ರಾಫೇಲ್ ಒಪ್ಪಂದದ ದಾಖಲೆಗಳು ಕಳವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ಮುಂದೆ ಹೇಳಿದೆ. ಅದೂ ’ದಿ ಹಿಂದೂ’ ಪತ್ರಿಕೆ ರಾಫೇಲ್ ಕುರಿತ ತನ್ನ ತನಿಖಾ ವರದಿಗಳಲ್ಲಿ ಪ್ರಕಟಿಸಿದ ಮತ್ತು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ದಾಖಲೆಗಳು ಕಳವಾಗಿರುವ ದಾಖಲೆಗಳೇ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಮಹತ್ವದ ಮತ್ತು ವಿವಾದಾತ್ಮಕ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಜತನ ಮಾಡಲಾಗದ ಒಂದು ರಕ್ಷಣಾ ಸಚಿವಾಲಯ, ಒಂದು ಸರ್ಕಾರ ಇಡೀ ದೇಶವನ್ನು ಹೇಗೆ ರಕ್ಷಣೆ ಮಾಡೀತು? ಕನಿಷ್ಟ ದಾಖಲೆಪತ್ರಗಳನ್ನೂ ಕಾಯಲಾಗದ ಪ್ರಧಾನಿಯವರೇ ಹೆಮ್ಮೆಯಿಂದ ತಮ್ಮಬಗ್ಗೆ ಹೇಳಿಕೊಳ್ಳುವ ’ಚೌಕಿದಾರ’, ದೇಶದ ಜನರನ್ನು ಹೇಗೆ ರಕ್ಷಿಸಬಲ್ಲ? ಕಾಗದಪತ್ರಗಳನ್ನು ಕಳೆದುಕೊಂಡಿರುವುದು ನಿಜವೇ ಆದರೆ, ಫೆಬ್ರವರಿ ಮೊದಲ ವಾರದಲ್ಲಿ ದ ಹಿಂದೂ ಪತ್ರಿಕೆ ರಾಫೇಲ್ ಕುರಿತ ಸರಣಿ ವರದಿಯ ಮೊದಲ ವರದಿ ಪ್ರಕಟಿಸಿದಂದಿನಿಂದ ಈವರೆಗೆ ಒಂದು ತಿಂಗಳ ಕಾಲ ಸರ್ಕಾರ ಯಾಕೆ ಕಣ್ಣುಮುಚ್ಚಿ ಕೂತಿತ್ತು? ಕನಿಷ್ಟ ದಾಖಲೆ ಕಳೆದ ಬಗ್ಗೆ ಒಂದು ದೂರು ನೀಡಿ, ಎಫ್ಐ ಆರ್ ಕೂಡ ದಾಖಲಿಸಲಿಲ್ಲ ಏಕೆ? ಎಂಬ ಸಾಲುಸಾಲು ಪ್ರಶ್ನೆಗಳಿಗೆ ಸರ್ಕಾರವಾಗಲೀ, ಆಡಳಿತರೂಢ ಬಿಜೆಪಿಯಾಗಲೀ ಈವರೆಗೆ ಉತ್ತರನೀಡಿಲ್ಲ.
ಈ ನಡುವೆ, ಕಳವು ಹೇಗಾಯಿತು ಎಂದು ಕೇಳಬಾರದು. ಹಾಗೇ ಕೇಳಿದ್ದಲ್ಲಿ ಅದು ಸರ್ಕಾರ ಮತ್ತು ದೇಶದ ಸುಭದ್ರತೆಗೆ ಧಕ್ಕೆ ತರುತ್ತದೆ ಎಂದೂ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ’ದೇಶಭಕ್ತಿಯ ಸೂಕ್ಷ್ಮ’ ವಿವರಿಸಿದ್ದಾರೆ. ಅಂದರೆ; ದಾಖಲೆಗಳನ್ನು ರಕ್ಷಿಸಲಾಗದ ಮತ್ತು ಕಳ್ಳತನ ನಡೆದರೂ ಆ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಹೊಣೆಗೇಡಿತನ ದೇಶಭಕ್ತಿ, ಕಳ್ಳತನ ಹೇಗಾಯಿತು ಎಂದು ಪ್ರಶ್ನಿಸಿದರೆ ಅದು ದೇಶದ್ರೋಹ ಎಂಬುದು ಸರ್ಕಾರದ ವಾದ! ಕಳ್ಳತನ ತಪ್ಪಲ್ಲ, ಕಳ್ಳತನ ಹೇಗಾಯಿತು ಎಂದು ಕೇಳುವುದೇ ತಪ್ಪು ಎಂಬ ಈ ವರಸೆ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಪಾಲಿಸಿಕೊಂಡುಬಂದಿರುವ ’ಹೇಳುವುದು ಒಂದು, ಮಾಡುವುದು ಮತ್ತೊಂದು’ ಎಂಬ ವೈರುಧ್ಯದ ಸರಣಿಗೆ ಹೊಸ ಸೇರ್ಪಡೆ.
ಆ ಹಿನ್ನೆಲೆಯಲ್ಲಿ ರಾಫೇಲ್ ದಾಖಲೆಗಳ ಕಳ್ಳತನದ ವಿಷಯವೂ ಸೇರಿದಂತೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ತನ್ನ ನಡೆ-ನುಡಿಯ ಮೂಲಕ ಹುಟ್ಟುಹಾಕಿದ ಹಾಸ್ಯಾಸ್ಪದ ವೈರುಧ್ಯಗಳ ಒಂದು ಪರಂಪರೆಯೇ ನಮ್ಮ ಮುಂದಿದೆ.
ರಾಫೇಲ್ ದಾಖಲೆ ಕಳವು ಬಗ್ಗೆ ವಿಷಯ ನ್ಯಾಯಾಲಯದ ವಿಚಾರಣೆಯ ವೇಳೆ ಬೆಳಕಿಗೆ ಬಂದು ೨೪ ತಾಸು ಕಳೆದರೂ ಈವರೆಗೆ ದಾಖಲೆಗಳನ್ನು ಕಾಯಬೇಕಾದ ರಕ್ಷಣಾ ಸಚಿವಾಲಯವಾಗಲೀ, ಸಚಿವರಾಗಲೀ, ಮೋದಿಯವರ ಸರ್ಕಾರವಾಗಲೀ ಅಥವಾ ವೈಯಕ್ತಿಕವಾಗಿ ಮೋದಿಯವರಾಗಲೀ, ಕೊನೆಗೆ ದೇಶಭಕ್ತಿಯ ಮೇಲೇ ಪ್ರತಿ ಚುನಾವಣೆಯ ಓಟು ಕೇಳುವ ಬಿಜೆಪಿಯಾಗಲೀ ಆ ಬಗ್ಗೆ ತುಟಿಬಿಚ್ಚಿಲ್ಲ. ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಈ ಕಳವು ಪ್ರಕರಣದ ಸಂಪೂರ್ಣ ಹೊಣೆಗಾರ ಸರ್ಕಾರ ದೇಶದ ಜನರಿಗೆ ಉತ್ತರದಾಯಿ ಮತ್ತು ವಾಸ್ತವಾಂಶಗಳನ್ನು ವಿವರಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು ಎಂಬುದು ಸಾಮಾನ್ಯ ವಿವೇಕ.
ಆದರೆ, ಇಂತಹ ವಿಷಯದಲ್ಲಿ ಅದು ಸಾಮಾನ್ಯವಾಗಿ ಮಾಡುವಂತೆ ದೇಶದ ಭದ್ರತೆಯನ್ನು ಮುಂದುಮಾಡಿ, ದೇಶಭಕ್ತಿಯ ಗುರಾಣಿ ಹಿಡಿದು, ಸತ್ಯಾಂಶವನ್ನು ಮುಚ್ಚಿಡುವುದೇ ಅಲ್ಲದೆ, ಇಡೀ ಪ್ರಕರಣವನ್ನು ಪ್ರಶ್ನಿಸುವವರ ದೇಶಪ್ರೇಮವನ್ನೇ ಒರೆಗೆ ಹಚ್ಚುವ, ದೇಶದ್ರೋಹದ ಕಟಕಟೆಗೆ ತಂದು ನಿಲ್ಲಿಸುವ ಕೆಲಸ ಮಾಡಲಿದೆ. ಈಗಾಗಲೇ ಅಟಾರ್ನಿ ಜನರಲ್ ಅವರು ನ್ಯಾಯಾಲಯದ ಮುಂದೆ ಹೇಳಿರುವುದು ಕೂಡ ಆ ’ಗುರಾಣಿ ನಡೆ’ಯನ್ನೇ ಸೂಚಿಸುತ್ತಿದೆ. ಅದರಲ್ಲೂ, ದಾಖಲೆಗಳನ್ನು ಉಲ್ಲೇಖಿಸಿದ ಪತ್ರಿಕೆಯ ವಿರುದ್ಧವೇ ರಾಜ ರಹಸ್ಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಮಾತನಾಡಿರುವುದು ಮಾಧ್ಯಮಗಳನ್ನು ಬೆದರಿಸುವ ಮತ್ತು ಬಾಯಿಮುಚ್ಚಿಸುವ ಪ್ರಯತ್ನ ಎಂದು ಈಗಾಗಲೇ ಎಡಿಟರ್ಸ್ ಗಿಲ್ಡ್ ಸೇರಿದಂತೆ ಕೆಲವು ಸಂಘಟನೆಗಳು ಹೇಳಿವೆ.
ಹಾಗೆ ನೋಡಿದರೆ, ಪುಲ್ವಾಮಾ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆದ ಬಾಲಾಕೋಟ್ ದಾಳಿಯ ವಿಷಯದಲ್ಲಿಯೂ ಸರ್ಕಾರ ಮತ್ತು ಬಿಜೆಪಿ ಇದೇ ಗುರಾಣಿ ನಡೆಯನ್ನೇ ಅನುಸರಿಸುತ್ತಿವೆ. ದೇಶದ ಗಡಿ ಭಾಗದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ನಮ್ಮ ಯೋಧರು ಬಲಿಯಾಗಿದ್ದು, ನಿಜಕ್ಕೂ ದೇಶವೇ ಒಂದಾಗಿ ನಿಂತು ಖಂಡಿಸಬೇಕಾದ ಮತ್ತು ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಸಂದರ್ಭ. ಅದೇ ಉದ್ದೇಶದಿಂದ ಪ್ರತಿಪಕ್ಷಗಳು ಅಂದು ಸರ್ಕಾರದ ಜೊತೆ ಒಂದಾಗಿ ನಿಂತಿದ್ದವು. ಆದರೆ, ೩೫೦ ಕೆಜಿ ಸ್ಫೋಟಕ ತುಂಬಿದ ಒಂದು ವಾಹನವನ್ನು ಸೇನಾ ತುಕಡಿಗಳ ಸಾಮೂಹಿಕ ಸಂಚಾರದ ನಡುವೆ ನುಗ್ಗಿಸುವಷ್ಟು ಭದ್ರತಾ ಲೋಪ ಹೇಗಾಯಿತು? ಗುಪ್ತಚರ ಲೋಪಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳನ್ನು ಆ ನಂತರದ ದಿನಗಳಲ್ಲಾದರೂ ಕೇಳಿಕೊಳ್ಳಲೇಬೇಕಿದೆ. ಹಾಗೆ ನೋಡಿದರೆ ಘಟನೆಯ ಮಾರನೇ ದಿನವೇ ಸ್ವತಃ ಜಮ್ಮು-ಕಾಶ್ಮೀರದ ರಾಜ್ಯಪಾಲರೇ ಭದ್ರತಾ ಲೋಪವಾಗಿದೆ ಎಂಬುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಆದರೆ, ಸ್ವತಃ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅಂತಹ ಪ್ರಶ್ನೆಗಳನ್ನು ಕೇಳಿದ ಪ್ರತಿಪಕ್ಷಗಳು ಮತ್ತು ಮಾಧ್ಯಮಗಳನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿ, ಪಾಕಿಸ್ತಾನಿ ಬೆಂಬಲಿಗರು ಎಂದು ಹಣೆಪಟ್ಟಿ ಕಟ್ಟುತ್ತಿರುವುದು ವಿಪರ್ಯಾಸ. ದೇಶದ ಭದ್ರತೆಗೆ, ಸುರಕ್ಷತೆಗೆ ಅನುಗುಣವಾಗಿ ಆಗಿರುವ ಲೋಪಗಳನ್ನು ಅವಲೋಕಿಸಿ, ಸರಿಪಡಿಸುವ ದೃಷ್ಟಿಯಿಂದ ಚರ್ಚೆಯಾಗಲೇಬೇಕಾದ ಸಂಗತಿಗಳನ್ನು ಚರ್ಚಿಸುವುದೇ ದೇಶದ್ರೋಹ ಎಂದಾದರೆ, ಲೋಪಗಳನ್ನು ಮುಚ್ಚಿಟ್ಟು ದೇಶವನ್ನು ಇನ್ನಷ್ಟು ಅಪಾಯಕ್ಕೆ ಸಿಲುಕಿಸುವುದು ದೇಶಭಕ್ತಿಯೇ?
ಬಾಲಾಕೋಟ್ ದಾಳಿಯ ವಿಷಯದಲ್ಲಿಯೂ ಇದೇ ದೇಶಭಕ್ತಿಯ ಗುರಾಣಿಯನ್ನೇ ಬಿಜೆಪಿ ಝಳಪಿಸತೊಡಗಿದೆ. ಪುಲ್ವಾಮಾ ದಾಳಿಯ ವಿಷಯವನ್ನು ರಾಜಕೀಯಕ್ಕೆ ಬಳಸಬಾರದು ಎಂಬ ಕನಿಷ್ಠ ವಿವೇಕವನ್ನು ಪ್ರತಿಪಕ್ಷಗಳು ಪ್ರದರ್ಶಿಸಿ ದುರಂತದ ಹೊತ್ತಲ್ಲಿ ಸರ್ಕಾರದ ಪರ ಒಗ್ಗಟ್ಟು ಪ್ರದರ್ಶಿಸಿದ್ದವು. ಆದರೆ, ಅದೇ ಬಾಲಾಕೋಟ್ ದಾಳಿ ವಿಷಯದಲ್ಲಿ ಸ್ವತಃ ಪ್ರಧಾನಿ ಮತ್ತು ಬಿಜೆಪಿ ನಾಯಕರೇ ಅದನ್ನು ತಮ್ಮ ಚುನಾವಣಾ ಪ್ರಚಾರದ ವಿಷಯವಾಗಿ ಬಳಸಿಕೊಂಡರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ರಾಜಸ್ತಾನದಲ್ಲಿ ಮಾತನಾಡಿದ ಪ್ರಧಾನಿ, ದೇಶ ಬಲಿಷ್ಠ ಕೈಗಳಲ್ಲಿ ಸುರಕ್ಷಿತವಾಗಿದೆ ಎನ್ನುವ ಮೂಲಕ ದಾಳಿಯನ್ನು ಪರೋಕ್ಷವಾಗಿ ತಮ್ಮ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಬಳಸಿಕೊಂಡಿದ್ದರು. ಅದಾದ ಬಳಿಕ, ಆ ದಾಳಿಯಲ್ಲಿ ಸತ್ತ ಉಗ್ರರ ಬಗ್ಗೆ ಮತ್ತು ಆದ ಹಾನಿ ಬಗ್ಗೆ ಪ್ರತಿಪಕ್ಷಗಳು ಪ್ರಸ್ತಾಪಿಸಿದಾಗ, ತಮ್ಮನ್ನು ಪ್ರಶ್ನಿಸುವುದು ಎಂದರೆ ದೇಶವನ್ನು ಪ್ರಶ್ನಿಸಿದಂತೆ, ಸೇನಾ ಪಡೆಗಳನ್ನು ಪ್ರಶ್ನಿಸಿದಂತೆ ಎಂಬ ವಾದ ಮುಂದಿಡುವ ಮೂಲಕ ಪ್ರತಿಪಕ್ಷಗಳ ದೇಶಪ್ರೇಮದ ಮೇಲೆಯೇ ಅನುಮಾನದ ಬಾಣ ಬಿಟ್ಟಿದ್ದರು.
ಇದೀಗ ಅದೇ ಬಲಿಷ್ಠ ಕೈಗಳಲ್ಲಿಯೇ ಇದ್ದ ರಾಫೇಲ್ ದಾಖಲೆಗಳು ಕಳವಾಗಿವೆ ಎಂದು ಸ್ವತಃ ಅವರದೇ ಸರ್ಕಾರ ಸುಪ್ರೀಂಕೋರ್ಟಿನ ಮುಂದೆ ಕೈಕಟ್ಟಿ ನಿಂತಿದೆ. ನೀವು ಅದನ್ನು ಪ್ರಶ್ನಿಸಿದರೆ ಮತ್ತದೇ ’ದೇಶಭಕ್ತಿ’ ವರ್ಸಸ್ ’ದೇಶದ್ರೋಹ’ದ ಗೆಲ್ಲಲಾಗದ ಭಾವನಾತ್ಮಕ ಸಮರಕ್ಕೆ ಅಣಿಯಾಗಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಬುಧವಾರ, ಬಿಜೆಪಿ ರ್ಯಾಲಿಯಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಯುವಕನೊಬ್ಬನಿಗೆ ಬಿಜೆಪಿ ಕಾರ್ಯಕರ್ತರು ’ಭಯೋತ್ಪಾದಕ’ ಎಂದು ಹಣೆಪಟ್ಟಿ ಹಚ್ಚಿ ಮಾರಾಮಾರಿ ಹೊಡೆದಿದ್ದಾರೆ. ಆ ಮೂಲಕ ಸರ್ಕಾರದ ಹುಳುಕುಗಳನ್ನು ಪ್ರಶ್ನಿಸಿದರೆ ನೀವು ’ಭಯೋತ್ಪಾದಕ’ರಾಗುತ್ತೀರಿ ಮತ್ತು ಬೀದಿ ಹೆಣವಾಗಬಹುದು ಎಂಬ ಎಚ್ಚರಿಕೆಯನ್ನು ಇಡೀ ದೇಶಕ್ಕೆ ನೀಡುವಲ್ಲಿ ಆಡಳಿತರೂಢ ಪಕ್ಷ ಯಶಸ್ವಿಯಾಗಿದೆ.
ಸರ್ಜಿಕಲ್ ದಾಳಿ, ಗಡಿ ಭಾಗದ ರಹಸ್ಯ ಕಾರ್ಯಾಚರಣೆಯಂತಹ ವಿಷಯಗಳನ್ನು ಚುನಾವಣೆಯ ಲಾಭಕ್ಕಾಗಿ ಪ್ರಚಾರ ನೀಡುವ ಮೂಲಕ ದೇಶದ ಭದ್ರತೆಯನ್ನೇ ಅಪಾಯಕ್ಕೊಡುವ ತೀರಾ ಕ್ಷುಲ್ಲಕ ಮತಬ್ಯಾಂಕ್ ರಾಜಕಾರಣವನ್ನು ಮಾಡುವ ಪಕ್ಷವೇ, ಅಂತಹ ವಿಷಯಗಳಲ್ಲಿ ಸರ್ಕಾರದ ಗೊಂದಲದ, ಅನುಮಾನಾಸ್ಪದ ಹೇಳಿಕೆ ಮತ್ತು ಮಾಹಿತಿಗಳನ್ನು ಪ್ರಶ್ನಿಸುವ ಮಾಧ್ಯಮ ಮತ್ತು ಪ್ರತಿಪಕ್ಷಗಳನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ದೇಶಭಕ್ತಿಯ ಹೆಸರು ಹೇಳುತ್ತಲೇ, ದೇಶಕ್ಕೆ ಅಪಾಯ ತರುವಂತಹ ಸೂಕ್ಷ್ಮ ಸಂಗತಿಗಳನ್ನು ಸಾರ್ವಜನಿಕಗೊಳಿಸುವ ನಡೆ ನಿಜಕ್ಕೂ ಆಳುವ ಸರ್ಕಾರದ ವೈರುಧ್ಯದ ಮೇರು ನಿದರ್ಶನ.
ಇದೇ ವರಸೆ, ಭಾರತೀಯ ಸಂವಿಧಾನದ ವಿಷಯದಲ್ಲಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮೋದಿಯವರ ಘೋಷಣೆಯ ವಿಷಯದಲ್ಲಿ, ಇಂಡಿಯಾ ಫಸ್ಟ್ ಘೋಷಣೆಯ ವಿಷಯದಲ್ಲಿಯೂ ಮುಂದುವರಿದಿದೆ. ಒಂದು ಕಡೆ ಸಂವಿಧಾನವೇ ಪರಮಗ್ರಂಥ ಎನ್ನುವ ಮೋದಿಯವರು, ಅದೇ ಹೊತ್ತಿಗೆ ಸಂವಿಧಾನ ಬದಲಾವಣೆಗಾಗಿಯೇ ನಾವು ಅಧಿಕಾರಕ್ಕೆ ಬಂದಿರುವುದು ಎಂಬ ಅನಂತ ಕುಮಾರ ಹೆಗಡೆ ಅಂಥವರನ್ನು ಕರೆದು ಮಂತ್ರಿ ಮಾಡುತ್ತಾರೆ. ಸಬ್ ಕಾ ಸಾಥ್.. ಜಪ ಮಾಡುತ್ತಲೇ, ದಾರ್ದಿ, ಉನಾ ಮುಂತಾದ ಜಾತಿ-ಧರ್ಮದ ದ್ವೇಷ ಮತ್ತು ಕೋಮುವಾದಿ ಸಂಘರ್ಷಗಳಿಗೆ ಮೌನ ಸಮ್ಮತಿ ಸೂಚಿಸುತ್ತಾರೆ. ಹಾಗೇ, ಡಾ ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್, ಪಾನ್ಸರೆ, ದಾಭೋಲ್ಕರ್ ಮುಂತಾದ ವಿಚಾರವಾದಿಗಳ ಹತ್ಯೆ ವಿಷಯದಲ್ಲಿ ತುಟಿಬಿಚ್ಚುವುದಿಲ್ಲ. ದೇಶಕ್ಕಾಗಿ ನಾನು ಎನ್ನುತ್ತಲೇ, ದೇಶದ ಪ್ರಮುಖ ಸಾರ್ವಜನಿಕ ಆಸ್ತಿಗಳನ್ನು ತಮ್ಮ ಆಪ್ತ ಅದಾನಿ ಮತ್ತು ಅಂಬಾನಿಗಳಿಗೆ ವಹಿಸಿಕೊಡುತ್ತಾರೆ.
ಹೀಗೆ, ದೇಶದ ಪ್ರಧಾನಿಯಾಗಿ ಕೇವಲ ಐದು ವರ್ಷಗಳಲ್ಲಿ ಮೋದಿ ಮತ್ತು ಬಿಜೆಪಿಯ ಮಾತು ಮತ್ತು ನಡೆಯ ನಡುವಿನ ವಿರೋಧಾಭಾಸದ ಸರಣಿಯೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಅಷ್ಟಾಗಿಯೂ ಅವರು ದೇಶದ ಜನರನ್ನು ಕೂಡ ಅದೇ ’ಗುರಾಣಿ ನಡೆ’ಯ ಮೂಲಕವೇ ಮರಳುಮಾಡಬಲ್ಲರು. ಅದು ಭಕ್ತಿ ಎಂಬ ಅಫೀಮಿಗಿರುವ ಮಾದಕ ಶಕ್ತಿ!