ಹರ್ಯಾಣ ರಾಜ್ಯದಲ್ಲಿ ಮೊನ್ನೆ ಇದ್ದಕ್ಕಿಂದ್ದಂತೆ 9 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಪೈಕಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಲ್ಲೊಬ್ಬರೆನಿಸಿದ ಅಶೋಕ್ ಖೇಮ್ಕಾ ಅವರ ಹೆಸರೂ ಕೇಳಿಬಂದಿದೆ. ಅಕ್ಟೋಬರ್ 2014ರಲ್ಲಿ ಹರ್ಯಾಣ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರ್ಕಾರದ ನಾಲ್ಕೂವರೆ ವರ್ಷದಲ್ಲಿ ಇದು ಅವರ 6ನೇ ವರ್ಗಾವಣೆಯಾಗಿದೆ ಮತ್ತು 27 ವರ್ಷಗಳ ಸೇವಾವಧಿಯಲ್ಲಿ 52ನೇ ವರ್ಗಾವಣೆ ಎನ್ನಲಾಗಿದೆ! ಹರ್ಯಾಣ ಸರ್ಕಾರ ಕಳೆದ ವಾರ ಶಾಸನಸಭೆಯೊಳಗೆ ಕಾಯಿದೆಯೊಂದಕ್ಕೆ ತಿದ್ದುಪಡಿ ತಂದಿತ್ತು. ಇದರ ಕುರಿತು ಭಾನುವಾರ ರಾಷ್ಟ್ರೀಯ ಪತ್ರಿಕೆಯೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಖೇಮ್ಕಾ, ಅರಾವಳಿ ಪ್ರದೇಶದಲ್ಲಿ ಭೂ ಸಂಚಯನ (Land consolidation) ಕೈಗೊಳ್ಳುವ ಸರ್ಕಾರದ ನಿರ್ಧಾರವು “ಭೂ ತಿಮಿಂಗಿಲಗಳ ದುರಾಸೆಗೆ ತುಪ್ಪ ಸುರಿದಂತೆ” ಎಂದಿದ್ದರೆಂದು ಹೇಳಲಾಗಿದೆ. ಈ ಸಂದರ್ಶನ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಅಶೋಕ್ ಖೇಮ್ಕಾ ಅವರಿಗೆ ವರ್ಗಾವಣೆ ಆದೇಶ ಬಂದಿದೆ!
ಇದಲ್ಲದೆ 2019ರ ಮಾರ್ಚ್ 1ರಂದು ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯೊಂದರಲ್ಲಿ ಹರ್ಯಾಣ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಈ ವಿಚಾರಣೆಯನ್ನು ಇದೇ ಮಾರ್ಚ್ 8ಕ್ಕೆ ಮುಂದೂಡಲಾಗಿದೆ. ಶಾಸನಸಭೆ ಅಂಗೀಕರಿಸಿರುವ ತಿದ್ದುಪಡ್ಡಿಗಳನ್ನೂ ಅಧಿಕೃತವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಲಾಗಿದೆ. ತೀರ್ಪು ಹೊರಬೀಳುವವರೆಗೂ ತಿದ್ದುಪಡಿಗಳನ್ನು ಜಾರಿಗೊಳಿಸಬಾರದೆಂದು ಸರ್ಕಾರವನ್ನು ನಿರ್ದೇಶಿಸಿದೆ. ಇವೆಲ್ಲವೂ ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿವೆ.
ಅರಾವಳಿ ಶ್ರೇಣಿಗೆ ರಾಷ್ಟ್ರ ರಾಜಧಾನಿಯ ನಂಟು – ಭೂಕಬಳಿಕೆಯ ಕಗ್ಗಂಟು
ಉತ್ತರ ಭಾರತದ ದೆಹಲಿಯಿಂದ ಆರಂಭವಾಗುವ ಸುಮಾರು 692 ಕಿಮೀ ವಿಸ್ತೀರ್ಣದ ಅರಾವಳಿ ಪರ್ವತಶ್ರೇಣಿ ನೈಋತ್ಯ ದಿಕ್ಕಿನಲ್ಲಿ ಹರ್ಯಾಣ, ರಾಜಸ್ತಾನಗಳ ಮೂಲಕ ಹಾದು ಗುಜರಾತ್ ರಾಜ್ಯದಲ್ಲಿ ಅಂತ್ಯಗೊಳ್ಳುತ್ತದೆ. ಹರ್ಯಾಣದ ನೈಋತ್ಯ ಪ್ರದೇಶದಲ್ಲಿ ಗುರುಗ್ರಾಮ, ಫರಿದಾಬಾದ, ಮೇವತ್, ಮಹೇಂದ್ರಗಢ ಮತ್ತು ರೆವಾರಿ ವಿಭಾಗಗಳನ್ನು ಅರಾವಳಿ ವ್ಯಾಪಿಸುತ್ತದೆ. ಒಂದು ಕಾಲದಲ್ಲಿ ಈ ಬೆಟ್ಟಗಳಲ್ಲಿದ್ದ ಜೀವವೈವಿಧ್ಯದ ಸಿರಿ ಇದೀಗ ಮಾನವನ ಮಿತಿಮೀರಿದ ರಾಜಕೀಯ ಹಸ್ತಕ್ಷೇಪ ದುರಾಸೆಗಳಿಂದ ಕರಗಿ ಸೊರಗುತ್ತಿದೆ. ದೆಹಲಿಗೆ ಅಂಟಿಕೊಂಡಿರುವ ಹರ್ಯಾಣದ ಅರಾವಳಿಯ ಸಮೃದ್ಧ ಪರಿಸರ, ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಈಗಲೂ ಹಸಿರು ಹೊದ್ದಿಕೆಯಿದ್ದಂತೆ. ಫರಿದಾಬಾದ್ ದೆಹಲಿಯಿಂದ ಕೇವಲ 30ಕಿಮೀ ದೂರದಲ್ಲಿದೆ. ಜೀವಸಂಪದ್ಭರಿತ ಅರಾವಳಿ ಸಾಲುಗಳನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಸ್ವಾತಂತ್ರ್ಯಪೂರ್ವದಲ್ಲೇ 1900ರ ಪಂಜಾಬ್ ಭೂ ಸಂರಕ್ಷಣಾ ಕಾಯಿದೆಯನ್ನು ರೂಪಿಸಲಾಗಿತ್ತು.
ಹರ್ಯಾಣದ ಸಾವಿರಾರು ಎಕರೆಗಳ ಈ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ, ಒತ್ತುವರಿ, ಅರಣ್ಯನಾಶ ವ್ಯಾಪಕವಾಗಿದ್ದು, ಕಟ್ಟಡಗಳು ಕಾನೂನುಬಾಹಿರವಾಗಿ ತಲೆಯೆತ್ತಿವೆ. ರಾಜಕಾರಣಿ-ಅಧಿಕಾರಶಾಹಿ ದುಷ್ಟಕೂಟದ ಕೃಪೆಯಿಂದ ಗೃಹ ಸಮ್ಮುಚ್ಚಯಗಳನ್ನು ಅಕ್ರಮವಾಗಿ ನಿರ್ಮಿಸಿರುವ ರಿಯಲ್ ಎಸ್ಟೇಟ್ ಕಂಪೆನಿಗಳು-ಉದ್ಯಮಿಗಳು ಬೇಕಾದಷ್ಟು ಲಾಭಗಳಿಸಿಕೊಂಡು ಈಗ ಬೇರೆಡೆ ಗಾಳ ಹಾಕುತ್ತಿದ್ದಾರೆ. ಇವರ ಪಾಪಕರ್ಮದ ಫಲವನ್ನು ಗ್ರಾಹಕರು ಅನುಭವಿಸುವಂತಾಗಿದೆ. ಉದಾಹರಣೆಗೆ, ಫರಿದಾಬಾದ್ ನ ಕಾಂತ್ ಎನ್ ಕ್ಲೇವ್ ಅಪಾರ್ಟ್ಮೆಂಟ್ ಗಳನ್ನು ಅರಾವಳಿ ಬೆಟ್ಟಗಳಲ್ಲಿ ನಿರ್ಮಿಸಿ ಮಾರಾಟ ಮಾಡಲಾದಾಗ, ಸಂರಕ್ಷಿತ ಪ್ರದೇಶದ ಈ ಮನೆಗಳನ್ನು ಕೆಡವಲು ಸರ್ವೋಚ್ಛನ್ಯಾಯಾಲಯ ಆದೇಶಿಸಿತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಒಟ್ಟಿನಲ್ಲಿ ಅರಾವಳಿಯ ಈ ಪ್ರದೇಶ ರಾಜಧಾನಿಯ ಬದಿಯಲ್ಲಿದ್ದು, ರಿಯಲ್ ಎಸ್ಟೇಟ್ ದಂಧೆಯ ನೆಚ್ಚಿನ ತಾಣವಾಗಿರುವುದರಿಂದಲೇ, ಹರ್ಯಾಣದಲ್ಲಿ ಈಹಿಂದೆ ಅನ್ವಯವಾಗುತ್ತಿದ್ದ 1900ರ ಪಂಜಾಬ್ ಭೂ ಸಂರಕ್ಷಣಾ ಕಾಯಿದೆಗೆ (ಪಿಎಲ್ ಪಿಎ) ತಿದ್ದುಪಡಿ ತಂದು ರಿಯಲ್ ಎಸ್ಟೇಟ್ ಕುಳಗಳಿಗೆ ಬಳಕೆಯೋಗ್ಯ ಮಾಡಿಕೊಡಬೇಕೆಂಬ ಒತ್ತಡಕ್ಕೆ ಹರ್ಯಾಣ ಸರ್ಕಾರ ಸಿಲುಕಿದ್ದು.
ಸರ್ಕಾರದ ಭೂಕಬಳಿಕೆ ನೀತಿ ವಿರೋಧಿಸಿದ ಐಎಎಸ್ ಅಧಿಕಾರಿ
ಫರಿದಾಬಾದ್ ತಾಲ್ಲೂಕಿನ ಕೋಟ್ ಗ್ರಾಮದ ಬಹುತೇಕ ಪ್ರದೇಶಗಳು ಅರಾವಳಿ ಬೆಟ್ಟಗಳ ಭಾಗವಾಗಿರುತ್ತವೆ. 2012-2013 ಅವಧಿಯಲ್ಲಿ ಡಾ.ಅಶೋಕ್ ಖೇಮ್ಕಾ ಎಂಬ ಐಎಎಸ್ ಅಧಿಕಾರಿ ಹರ್ಯಾಣ ರಾಜ್ಯದಲ್ಲಿ ಭೂ ಹಿಡುವಳಿಗಳ ಸಂಚಯನ ಇಲಾಖೆಯ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಅಧಿಕಾರ ವಹಿಸಿಕೊಳ್ಳುವ ಮೊದಲೇ ಡಿಸೆಂಬರ್ 2011ರಲ್ಲಿ ಇಲಾಖೆಯು “ಉತ್ತಮ ಬೇಸಾಯ”ದ ಸಲುವಾಗಿ ಭೂ ಹಿಡುವಳಿಗಳ ಸಂಚಯನ ಪ್ರಕ್ರಿಯೆಯನ್ನು ಆರಂಭಿಸಿತ್ತು. ಕೋಟ್ ಗ್ರಾಮದ 3184 ಎಕರೆಗಳಷ್ಟು ಭೂಪ್ರದೇಶವನ್ನು ಸಂಚಯನ (ಕ್ರೋಢೀಕರಣ) ಮಾಡುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆದರೆ ಇವುಗಳ ಪೈಕಿ 2565 ಎಕರೆಗಳು ಅರಾವಳಿ ಬೆಟ್ಟದ ವ್ಯಾಪ್ತಿಗೊಳಪಡುತ್ತದೆ; ಇದು ಕೃಷಿಯೋಗ್ಯವಲ್ಲ ಮತ್ತು ಈ ಪ್ರಕ್ರಿಯೆಯ ಉದ್ದೇಶ ಸಫಲವಾಗದು ಎಂದು ಖೇಮ್ಕಾ ಸಮಗ್ರವಾಗಿ ವಿಚಾರಣೆ ನಡೆಸಿದಾಗ ತಿಳಿದುಬಂದಿತು. 2012ರ ಆಗಸ್ಟ್ 23ರಂದು ಅವರು ಪ್ರಕ್ರಿಯೆಗೆ ತಡೆಯೊಡ್ಡಿ ಆದೇಶ ಹೊರಡಿಸಿ ಹೀಗೆ ಬರೆಯುತ್ತಾರೆ: “ಕೃಷಿಯೋಗ್ಯವಲ್ಲದ ಗುಡ್ಡಗಾಡು ಪ್ರದೇಶಗಳನ್ನೂ ಸೇರಿಸಿಕೊಂಡು ಇಡೀ ಗ್ರಾಮದ ಸಂಚಯನ ಕಾರ್ಯ ಕೈಗೊಂಡರೆ, ಅದರಿಂದ ಹೊರಗಿನ ಕೆಲವು ಪ್ರಭಾವಶಾಲಿ ಖರೀದಿಗಾರರು ದುರ್ಲಾಭ ಪಡೆಯುತ್ತಾರೆ.” ನಂತರ ಫರಿದಾಬಾದ್ ನ ಕೋಟ್ ಮತ್ತು ಅನಂಗ್ ಪುರ್ ಹಾಗು ಸೋನಾ ತಾಲ್ಲೂಕಿನ ಬಂಧ್ವಾರಿ ಮತ್ತು ರೋಜ್ಕಾ-ಗುಜರ್ ಗ್ರಾಮಗಳ ಭೂ ಖರೀದಿಯಲ್ಲಿ ಕಂಪನಿಗಳ ಮೂಲಕ ಮಾಡಲಾಗಿರುವ ಅಗಾಧ ಬಂಡವಾಳ ಹೂಡಿಕೆಯನ್ನು ತನಿಖೆಗೊಳಪಡಿಸಬೇಕೆಂದು ಎಂದು ಅವರು ಸರ್ಕಾರಕ್ಕೆ ಪತ್ರವೊಂದರಲ್ಲಿ ಬರೆದಿದ್ದರು. ಈ ಹಳ್ಳಿಗಳಲ್ಲಿ ಜಮೀನು ಖರೀದಿಗೆಂದೇ ಬೃಹತ್ ಪ್ರಮಾಣದ ಕಪ್ಪುಹಣವನ್ನು ಹೂಡಲಾಗಿದೆ ಎನಿಸುತ್ತಿದೆ ಎಂದೂ ಅವರು ತಿಳಿಸಿದ್ದರು. “ಈ ಪ್ರದೇಶವು ಅಗಾಧವಾದ ಪ್ರಾಣಿ ಮತ್ತು ಸಸ್ಯ ವೈವಿಧ್ಯತೆಯನ್ನು ಹೊಂದಿದ್ದು ಅಂತರ್ಜಲ ಮರುಪೂರಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸಾರ್ವಜನಿಕ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳ ವಿಶಾಲ ಹರಹುಗಳನ್ನು ಹೊರಗಿನವರು ಸ್ವಾಧೀನಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಗ್ರಾಮಸ್ಥರು ಪವಿತ್ರವೆಂದು ಪರಿಗಣಿಸುವ ಮಂಗಾರ್ ಬನಿಯ ಆದಿಮ ತೋಪುಗಳೂ ಸೇರಿವೆ.” ಎಂದೂ ಸರ್ಕಾರದ ಗಮನಕ್ಕೆ ತಂದಿದ್ದರು. “ಗುರುಗ್ರಾಮದಲ್ಲಿ ದಮ್ದಮಾ ಸರೋವರದ ಪ್ರಮುಖ ಜಲಾನಯನ ಪ್ರದೇಶವಾದ, ಬಹುತೇಕ ಕಾಡುಗಳೇ ಆಗಿರುವ ವಾಸಯೋಗ್ಯವಲ್ಲದ ರೋಜ್ಕಾ-ಗುಜರ್” ಗ್ರಾಮದ ಸಂಚಯನ ಪ್ರಕ್ರಿಯೆಗೆಂದು ಹೊರಡಿಸಲಾಗಿದ್ದ ಅಧಿಸೂಚನೆಯನ್ನೂ ಖೇಮ್ಕಾ ಹಿಂಪಡಿದಿದ್ದರು. “ಅರಣ್ಯ ಸಂರಕ್ಷಣಾ ಕಾಯಿದೆಯಡಿ, ಈ ಎರಡು ಅಧಿಸೂಚನೆಗಳಡಿಯಲ್ಲಿ (ನಂತರ ಖೇಮ್ಕಾ ಅವರು ವಾಪಸ್ಸುಪಡೆದರು), ಭೂಮಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯಿಲ್ಲದೆ ಅರಣ್ಯಸಂಬಂಧಿತ ಚಟುವಟಿಕೆಗಳಿಗೆ ಹೊರತಾಗಿ ಬೇರಾವುದಕ್ಕೂ ಬಳಸುವಂತಿಲ್ಲ. ಇಂದು ಕಂದಾಯ ದಾಖಲೆಗಳಲ್ಲಿ ಯಾವನೊಬ್ಬ ಸ್ಥಳೀಯನೂ ಭೂಮಿಯ ಮಾಲೀಕ ಎನಿಸಿಲ್ಲ. ಇಡೀ ಪ್ರದೇಶವನ್ನೇ ಕೃಷಿ ಅಥವಾ ಬೇಸಾಯ ಚಟುವಟಿಕೆಗಳಲ್ಲಿ ಮೇಲ್ನೋಟಕ್ಕೂ ಯಾವುದೇ ಆಸಕ್ತಿ ತೋರದ, ಬಲಾಢ್ಯ ವ್ಯಾಪಾರಿ-ರಾಜಕೀಯ-ಅಧಿಕಾರಶಾಹಿ-ಪೊಲೀಸ್ ಲಾಬಿ ಖರೀದಿಮಾಡಿಬಿಟ್ಟಿದೆ” ಎಂದು ಸರ್ಕಾರಕ್ಕೆ ಅವರು ಸ್ಪಷ್ಟವಾಗಿ ತಿಳಿಸಿದ್ದರು.
ಸಂರಕ್ಷಿತ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ – ಬಿಜೆಪಿ ಸರ್ಕಾರದ ಕಾಯಿದೆ
ಇದೀಗ ಫೆಬ್ರವರಿ 1ರಂದು ಅದೇ ಇಲಾಖೆಯ ಮಹಾನಿರ್ದೇಶಕರು ಖೇಮ್ಕಾ ಹೊರಡಿಸಿದ್ದ ಆದೇಶವನ್ನು ಬದಲಿಸಿ ಅರವಾಳಿ ಬೆಟ್ಟಸಾಲುಗಳ ಕೋಟ್ ಮತ್ತಿತರ ಹಳ್ಳಿಗಳಲ್ಲಿ ಭೂ ಸಂಚಯನ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. “ಬೇಸಾಯ ಮಾಡುವ ಹಿಡುವಳಿಗಳ ಸಂಚಯನಕ್ಕಾಗಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದ ಉದ್ದೇಶ”ವನ್ನು ಘೋಷಿಸಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದಲ್ಲದೆ ಕಳೆದ ವಾರ ಹರ್ಯಾಣ ವಿಧಾನಸಭೆಯು 1900ರ ಪಂಜಾಬ್ ಭೂ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತಂದು ಅರಾವಳಿ ಶ್ರೇಣಿಯ ವ್ಯಾಪಕ ಪ್ರದೇಶಗಳನ್ನು ನಿರ್ಮಾಣ ಚಟುವಟಿಕೆಗೆ ಮುಕ್ತವಾಗಿಸಿದೆ.
ಭೂ ಖರೀದಿ ತನಿಖೆಯಾಗಲಿ – ಖೇಮ್ಕಾ
ಇತ್ತೀಚೆಗೆ ರಾಷ್ಟ್ರೀಯ ಪತ್ರಿಕೆಗೆ ನೀಡಿದ್ದ ಪ್ರತಿಕ್ರಿಯೆಯೊಂದರಲ್ಲಿ ಖೇಮ್ಕಾ ಅವರು, “ಇದಕ್ಕೆ ಸಂಬಂಧಪಟ್ಟ ಶೇ.80ರಷ್ಟು ಭೂಮಿ ಅರಾವಳಿಯ ಬೆಟ್ಟ ಮತ್ತು ಅರಣ್ಯಕ್ಕೆ ಸೇರಿದ್ದಾದ್ದರಿಂದ ಸಂಚಯನದ ಹೆಸರಿನಲ್ಲಿ ನಾಶವಾಗುತ್ತದೆ. ಸಾರ್ವಜನಿಕ ಆಸ್ತಿ ಸಂಪನ್ಮೂಲಗಳನ್ನು ಬೃಹತ್ ಖಾಸಗಿ ಹಿತಾಸಕ್ತಿಗಳು ಸ್ವಾಧೀನಪಡಿಸಿಕೊಂಡು, ಈಗಾಗಲೇ ಸೂಕ್ಷ್ಮವಾಗಿರುವ ರಾಷ್ಟ್ರ ರಾಜಧಾನಿ ಪ್ರದೇಶದ ಪರಿಸರವನ್ನು ಮತ್ತಷ್ಟು ವಿನಾಶಪಡಿಸುತ್ತವೆ. ಅರಾವಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ನಡೆಯುವ ಸಂಚಯನ ಪ್ರಕ್ರಿಯೆಗಳು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದಿಲ್ಲ, ಆದರೆ ಭೂ ತಿಮಿಂಗಿಲಗಳ ದುರಾಸೆಗೆ ತುಪ್ಪ ಸುರಿಯುತ್ತವೆ. ಭೂ ಖರೀದಿಗಳ ಕುರಿತು ತನಿಖೆ ನಡೆಸಿದರೆ ಸತ್ಯ ಬಯಲಾಗುತ್ತದೆ.” ಎಂದು ತಿಳಿಸಿದ್ದರು. ಮೇಲೆ ತಿಳಿಸಿದಂತೆ ಅವರ ಈ ಸಂದರ್ಶನ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಖೇಮ್ಕಾ ಅವರ ವರ್ಗಾವಣೆಯ ಆದೇಶವೂ ಹೊರಬಿದ್ದಿದೆ.
ಅಭಿವೃದ್ಧಿಯ ಸೋಗಿನಲ್ಲಿ ಭೂಕಬಳಿಕೆ ನಡೆಸುತ್ತಿರುವ ಬಿಜೆಪಿ
ಹರ್ಯಾಣದ ಬಿಜೆಪಿ ಸರ್ಕಾರವು ಖೇಮ್ಕಾರಂತಹ ಪ್ರಾಮಾಣಿಕ ಅಧಿಕಾರಿಗಳನ್ನು ನೈತಿಕವಾಗಿ ಕುಗ್ಗಿಸಿ, ಶಿಕ್ಷಿಸಿ ಭೂ ಕಬಳಿಕೆಯನ್ನು ಪ್ರೋತ್ಸಾಹಿಸುತ್ತಿರುವುದು ಸ್ಪಷ್ಟವಾಗಿದೆ. ಹಸಿರಿಲ್ಲದೆ ಜನ ಉಸಿರುಗಟ್ಟಿ ಹೆಸರಿಲ್ಲದೆ ಸಾಯುವುದಕ್ಕೆ ಕಾರಣವಾಗುತ್ತಿರುವ ಬಲಾಢ್ಯ ಕಾರ್ಪೊರೇಟ್ ಕಂಪನಿಗಳು – ಬೃಹತ್ ಉದ್ಯಮಿಗಳು ಈ ಪ್ರದೇಶದ ಕಾಡು-ನಾಡು ಎಲ್ಲವನ್ನೂ ಕಿತ್ತುತಿಂದು, ಮುಂದಿನ ಪೀಳಿಗೆಗಳಿಗೆ ಏನೊಂದನ್ನೂ ಉಳಿಸದಂತೆ ಬಾಚಿಕೊಳ್ಳಲು, ಅವರ ಪರವಾಗಿ ಹರ್ಯಾಣ ಸರ್ಕಾರ ಕಾನೂನನ್ನೇ ಮಾರ್ಪಾಟು ಮಾಡಿಬಿಟ್ಟಿದೆ! ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದೊಡನೆಯೇ 2013ರ ಭೂ ಸ್ವಾಧೀನ ಕಾಯಿದೆ ತಿದ್ದುಪಡಿಗೆ ಕೈಹಾಕಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಅದರ ಉದ್ದೇಶವೂ ರೈತರ ಜಮೀನನ್ನು ಕಸಿದು ಕಾರ್ಪೊರೇಟ್ ಕಂಪನಿಗಳಿಗೆ, ಭೂ ಮಾಫಿಯಾಗಳಿಗೆ ದಾನ ನೀಡುವುದಾಗಿತ್ತು. ದೇಶದ ಒಕ್ಕೊರಲ ಪ್ರತಿರೋಧದಿಂದಾಗಿ ಆ ತಿದ್ದುಪಡಿ ಜಾರಿಯಾಗಲಿಲ್ಲ, ಅಧ್ಯಾದೇಶವಾಗಿಯೇ ಉಳಿದು ಅಂತ್ಯವಾಗಬೇಕಾಯಿತು.

ಅಭಿವೃದ್ಧಿ ಎಂದರೆ ಬಲಾಢ್ಯರ ಜೊತೆ ಸೇರಿ ಪರಿಸರ ನಾಶಮಾಡುವುದಲ್ಲ, ದುಡಿಯುವ ಜನರ ಜೀವನಾಧಾರ ಕಸಿಯುವುದಲ್ಲ. ಪರಿಸರದ ಜೊತೆ ಸಮತೋಲನ ಕಾಯ್ದುಕೊಂಡು ಜನರ ಬದುಕಿನ ಬಗ್ಗೆ ದೀರ್ಘಾವಧಿಯ ಚಿಂತನೆ ಮಾಡುವ, ಸಾರ್ವಜನಿಕ ಆಸ್ತಿಪಾಸ್ತಿ ಉಳಿಸಿ ಬೆಳೆಸುವುದು ರಾಷ್ಟ್ರದ ಅಭಿವೃದ್ಧಿಯಾಗುತ್ತದೆ. ನೈಸರ್ಗಿಕ-ರಾಷ್ಟ್ರೀಯ ಸಂಪತ್ತನ್ನು ಲೂಟಿಮಾಡುವ ದಂಧೆಯನ್ನು ಸರ್ಕಾರಗಳು ಶಿಕ್ಷಿಸಬೇಕೇ ಹೊರತು ಸರ್ಕಾರವೇ ಅದರ ಭಾಗವಾಗಿಹೋದರೆ ಸಮಾಜ ಅಪಾಯದಲ್ಲಿದೆ ಎಂದರ್ಥ. ಚುನಾಯಿತ ಸರ್ಕಾರಗಳು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಗಣಿಲೂಟಿಕೋರರಿಂದ, ಭೂ ಕಬಳಿಕೆದಾರರಿಂದ, ದಂಧೆಕೋರರಿಂದ, ಉದ್ಯಮಿಗಳಿಂದ ಹಣ ಪಡೆದು, ಚುನಾವಣೆಯಲ್ಲಿ ಗೆದ್ದು ಬರುವವರಿಂದ ಇದನ್ನು ನಿರೀಕ್ಷಿಸಲಾದೀತೇ? ಇಂತಹವರನ್ನು ವಿರೋಧಿಸಿ ಜನಪರ ರಾಜಕಾರಣಿಗಳನ್ನು ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಭ್ರಷ್ಟಗೊಂಡಿರುವ ವ್ಯವಸ್ಥೆಯೊಳಗೆ ದಕ್ಷ, ನಿಷ್ಠಾವಂತ, ಪ್ರಾಮಾಣಿಕ, ಜನಪರ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಬೇಕು, ಅವರಿಗೆ ನಾವೆಲ್ಲರೂ ನೈತಿಕ ಸ್ಥೈರ್ಯ ನೀಡಬೇಕು.
-
ಜ್ಯೋತಿ ಎ.