ರಾಜ್ಯಾದ್ಯಂತ ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ಸಾಕಷ್ಟು ಸುದ್ದಿಮಾಡಿದ್ದ ಮಂಗನಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್ ಡಿ) ಒಂದು ತಿಂಗಳ ಬಿಡುವಿನ ಬಳಿಕ ಮತ್ತೆ ಸದ್ದು ಮಾಡಿದೆ. ಡಿಸೆಂಬರ್-ಜನವರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ 12 ಮಂದಿಯನ್ನು ಬಲಿತೆಗೆದುಕೊಂಡಿದ್ದ ರೋಗ ನಂತರ ಹತೋಟಿಗೆ ಬಂದಿತ್ತು. ಇದೀಗ, ಅದೇ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನದಲ್ಲಿ ನಾಲ್ವರು ರೋಗಕ್ಕೆ ಬಲಿಯಾಗಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಮಣಿಪಾಲದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂಬುದನ್ನು ಈ ಎರಡನೇ ಸುತ್ತಿನ ಸರಣಿ ಸಾವುಗಳು ಅನಾವರಣಗೊಳಿಸಿವೆ. ಜಿಲ್ಲಾ ಆರೋಗ್ಯ ಇಲಾಖೆ ಅರಳಗೋಡು ಸೇರಿದಂತೆ ಮಂಗಗಳು ಸಾವುಕಂಡ ಪ್ರದೇಶದಲ್ಲಿ ಈಗಾಗಲೇ ಎರಡು ಬಾರಿ ವಾಕ್ಸಿನೇಷನ್ ಮಾಡಿದ್ದರೂ, ಲಸಿಕೆ ನೀಡಿದ ಜನಗಳೇ ಇದೀಗ ದಿಢೀರನೇ ಕಾಯಿಲೆ ಉಲ್ಬಣವಾಗಿ ಸಾವುಕಂಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಸಾವು ಕಂಡಿರುವ ನಾಲ್ವರ ಪೈಕಿ ಮೂವರು ಎರಡು ಬಾರಿ ಲಸಿಕೆ ಪಡೆದುಕೊಂಡಿದ್ದರು. ಆದರೂ, ಅವರಿಗೆ ಜ್ವರ ಕಾಣಿಸಿಕೊಂಡು ಎರಡು- ಮೂರು ದಿನದಲ್ಲೇ ಅತಿವೇಗದಲ್ಲಿ ರೋಗ ಉಲ್ಬಣಗೊಂಡು, ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಸಾವುಕಂಡಿದ್ದಾರೆ.
ದಾಖಲೆಯ ಸರಣಿ ಸಾವು:
ಡಿಸೆಂಬರ್ ಕೊನೆಯವಾರ ಮತ್ತು ಜನವರಿ ಮೊದಲ ಅರ್ಧಭಾಗದ ವರೆಗೆ ಅರಳಗೋಡು ವ್ಯಾಪ್ತಿಯಲ್ಲಿ ಮಂಗನಕಾಯಿಲೆಗೆ 12 ಮಂದಿ ಬಲಿಯಾಗಿದ್ದರು. ಆದರೆ ಜಿಲ್ಲಾಡಳಿತ ಕೇವಲ ಎಂಟು ಮಂದಿ ಮಾತ್ರ ಮಂಗನಕಾಯಿಲೆಯಿಂದ ಸತ್ತಿದ್ದು, ಉಳಿದವರು ಮೂತ್ರಕೋಶ ವೈಫಲ್ಯ, ಹೃದಯಾಘಾತ ಮುಂತಾದ ಕಾರಣಗಳಿಂದ ಸತ್ತಿದ್ದು ಎಂದು ಜಿಲ್ಲಾಡಳಿತ ಹೇಳಿತ್ತು. ಇದೀಗ ಸಾವಿನ ಸಂಖ್ಯೆ 16ಕ್ಕೆ ಏರಿದ್ದು, ಕಾಯಿಲೆಯ 60 ವರ್ಷದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಇಷ್ಟೊಂದು ಸಂಖ್ಯೆಯ ಸಾವು ಸಂಭವಿಸಿದ ದಾಖಲೆ ಇಲ್ಲ.
ಜಿಲ್ಲೆಯ ಸಾಗರ ಸೇರಿದಂತೆ ಎಲ್ಲಾ ಏಳು ತಾಲೂಕುಗಳಲ್ಲೂ ಮಂಗಗಳ ಸಾವು ಸಂಭವಿಸಿ, ಮಂಗನಕಾಯಿಲೆಯ ಸೋಂಕು ಹರಡಿದ ಆತಂಕದ ನಡುವೆಯೂ, ಜಿಲ್ಲಾಡಳಿತ ರೋಗ ಹತೋಟಿ ಮತ್ತು ಮುನ್ನೆಚ್ಚರಿಕೆಗೆ ಅಗತ್ಯ ಪ್ರಮಾಣದಲ್ಲಿ ಗಮನ ಹರಿಸದೆ, ಸಹ್ಯಾದ್ರಿ ಉತ್ಸವದಲ್ಲಿ ನಿರತವಾಗಿತ್ತು. ಆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಎಫ್ ಡಿ ಒಕ್ಕೂಟ ರಾಜ್ಯ ಹೈಕೋರ್ಟ್ ಮತ್ತು ಮಾನವ ಹಕ್ಕು ಆಯೋಗಕ್ಕೂ ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ಸಲ್ಲಿಸಿತ್ತು. ಜನವರಿಯ ಎರಡನೇ ವಾರದ ಹೊತ್ತಿಗೆ 12 ಮಂದಿ ಬಲಿಯಾಗಿ, ನೂರಾರು ಮಂದಿ ರೋಗದಿಂದ ನರಳುತ್ತಿರುವ ನಡುವೆಯೇ ಜಿಲ್ಲಾಡಳಿತ ಸಹ್ಯಾದ್ರಿ ಉತ್ಸವ ನಡೆಸಿತ್ತು.
ಹೊಣೆಗೇಡಿ ಆಡಳಿತ:
“ಕನಿಷ್ಟ ಉತ್ಸವದ ಬಳಿಕವಾದರೂ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳನ್ನು ಚುರುಕುಗೊಳಿಸಿ ರೋಗ ಹತೋಟಿಗೆ ಸಮರೋಪಾದಿಯಲ್ಲಿ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಜನರದ್ದಾಗಿತ್ತು. ಆದರೆ, ಅರಳಗೋಡು ಗ್ರಾಮದಲ್ಲಿ ಜನವರಿ ಕೊನೆಯ ವಾರದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳೊಂದಿಗೇ, ಅಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ಆರೋಗ್ಯ ಘಟಕಗಳೂ ಗಂಟುಮೂಟೆ ಕಟ್ಟಿಕೊಂಡು ನಗರ ಸೇರಿದ್ದರು. ಪರಿಣಾಮವಾಗಿ, ರೋಗ ಪತ್ತೆ ಮತ್ತು ಮುಂಜಾಗ್ರತೆ ಹಾಗೂ ನಿಯಂತ್ರಣ ಕಾರ್ಯಗಳು ಫೆಬ್ರವರಿ ತಿಂಗಳಿಡೀ ಮೂಲೆಗುಂಪಾಗಿದ್ದವು. ಪರಿಣಾಮವಾಗಿ ಇದೀಗ ರೋಗ ದಿಢೀರ್ ಉಲ್ಬಣಿಸಿದ್ದು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ಕೇವಲ ನಾಲ್ಕು ದಿನದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ ಮತ್ತು ಇನ್ನೂ ಐವರ ಸ್ಥಿತಿ ಗಂಭೀರವಾಗಿದೆ” ಎಂಬುದು ಅರಳಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಕಾಂತ್ ಆರೋಪ.
ವ್ಯಾಕ್ಸಿನ್- ಡಿಎಂಪಿ ಗುಣಮಟ್ಟ ಶಂಕೆ:
ಅಲ್ಲದೆ, ಎರಡೆರಡು ಬಾರಿ ವ್ಯಾಕ್ಸಿನ್ ತೆಗೆದುಕೊಂಡಿದ್ದ ಪೂರ್ಣಿಮಾ ಭಟ್ ಮತ್ತು ಸೀತಮ್ಮ ಅವರು ಕೂಡ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ ಮತ್ತು ಎರಡು ಸುತ್ತಿನ ಲಸಿಕೆ ಬಳಿಕ ಬೂಸ್ಟರ್ ತೆಗೆದುಕೊಂಡರೆ ಕಾಯಿಲೆ ಬರುವುದೇ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತಿದ್ದರೂ, ಬೂಸ್ಟರ್ ತೆಗೆದುಕೊಂಡಿರುವ ಮಹಿಳೆಯೊಬ್ಬರು ಇದೀಗ ರೋಗದಿಂದ ಬಳಲುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಲಸಿಕೆಯ ಪರಿಣಾಮದ ಬಗ್ಗೆಯೇ ನಮಗೆ ಅನುಮಾನಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ, ಸಾಗರ ತಾಲೂಕು ವೈದ್ಯಾಧಿಕಾರಿ ಡಾ ಮುನಿವೆಂಕಟರಾಜು ಅವರು ತಾಲೂಕು ಪಂಚಾಯ್ತಿ ಸಭೆಯಲ್ಲಿ ರೋಗದ ಗಂಭೀರ ಸ್ವರೂಪವನ್ನು ವಿವರಿಸುತ್ತಾ, “1957ರಲ್ಲಿ ರೋಗ ಮೊದಲ ಬಾರಿಗೆ ಕಾಣಿಸಿಕೊಂಡಾಗಿನಿಂದ ಈವರೆಗೆ ಕೆಎಫ್ ಡಿ ವೈರಾಣುವಿನಲ್ಲಿ ಆಗಿರುವ ಬದಲಾವಣೆಗಳನ್ನು- ವ್ಯಾಕ್ಸಿನ್ ನಿರೋಧಕ ಶಕ್ತಿ ಬೆಳೆಸಿಕೊಂಡಿರುವ ಬಗ್ಗೆ- ಅಧ್ಯಯನ ಮಾಡಿಲ್ಲ. ಕಾಲಕ್ರಮದಲ್ಲಿ ವೈರಸ್ ಪ್ರಬಲವಾಗಿರುವ, ವ್ಯಾಕ್ಸಿನ್ಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಇನ್ನು ಉಣ್ಣೆಗಳು ದೇಹಕ್ಕೆ ಅಂಟದಂತೆ ತಡೆಯಲು ಆರೋಗ್ಯ ಇಲಾಖೆ ನೀಡುತ್ತಿರುವ ಡಿಎಂಪಿ ತೈಲ ಕೇವಲ ನಲವತ್ತು ನಿಮಿಷ ಮಾತ್ರ ಅದರ ಪ್ರಭಾವ ಹೊಂದಿರುತ್ತದೆ. ನಂತರ ಯಾವ ಪ್ರಯೋಜನವಿಲ್ಲ. ಅಲ್ಲದೆ, ಜಿಲ್ಲೆಯಲ್ಲಿ ದಿಢೀರನೇ 2.5 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಡಿಎಂಪಿ ಬಾಟಲಿಗೆ ಬೇಡಿಕೆ ಬಂದಿದ್ದರಿಂದ, ಗುಣಮಟ್ಟ ಕಾಯ್ದುಕೊಂಡಿರುವ ಬಗ್ಗೆಯೂ ಅನುಮಾನಗಳಿವೆ. ಬೇಡಿಕೆ ಪೂರೈಸಲು ಕಳಪೆ ದರ್ಜೆಯ, ಕಲಬೆರಕೆ ಎಣ್ಣೆ ಸರಬರಾಜು ಮಾಡಿರುವ ಸಾಧ್ಯತೆ ಕೂಡ ಇದೆ ಎಂಬ ದೂರುಗಳೂ ಇವೆ.
ವ್ಯಾಕ್ಸಿನ ಪರಿಣಾಮ, ಡಿಎಂಪಿ ಎಣ್ಣೆಯ ಸಾಚಾತನಗಳ ಬಗೆಗಿನ ಶಂಕೆಗಳು ಹೊರತಾಗಿಯೂ, ರೋಗ ನಿಯಂತ್ರಣಕ್ಕೆ ಅಗತ್ಯ ಪ್ರಮಾಣದ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಈವರೆಗೂ; 16 ಮಂದಿ ಜೀವ ಕಳೆದುಕೊಂಡ ಬಳಿಕವೂ, ಸರ್ಕಾರ ವ್ಯವಸ್ಥೆ ಮಾಡಿಲ್ಲ. ಈಗಲೂ ಡಿಎಚ್ ಒ ಅವರು ಸ್ವತಃ ಅರಳಗೋಡಿನಲ್ಲಿ ದಿನವೆಲ್ಲಾ ಇದ್ದು, ಸ್ವತಃ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಬೇಕಾದ ಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಇದೆ. ರೋಗ ಇದೀಗ ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೋಗಿಯ ಚಿಕಿತ್ಸೆಯಲ್ಲಿ ಪ್ರತಿ ಕ್ಷಣಕ್ಷಣವೂ ಮುಖ್ಯ. ಆ ಹಿನ್ನೆಲೆಯಲ್ಲಿ ತತಕ್ಷಣಕ್ಕೆ ರೋಗ ಲಕ್ಷಣ ಪತ್ತೆ, ಪ್ರಥಮ ಚಿಕಿತ್ಸೆ ಮತ್ತು ದೂರದ ಮಣಿಪಾಲ ಆಸ್ಪತ್ರೆಗೆ ಅವರನ್ನು ಸಾಗಿಸುವ ನಿಟ್ಟಿನಲ್ಲಿ ನಾಲ್ಕಾರು ವೈದ್ಯರ ತಂಡ ನಿರಂತರವಾಗಿ ಆಹೋರಾತ್ರಿ ಕೆಲಸ ಮಾಡಬೇಕಾದ ಅಗತ್ಯವಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಹಣೆಪಟ್ಟಿ ಹೊತ್ತಿರುವ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳ ಬಳಿಕವೂ ಮಂಗನ ಕಾಯಿಲೆ ಚಿಕಿತ್ಸೆಯ ಯಾವ ಸೌಲಭ್ಯವನ್ನೂ ಮಾಡಿಕೊಂಡಿಲ್ಲ. ಪ್ರತಿ ರೋಗಿಯನ್ನೂ 300 ಕಿ.ಮೀ ದೂರದ ಮಣಿಪಾಲಕ್ಕೆ ಕಳಿಸಲಾಗುತ್ತಿದೆ.
ಆದರೆ, “ವ್ಯಾಕ್ಸಿನ್ ಮತ್ತು ಡಿಎಂಪಿ ಎಣ್ಣೆಯ ವಿಷಯದಲ್ಲಿ ಯಾವ ಸಮಸ್ಯೆ ಇಲ್ಲ. ಪ್ರಮುಖವಾಗಿ ಇದೀಗ ಮತ್ತೆ ರೋಗ ಉಲ್ಬಣಗೊಳ್ಳಲು ಅರಳಗೋಡು ಭಾಗದಲ್ಲಿ ದಿಢೀರನೆ ಉಣ್ಣೆಗಳು ವೃದ್ಧಿಸಿರುವುದೇ ಕಾರಣ. ಆ ಹಿನ್ನೆಲೆಯಲ್ಲಿ ಉಣ್ಣೆಗಳ ನಿಯಂತ್ರಣ ಮತ್ತು ರೋಗಿಗಳಿಗೆ ಜ್ವರ ಕಾಣಿಸಿಕೊಂಡ ತತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗೆ ಬರುವಂತೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಆ ಬಗ್ಗೆ ಗಮನ ನೀಡುತ್ತಿದ್ದೇವೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ಹೇಳಿದ್ದಾರೆ.
ಕೋಟಿ ಕೋಟಿ ಬಂದರೂ ಲ್ಯಾಬ್ ಎಲ್ಲಿ?
ಇನ್ನು ಕೇಂದ್ರ ಸರ್ಕಾರದ ಐಸಿಎಂಆರ್ ಅಡಿಯಲ್ಲಿ ವೈರಾಣು ಪತ್ತೆ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿಯೇ ರಾಷ್ಟ್ರೀಯ ಮಟ್ಟದ ಪ್ರಯೋಗಾಲಯ (ವಿಆರ್ ಡಿಎಲ್)ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 1.80 ಕೋಟಿ ರೂ. ಬಿಡುಗಡೆ ಮಾಡಿದ್ದರೂ, ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಲ್ಯಾಬ್ ಬಹುತೇಕ ಸಿದ್ಧಗೊಂಡಿದ್ದರೂ ಈವರೆಗೆ ಅದರ ಚಾಲನೆಗೆ ಮುಹೂರ್ತ ಬಂದಿಲ್ಲ.
ಇನ್ನು ಈಗಾಗಲೇ ಇರುವ ವೈರಾಣು ಪತ್ತೆ ಪ್ರಯೋಗಾಲಯ(ವಿಡಿಎಲ್) ಜನವರಿ ಮೊದಲ ವಾರದವರೆಗೆ ಬಹುತೇಕ ನಿದ್ರಾವಸ್ಥೆಯಲ್ಲಿದ್ದು, ಆ ಬಳಿಕವಷ್ಟೇ ಚುರುಕಾಗಿದೆ. ಅಗತ್ಯ ಸಿಬ್ಬಂದಿ, ಸೌಲಭ್ಯಗಳಿದ್ದೂ ವಿಡಿಎಲ್ ಯಾಕೆ ರೋಗ ಉಲ್ಬಣಗೊಂಡ ಸಂದರ್ಭದಲ್ಲಿ ಕೂಡ ವೈರಾಣು ಪತ್ತೆ(ಮನುಷ್ಯರಲ್ಲಿ) ಕಾರ್ಯವನ್ನು ಮಾಡುತ್ತಿರಲಿಲ್ಲ? ಈ ಹೊಣೆಗೇಡಿತನದಿಂದಾಗಿ ಡಿಸೆಂಬರ್-ಜನವರಿಯಲ್ಲಿ ಶಂಕಿತ ರೋಗಿಗಳ ರಕ್ತದ ಮಾದರಿಯನ್ನು ಪುಣೆ- ಬೆಂಗಳೂರಿಗೆ ಕಳಿಸಿ, ಆ ವರದಿ ಬರುವ ಹೊತ್ತಿಗೆ ಹಲವು ಜೀವ ಕಳೆದುಕೊಂಡಿದ್ದರು. ಆ ಸಾವುಗಳಿಗೆ ಯಾರು ಹೊಣೆ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಮೃತದ ಕುಟುಂಬದವರಿಗೆ ತಲಾ ಹತ್ತು ಲಕ್ಷ ಪರಿಹಾರ ನೀಡಬೇಕು ಎಂಬ ಜನರ ಬೇಡಿಕೆಗೆ ಕೂಡ ಜಿಲ್ಲಾಡಳಿತ ಮತ್ತು ಸರ್ಕಾರದ ಸಕಾಲಿಕ ಸ್ಪಂದನೆ ಇಲ್ಲ ಎಂಬ ಜನರ ಅಸಮಾಧಾನ ಕೇಳಿಬರುತ್ತಿದೆ.
ಅಲ್ಲದೆ, ಮಂಗನ ಕಾಯಿಲೆ ಸಂಶೋಧನೆ ಮತ್ತು ನಿಯಂತ್ರಣಕ್ಕಾಗಿಯೇ ಬಜೆಟ್ಟಿನಲ್ಲಿ 10 ಕೋಟಿ ವಿಶೇಷ ಅನುದಾನ ನೀಡುವುದಾಗಿ ಸಿಎಂ ಘೋಷಣೆ ಮಾಡಿ ತಿಂಗಳು ಕಳೆಯಿತು. ಈವರೆಗೆ ಆ ಬಗ್ಗೆ ಯಾವ ಪ್ರಕ್ರಿಯೆಗಳಾಗಿವೆ ಎಂಬ ಮಾಹಿತಿ ಇಲ್ಲ. ಆದರೆ, ತತಕ್ಷಣಕ್ಕೆ ಆಗಬೇಕಿರುವುದು ಈ ರೋಗವನ್ನು ಒಂದು ವಿಶೇಷ ಪ್ರಾಕೃತಿಕ ಅವಘಡ ಎಂದು ಘೋಷಿಸಿ, ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ, ಇನ್ನೂ ಸಹ್ಯಾದ್ರಿ ಉತ್ಸವದ ಗುಂಗಿನಲ್ಲೇ ಇರುವ, ಉತ್ಸವ ಮುಗಿದ ತಿಂಗಳು ಕಳೆದರೂ ಅದರ ಹೆಸರಲ್ಲಿ ಔತಣಕೂಟಗಳಲ್ಲಿ ಮುಳುಗಿರುವ ಜಿಲ್ಲಾಡಳಿತ ಅಮಾಯಕ ಜನರ ಜೀವಕ್ಕೂ ಬೆಲೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ?