ಜಿಂಜಿರಾ ನರಮೇಧ
ಆಪರೇಷನ್ ಸರ್ಚ್ ಲೈಟ್ ಭಯಾನಕ ಸ್ವರೂಪ ಪಡೆದುಕೊಂಡಿತ್ತು. ಹಲವು ಭೀಕರ ನರಮೇಧಗಳು ಈ ಆಪರೇಷನ್ ಸಂದರ್ಭದಲ್ಲಿ ಘಟಿಸಿದವು. ಅದರಲ್ಲಿ ಜಿಂಜಿರಾ ನರಮೇಧ ಕೂಡ ಒಂದು. ಕೆರಾನಿಗಂಜ್ ವ್ಯಾಪ್ತಿಯ ಜಿಂಜಿರಾ, ಕಲಿಂದಿ ಮತ್ತು ಶುಭದ್ಯಾ ಎಂಬ ಪ್ರದೇಶಗಳು ಬುರಿಗಂಗಾ ನದಿ ದಂಡೆಯ ಊರುಗಳು. ಢಾಕಾಗೆ ಸಮೀಪವೇ ಇದ್ದ ಈ ಪ್ರದೇಶಗಳಿಗೆ ಢಾಕಾದಿಂದ ಜೀವ ಉಳಿಸಿಕೊಳ್ಳಲು ವಲಸೆ ಹೋಗಿದ್ದರು. ಮಾ.25ರಂದು ಆರಂಭಗೊಂಡ ಆಪರೇಷನ್ ಸರ್ಚ್ಲೈಟ್ನಿಂದ ಬಚಾಯಿಸಿಕೊಳ್ಳುವ ಉದ್ದೇಶದಿಂದ ಈ ವಲಸೆ ನಡೆದಿತ್ತು. ಜಿಂಜಿರಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಂಗಾಳಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಪಶ್ಚಿಮ ಪಾಕಿಸ್ತಾನಿ ಪಡೆಗಳಿಗೆ ಈ ಪ್ರದೇಶಗಳು ಸಾಫ್ಟ್ ಟಾರ್ಗೆಟ್ ಆಗಿದ್ದವು.
ಏಪ್ರಿಲ್ 1ರಂದು ಪಾಕಿಸ್ತಾನಿ ಪಡೆಗಳು ಕೆರಾನಿಗಂಜ್ ಸುತ್ತುವರೆದವು. ನದಿದಂಡೆಯಲ್ಲಿ ಇದ್ದ ಮಿಟ್ ಫೋರ್ಡ್ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡವು. ಸರಿಯಾಗಿ ಬೆಳಗಿನ ಜಾವ 5 ಗಂಟೆಗೆ ಆಸ್ಪತ್ರೆ ಪಕ್ಕದ ಮಸೀದಿಯ ಮೇಲ್ಛಾವಣಿ ಮೇಲಿನಿಂದ ದಾಳಿ ಆರಂಭಿಸಿದವು. ಜನರು ಇನ್ನೂ ನಿದ್ದೆಯಿಂದ ಏಳುವ ಮೊದಲೇ ಗುಂಡುಗಳ ಆರ್ಭಟ ಶುರುವಾಗಿತ್ತು. ಪಾಕಿ ಸೈನ್ಯ ಜಿಂಜಿರಾ ತಲುಪಿಕೊಂಡು ಅಮಾಯಕ ಜನರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿತು. ಈ ದಾಳಿ ಸುಮಾರು ಒಂಭತ್ತು ಗಂಟೆಗಳ ಕಾಲ ಸತತವಾಗಿ ನಡೆಯಿತು. ನಂದೈಲ್ ಡಾಕ್ ರಸ್ತೆಯೊಂದರ ಕೊಳದ ಬಳಿ ಅರವತ್ತು ಜನರನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲ್ಲಲಾಯಿತು. ಮನೆಗಳ ಮೇಲೆ ಗನ್ ಪೌಡರ್ಗಳನ್ನು ಎಸೆದು ಸ್ಫೋಟಿಸಲಾಗಿತ್ತು. ಜಿಂಜಿರಾ ನರಮೇಧ ಎಷ್ಟು ಭೀಕರವಾಗಿತ್ತೆಂದರೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುರುಷರು, ಮಹಿಳೆಯರು, ಮಕ್ಕಳು ಪಾಕ್ ಸೈನಿಕರ ಗುಂಡುಗಳಿಗೆ ಬಲಿಯಾಗಿ ಹೆಣವಾದರು. ಈ ಹೆಣಗಳನ್ನು ಕೊಳಗಳಿಗೆ, ನದಿಗೆ ಎಸೆಯಲಾಯಿತು.
ಪಾಕಿಸ್ತಾನ ಟೆಲಿವಿಷನ್ ನಲ್ಲಿ ಮಾರನೇ ದಿನ ಈ ಸಂಬಂಧ ಸುದ್ದಿಯೊಂದು ಪ್ರಸಾರವಾಯಿತು. ಜಿಂಜಿರಾ ಬಳಿ ಪ್ರತ್ಯೇಕತಾವಾದಿ ಉಗ್ರಗಾಮಿಗಳು ರಕ್ಷಣೆ ಪಡೆದಿದ್ದರೆಂದೂ ಅವರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ಕ್ರಮ ಕೈಗೊಳ್ಳಲಾಯಿತೆಂದೂ ಪಾಕಿಸ್ತಾನ ಟೆಲಿವಿಷನ್ ಹೇಳಿಕೊಂಡಿತು!
ಗೋಪಾಲಪುರ ನರಮೇಧ
ಆಪರೇಷನ್ ಸರ್ಚ್ಲೈಟ್ ಮುಂದುವರೆದಂತೆ ಬಂಗಾಳಿ ಜನರ ಪ್ರತಿರೋಧವೂ ಹೆಚ್ಚಾಗತೊಡಗಿತು. ಪಾಬ್ನಾ ಎಂಬ ನಗರವನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಪಶ್ಚಿಮ ಪಾಕಿಸ್ತಾನಿ ಪಡೆಗಳು ಹಿನ್ನಡೆ ಅನುಭವಿಸಿದವು. ಹಲವು ಸೈನಿಕರು ಪೂರ್ವ ಪಾಕಿಸ್ತಾನದ ಬಂಡುಕೋರರಿಂದ ದಾಳಿಗಳಿಗೆ ಒಳಗಾಗಿ ಮೃತಪಟ್ಟರು. ಪಶ್ಚಿಮ ಪಾಕಿಸ್ತಾನ ರಾಜಶಾಹಿಯಲ್ಲಿದ್ದ ತನ್ನ ಕೇಂದ್ರ ಕಚೇರಿಯಿಂದ ಹೆಚ್ಚುವರಿ ಪಡೆಗಳನ್ನು ಕರೆಯಿಸಿಕೊಂಡಿತು. ಸ್ಥಳೀಯರು ನಾತೋರ್ ಎಂಬಲ್ಲಿ ಬ್ರಿಡ್ಜ್ ಒಂದನ್ನು ನಾಶಗೊಳಿಸಿದರು. ಗೋಪಾಲಪುರದಲ್ಲಿ ಸ್ಥಳೀಯ ಸ್ಟೇಷನ್ ಮಾಸ್ತರ್ ರೈಲ್ವೆ ವ್ಯಾಗನ್ಗಳಿಗೆ ಅಡ್ಡಲಾಗಿ ತಡೆಗೋಡೆಗಳನ್ನು ನಿರ್ಮಿಸಿದರು.
ಮಾರ್ಚ್ 30ರಂದು ವಲಿಯಾರ್ ಮೊಯ್ನಾ ಗ್ರಾಮದಲ್ಲಿ ಪಾಕ್ ಸೈನಿಕರು ತಂಗಿದ್ದರು. ಬಂಗಾಳಿ ಬಂಡುಕೋರರು ಪಾಕಿಸ್ತಾನ ಸೈನ್ಯದ ಡೇರೆಯ ಮೇಲೆ ದಾಳಿ ನಡೆಸಿದರು. ಇದನ್ನು ‘ಬ್ಯಾಟಲ್ ಆಫ್ ಮೊಯ್ನಾ ಅಥವಾ ಮೊಯ್ನಾರ್ ಜುದ್ದೋ ಎಂದು ಕರೆಯಲಾಗುತ್ತದೆ. ಇದರಲ್ಲಿ ನಲವತ್ತು ಬಂಗಾಳಿ ಯೋಧರೂ ಮರಣಹೊಂದಿದರು. ಈ ಸಂಘರ್ಷದಲ್ಲಿ ಮೃತಪಟ್ಟ ಪಾಕಿಸ್ತಾನಿ ಸೈನಿಕರ ಸಂಖ್ಯೆ ಕಡಿಮೆಯೇ ಆದರೂ ದಾಳಿಯಿಂದ ಪಾಕಿಸ್ತಾನ ನೈತಿಕವಾಗಿ ಘಾಸಿಗೊಂಡಿತು. ಪಾಕಿಸ್ತಾನಿ ಸೈನಿಕರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಸಣ್ಣಸಣ್ಣ ಗುಂಪುಗಳಾಗಿ ಓಡಿಹೋಗಬೇಕಾಯಿತು. ಕಮ್ಯಾಂಡಿಂಗ್ ಆಫೀಸರ್ ಮೇಜರ್ ಅಸ್ಲಾಂ ಕೂಡ ಬಂಡುಕೋರರ ಸೆರೆಯಾಳಾದರು. ಸೆರೆಸಿಕ್ಕ ಸೈನಿಕರನ್ನು ಲೆಫ್ಟಿನೆಂಟ್ ಅನ್ವರುಲ್ಲಾ ಅಜೀಂ ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಲೆಫ್ಟಿನೆಂಟ್ ಅನ್ವರುಲ್ಲಾ ಸ್ಥಳೀಯ ಬಂಗಾಳಿ ಸೈನ್ಯದ ಅಧಿಕಾರಿಯಾಗಿದ್ದರು ಮತ್ತು ಉತ್ತರ ಬಂಗಾಳ ಸಕ್ಕರೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಲಾಲ್ ಪುರ ಎಸ್ಎಸ್ ಪೈಲಟ್ ಹೈಸ್ಕೂಲ್ ಮೈದಾನದಲ್ಲಿ ಬಂಧಿತ ಪಾಕ್ ಸೈನಿಕರ ಅಪರಾಧದ ಬಗ್ಗೆ ವಿಚಾರಣೆ ನಡೆಸಿ ಅಲ್ಲೇ ಗುಂಡಿಟ್ಟು ಕೊಂದುಹಾಕಲಾಯಿತು. ಪಾಕಿಸ್ತಾನ ಪಡೆಗಳಿಗೆ ಇದೆಲ್ಲ ವಿದ್ಯಮಾನಗಳು ನುಂಗಲಾರದ ತುತ್ತಾಗಿದ್ದವು. ಹೀಗಾಗಿ ಅತ್ಯಂತ ದಾರುಣ ನರಮೇಧವೊಂದಕ್ಕೆ ಈ ಪಡೆಗಳು ಕೈಹಾಕಿದವು.
ಹೆಚ್ಚುವರಿ ಪಡೆಗಳನ್ನು ತರಿಸಿಕೊಂಡ ಪಾಕಿಸ್ತಾನ ಪಡೆಗಳು ಪಬ್ನಾ, ಇಶ್ವರ್ದಿ ಮತ್ತು ನಟೋರ್ಗಳನ್ನು ವಶಕ್ಕೆ ಪಡೆದವು. ಮೇ.5ರಂದು ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಗೋಪಾಲಪುರ ತಲುಪಿಕೊಂಡ ಬಂಗಾಳಿಗಳ ಭದ್ರಕೋಟೆಯಾಗಿದ್ದ ಸಕ್ಕರೆ ಕಾರ್ಖಾನೆಯನ್ನು ವಶಕ್ಕೆ ಪಡೆದುಕೊಂಡವು. ಕಾರ್ಖಾನೆಯ ಸುಮಾರು ಇನ್ನೂರು ಮಂದಿ ಕಾರ್ಮಿಕರನ್ನು ವಿಚಾರಣೆ ನಡೆಸಿ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಪ್ರಶ್ನಿಸಲಾಯಿತು. ಇದಕ್ಕಾಗಿ ಮೊಂಜೂರ್ ಇಮಾನ್ ಎಂಬ ಬಂಗಾಳಿಯಲ್ಲದ ಕಾರ್ಮಿಕನೊಬ್ಬನ ಸಹಾಯ ಪಡೆಯಲಾಯಿತು. ಇನ್ನೂರು ಮಂದಿಯ ಪ್ರಾಣವೂ ಅಪಾಯದಲ್ಲಿತ್ತು. ಆ ಸಂದರ್ಭದಲ್ಲಿ ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ತನ್ನ ಸಹ ಹೋರಾಟಗಾರರ ಪ್ರಾಣವಾದರೂ ಉಳಿಯಲಿ ಎಂದುಕೊಂಡು ಬಂಡುಕೋರರ ನಾಯಕ ಲೆಫ್ಟಿನೆಂಟ್ ಅನ್ವರುಲ್ಲಾ ಅಜೀಂ ಮುಂದೆ ಬಂದರು. ನಾನೇ ಬಂಡುಕೋರ, ಮಿಕ್ಕವರೆಲ್ಲ ಅಮಾಯಕರು, ಅವರನ್ನೆಲ್ಲ ಬಿಟ್ಟುಬಿಡಿ ಎಂದು ಬೇಡಿಕೊಂಡರು. ಹಾಗೆ ಹೇಳುತ್ತಿದ್ದಂತೆ ಅನ್ವರುಲ್ಲಾ ಮತ್ತು ಅವರ ಕುಟುಂಬ ಸದಸ್ಯರನ್ನು ಅಲ್ಲೇ, ಆ ಕ್ಷಣವೇ ಗುಂಡಿಟ್ಟು ಕೊಲ್ಲಲಾಯಿತು. ಅದಾದಮೇಲೆ ಬಂಡುಕೋರರು ಯಾರು ಸಾಮಾನ್ಯ ಕಾರ್ಮಿಕರು ಯಾರು ಎಂಬುದು ಗೊತ್ತಾಗದೇ ಅಲ್ಲಿದ್ದ ಅಷ್ಟೂ ಜನರನ್ನು ಕೊಂದುಹಾಕಲು ಪಾಕಿಸ್ತಾನದ ಸೈನ್ಯ ನಿರ್ಧರಿಸಿತು. ಸಮೀಪವೇ ಇದ್ದ ಕೊಳವೊಂದರ ಬಳಿ ಇನ್ನೂರು ಮಂದಿಯನ್ನೂ ಕರೆದುಕೊಂಡು ಹೋಗಲಾಯಿತು. ಹದಿಮೂರು ಮೆಷಿನ್ ಗನ್ ಗಳಿಂದ ಇನ್ನೂರು ಜನರ ಮೇಲೆ ಒಂದೇಸಮನೆ ಗುಂಡಿನ ಮಳೆಗರೆಯಲಾಯಿತು. ಇದು ಎಂಥ ಭೀಕರವಾಗಿತ್ತೆಂದರೆ ಈ ನರಮೇಧದಲ್ಲಿ ಬದುಕಿ ಉಳಿದವರು ಕೇವಲ ಐದು ಮಂದಿ. ಮಿಕ್ಕವರೆಲ್ಲ ಗುಂಡಿನೇಟುಗಳನ್ನು ತಿಂದು ಅಲ್ಲೇ ಅಸುನೀಗಿದರು. ಅಬ್ದುಲ್ ಜಲೀಲ್ ಸಿಕ್ದರ್, ಖುರ್ಷಿದ್ ಆಲಂ, ಅಬುಲ್ ಹುಸೇನ್, ಇಮಾದುದ್ದೀನ್ ಮತ್ತು ಇಂಜಿಲ್ ಉದ್ದೀನ್ ಅಹಮದ್ ಎಂಬ ಹೆಸರಿನ ಐವರು ಮಾತ್ರ ಬದುಕುಳಿದರು ಮತ್ತು ಆ ಭೀಕರ ನರಮೇಧದ ಪ್ರತ್ಯಕ್ಷದರ್ಶಿಗಳಾಗಿ ಉಳಿದರು.
ಪಾಕಿಸ್ತಾನ ಸೈನಿಕರ ನೆತ್ತರದಾಹ ಇನ್ನೂ ಮುಗಿದಿರಲಿಲ್ಲ. ಹೆಣಗಳ ರಾಶಿಗಳಲ್ಲಿ ಯಾರಾದರೂ ಬದುಕುಳಿದಿರಬಹುದೇ ಎಂಬ ಅನುಮಾನದಲ್ಲಿ ಸತ್ತವರ ಮೇಲೂ ಮತ್ತೆ ಮತ್ತೆ ಗುಂಡು ಸುರಿಸಿದರು. ಕಾರ್ಖಾನೆಯ ಅಧಿಕಾರಿಯೊಬ್ಬರು ಬದುಕಿರುವುದು ಗೊತ್ತಾಗುತ್ತಿದ್ದಂತೆ ಅವರ ಮೇಲೆ ದಾಳಿ ನಡೆಸಿ ಕೊಂದುಹಾಕಿದರು. ಎಲ್ಲ ಶವಗಳನ್ನು ಕೊಳದ ಒಳಗೆ ಎಸೆಯಲಾಯಿತು.
ಯುದ್ಧ ಮುಗಿದ ನಂತರ ಸರ್ಕಾರ ಈ ಕೊಳವನ್ನು ‘ಶಹೀರ್ ಸಾಗರ್’ ಎಂದು ಹೆಸರಿಟ್ಟಿತು. ಶಹೀದ್ ಅಂದರೆ ಹುತಾತ್ಮ ಎಂದರ್ಥ. ಗೋಪಾಲಪುರ ರೈಲ್ವೆ ನಿಲ್ದಾಣದ ಹೆಸರನ್ನು ಅಜೀಂ ನಗರ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು. ತನ್ನವರನ್ನು ಉಳಿಸಿಕೊಳ್ಳಲು ಬಲಿದಾನ ಮಾಡಿದ ಅಜೀಂ ಅವರ ನೆನಪನ್ನು ಅಜರಾಮರಗೊಳಿಸಲು ರೈಲ್ವೆ ನಿಲ್ದಾಣದ ಹೆಸರು ಬದಲಿಸಲಾಯಿತು.
ಚೂಕ್ ನಗರ ನರಮೇಧ
ಬಾಂಗ್ಲಾದೇಶ ವಿಮೋಚನೆ ಸಂದರ್ಭದ ಅತಿದೊಡ್ಡ ನರಮೇಧ ಎಂದು ಗುರುತಿಸಲಾಗುವುದು ಚೂಕ್ ನಗರ ನರಮೇಧ. ಪಾಕಿಸ್ತಾನ ಸೈನ್ಯ ೧೯೭೧ರ ಮೇ.೨೦ರಂದು ಅಕ್ಷರಶಃ ನರರಾಕ್ಷಸರಂತೆ ಖುಲ್ನಾ ದುಮೂರಿಯಾ ಪ್ರದೇಶದಲ್ಲಿ ಎರಗಿದರು. ಬಂಗಾಳಿಗಳ ಪ್ರಕಾರ ಈ ನರಮೇಧದಲ್ಲಿ ಸತ್ತವರ ಸಂಖ್ಯ ಸುಮಾರು ಹತ್ತುಸಾವಿರ. ಇತಿಹಾಸ ತಜ್ಞೆ ಶರ್ಮಿಳಾ ಬೋಸ್ ಈ ನರಮೇಧದಲ್ಲಿ ನೂರಾರು ಮಂದಿ ಸತ್ತಿರುವುದನ್ನು ದೃಢಪಡಿಸುತ್ತಾರಾದರೂ ಹತ್ತು ಸಾವಿರದಷ್ಟು ಸಂಖ್ಯೆಯ ನರಮೇಧವಾಗಿರಲು ಸಾಧ್ಯವಿಲ್ಲ. ಪಾಕ್ ಸೈನಿಕರು ತಮ್ಮಲ್ಲಿರುವ ಮದ್ದುಗುಂಡು ಖಾಲಿಯಾಗುವವರೆಗೆ ನರಮೇಧ ನಡೆಸಿದರು ಎನ್ನುತ್ತಾರೆ. ಈ ಹತ್ಯಾಕಾಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಡಿದವರು ಗಂಡಸರಾದರೂ, ಮಹಿಳೆಯರು ಮತ್ತು ಮಕ್ಕಳೂ ಸಹ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಹತರಾದರು.
ಖುಲ್ನಾ ಪ್ರಾಂತ್ಯದ ದುಮುರಿಯಾದ ಚೂಕ್ ನಗರ ಒಂದು ಸಣ್ಣ ಪಟ್ಟಣ. ಇದು ಭಾರತದ ಗಡಿಭಾಗಕ್ಕೆ ಹೊಂದಿಕೊಂಡಂತೆ ಇದೆ. ಪಾಕ್ ಸೈನಿಕರು ಬಾಂಗ್ಲಾದೇಶದ ಮೇಲೆ ದಾಳಿ ನಡೆಸಲು ಆರಂಭಿಸಿದ ನಂತರ ಖುಲ್ನಾ ಮತ್ತು ಬಗೇರ್ಹಾಟ್ಗಳಿಂದ ವಲಸೆ ಬಂದ ಜನರು ಭೋದ್ರಾ ನದಿಯನ್ನು ದಾಟಿ ಚೂಕ್ನಗರದಲ್ಲಿ ಉಳಿದುಕೊಂಡಿದ್ದರು. ಸತ್ಕಿರಾ ರಸ್ತೆಯ ಮೂಲಕ ಬಾಂಗ್ಲಾ ಗಡಿಯನ್ನು ದಾಟಿ ಭಾರತ ಪ್ರವೇಶಿಸಿ ಜೀವ ಉಳಿಸಿಕೊಳ್ಳುವುದು ಅವರ ಯೋಜನೆಯಾಗಿತ್ತು. ಮೇ.15ರ ಹೊತ್ತಿಗೆ ಸುತ್ತಮುತ್ತಲ ಪ್ರದೇಶಗಳ ಸಾವಿರಾರು ನಿರಾಶ್ರಿತರು ಚೂಕ್ನಗರದಲ್ಲಿ ಸೇರಿಕೊಂಡಿದ್ದರು.
ಮೇ.20ರಂದು ಈ ನಿರಾಶ್ರಿತರ ಪಾಲಿನ ಕರಾಳದಿನವಾಗಿ ಹೋಯಿತು. ಮೂರು ಟ್ರಕ್ ಗಳಲ್ಲಿ ಬಂದ ಪಾಕಿಸ್ತಾನಿ ಸೈನಿಕರು ಚೂಕ್ನಗರ ಮಾರುಕಟ್ಟೆಯ ಎಡಭಾಗದ ಪಥ್ಕೋಲಾ ಎಂಬ ಪ್ರದೇಶಕ್ಕೆ ಬಂದು ಗುಂಡಿನ ದಾಳಿ ಆರಂಭಿಸಿದರು. ನಂತರ ಹಾಗೆಯೇ ಚೂಕ್ನಗರ ಮಾರುಕಟ್ಟೆಯೊಳಗೂ ನುಗ್ಗಿ ಗುಂಡಿನ ಸುರಿಮಳೆಗೈದರು. ಬೆಳಿಗ್ಗೆ 10.30ಕ್ಕೆ ಶುರುವಾದ ಕಾರ್ಯಾಚರಣೆ ಮಧ್ಯಾಹ್ನ 3ಗಂಟೆಯವರೆಗೆ ನಡೆಯಿತು. ನಿರಾಯುಧರಾಗಿದ್ದ ನಿರಾಶ್ರಿತರು ಬೆಂಕಿಗೆ ಬಿದ್ದ ಹುಳಗಳಂತೆ ಸತ್ತುಹೋದರು. ಕೆಲವರು ಜೀವ ಉಳಿಸಿಕೊಳ್ಳಲು ನದಿಗೆ ಹಾರಿದರು. ಇಡೀ ಊರಿನಲ್ಲಿ ರಾಶಿರಾಶಿ ಬಿದ್ದಿದ್ದ ಹೆಣಗಳನ್ನು ನಂತರ ನದಿಗೆ ಎಸೆಯಲಾಯಿತು.
ಬಂಗಾಳಿಗಳ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿ ಚೂಕ್ ನಗರ್ ಶೋಹೀದ್ ಸ್ಮೃತಿಸೋಧೋ ಎಂದು ಹೆಸರಿಡಲಾಯಿತು.
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 4 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 3 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 2 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia