ದೇಶದ ರಕ್ಷಣಾ ಖರೀದಿಯ ಇತಿಹಾಸದಲ್ಲೇ ಅತಿದೊಡ್ಡದೆನ್ನಲಾದ ರಾಫೇಲ್ ಬಹುಕೋಟಿ ರಕ್ಷಣಾ ಹಗರಣದ ಕುರಿತ ತನ್ನ ತೀರ್ಪನ್ನು ಮರುಪರಿಶೀಲನೆಗೊಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದ ಸುಪ್ರೀಂಕೋರ್ಟಿನ ಮುಂದೆ ಬುಧವಾರ ಇಡೀ ದೇಶವೇ ಬೆಚ್ಚಿಬೀಳುವ ಸಂಗತಿಯೊಂದು ಬಯಲಾಗಿದೆ. ‘ನಾ ಖಾವೂಂಗಾ, ನಾ ಖಾನೆ ದೂಂಗಾ(ನಾನೂ ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ)’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ನರೇಂದ್ರ ಮೋದಿಯವರ ಸರ್ಕಾರದ ಅವಧಿಯ ಬಹುದೊಡ್ಡ ಹಗರಣ ಎಂದೇ ಹೇಳಲಾಗುತ್ತಿರುವ ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳವಾಗಿವೆ!
ಈ ಆಘಾತಕಾರಿ ಮಾಹಿತಿಯನ್ನು ಬಹಿರಂಪಡಿಸಿದ್ದು ಮತ್ತಾರೂ ಅಲ್ಲ; ಸ್ವತಃ ಸರ್ಕಾರದ ಪರ ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್(ಸರ್ಕಾರಿ ವಕೀಲ) ಕೆ ಕೆ ವೇಣುಗೋಪಾಲ್!
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ಡಿಸೆಂಬರ್ 14ರಂದು ಸುಪ್ರೀಂಕೋರ್ಟ್ ರಾಫೇಲ್ ಒಪ್ಪಂದದಲ್ಲಿ ಸರ್ಕಾರದ ಹೇಳಿಕೆಯ ಪ್ರಕಾರ ಯಾವುದೇ ಅವ್ಯವಹಾರ ನಡೆದಿರುವ ಬಗ್ಗೆ ನ್ಯಾಯಾಲಯಕ್ಕೆ ಶಂಕೆ ಇಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಆ ಬಳಿಕ ಕೇಂದ್ರ ಸರ್ಕಾರ ಕೋರ್ಟಿಗೆ ಒದಗಿಸಿದ್ದ ಮಾಹಿತಿ ತಪ್ಪಾಗಿದೆ ಎಂಬುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಿತ್ತು. ಜೊತೆಗೆ, ಕಳೆದ ಒಂದು ತಿಂಗಳಿಂದ ‘ದ ಹಿಂದೂ’ ಪತ್ರಿಕೆಯಲ್ಲಿ ಒಪ್ಪಂದದಲ್ಲಿ ಪ್ರಧಾನಿ ಸಚಿವಾಲಯ ಮತ್ತು ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಹೇಗೆ ಮೂಗು ತೂರಿಸಿ, ಮೋದಿ ಆಪ್ತ ಉದ್ಯಮಿಯೊಬ್ಬರ ಪರ ಒಪ್ಪಂದವನ್ನು ಮಾಡಿದ್ದಾರೆ ಎಂಬ ಕುರಿತು ಸರಣಿ ತನಿಖಾ ವರದಿಗಳು ಪ್ರಕಟವಾಗಿದ್ದವು. ಆ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ, ಬಿಜೆಪಿ ನಾಯಕ ಹಾಗೂ ಪತ್ರಕರ್ತ ಅರುಣ್ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರುಗಳು ಡಿ.14ರ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟಿನ ಮೊರೆಹೋಗಿದ್ದರು.
ಈ ಮೊದಲು ರಾಫೇಲ್ ಪ್ರಕರಣದ ಕುರಿತ ಗೌಪ್ಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಬಾರಿ ತೆರೆದ ನ್ಯಾಯಾಲಯದಲ್ಲೇ ಕಲಾಪ ಆರಂಭಿಸಿತು. ವಿಚಾರಣೆ ಆರಂಭವಾಗುತ್ತಲೇ ಸಿಜೆಐ ನ್ಯಾ. ರಂಜನ್ ಗೊಗಾಯಿ, ನ್ಯಾ. ಎಸ್ ಕೆ ಕೌಲ್ ಮತ್ತು ನ್ಯಾ. ಕೆ ಎಂ ಜೋಸೆಫ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ಖುದ್ದು ಹಾಜರಾದ ಪ್ರಶಾಂತ್ ಭೂಷಣ್, ದ ಹಿಂದೂ ಸೇರಿದಂತೆ ವಿವಿಧ ಮಾಧ್ಯಮ ವರದಿ ಮತ್ತು ಕೆಲವು ದಾಖಲೆಗಳನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಕೆಲವು ಮಹತ್ವದ ಸಂಗತಿಗಳನ್ನು ನ್ಯಾಯಾಲಯದಿಂದ ಮುಚ್ಚಿಟ್ಟಿದೆ. ಆ ಹಿನ್ನೆಲೆಯಲ್ಲಿ ಹಿಂದಿನ ತೀರ್ಪನ್ನು ಪುನರ್ ಪರಿಶೀಲಿಸಬೇಕಿದೆ ಎಂದು ಮನವಿ ಮಾಡಿದರು.
ಆದರೆ, ಅಷ್ಟರಲ್ಲಿ ಅವರ ಕೋರಿಕೆಗೆ ಆಕ್ಷೇಪ ಸಲ್ಲಿಸಿದ, ಅಟಾರ್ನಿ ಜನರಲ್ ವೇಣುಗೋಪಾಲ್, ರಾಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮಹತ್ವದ ರಹಸ್ಯ ದಾಖಲೆಗಳು(ಕ್ಲಾಸಿಫೈಡ್) ಕಳವಾಗಿವೆ. ಕಳವಾದ ದಾಖಲೆಗಳನ್ನೇ ಇಟ್ಟುಕೊಂಡು ಮಾಧ್ಯಮ ವರದಿಗಳು ಪ್ರಕಟವಾಗಿವೆ ಮತ್ತು ಅರ್ಜಿದಾರರು ಪ್ರಸ್ತಾಪಿಸಿರುವುದು ಕೂಡ ಕಳವಾದ ದಾಖಲೆಗಳನ್ನೇ. ಹಾಗಾಗಿ ದೇಶದ ಭದ್ರತೆ ದೃಷ್ಟಿಯಿಂದ ಇಂತಹ ಕದ್ದ ದಾಖಲೆಗಳನ್ನು ನ್ಯಾಯಾಲಯ ಸಾಕ್ಷ್ಯವಾಗಿ ಪರಿಗಣಿಸಿ ಪ್ರಕರಣದ ಮರುವಿಚಾರಣೆ ನಡೆಸುವುದು ಸರಿಯಲ್ಲ ಎಂಬ ವಾದ ಮುಂದಿಟ್ಟರು.
ಆಗ, “ಅಂತಹ ಮಹತ್ವದ ರಹಸ್ಯ ದಾಖಲೆಗಳು ಕಳುವಾಗಿದೆ ಎನ್ನುವುದಾದರೆ, ಇಷ್ಟು ದಿನಗಳವರೆಗೆ (ಫೆ.8ರಂದು ದ ಹಿಂದೂ ಆ ಕುರಿತ ಮೊದಲ ವರದಿ ಪ್ರಕಟಿಸಿತ್ತು) ಸರ್ಕಾರ ಏನು ಮಾಡುತ್ತಿದೆ” ಎಂದು ನ್ಯಾಯಪೀಠ ಪ್ರಶ್ನಿಸಿತು. ಆಗ, “ಕಳವುವಾಗಿರುವುದು ದೇಶದ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಕ್ಲಾಸಿಫೈಡ್ ದಾಖಲೆಗಳು. ರಕ್ಷಣಾ ಇಲಾಖೆಯ ಮಾಜಿ ಸಿಬ್ಬಂದಿ ಕಳವು ಮಾಡಿರುವ ಶಂಕೆ ಇದೆ. ಹಾಗಾಗಿ ಈಗಾಗಲೇ ಆ ಬಗ್ಗೆ ತನಿಖೆ ನಡೆಯುತ್ತಿದೆ. ದಾಖಲೆಗಳು ಕಳವಾಗಿರುವುದು ಹೇಗೆ ಎಂದು ನ್ಯಾಯಾಲಯ ಕೇಳಬಾರದು. ಹಾಗೇ ಕೇಳಿದರೆ ದೇಶದ ಸುರಕ್ಷತೆಗೆ ಧಕ್ಕೆ ಬರಬಹುದು. ಪಾಕಿಸ್ತಾನದ ಎಫ್ 16 ಯುದ್ಧವಿಮಾನಗಳ ಎದುರು ಸೆಣೆಸಲು ನಮಗೆ ರಾಫೇಲ್ ಬೇಕೇಬೇಕು. ಈ ಪ್ರಕರಣದ ವಿಚಾರಣೆ ನಡೆಸಿದರೆ, ಅದನ್ನೇ ಬಳಸಿಕೊಂಡು ಮುಂದೆ ದೇಶವನ್ನೇ ಅಸ್ಥಿರಗೊಳಿಸಬಹುದು. ಹಾಗಾಗಿ ದೇಶದ ಸುರಕ್ಷತೆಯ ಪ್ರಶ್ನೆ ಇರುವುದರಿಂದ ರಾಫೇಲ್ ಪ್ರಕರಣದ ಮರು ವಿಚಾರಣೆ ಅರ್ಜಿಗಳನ್ನು ತಳ್ಳಿಹಾಕಬೇಕು” ಎಂದು ವೇಣುಗೋಪಾಲ್ ಮನವಿ ಮಾಡಿದರು.
ಅಟಾರ್ನಿ ಜನರಲ್ ಅವರ ಆ ಮಾತಿಗೆ, “ಭ್ರಷ್ಟಾಚಾರದಂತಹ ಗಂಭೀರ ಆರೋಪದ ಸಂದರ್ಭದಲ್ಲಿ ದೇಶದ ಸುರಕ್ಷತೆಯ ನೆಪವೊಡ್ಡಿ ಯಾರಾದರೂ ವಿಚಾರಣೆಯಿಂದ ರಕ್ಷಣೆ ಪಡೆಯಲು ಸಾಧ್ಯವಾ? ಪ್ರಕರಣದ ತನಿಖೆಗೆ ನ್ಯಾಯಾಲಯ ಆದೇಶ ನೀಡಬೇಕೆ ಬೇಡವೇ ಎಂಬುದಷ್ಟೇ ಮುಖ್ಯ ವಿನಃ, ಇಲ್ಲಿ ರಾಷ್ಟ್ರೀಯ ಸುರಕ್ಷತೆಯ ಪ್ರಶ್ನೆ ಉದ್ಭವಿಸದು. ಇನ್ನು ಕಳವು ಮಾಡಿದ ದಾಖಲೆಗಳನ್ನು ನ್ಯಾಯಾಲಯ ಸಾಕ್ಷ್ಯವಾಗಿ ಪರಿಗಣಿಸಿ ವಿಚಾರಣೆ ನಡೆಸಲು ಎವಿಡೆನ್ಸ್ ಆಕ್ಟ್ ನಲ್ಲಿ ಅವಕಾಶವಿದ್ದೇ ಇದೆ. ಆ ಬಗ್ಗೆ ಅನುಮಾನ ಬೇಡ. ಒಂದು ವೇಳೆ ಭ್ರಷ್ಟಾಚಾರ ನಡೆದಿದ್ದರೆ, ಸರ್ಕಾರ ದೇಶದ ಸುರಕ್ಷತೆಯ ನೆಪವೊಡ್ಡಿ ತಪ್ಪಿಸಿಕೊಳ್ಳಲಾಗದು” ಎಂದು ಚಾಟಿ ಬೀಸಿದರು.
ಬಳಿಕ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಲಾಯಿತು.
ಈ ನಡುವೆ, ರಕ್ಷಣಾ ಇಲಾಖೆಯ ಅತ್ಯಂತ ರಹಸ್ಯ ದಾಖಲೆ ಎಂದು ಕ್ಲಾಸಿಫೈ ಮಾಡಿದ್ದ ರಾಫೇಲ್ ಒಪ್ಪಂದದ ದಾಖಲೆಗಳೇ ಕಳವಾಗಿವೆ ಎಂದು ಸರ್ಕಾರ ಇದೀಗ ಸುಪ್ರೀಂಕೋರ್ಟಿನ ಮುಂದೆಯೇ ಒಪ್ಪಿಕೊಂಡಿದ್ದು, ದೇಶಾದ್ಯಂತ ಚೌಕಿದಾರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವ್ಯಾಪಕ ಟೀಕೆಗಳು ಭುಗಿಲೆದ್ದಿವೆ. ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ #ChowkidarChorHai (‘ಚೌಕಿದಾರ್ ಚೋರ್ ಹೈ) ಎಂಬ ಹ್ಯಾಶ್ ಟ್ಯಾಗ್ ಟ್ರಂಟ್ ಆಗಿದ್ದು, ಜೊತೆಗೆ ಸರ್ಕಾರದ ದಾಖಲೆಗಳನ್ನೇ ಕಾಯಲಾಗದ ರಕ್ಷಣಾ ಸಚಿವೆ ದೇಶವನ್ನು ಕಾಯಬಲ್ಲರೇ? ಹಾಗೂ #FIRagainstCorruptModi ಹ್ಯಾಶ್ ಟ್ಯಾಗ್ ಮೂಲಕ ಭ್ರಷ್ಟ ಮೋದಿ ವಿರುದ್ಧ ಎಫ್ ಐ ಆರ್ ದಾಖಲಿಸಿ ಎಂಬ ಹೇಳಿಕೆಗಳು ಸದ್ದು ಮಾಡಿವೆ.
ಈ ನಡುವೆ, ಕಾಂಗ್ರೆಸ್ ತನ್ನ ‘ಚೌಕಿದಾರ್ ಚೋರ್ ಹೈ’ ಘೋಷಣೆಗೆ ಮರುಜೀವ ನೀಡಿದ್ದು, ಪ್ರಧಾನಿ ಮೋದಿ ಭ್ರಷ್ಟಾಚಾರ ನಡೆಸಿರುವುದು ಈ ದಾಖಲೆಗಳ ನಾಪತ್ತೆ ಮೂಲಕ ಖಾತ್ರಿಯಾಗಿದೆ. ಹಗರಣವನ್ನು ಮುಚ್ಚಿಹಾಕಲು ಸರ್ಕಾರ ದಾಖಲೆ ಕಳವು ಕಥೆಕಟ್ಟಿದೆ. ಈ ಹಿಂದೆ ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಸಿಎಂ ಪರಿಕ್ಕರ್ ಅವರ ಬಳಿ ರಾಫೇಲ್ ದಾಖಲೆಗಳಿರುವ ಆಡಿಯೋ ಕ್ಲಿಪ್ ಹೊರಬಿದ್ದಿತ್ತು. ಇದೀಗ ಸ್ವತಃ ಸರ್ಕಾರವೇ ದಾಖಲೆ ತನ್ನ ಬಳಿ ಇಲ್ಲ ಎಂದಿದೆ. ಹಾಗಾಗಿ ಪ್ರಧಾನಿ ಮೋದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಪ್ರಕರಣದ ಅರ್ಜಿದಾರರಾದ ಪ್ರಶಾಂತ್ ಭೂಷಣ್ ಅವರು, ಸರ್ಕಾರದ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, “ಈ ಹಿಂದೆ 2ಜಿ ಮತ್ತು ಕಲ್ಲಿದ್ದಲ್ಲು ಹಗರಣದ ಸಂದರ್ಭದಲ್ಲಿಯೂ ತಮಗೆ ಅನಾಮಿಕ ಮೂಲಗಳಿಂದಲೇ ದಾಖಲೆ ಸಿಕ್ಕಿದ್ದವು. ಆ ದಾಖಲೆಗಳ ಆಧಾರದ ಮೇಲೆಯೇ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈಗಲೂ ಅದೇ ರೀತಿ ಆಗಬೇಕಿದೆ. ದಾಖಲೆಗಳ ಮೂಲವನ್ನು ಬಹಿರಂಗಪಡಿಸಲಾರೆ” ಎಂದಿದ್ದಾರೆ. ಹಾಗೇ, ರಾಫೇಲ್ ಹಗರಣದ ಕುರಿತ ಮಹತ್ವದ ಸಾಕ್ಷ್ಯಸಹಿತ ಬಹುಕೋಟಿ ಭ್ರಷ್ಟಾಚಾರದ ಹಗರಣದ ವಿವರಗಳನ್ನು ಬಯಲಿಗೆಳೆದಿರುವ ದ ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತ ಎನ್ ರಾಮ್ ಅವರೂ, “ತಮ್ಮ ದಾಖಲೆಗಳು ಮೂಲವನ್ನು ಬಹಿರಂಗಪಡಿಸಲಾರೆ. ಮೂಲಗಳ ಗೌಪ್ಯತೆ ಕಾಯುವುದು ಪತ್ರಕರ್ತನಾಗಿ ನನ್ನ ಹೊಣೆ” ಎಂದಿದ್ದಾರೆ.
ಈ ನಡುವೆ, ದೇಶದ ಸುರಕ್ಷತೆ ಮತ್ತು ಭದ್ರತೆಯ ಅಸ್ತ್ರವನ್ನೇ ಮುಂದೆ ಮಾಡಿ ಹಗರಣದಿಂದ ಪಾರಾಗಲು ಪ್ರಯತ್ನಿಸುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರ, ಅಂತಹ ಮಹತ್ವದ ದಾಖಲೆಗಳು ಕಳವಾಗಿ ಎಷ್ಟು ದಿನವಾಯಿತು? ಯಾವಾಗ ಮತ್ತು ಹೇಗೆ ಕಳವಾದವು? ಕಳವಾದ ಬಗ್ಗೆ ಕೂಡಲೇ ಪ್ರಕರಣ ದಾಖಲಿಸಲಾಗಿದೆಯೇ? ಎಫ್ ಐಆರ್ ದಾಖಲಾಗಿದೆಯೇ? ದಾಖಲೆಗಳು ಎಲ್ಲಿದ್ದವು? ಅವುಗಳಿಗೆ ಯಾವ ರಕ್ಷಣೆ ಒದಗಿಸಲಾಗಿತ್ತು? ಅಂತಹ ರಕ್ಷಣಾ ವ್ಯವಸ್ಥೆಯನ್ನೂ ಮೀರಿ ಸ್ವತಃ ರಕ್ಷಣಾ ಇಲಾಖೆಯ ದಾಖಲೆಗಳನ್ನೇ ಕಳ್ಳರು ಕದಿಯುವುದು ಸಾಧ್ಯವೆಂದಾದರೆ, ತಮ್ಮನ್ನು ತಾವು ‘ನಿಯತ್ತಿನ ಚೌಕಿದಾರ’, ‘ದೇಶ ಬಲಿಷ್ಠ ಕೈಗಳಲ್ಲಿ ಸುರಕ್ಷಿತವಾಗಿದೆ’ ಎಂದೆಲ್ಲಾ ಬಿಂಬಿಸಿಕೊಳ್ಳುವ ಪ್ರಧಾನಿ ಮೋದಿಯವರು ದೇಶದ ಭವಿಷ್ಯವನ್ನು ಹೇಗೆ ಕಾಯಬಲ್ಲರು ಎಂಬ ಪ್ರಶ್ನೆಗಳು ಪ್ರತಿಪಕ್ಷ ಮತ್ತು ಸಾಮಾಜಿಕ ಜಾಲತಾಣಗಳಿಂದ ಕೇಳಬಂದಿವೆ.
ಆದರೆ, ಈವರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಲೀ, ಮೋದಿ ಸೇರಿದಂತೆ ಕೇಂದ್ರದ ಸಚಿವರಾಗಲೀ ಈ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಚುನಾವಣೆ ಹೊಸ್ತಿಲಲ್ಲಿ ರಾಫೇಲ್ ಉರುಳು ದಿನದಿಂದ ದಿನಕ್ಕೆ ಬಿಜೆಪಿ ಪಾಲಿಗೆ ಬಿಗಿಯಾಗುತ್ತಲೇ ಇದೆ.