ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯ ಬಳಿಕ, ಈವರೆಗೆ ಸುಮಾರು 20 ದಿನಗಳ ಕಾಲ ನಮ್ಮ ರಾಜಕಾರಣ, ಮಾಧ್ಯಮ ಮತ್ತು ಸಾರ್ವಜನಿಕ ಬದುಕಿನ ಪ್ರಮುಖ ಚರ್ಚೆಯ ಸಂಗತಿಯಾಗಿರುವುದು ಭಯೋತ್ಪಾದನೆ, ಯುದ್ಧ, ಪಾಕಿಸ್ತಾನ ಮತ್ತು ಪ್ರಧಾನಿ ಮೋದಿಯವರ ಕುರಿತ ವಿಷಯಗಳೇ. ಯೋಧರ ಬಲಿದಾನ ಮತ್ತು ಆ ಬಳಿಕದ ಗಡಿಯಂಚಿನ ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಇಂತಹದ್ದೊಂದು ಚರ್ಚೆ ಸಹಜವೇ.
ಆದರೆ, ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಉಗ್ರರ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆಸಿದ ಬಾಲಾಕೋಟ್ ವಾಯುದಾಳಿಯ ಸಂಗತಿಗಳು, ದೇಶ ಇಂದು ಎದುರಿಸುತ್ತಿರುವ ಭಯೋತ್ಪಾದನೆಯಂತಹ ಗಂಭೀರ ಸವಾಲಿನಷ್ಟೇ ಪ್ರಮುಖವಾದ ಇತರ ಸಂಗತಿಗಳನ್ನು ಸಂಪೂರ್ಣ ಬದಿಗೆ ಸರಿಸಿಬಿಟ್ಟಿವೆ ಎಂಬುದು ವಾಸ್ತವ. ಅದರಲ್ಲೂ ಭವಿಷ್ಯದ ಐದು ವರ್ಷಗಳ ದೇಶದ ನೀತಿನಿರೂಪಣೆಗಳು, ಆಗುಹೋಗುಗಳನ್ನು ನಿರ್ಧರಿಸುವ ಮಹತ್ವದ ಮಹಾ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ವಿಷಯಗಳಾಗಿ ಚರ್ಚೆಗೆ ಬರಲೇಬೇಕಿದ್ದ ಹಲವು ಸಂಗತಿಗಳು ಯುದ್ಧೋನ್ಮಾದ ಆವೇಶದಲ್ಲಿ ಸಂಪೂರ್ಣ ಮೂಲೆಗುಂಪಾಗಿಬಿಟ್ಟಿವೆ. ಯುದ್ಧದಾಹಿ ಟಿವಿ ಮಾಧ್ಯಮ ಮತ್ತು ಆವೇಶದ ದೇಶಭಕ್ತಿಯ ಸಾಮಾಜಿಕ ಜಾಲತಾಣಗಳ ಟ್ರೆಂಟ್ ನಡುವೆ ಜನಸಾಮಾನ್ಯರ ದಿನನಿತ್ಯದ ಬದುಕಿಗೇ ಸಂಚಕಾರ ತಂದಿರುವ ಈ ಸರ್ಕಾರದ ಅವಧಿಯ ಪ್ರಮುಖ ವಿಷಯಗಳು ಮೂಲೆಗುಂಪಾಗಿವೆ.
ಮತದಾನದ ಹೊತ್ತಲ್ಲಿ ಮತದಾರನ ಬೆರಳ ತುದಿಯನ್ನು ನಿರ್ದೇಶಿಸುವ ಮಟ್ಟಿಗೆ ಪ್ರಬಲವಾಗಿರುವ ಅಂತಹ ಪ್ರಮುಖ ಸಂಗತಿಗಳ ಪಟ್ಟಿ ಇಲ್ಲಿದೆ.
ಕೃಷಿ ವಲಯದ ಬಿಕ್ಕಟ್ಟು
ಕಳೆದ ಹದಿನೈದು ವರ್ಷಗಳಲ್ಲೇ ಅತ್ಯಂತ ಕನಿಷ್ಠ ದರಕ್ಕೆ ಕುಸಿದಿರುವ ಕೃಷಿ ವಲಯದ ಪ್ರಗತಿ ದರ, ಕಳೆದ ಐದು ವರ್ಷಗಳ ಅವಧಿಯಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೃಷಿ ವಲಯಕ್ಕೆ ನೀಡಿದ ಕೊಡುಗೆ ಏನು ಎಂಬುದಕ್ಕೆ ನಿದರ್ಶನ. ಬೆಂಬಲ ಬೆಲೆ, ರಸಗೊಬ್ಬರ ಮತ್ತು ಕೃಷಿ ಉಪಕರಣಗಳ ಸಹಾಯಧನ, ಬೆಳೆ ವಿಮೆ ಮುಂತಾದವು ಮಧ್ಯವರ್ತಿಗಳು, ಖಾಸಗೀ ಕಾರ್ಪೊರೇಟ್ ಕಂಪನಿಗಳು ಹಾಗೂ ದಲ್ಲಾಳರ ಪರವಾಗಿವೆ ವಿನಃ ಅಸಲೀ ರೈತರ ಪರವಾಗಿಲ್ಲ ಎಂಬುದಕ್ಕೆ ವರ್ಷದಿಂದ ವರ್ಷಕ್ಕೆ ರೈತ ಆತ್ಮಹತ್ಯೆ ಪ್ರಮಾಣ ಏರುಗತಿಯಲ್ಲಿರುವುದೇ ನಿದರ್ಶನ. ಜೊತೆಗೆ ಬಹುತೇಕ ನಗದು ವ್ಯವಹಾರದ ಮೇಲೆ ನಿಂತಿದ್ದ ಕೃಷಿ ವಹಿವಾಟಿಗೆ ದೊಡ್ಡ ಹೊಡೆತ ಕೊಟ್ಟದ್ದು ಮೋದಿಯವರ ನೋಟು ಅಮಾನ್ಯೀಕರಣ. ಕೃಷಿಕರು ಮತ್ತು ಕೃಷಿ ಕೂಲಿಗಳ ಬದುಕನ್ನು ಹೈರಾಣು ಮಾಡಿದ ಶ್ರೇಯ ನೋಟು ಅಮಾನ್ಯೀಕರಣಕ್ಕೆ ಸಲ್ಲಲೇಬೇಕು. ರೈತರ ಆದಾಯವನ್ನು 2022ರ ಹೊತ್ತಿಗೆ ಮೂರು ಪಟ್ಟು ಹೆಚ್ಚಿಸುವ ಭರವಸೆ ನೀಡಿದ್ದ ಮೋದಿಯವರ ಈ ಮಹಾ ವೈಫಲ್ಯ ಈ ಬಾರಿಯ ಚುನಾವಣೆಯ ಚರ್ಚೆಯಾಗಬೇಕಿದೆ.
ನೋಟು ಅಮಾನ್ಯೀಕರಣ
ಮೋದಿಯವ ಐತಿಹಾಸಿಕ ಸಾಧನೆ ಎಂದು ಬಿಂಬಿಸಲಾಗುತ್ತಿರುವ ನೋಟು ಅಮಾನ್ಯೀಕರಣ ಒಟ್ಟಾರೆ ದೇಶದ ಆರ್ಥಿಕತೆ ಮತ್ತು ಪ್ರಗತಿಗೆ ಕೊಟ್ಟ ಪೆಟ್ಟು ಏನು ಎಂಬುದನ್ನು ಈಗಾಗಲೇ ಸ್ವತಃ ಆರ್ ಬಿ ಐ ವರದಿಯೇ ಅಧಿಕೃತವಾಗಿ ಹೇಳಿದೆ. ಕಪ್ಪುಹಣ, ಭಯೋತ್ಪಾದಕ ಸಂಘಟನೆಗಳ ಆರ್ಥಿಕ ವಹಿವಾಟಿನ ಮೇಲೆ ನಡೆಸಿದ ಸರ್ಜಿಕಲ್ ದಾಳಿ ಎಂದೇ ಮೋದಿಯವರು ಹೇಳಿಕೊಂಡಿದ್ದ ಈ ಕ್ರಮ, ಎಷ್ಟರಮಟ್ಟಿಗೆ ಆ ಗುರಿ ಸಾಧಿಸಿದೆ ಎಂಬುದಕ್ಕೆ ನಿದರ್ಶನಗಳು ಸಾಲುಸಾಲು ಕಣ್ಣಮುಂದಿವೆ. ಇದು ಒಂದು ಕಡೆಯಾದರೆ, ದೇಶದ ಕೃಷಿಕರು, ಕೃಷಿ ಕಾರ್ಮಿಕರು, ಚಿಲ್ಲರೆ ವಹಿವಾಟುದಾರರು, ಸಣ್ಣಪುಟ್ಟ ವ್ಯಾಪಾರಿಗಳು ಮುಂತಾದ ಜನಸಾಮಾನ್ಯರ ಬದುಕಿನ ಮೇಲೆ ನೋಟು ಅಮಾನ್ಯೀಕರಣ ನಡೆಸಿದ ಸರ್ಜಿಕಲ್ ದಾಳಿ ದೊಡ್ಡದು. ಈ ಬಾರಿಯ ಚುನಾವಣೆಯಲ್ಲಿ ಅಸಲೀ ವಿಷಯವಾಗಿರಬೇಕಿರುವುದು ಬಡವರ ಬದುಕಿನ ಮೇಲೆ ನಡೆದ ಈ ಸರ್ಜಿಕಲ್ ದಾಳಿ. ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದ ಮೋದಿಯವರ ವಿವೇಚನಾಹೀನ ಈ ಕ್ರಮ ಮಹಾಚುನಾವಣೆಯ ಪ್ರಮುಖ ವಿಷಯವಾಗಬೇಕಿದೆ.
ನಿರುದ್ಯೋಗ ಬಿಕ್ಕಟ್ಟು
ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣಕ್ಕೆ ಏರಿದೆ ಎಂದು ಕೆಲವೇ ತಿಂಗಳ ಹಿಂದೆ ಕೇಂದ್ರ ಸರ್ಕಾರದ ಅಂಕಿಅಂಶಗಳೇ ಬಹಿರಂಗಪಡಿಸಿದ್ದವು. ಇದೀಗ ಕಳೆದ ಆರು ತಿಂಗಳಲ್ಲಿ ಆ ಪ್ರಮಾಣ ಇನ್ನಷ್ಟು ಹೆಚ್ಚಳವಾಗಿದೆ ಎಂದು ಸಿಎಂಐಇ ವರದಿ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿಯವರು, ಐದು ವರ್ಷಗಳ ತಮ್ಮ ಒಟ್ಟಾರೆ ಅವಧಿಯಲ್ಲಿ ಸೃಷ್ಟಿಮಾಡಿರುವ ಉದ್ಯೋಗಗಳ ಪ್ರಮಾಣ 2 ಲಕ್ಷವನ್ನೂ ಮೀರಿಲ್ಲ. ಈ ನಡುವೆ ನೋಟು ಅಮಾನ್ಯೀಕರಣದಂತಹ ಪ್ರಮಾದದಿಂದಾಗಿ 2016ರಿಂದ ಈವರೆಗೆ ಕಾರ್ಪೊರೇಟ್ ಮತ್ತು ಉತ್ಪಾದನಾ ವಲಯದಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟ ಸಂಭವಿಸಿದೆ. ದೇಶದ ಮತದಾರರಲ್ಲಿ ಶೇ.40ರಷ್ಟು ಪ್ರಮಾಣದಲ್ಲಿರುವ ಯುವಕರ ಬದುಕು ಮತ್ತು ಭವಿಷ್ಯದ ಪ್ರಶ್ನೆಯಾದ ಈ ನಿರುದ್ಯೋಗ ಮತ್ತು ಉದ್ಯೋಗ ನಷ್ಟದ ವಿಷಯ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕಿದೆ.
ಪೆಟ್ರೋಲ್- ಗ್ಯಾಸ್ ಬೆಲೆ ಏರಿಕೆ
ಬೆಲೆ ಏರಿಕೆಗೆ ಕಡಿವಾಣ ಹಾಕುವ ಘೋಷಣೆಯೊಂದಿಗೇ ಅಧಿಕಾರಕ್ಕೆ ಬಂದಿರುವ ಮೋದಿ ಅವರ ಸರ್ಕಾರದ ಅವಧಿಯಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ 1000 ರೂ. ಗಡಿ ದಾಟಿತು. 2014ಕ್ಕೆ ಮುನ್ನ ದಶಕಗಳ ಕಾಲ ಕೇವಲ 450 ರೂ. ಆಸುಪಾಸಿನಲ್ಲಿದ್ದ ಸಿಲಿಂಡರ್ ದರ ಇದೀಗ ಕೇವಲ ಐದೇ ವರ್ಷದಲ್ಲಿ ದುಪ್ಪಟ್ಟಾಗಿದ್ದು, ಸಬ್ಸಿಡಿ ಸಹಾಯಧನ ಕೂಡ ಗ್ರಾಹಕರಿಗೆ ಕನಸಾಗಿದೆ. ಇನ್ನು ಪೆಟ್ರೋಲ್ ಡೀಸೆಲ್ ಬೆಲೆ ಕೂಡ 80 ರೂ. ಆಸುಪಾಸಿನಲ್ಲಿದ್ದು, ಜಾಗತಿಕ ಕಚ್ಛಾತೈಲ ಬೆಲೆ ಕುಸಿತದ ಹೊರತಾಗಿಯೂ ಸರ್ಕಾರ ಇಂಧನ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ನೀಡುತ್ತಿದೆ. ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವ ಸರ್ಕಾರದ ಇಂತಹ ಜನವಿರೋಧಿ ನೀತಿಯು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಬೇಕಿದೆ.
ಅರಣ್ಯ ಹಕ್ಕು ಕಾಯ್ದೆ ವಂಚನೆ
ಆದಿವಾಸಿಗಳು ಮತ್ತು ಇತರ ಅರಣ್ಯವಾಸಿ ಜನಸಮುದಾಯಗಳ ಭೂಮಿ ಹಕ್ಕನ್ನು ಮಾನ್ಯ ಮಾಡುವ 2006ರ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಮಂಜೂರಾತಿ ಕೋರಿ ಸಲ್ಲಿಸಿದ್ದ ಲಕ್ಷಾಂತರ ಅರ್ಜಿಗಳನ್ನು ಏಕಾಏಕಿ ವಜಾ ಮಾಡಲಾಗಿತ್ತು. ಪರಿಣಾಮವಾಗಿ, ಇದೀಗ 11 ಲಕ್ಷ ಅರ್ಜಿದಾರರನ್ನು ಅವರ ಕುಟುಂಬದೊಂದಿಗೆ ಅರಣ್ಯ ಪ್ರದೇಶದಿಂದ ಹೊರದಬ್ಬಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಅದರಿಂದಾಗಿ ಸುಮಾರು 20 ಲಕ್ಷ ಮಂದಿ ನಿರಾಶ್ರಿತರಾಗಿ ಬೀದಿಗೆ ಬೀಳಲಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 12 ವರ್ಷ ಕಳೆದರೂ ನ್ಯಾಯಯುತವಾಗಿ ಅರ್ಹರಿಗೆ ಅದರ ಪ್ರಯೋಜನ ದೊರಕಿಸಿಕೊಡುವಲ್ಲಿ ಎಲ್ಲಾ ಸರ್ಕಾರಗಳೂ ವಿಫಲವಾಗಿವೆ. ಇದೀಗ ಮೋದಿ ಅವರ ಸರ್ಕಾರ, ಅರಣ್ಯವಾಸಿ ಆದಿವಾಸಿಗಳ ಪರ ನ್ಯಾಯಾಲಯದಲ್ಲಿ ವಕಾಲತು ವಹಿಸದೇ ಮರಣಶಾಸನವಾಗಿರುವ ತೀರ್ಪು ಹೊರಬರಲು ಕಾರಣವಾಗಿದೆ. ಸಮಾಜದ ಅತ್ಯಂತ ಶೋಷಿತ ಮತ್ತು ನಿರ್ಲಕ್ಷಿತ ಸಮುದಾಯಗಳ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳುವ ಸರ್ಕಾರದ ಈ ಹೊಣೆಗೇಡಿ ನಡೆ ಈ ಬಾರಿಯ ಚುನಾವಣಾ ವಿಷಯವಾಗಬೇಕಿದೆ.
ಬಹುಕೋಟಿ ರಾಫೇಲ್ ಹಗರಣ
ಬರೋಬ್ಬರಿ 36 ಸಾವಿರ ಕೋಟಿ ಮೊತ್ತದ ಹಣಕಾಸು ಹಗರಣದ ಆರೋಪ ಕೇಳಿಬಂದಿರುವ ರಾಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಕೇಂದ್ರದ ಮೋದಿ ಸರ್ಕಾರ, ದೇಶದ ಜನಸಾಮಾನ್ಯರನ್ನು ಮಾತ್ರವಲ್ಲ; ಸುಪ್ರೀಂಕೋರ್ಟನ್ನೇ ತಪ್ಪುದಾರಿಗೆ ಎಳೆದಿತ್ತು. ಫ್ರಾನ್ಸ್ ಮತ್ತು ಭಾರತ ಸರ್ಕಾರದ ನಡುವಿನ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ಹಿಂದಿನ ಯುಪಿಎ ಸರ್ಕಾರದ ಅವಧಿಗಿಂತ 36 ಸಾವಿರ ಕೋಟಿ ಅಧಿಕ ಮೊತ್ತಕ್ಕೆ ವಿಮಾನ ಕೊಳ್ಳಲು ಒಪ್ಪಿರುವ ಹಿಂದೆ ಪ್ರಧಾನಿ ಅವರ ಆಪ್ತ ಅಂಬಾನಿ ಕಂಪನಿಗೆ ಲಾಭ ಮಾಡಿಕೊಡುವ ಉದ್ದೇಶವಿದೆ. ಆ ಕಾರಣಕ್ಕೆ ಸ್ವತಃ ಪ್ರಧಾನಿ ಕಾರ್ಯಾಲಯ ನಿಯಮ ಮೀರಿ ಒಪ್ಪಂದದಲ್ಲಿ ಮೂಗು ತೂರಿಸಿದೆ ಎಂಬುದನ್ನು ಸ್ವತಃ ರಕ್ಷಣಾ ಖಾತೆಯ ಹಿರಿಯ ಅಧಿಕಾರಿಗಳೇ ದಾಖಲೆ ಸಹಿತ ಬಹಿರಂಗಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ದೇಶದ ರಕ್ಷಣೆಯ ಹೆಸರಿನಲ್ಲಿ ನಡೆದಿರುವ ಈ ಹಗರಣ ಚರ್ಚೆಯಾಗಲೇಬೇಕಿದೆ.