ಕಳೆದ ವಾರ ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೆ ಕಾನ್ಕ್ಲೇವ್ ನಲ್ಲಿ ಭಾರತದಲ್ಲಿ ಇಂದಿನ ದಲಿತರ ಸ್ಥಿತಿಗತಿಗಳು ಮತ್ತು ಮಾನವಹಕ್ಕುಗಳ ಬಗ್ಗೆ ಚರ್ಚೆ-ಸಂವಾದ ಏರ್ಪಟ್ಟಿತ್ತು. ದೇಶದಲ್ಲಿ ಪೌರಕಾರ್ಮಿಕರ ಹಕ್ಕುಗಳಿಗಾಗಿ ಮತ್ತು ಮಲ ಹೊರುವ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನ (ಎಸ್ ಕೆ ಎ) ಸಂಘಟನೆಯ ರಾಷ್ಟ್ರೀಯ ಸಂಚಾಲಕರಾಗಿರುವ ಬೆಜ್ವಾಡ ವಿಲ್ಸನ್ ಈ ಗೋಷ್ಠಿಯಲ್ಲಿ ಮಾತನಾಡಿ, ಮನುಷ್ಯವಿರೋಧಿಯಾಗಿರುವ ಮಲ ಹೊರುವ ಪದ್ಧತಿ (Manual Scavenging) ಇನ್ನೂ ಚಾಲ್ತಿಯಲ್ಲಿರುವ ಬಗ್ಗೆ, ಅದನ್ನು ನಿರ್ಮೂಲನೆ ಮಾಡಲು ರಾಜಕೀಯ ಇಚ್ಚಾಶಕ್ತಿ ಕೊರತೆಯ ಬಗ್ಗೆ ನೋವುತುಂಬಿದ ಆಕ್ರೋಶ ವ್ಯಕ್ತಪಡಿಸಿದರು; ಪೌರಕಾರ್ಮಿಕರ ಘನತೆಯ ಬದುಕಿನ ಹಕ್ಕುಗಳನ್ನು ಖಾತ್ರಿಪಡಿಸಬೇಕೆಂದು ಇಡೀ ಸಮಾಜವನ್ನು ಆಗ್ರಹಿಸಿದರು. ಇದು ಅವರ ಕೂಗು ಮಾತ್ರವಲ್ಲ, ನಾಗರಿಕ ಸಮಾಜದಲ್ಲಿ ನಾಗರಿಕರೆನಿಸಿಕೊಂಡು ಜೀವಿಸುತ್ತಿರುವ ನಮ್ಮೆಲ್ಲರೊಳಗಿನ ಸಂವೇದನೆಯಾಗಬೇಕು. ಇಂತಹ ಮನುಷ್ಯವಿರೋಧಿ ಅನಿಷ್ಟ ಪದ್ಧತಿಯನ್ನು ಬೇರುಸಮೇತ ಕಿತ್ತೊಗೆದು, ಶತಶತಮಾನಗಳಿಂದ ಮಲದ ಕೂಪದೊಳಗೆ ಸಮಾಜವೇ ತಳ್ಳಿರುವ ಅಮಾಯಕ ಜನರನ್ನು ಈಗಲಾದರೂ ಅದರಿಂದ ಬಿಡಿಸಿ, ಅವರ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿಯೂ ನಮ್ಮದಾಗಬೇಕು. ಈ ಮಹತ್ತರ ಹೊಣೆ ಚುನಾಯಿತ ಸರ್ಕಾರಗಳ ಮೇಲಿದೆ. ನಾವೆಲ್ಲರೂ ಪ್ರಭುತ್ವದ ಮೇಲೆ ಒತ್ತಡ ಹೇರಿ, ತಲತಲಾಂತರಗಳಿಂದ ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ಪರಂಪರಾಗತವಾಗಿ ಸಫಾಯಿ ಕರ್ಮಚಾರಿ ಕಸುಬು ಮಾಡಿಕೊಂಡೇ ಬದುಕುತ್ತಿದ್ದ ಕೆಜಿಎಫ್ ನ ‘ಅಸ್ಪೃಶ್ಯ’ ದಲಿತ ಕುಟುಂಬವೊಂದರಲ್ಲಿ ಹುಟ್ಟಿದ ಬೆಜ್ವಾಡ ವಿಲ್ಸನ್ ರ ಮನೆಯಲ್ಲಿ ಎಲ್ಲರೂ ಸಫಾಯಿ ಕರ್ಮಚಾರಿಗಳಾಗಿದ್ದವರೇ. ವಿಲ್ಸನ್ ಇದರಿಂದ ಹೊರಬರಬೇಕೆಂಬ ಒತ್ತಾಸೆಯಿಂದ ಶಿಕ್ಷಣ ಪಡೆದರು. ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದಾಗ, ಅಲ್ಲಿ ಅವರ ಜಾತಿಯನ್ನೇ ಪರಿಗಣಿಸಿ ಪುನಃ ಪೌರಕಾರ್ಮಿಕರ ಹುದ್ದೆಯನ್ನು ನೀಡಲು ಕೇಂದ್ರವು ಮುಂದಾಯಿತು. ಆಗ ವಿಲ್ಸನ್ ಅವರ ಸ್ವಾಭಿಮಾನ ಕೆರಳಿತು, ನೌಕರಿಯ ಪತ್ರವನ್ನು ಹರಿದು ಬಿಸಾಡಿ, ಮನುಷ್ಯರ ಘನತೆಯನ್ನು ಕೊಂದಿದ್ದ ಕುಲಕಸುಬನ್ನು ನಿರಾಕರಿಸಿ, ಜಡ್ಡುಗಟ್ಟಿದ ಕೊಳಕು ಸಮಾಜವನ್ನು ಶುದ್ಧಗೊಳಿಸಲು ಹೆಜ್ಜೆಹಾಕಿದರು. ದಲಿತ ಯುವಕನೊಬ್ಬ ವಿದ್ಯಾವಂತನಾದರೂ ಅವನ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕಲ್ಪಿಸದೆ, ಅವನ ಕೈಗಳಿಗೆ ಪೊರಕೆಯನ್ನೇ ನೀಡುವ ಸಮಾಜದ ಬಗ್ಗೆ ಸಾತ್ವಿಕವಾಗಿ ಕೋಪಗೊಂಡು ಈ ಪದ್ಧತಿಯ ವಿರುದ್ಧ ಸಿಡಿದೆದ್ದರು.
ಅಮಾನವೀಯ ಮಲಹೊರುವ ಪದ್ಧತಿಯ ನಿರ್ಮೂಲನೆಗಾಗಿ ದೇಶದ ಮೂಲೆ ಮೂಲೆ ಸುತ್ತಿ, ಜನಸಂಘಟನೆ ಕಟ್ಟಿ, ಸರ್ಕಾರಗಳ ನೀತಿ ನಿರೂಪಣೆಯ ಮಟ್ಟದಲ್ಲಿಯೂ ಎಡೆಬಿಡದೆ ಕೆಲಸ ಮಾಡುತ್ತಿರುವ ಬೆಜ್ವಾಡ ವಿಲ್ಸನ್ ಅವರ ಕಾರ್ಯವೈಖರಿಯನ್ನು ಅಂತರರಾಷ್ಟ್ರೀಯ ಸಂಸ್ಥೆಗಳೂ ಗುರುತಿಸಿ ಮ್ಯಾಗ್ಸೆಸೆಯಂತಹ ಪ್ರಶಸ್ತಿಯನ್ನೂ ನೀಡಿ ಗೌರವಿಸಿದವು.
ಕಳೆದ ಮೂರ್ನಾಲ್ಕು ದಶಕಗಳಿಂದ ಪೌರಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟದಲ್ಲಿ ತೊಡಗಿರುವ ಬೆಜ್ವಾಡ ವಿಲ್ಸನ್ ತಮ್ಮ ಅನುಭವಗಳನ್ನು ಇಂಡಿಯಾ ಟುಡೇ ಕಾನ್ಕ್ಲೇವ್ ನ ಮಾತುಕತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ: ಟ್ರೂಥ್ ಇಂಡಿಯಾ ಕನ್ನಡ ತನ್ನ ಓದುಗರಿಗಾಗಿ ಇಲ್ಲಿ ಬರಹರೂಪದಲ್ಲಿ ನೀಡಿದೆ.
“ಈ ದೇಶದಲ್ಲಿ ಒಂದು ಸಲ ನೀವು ಅಸ್ಪಶ್ಯರೆಂದು ತಿಳಿದುಬಿಟ್ಟರೆ ಬದುಕುವುದು ತೀರಾ ದುಸ್ತರವೇ. ‘ಅಸ್ಪೃಶ್ಯ’ನೆಂದು ಗೊತ್ತಾದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ‘ಅಸ್ಪೃಶ್ಯ’ನಾಗಿ ಬದುಕುವಾಗ ಆತ್ಮಸ್ಥೈರ್ಯವೇ ಕುಗ್ಗಿಹೋಗುತ್ತದೆ, ಅದನ್ನು ಪುನಃ ಗಳಿಸಿಕೊಳ್ಳುವುದು ಒಂದು ಪವಾಡ ಎಂದೇ ಹೇಳಬಹುದು. ಆತ್ಮಸ್ಥೈರ್ಯವನ್ನು ಗಳಿಸುವುದು ಬಹಳ ಕಷ್ಟ, ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕು, ಹೋರಾಡಬೇಕು. ಇಷ್ಟಾದರೂ ನಮ್ಮ ದೇಶದಲ್ಲಿ ಅಸ್ಪೃಶ್ಯತೆಯನ್ನು ಒಂದು ಸಮಸ್ಯೆ ಎಂದೇ ಪರಿಗಣಿಸಿಲ್ಲ. ಇದನ್ನು ಯಾರೂ ಗಂಭೀರವಾಗಿ ಯೋಚಿಸುತ್ತಲೂ ಇಲ್ಲ. ಹೆಚ್ಚೆಂದರೆ ಸಂವಿಧಾನದ ವಿಧಿ 17 ರ ಬಗ್ಗೆ ಹೇಳಿಬಿಡುತ್ತೇವೆ, ಎಲ್ಲಾ ಸ್ವರೂಪಗಳ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ ಎಂದು! ಆದರೆ ನಿಷೇಧವೆಲ್ಲಿದೆ? ನಾವು ಸಮಾನತೆಗಾಗಿ ಹೋರಾಡುತ್ತೇವೆ. ಆದರೆ ನಮ್ಮಲ್ಲಿ ಸಮಾನತೆಯ ಪರಿಕಲ್ಪನೆಯೇ ಇಲ್ಲ.. ಹೋಗಲಿ, ಅಂತಹದೊಂದು ಭಾವವೂ ಇಲ್ಲ. ಒಂದು ಸ್ವಲ್ಪವಾದರೂ ಸಮಾನತೆ ಇದ್ದಿದ್ದರೆ ನಾನು ಇಂದು ಇಲ್ಲಿಗೆ ಬರಬೇಕಾಗಿಯೇ ಇರಲಿಲ್ಲ, ಬಂದು ಮಲ ಹೊರುವ ಸಫಾಯಿ ಕರಮಚಾರಿಗಳ ಬಗ್ಗೆ ಮಾತನಾಡುವ ಅಗತ್ಯವೇ ಇರಲಿಲ್ಲ.
ಸ್ಕ್ಯಾವೆಂಜಿಂಗ್ (ಪೌರ ಕಾರ್ಮಿಕರ) ಕೆಲಸವು ನಾವು ಸಾಮಾನ್ಯವಾಗಿ ತಿಳಿದಂತೆ ಕೇವಲ ಕಸ ಗುಡಿಸುವುದು ಖಂಡಿತಾ ಅಲ್ಲ, ಅದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಮಲವನ್ನು ಕೈಗಳಿಂದ ಸ್ವಚ್ಛಗೊಳಿಸುವ ಕ್ರಿಯೆಯಾಗಿದೆ. ಈ ಪದ್ಧತಿ ಇಡೀ ದೇಶದಲ್ಲಿ ಎಲ್ಲೆಡೆ ಜಾರಿಯಲ್ಲಿದೆ. ಇವತ್ತು, ಈ ಕ್ಷಣದಲ್ಲೂ, ನಾವಿಲ್ಲಿ ಕುಳಿತು ಚರ್ಚಿಸುತ್ತಿರುವಾಗ, ಈ ದೇಶದಲ್ಲಿ ಬೆಳಿಗ್ಗೆ 1.6 ಲಕ್ಷ ಮಹಿಳೆಯರು ಇದೇ ರೀತಿ ಸ್ವಚ್ಛಗೊಳಿಸಿದ್ದಾರೆ. ನಾವು 5000 ವರ್ಷಗಳಿಂದಲೂ ಹೀಗೇ ಸ್ವಚ್ಛಗೊಳಿಸುತ್ತಲೇ ಬಂದಿದ್ದೇವೆ. ಇಂತಹ ‘ಅಸ್ಪೃಶ್ಯ’ ಸಮುದಾಯಕ್ಕೆ ಸೇರಿದವನೆಂದು ನನ್ನ ಪ್ರಜ್ಞೆಗೆ ಬಂದರೆ, ಅದನ್ನು ಸ್ವೀಕರಿಸಿಕೊಳ್ಳಲು ನನಗೆ ಕಷ್ಟವೆನಿಸುತ್ತದೆ. ಹಾಗೊಂದು ವೇಳೆ ವಾಸ್ತವವನ್ನು ಸ್ವೀಕರಿಸದಿದ್ದರೂ ಬದುಕು ಅಸಹನೀಯವೇ ಆಗಿರುತ್ತದೆ.”
ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಧಿಸುವಂತಹ ಇಷ್ಟೆಲ್ಲಾ ಶಾಸನಗಳಿದ್ದರೂ ಜನರೇಕೆ ಸಾವಿಗೀಡಾಗುತ್ತಿದ್ದಾರೆ?
“ನೋಡಿ, ಈ ಸಮಸ್ಯೆಯ ಬಗ್ಗೆ ನಾಗರಿಕರ ಸಂವೇದನಾಶೀಲತೆ ಬಹಳ ಕೆಳಸ್ತರದಲ್ಲಿದೆ. ವಾಸ್ತವಾಂಶಗಳನ್ನು ಅರ್ಥಮಾಡಿಕೊಳ್ಳಲು, ಅರಗಿಸಿಕೊಳ್ಳಲು ಬಹಳ ಕಷ್ಟವಾಗಬಹುದು. ಮಲಹೊರುವ ಪದ್ಧತಿಗೆ ನಾವು 1993ರಲ್ಲಿ ನಿಷೇಧ ತಂದೆವು. 2003ರಲ್ಲಿ ನ್ಯಾಯಾಲಯಕ್ಕೆ ಹೋದೆವು. ಹತ್ತು ವರ್ಷಗಳಾದರೂ ಏನೂ ಆಗಲಿಲ್ಲ. ಹತ್ತು ವರ್ಷಗಳು ಕಳೆದರೂ ಈ ಶಾಸನವನ್ನು ಶಾಸನಸಭೆಗಳಲ್ಲಿ ಅನುಮೋದನೆ ಮಾಡಲಾಗಿಲ್ಲ. ಹಾಗೊಂದು ವೇಳೆ ಅನುಮೋದನೆಗೊಂಡಿದ್ದರೂ, ಯಾರು ಯಾರಿಗೆ ಶಿಕ್ಷೆ ನೀಡಬೇಕೆಂಬ (ಅಧಿಕಾರ ವ್ಯಾಪ್ತಿಯ ಬಗ್ಗೆ) ನಿರ್ಧರಿಸಲಾಗಿಲ್ಲ. ಎಲ್ಲವನ್ನೂ ನ್ಯಾಯಾಲಯವೇ ಹೇಳಬೇಕಾಗಿದೆ! ಹಾಗಾದರೆ ನ್ಯಾಯಾಲಯಕ್ಕೆ ಯಾರು ಹೋಗಿ ಪ್ರಶ್ನಿಸಿದರು? ನಮ್ಮಲ್ಲಿ 650 ಜಿಲ್ಲೆಗಳಿವೆ. ಹಾಗೆ ನೋಡಿದರೆ, ಚರಂಡಿ ಅಥವಾ ಮಲದ ಗುಂಡಿಗಳನ್ನು ಮನುಷ್ಯರ ಕೈಗಳಿಂದ ಸ್ವಚ್ಛಗೊಳಿಸಲು (ಮಾನ್ಯುವಲ್ ಸ್ಕ್ಯಾವೆಂಜಿಂಗ್) ಕಾರಣರಾಗುವ ವ್ಯಕ್ತಿಗಳನ್ನು ಜಿಲ್ಲಾ ದಂಡಾಧಿಕಾರಿಗಳು ಶಿಕ್ಷಿಸಬೇಕು. ಆದರೆ ಈವರೆಗೂ ಒಬ್ಬನೇ ಒಬ್ಬ ವ್ಯಕ್ತಿಯೂ ಶಿಕ್ಷೆಗೊಳಗಾದ ಉದಾಹರಣೆಯಿಲ್ಲ. ಈ ನಮ್ಮ ದೇಶದೊಳಗೆ ನ್ಯಾಯಾಲಯಗಳಿವೆ, ಪೊಲೀಸ್ ಠಾಣೆಗಳಿವೆ, ಮಂತ್ರಿಗಳಿದ್ದಾರೆ, ಎಲ್ಲವೂ ಇವೆ, ಎಲ್ಲರೂ ಇದ್ದಾರೆ. ಆದರೆ ಈ ವಿಚಾರದಲ್ಲಿ ತಪ್ಪು ಮಾಡಿರುವ ಯಾರೊಬ್ಬನಿಗೂ ಶಿಕ್ಷೆ ಮಾತ್ರ ಆಗಿಲ್ಲ. ಕಾನೂನು ಇರುತ್ತದೆ, ಜನರೂ ಇರುತ್ತಾರೆ. ಮಂತ್ರಿಗಳು ಬರುತ್ತಾರೆ, ಹೋಗುತ್ತಾರೆ; ಹಾಗೆಯೇ ಚುನಾವಣೆಗಳೂ ಸಹ. ಆದರೆ ಪರಿಸ್ಥಿತಿ ಬದಲಾಗುತ್ತಿಲ್ಲ.
ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ, ಅಲ್ಲಿ ಸಾಕ್ಷಿ ತನ್ನಿ ಎನ್ನುತ್ತಾರೆ. ನಮ್ಮ ಬಳಿ ಯಾವ ಸಾಕ್ಷಿ ಇದೆ ಹೇಳಿ? ಮಹಿಳೆಯರು ಸ್ವಚ್ಛಗೊಳಿಸುತ್ತಿರುವಾಗ ಒಂದು ಫೋಟೋ ಕ್ಲಿಕ್ಕಿಸುತ್ತೇವೆ, ಅಷ್ಟೇ. ನನಗಂತೂ ಅದು ತೀರಾ ನೋವಿನ ಸಂದರ್ಭ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಮಲವನ್ನು ಸ್ವಚ್ಛಗೊಳಿಸುವಾಗ ಪಟ ತೆಗೆಯುವುದು ತುಂಬಾ ಸಂಕಟ ತರುವಂತದ್ದು. ಇನ್ನೂ ಸ್ಪಷ್ಟ ಚಿತ್ರ ಬೇಕೆಂದರೆ ಆಕೆಗೆ ಸ್ಲೋ ಮೋಷನ್ ನಲ್ಲಿ ಆ ಕೆಲಸವನ್ನು ಮಾಡಲು ಹೇಳಬೇಕಾಗುತ್ತದೆ. ಛೇ! ಇಂತಹ ಯಾತನೆಯ ಕೆಲಸ ಮುಗಿಸಿ ಅದನ್ನೊಯ್ದು ಈ ನೆಲದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟಿಗೆ ಕೊಡಬೇಕು.
ಸುಪ್ರೀಂ ಕೋರ್ಟಿನ ಮೂವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ, 26 ನ್ಯಾಯಾಧೀಶರು ಇಡೀ ಅರ್ಜಿಯನ್ನು ಪುನರ್ಪರಿಶೀಲಿಸಿದ್ದಾರೆ. ನಮ್ಮನ್ನು ಸಾಕ್ಷಿ ಕೇಳಿದ್ದಾರೆ, ನಾವು ಫೋಟೋ ನೀಡಿದ್ದೇವೆ. ಆದರೆ ತೀರ್ಪು ಮಾತ್ರ ನಮಗೆ ತಕ್ಷಣ ಸಿಗುವುದಿಲ್ಲ. ಇನ್ನೊಂದು 6 ತಿಂಗಳು ಮುಂದೂಡಲಾಗಿ, ನಂತರ ರಾಜ್ಯ ಸರ್ಕಾರಗಳು ಹೇಳುತ್ತವೆ, ಸಾಕ್ಷಿಯಲ್ಲಿರುವ ಈ ಫೋಟೋಗಳು ಹಳೆಯದ್ದು, ಈಗ ಈ ಪದ್ಧತಿ ಜಾರಿಯಲ್ಲಿಲ್ಲ ಎಂದು! ನಾನು ಆಗ ಮತ್ತೆ ವಾಪಸ್ಸು ಹೋಗಬೇಕು, ಆಕೆಯನ್ನು ಮಾನ್ಯುವಲ್ ಸ್ಕ್ಯಾವೆಂಜಿಂಗ್ ಗೆ ಬಳಸಲಾಗುತ್ತಿದೆ ಎಂದು ಸಾಬೀತುಪಡಿಸಲು ಪುನಃ ಅದೇ ವ್ಯಕ್ತಿಯ ಬಳಿ ಆಕೆಯ ಪಟಕ್ಕಾಗಿ ನಾನು ನಿಲ್ಲಬೇಕು. ಇದಕ್ಕಿಂತಾ ಸಂಕಟದ ವಿಷಯ ಮತ್ತೇನಿದೆ ಹೇಳಿ ನೋಡೋಣ? ಒಂದಲ್ಲ ಎರಡಲ್ಲ, ಅದೇ ಮಹಿಳೆ 16 ಬಾರಿ ಫೋಟೋಪ್ರದರ್ಶನಕ್ಕೆ ತನ್ನನ್ನು ತಾನು ಒಡ್ಡಿಕೊಂಡಿದ್ದಾಳೆ. ಇಷ್ಟಾಗಿ, ಏನನ್ನು ಸಾಬೀತುಪಡಿಸಲೆಂದು? ಈ ಅನಿಷ್ಟ ಪದ್ಧತಿ ಇನ್ನೂ ಜಾರಿಯಲ್ಲಿದೆ ಎಂದೇ? ಯಾವ ಜಡ್ಜ್ ಕೂಡ ಹೊರಬಂದು ಏನು ನಡೆಯುತ್ತಿದೆ ಎಂದು ನೋಡುವುದಿಲ್ಲ. ಭಾರತೀಯ ರೇಲ್ವೆಯಲ್ಲಿ ಇದು ಜಾರಿಯಲ್ಲಿದೆ, ದೆಹಲಿಯೂ ಸೇರಿದಂತೆ. ಅವರಿಗೆ ದೆಹಲಿ ರೇಲ್ವೆ ನಿಲ್ದಾಣಕ್ಕೆ ಹೋಗಿ ನೋಡಿ ಆದೇಶ ಬರೆಯಲು ಆಗದೇನು? ಎಂತಹ ಪ್ರಜಾಸತ್ತೆ ಇದು? ಎಂತಹ ಕೋರ್ಟು, ಯಾವ ನ್ಯಾಯಾಂಗ? ಇವುಗಳು ಯಾವುವೂ ನಮಗೆ ನ್ಯಾಯ ನೀಡುತ್ತಿಲ್ಲ. ಮಲ ಹೊರುವ ಪದ್ಧತಿ ಇನ್ನೂ ಮುಂದುವರಿದಿದೆ ಎಂದು ಸಾಬೀತುಪಡಿಸಲು ನನಗೆ ತುಂಬಾ ಸಂಕಟವಾಗುತ್ತದೆ.”

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (NCRB) ಸ್ಕ್ಯಾವೆಂಜಿಂಗ್ ನಿಂದ ಮರಣ ಹೊಂದಿದವರ ಬಗ್ಗೆ ಯಾವ ದತ್ತಾಂಶಗಳನ್ನೂ ಹೊಂದಿಲ್ಲ. ಸಾಮಾನ್ಯ ಭಾರತೀಯನೊಬ್ಬನ ಆಯುಷ್ಯ 75 ವರ್ಷಗಳಾದರೆ ಅದೇ ಸಫಾಯಿಕರ್ಮಚಾರಿಯದ್ದು ಕೇವಲ 45 ವರ್ಷಗಳು. ಇವರಲ್ಲಿ ಶೇ. 90ರಷ್ಟು ತೀವ್ರ ಅನಾರೋಗ್ಯದಿಂದ ಸಾವಿಗೀಡಾಗುತ್ತಾರೆ ಎಂದು ಹೇಳಲಾಗಿದೆ. ಅವರು ಮರಣ ಹೊಂದಿದರೆ 10 ಲಕ್ಷ ರೂ.ಗಳ ಪರಿಹಾರವನ್ನು ಹೊಸ ಶಾಸನವು ಕಲ್ಪಿಸಿದೆ. ಇದರ ಬಗ್ಗೆ ಏನು ಹೇಳುವಿರಿ?
“2017ರಲ್ಲಿ ದೆಹಲಿಯೊಂದರಲ್ಲೇ 91 ಕಾರ್ಮಿಕರು ಸಾವನ್ನಪ್ಪಿದರು. ಶೇ. 10ರಷ್ಟು ಪ್ರಕರಣಗಳಲ್ಲೂ ಪರಿಹಾರ ಪಡೆಯಲು ಕಷ್ಟವಾಯಿತು. ಎಲ್ಲಾ ಸಂದರ್ಭಗಳಲ್ಲೂ ಈ ವಿದ್ಯಮಾನದ ಫೋಟೋ ಸಾಕ್ಷಿ ತೋರಿಸಿ ಎನ್ನುತ್ತಾರೆ. ಎಲ್ಲಿ, ಹೇಗೆ ತರುವುದು, ಒದಗಿಸುವುದು?”
ಸ್ವಚ್ಛ ಭಾರತ ಕಾರ್ಯಕ್ರಮ ಪೌರಕಾರ್ಮಿಕರಿಗೆ ನೆರವಾಗಿದೆಯೇ? ಈ ಬಗ್ಗೆ ತಮ್ಮ ಅನಿಸಿಕೆ..?
“ನನ್ನ ಲೆಕ್ಕದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮವು ಕೇವಲ ಶೌಚಾಲಯಗಳನ್ನು ಕಟ್ಟಿಸುವ ಕಾರ್ಯಕ್ರಮ. ಆದರೆ ಮನುಷ್ಯರ ಮಲವನ್ನು ಮನುಷ್ಯರು ಸ್ವಚ್ಛಗೊಳಿಸುವುದು ಮುಂದುವರಿದೇ ಇದೆ. ನಿಕೃಷ್ಟವಾಗಿ ನೋಡಲ್ಪಟ್ಟ ಇಂತಹ ಮನುಷ್ಯರನ್ನು ವಿಮೋಚನೆಗೊಳಿಸುವ, ಅವರಿಗೆ ಪುನರ್ವಸತಿ ಕಲ್ಪಿಸುವ ಒಂದೇ ಒಂದು ಅಂಶವೂ ಸ್ವಚ್ಛ ಭಾರತದಲ್ಲಿ ಇಲ್ಲ. ಇದರಲ್ಲಿ ಯಾರನ್ನು ಸ್ವಚ್ಛಗೊಳಿಸುವುದೋ ನನಗಿನ್ನೂ ಅರ್ಥವಾಗುತ್ತಿಲ್ಲ. ಸ್ವಚ್ಛ ಎಂದರೆ ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಶೌಚಾಲಯಗಳನ್ನು ನಿರ್ಮಿಸಲು 2 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ, ಆದರೆ ತಮ್ಮ ಬದುಕನ್ನು ಮರುನಿರ್ಮಾಣ ಮಾಡಿಕೊಳ್ಳಲು ಮ್ಯಾಜಿಸ್ಟ್ರೇಟ್ ಗಳ ಬಳಿ ಕಡಿಮೆಯಲ್ಲವೆಂದರೂ 80 ಸಲ ಓಡಾಡಿ ತಮ್ಮ ಜೀವವನ್ನೇ ತೇಯ್ದಿರುವ ಮಹಿಳೆಯರ ಪುನರ್ವಸತಿಗೆ ಹಣವಿರುವುದಿಲ್ಲ! ಇದೇ ಸಮಯದಲ್ಲಿ ಜನರು ಚರಂಡಿಗಳಲ್ಲಿ, ಮಲದ ಗುಂಡಿಗಳಲ್ಲಿ ಸಾಯುತ್ತಿದ್ದಾರೆ, ಏಕೆಂದರೆ ನಮ್ಮ ದೇಶದಲ್ಲಿ ಸಮರ್ಪಕವಾದ ನೈರ್ಮಲ್ಯ ವ್ಯವಸ್ಥೆ ಇಲ್ಲ. ಅದನ್ನು ನಾವು ವ್ಯವಸ್ಥೆಗೊಳಿಸಿಯೂ ಇಲ್ಲ.
ಚರಂಡಿಗಳಲ್ಲಿ, ಮಲದ ಗುಂಡಿಗಳಲ್ಲಿ 1810 ಜನರು, ದಲಿತರು, ಈ ದೇಶದ ನಾಗರಿಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ನಮಗೆ ಅಪರಾಧಿಪ್ರಜ್ಞೆ ಕಾಡುತ್ತಿದೆ, ಆದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅದರ ಬಗ್ಗೆ ಯಾರೂ ಯೋಚಿಸಲಿಕ್ಕೂ ಹೋಗುವುದಿಲ್ಲ. ಕಳೆದ ವರ್ಷ 105 ಜನರನ್ನು ಕಳೆದುಕೊಂಡೆವು. ಈ ವರ್ಷ ಮೊದಲ ಎರಡೇ ತಿಂಗಳುಗಳಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ 12 ಜನ ಸಾವನ್ನಪ್ಪಿದ್ದಾರೆ. ಪ್ರಧಾನಮಂತ್ರಿಯವರೂ ಸೇರಿದಂತೆ, ನಮ್ಮ ದೇಶದ ಯಾವ ರಾಜಕಾರಣಿಗಳೂ ತುಟಿ ಬಿಚ್ಚಿಲ್ಲ.
ನಮ್ಮಲ್ಲಿ ಸಹೋದರತ್ವವಿದೆ, ಭಾವನಾತ್ಮಕತೆಯೂ ಇದೆ. ಆದರೆ ಮಾನ್ಯುವಲ್ ಸ್ಕ್ಯಾವೆಂಜರ್ ಗಳು ಚರಂಡಿಗಳಲ್ಲಿ ಬಿದ್ದು ಸಾಯುತ್ತಿರುವಾಗ, ನಮಗೆ ಯಾವುದೇ ಭಾವನೆಗಳೂ ಚಿಮ್ಮುವುದಿಲ್ಲ, ಕಣ್ಣೀರು ಹರಿಯುವುದಿಲ್ಲ, ಬಾಯಿಂದ ಒಂದು ಪದವೂ ಹೊರಹೊಮ್ಮುವುದಿಲ್ಲ! ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಮಕ್ಕಳೊಡನೆ ಜಂತರ್ ಮಂತರ್ ನಲ್ಲಿ ಕೂತಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದಿಲ್ಲ.
ತಂತ್ರಜ್ಞಾನವಿಲ್ಲದೆ ಇಂತಹ ಸಾವುಗಳನ್ನು ಹೇಗೆ ತಡೆಗಟ್ಟುವುದು? ನಮಗೆ ನಮ್ಮ ಜನರನ್ನು ವಿಮೋಚನೆಗೊಳಿಸಲು ಯಂತ್ರಗಳ ಬಳಕೆಗಾಗಿ ತಂತ್ರಜ್ಞಾನ ಬೇಕೆಂದು ಹೋದಾಗ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೋಗಿ ಎಂದರು. ಅಲ್ಲಿ ಕೇಳಿದರೆ ಅದು ನಗರಾಭಿವೃದ್ಧಿಗೆ ಸಂಬಂಧಿಸಿದ್ದು ಎಂದು ಹೇಳಿ ಕಳಿಸಿದರು. ಆ ಇಲಾಖೆಯವರು ಇದು ನಮ್ಮ ವಿಚಾರವಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯದ್ದು ಎಂದು ಆ ಕಡೆಗೆ ನಮ್ಮನ್ನು ಓಡಿಸಿದರು. ಅವರಾದರೋ ನಮಗೆ, ಓ ಇಲ್ಲ, ಇದು ದಲಿತರಿಗೆ ಸಂಬಂಧಿಸಿದ ವಿಷಯ, ಸಾಮಾಜಿಕ ನ್ಯಾಯದತ್ತ ಹೋಗಿರೆಂದುಬಿಟ್ಟರು! ಸ್ವಾತಂತ್ರ್ಯಾನಂತರದ ಭಾರತದಲ್ಲಿ ಈವರೆಗೂ ಚರಂಡಿಗಳು ಮತ್ತು ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ತಂತ್ರಜ್ಞಾನದ ಬಳಕೆಯಾಗಿಲ್ಲ. ನಮ್ಮ ದೇಶದ ಪರಿಸ್ಥಿತಿ ಇದು! ನಾವು ನಮ್ಮ ಸಹಜೀವಿಗಳನ್ನು ಇನ್ನೆಷ್ಟು ಕಾಲ ಹೀಗೆ ಚರಂಡಿಗಳಲ್ಲಿ ಸಾಯಲು ಬಿಡಬೇಕು? ಅವರ ಶವಗಳನ್ನು ಎಣಿಸಿ 10 ಲಕ್ಷಗಳ ಪರಿಹಾರಕ್ಕೆ ಬಡಿದಾಡಬೇಕೆ? ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಅಪೇಕ್ಷಿಸುವುದು ಇದನ್ನೇ ಏನು? ನಾವು ಮಾನವ ಹಸ್ತಕ್ಷೇಪವಿಲ್ಲದೆ ಚರಂಡಿಗಳನ್ನು ಮತ್ತು ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಂತಹ ಒಂದು ಸಣ್ಣ ಉಪಕರಣವನ್ನು ಸಿದ್ಧಪಡಿಸಲಾರೆವೇನು? ರಾಕೆಟ್ ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದ್ದೇವೆ’ ನಮ್ಮ ಕ್ಷಿಪಣಿಗಳು ಶಾಂಘೈ ವರೆಗೂ ತಲುಪಬಲ್ಲವು, ಆದರೆ ಬರೀ ಐದಡಿ ಆಳದ ಚರಂಡಿಯನ್ನು ಸ್ವಚ್ಛಗೊಳಿಸಲು ನಮ್ಮಲ್ಲಿ ತಾಂತ್ರಿಕ ಸಾಮರ್ಥ್ಯವಿಲ್ಲದೇ ಹೋಯಿತೇ?
2 Comments
ಸರ್ ನೀವು ಬರೆದಿರುವ ಈ ಮಾಹಿತಿ ತುಂಬ ಚೇನಾಗಿದೆ ಸರ್ ಆದರೆ ನಮ್ಮ ಜನರು ಈ ಕೆಲಸವನ್ನು ಬಿಟ್ಟರೆ ಸತ್ತೋಯ್ತಿವಿ ಅಂತರಲ್ಲ ಸರ್
ಹಾಗೆ ಹೇಳುವವರಿಗೆ ಆತ್ಮಸ್ಥೈರ್ಯ ನೀಡುವ ಕೆಲಸ ಆಗಬೇಕು. ಅಂತಹ ಆತ್ಮಸ್ಥೈರ್ಯ ನೀಡಲೆಂದೇ ಗಲವು ದಶಕಗಳಿಂದ ಸಫಾಯಿ ಕರ್ಮಚಾರಿ ಆಂದೋಲನವನ್ನು ಬೆಜ್ವಾಡಾ ನಡೆಸುತ್ತಿದ್ದಾರೆ