮುಂದೆ ನಿಮಗೆ ಸಿಗುವುದಿಲ್ಲ! ಆದರೆ ಕ್ವಿಂಟ್ ನ ಕಾರ್ಯಚರಣೆಯಿಂದಾಗಿ ಬಾಂಡ್ ನಲ್ಲಿ ಕಾಣಿಸದ ಅಕ್ಷರ ಮತ್ತು ಸಂಖ್ಯೆಗಳುಳ್ಳ ಕೋಡ್ ಇರುವುದಾಗಿ ಮಾಹಿತಿ ಹೊರಹಾಕಿದೆ. ಅಂದರೆ ಹಣ ನೀಡಿದವರ ಮಾಹಿತಿ ಬಿಜೆಪಿಗೆ ಇರುತ್ತದೇ ಹೊರತು ಸಾಮಾನ್ಯ ಜನರಿಗಲ್ಲ. ಹೀಗಾಗಿ ನೀವು ಈಗ ಅಂಬಾನಿ, ಅದಾನಿಗಳ ಪಾತ್ರವನ್ನು ನೇರವಾಗಿ ಪ್ರಶ್ನೆ ಮಾಡುವ ಹಾಗಿಲ್ಲ.
ಒಟ್ಟಾರೆ, ನಿಖರವಾದ ಡೇಟಾ ಇಲ್ಲದೆ ಯಾವುದೇ ಸರ್ಕಾರದ ಸಾಧನೆ ವೈಫಲ್ಯಗಳೇನು ಎಂಬ ತೀರ್ಮಾನಕ್ಕೆ ಬರುವುದು ಜನತೆಗೆ ಕಷ್ಟ. ಆಳುವ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಮತ್ತು ಜನರ ಪ್ರಜಾಸತ್ತಾತ್ಮಕ ಪ್ರಶ್ನಿಸುವ ಹಕ್ಕನ್ನು ಹತ್ತಿಕ್ಕಲು ಡೇಟಾಗಳ ಲೂಟಿಗೆ ಕೈ ಹಾಕಿದೆ. ಇದು ಮೋದಿ ಸರ್ಕಾರದ ದೊಡ್ಡ ಹಗರಣವೂ ಹೌದು, ದೇಷದ ಜನತೆಯನ್ನು ಸೋಲಿಸಲು ನಡೆಸಿರುವ ದೊಡ್ಡ ಷಢ್ಯಂತ್ರವೂ ಹೌದು.
– ಸರೋವರ್ ಬೆಂಕಿಕೆರೆ
(ಲೇಖಕರು ಯುವಜನ ಚಳವಳಿಯಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತರು)