ಜಮ್ಮು: ಜಮ್ಮು ನಗರದ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಗ್ರೇನೇಡ್ ಒಂದನ್ನು ಸ್ಫೋಟಿಸಿದ್ದು 28 ಜನರಿಗೆ ಗಾಯಗಳಾಗಿವೆ. ಇಬ್ಬರ ಸ್ಥಿತಿ ಚಿಂತಾನಕವಾಗಿದೆ. ಗಾಯಗೊಂಡವರನ್ನು ಹತ್ತಿರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ಜಮ್ಮು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಗ್ರಾನೇಡ್ ಸ್ಪೋಟದ ಹಿನ್ನೆಲೆಯಲ್ಲಿ ಜಮ್ಮು ಭಾಗದಲ್ಲಿ ಉದ್ವಿಗ್ನೆತೆ ಉಂಟಾಗಿದ್ದು ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಇಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಈ ಗ್ರೆನೇಡ್ ಸ್ಪೋಟ ನಡೆದಿದೆ. ಕಳೆದ ಹತ್ತು ತಿಂಗಳಲ್ಲಿ ಈ ಬಗೆಯ ಮೂರು ಘಟನೆಗಳು ಇಲ್ಲಿ ನಡೆದಿವೆ.
ಈ ದುಷ್ಕೃತ್ಯ ಯಾರು ನಡೆಸಿದ್ದಾರೆ ಎಂದು ಇನ್ನೂ ಖಚಿತಗೊಂಡಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನರ ನಡುವೆ ಕೋಮು ಉದ್ವಿಗ್ನತೆ ಸೃಷ್ಟಿಸಲು ಇಂತಹ ಘಟನೆಗಳು ಬಳಕೆಯಾಗುತ್ತಿದ್ದು ಜನರು ತಾಳ್ಮೆ ವಹಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಈ ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ ಎಂದು ಜಮ್ಮು ಐಜಿಪಿ ಎಂ.ಕೆ.ಸಿನ್ಹಾ ತಿಳಿಸಿದ್ದಾರೆ.
ಎರಡು ವಾರಗಳ ಹಿಂದಷ್ಟೇ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರು ಪ್ರಯಾಣ ಮಾಡುತ್ತಿದ್ದ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದು 42 ಯೋಧರನ್ನು ಹತ್ಯೆಗೈಯಲಾಗಿತ್ತು. ದಾಳಿಯ ಹೊಣೆಯನ್ನು ಜೈಷ್ ಎ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು.
ಇಂದು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸುತ್ತಿರುವುದರ ನಡುವೆಯೂ ಜನನಿಬಿಡ ಬಸ್ ನಿಲ್ದಾಣದಲ್ಲಿ ಗ್ರೇನೇಡ್ ಸ್ಪೋಟ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.