ಕಲಬುರಗಿಯ ಎನ್.ವಿ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಕಲಬುರಗಿ ಜಿಲ್ಲೆ ತ್ಯಾಗ–ಪರಿಶ್ರಮಕ್ಕೆ ಹೆಸರಾಗಿದೆ. ಈ ನೆಲೆದ ಬಸವಣ್ಣ, ಹನುಮ ಗಾಣಿಗಪುರದ ದತ್ತಾತ್ರೇಯನಿಗೆ ನಮ್ಮ ನಮನಗಳು ಎಂದು ಹಿಂದಿ ಲೇಪಿತ ಕನ್ನಡ ಮಾತನಾಡಿದರು.
ಕರ್ನಾಟಕ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಸಿಎಂ ಆಗಿದ್ದಾರೆ ಎಂದು ವ್ಯಂಗ್ಯವಾಡಿದ ಮೋದಿ ಅವರು, ರಾಜ್ಯದ ಮೃತ್ರಿ ಸರ್ಕಾರದ ಲೋಪಗಳನ್ನು ಟೀಕಿಸಿದರು. ಜನಸಾಮಾನ್ಯ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕಾಗಿ ಹಲವು ಯೋಜನೆಗಳನ್ನು ನೀಡಿದೆ. ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುವಂತೆ ನಮ್ಮ ಸರ್ಕಾರ ಯೋಜನೆ ರೂಪಿಸಿದೆ ಎಂದರು.
ದೇಶದಲ್ಲಿ ಕರ್ನಾಟಕದವೂ ಸೇರಿದಂತೆ ಆರು ರಾಜ್ಯಗಳಲ್ಲಿ ಇಎಸ್ಐ ವೈದ್ಯಕೀಯ ಸೌಲಭ್ಯ ಇದೆ. ಇದೀಗ ರಾಜಾಜಿನಗರದಲ್ಲಿ ನಿರ್ಮಾಣವಾದ ಇಎಸ್ಐಸಿ ಹಾಗೂ ವೈದ್ಯಕೀಯ ಕಾಲೇಜು ಲೋಕಾರ್ಪಣೆ ಮಾಡುವ ಮೂಲಕ ಉನ್ನತ ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಗಿತವಾಗಿದ್ದ ಯೋಜನೆಗಳನ್ನೂ ನಮ್ಮ ಸರ್ಕಾರ ಪೂರ್ಣಗೊಳಿಸಿದೆ ಎಂದು ತಮ್ಮ ಸರ್ಕಾರವನ್ನು ಶ್ಲಾಘಿಸಿಕೊಂಡರು.
ಆರೋಗ್ಯ ಸಂಬಂಧ ಎರಡು ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ಆಯುಷ್ಮಾನ್ ಭಾರತದಂತಹ ಮಹತ್ವಪೂರ್ಣ ಯೋಜನೆಯನ್ನು ನಮ್ಮ ಸರ್ಕಾರ ತಂದಿದೆ. ಯಾವುದೇ ಮಧ್ಯವರ್ತಿ ಇಲ್ಲದೆ 10 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳು ಪ್ರತಿ ದಿನ ಆಯುಷ್ಮಾನ್ ಯೋಜನೆ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುಷ್ಮಾನ್ ಯೋಜನೆಯ ಫಲಾನುಭವಿಗಳ ಸ್ವತಃ ಮಾತನಾಡಿದ್ದು, ಅವರ ಅನುಭವವನ್ನು ಕೇಳಿ ಆಶಯಗಳನ್ನು ಈಡೇರಿಸುತ್ತಿದ್ದಾರೆ.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ಕೋಟಿಗೂ ಹೆಚ್ಚು ಮಂದಿಗೆ ತೆರಿಗೆ ವಿನಾಯಿತಿ ನೀಡಿದ್ದೇವೆ, ಅಂಸಘಟಿತ ವಲಯದ ಶ್ರಮಿಕರಿಗೆ ಪಿಂಚಣಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ ಎಂದು ತಮ್ಮ ಯೋಜನೆಗಳ ಬಗ್ಗೆ ಪ್ರಚಾರ ಮಾಡಿದರು.
ಸಮಾವೇಶದಲ್ಲಿ ಭಾಗವಹಿಸಲು ಬೀದರ್ ನ ಏರ್ ಬೇಸ್ ಮೂಲಕ ಕಲಬುರಗಿ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆದ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ನಂತರ ಆಯುಷ್ಮಾನ್ ಭಾರತದ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲೂ ಭಾಗವಹಿಸಿದರು.
ಮೋದಿ ಅವರ ಆಗಮನಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದ ಶಾಸಕ ಮೇಶ್ ಜಾಧವ್ ಅವರನ್ನು ಪಕ್ಷದ ಬಾವುಟ ನೀಡುವ ಮೂಲಕ ಬಿಜೆಪಿ ಮುಖಂಡರು ಬರಮಾಡಿಕೊಂಡರು.
ಸಿಎಂ ಕುಮಾರಸ್ವಾಮಿ ಟೀಕೆ
ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಹೇಳಿಕೆಗಳನ್ನು ಖಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮೋದಿ ಅವರು ಯಾವುದೇ ವಿಷಯವಾಗಲಿ ಸರಿಯಾಗಿ ಮಾಹಿತಿ ತಿಳಿದು ನಂತರ ಮಾತನಾಡಲಿ ಎಂದು ಮೋದಿ ವಿರುದ್ಧ ಹರಿಹಾಯ್ದರು.
ನಾನು ಎಂದಿಗೂ ಪ್ರಸ್ತಾಪಿಸದ ವಿಷಯಕ್ಕೆ ಮೋದಿ ಅವರು ಪ್ರತಿಕ್ರಿಯಿಸಿರುವುದು ಅಚ್ಚರಿ ಮೂಡಿಸಿದೆ. ರೈತರ ಸಾಲಮನ್ನಾ ವಿಚಾರದ ಬಗ್ಗೆ ಮೋದಿ ಅವರು ಎರಡನೇ ಬಾರಿ ಸುಳ್ಳು ಸುಳ್ಳು ಹೇಳಿಗಳನ್ನು ನೀಡುತ್ತಿದ್ದಾರೆ. ಇಂತ ಪೊಳ್ಳು ಹೇಳಿಕೆಗಳು ನಮ್ಮ ಸಮ್ಮಿಶ್ರ ಸರ್ಕಾರ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆ ತರುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
I am amused to see Hon'ble Prime Minister @narendramodi reacting to a statement which I never made. After farmers loan this is the second time he is reacting to false information/statement.
Such statements won't deter our coalition government from the development agenda.
— CM of Karnataka (@CMofKarnataka) January 12, 2019
ಬಿಜೆಪಿ ಸಮಾವೇಶದ ಕುರಿತು ಪ್ರತಿಕ್ರಿಯಿಸಿದ, ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಕಾರಣ ನಮ್ಮ ತಂದೆಯವರನ್ನು ಗುರಿ ಮಾಡಿ ಈ ಸಮಾವೇಶ ನಡೆಸುತ್ತಿದ್ದಾರೆ. ನಮ್ಮ ತಂದೆಯವರು ಎಲ್ಲಿಯೂ ಇದು ತನ್ನ ಕೊನೆ ಚುನಾವಣೆ ಎಂದು ಹೇಳಿಲ್ಲಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಈರಣ್ಣ ಝಳಕಿ ನೇತೃತ್ವದಲ್ಲಿ ನೂರಾರು ಯುವ ಕಾರ್ಯಕರ್ತರು, ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸುಳ್ಳಿನ ಸರದಾರ ನರೇಂದ್ರ ಮೋದಿ, ಪ್ರಧಾನಿ ನರೇಂದ್ರ ಮೋದಿ ಚೌಕಿದಾರ್, ಗೋ ಬ್ಯಾಕ್ ಮೋದಿ ಎಂಬ ಘೋಷಣೆಗಳ ಮೂಲಕ ಪ್ರತಿಭಟನಾಕಾರರು ಮೋದಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಕೂಡಲೇ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದರು.