ವಿವಾದಿತ ಬಹುಕೋಟಿ ರಾಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಒಪ್ಪಂದದ ಮಹತ್ವದ ದಾಖಲೆಗಳು ಕಳವಾಗಿವೆ ಎಂದು ಸರ್ಕಾರ ಸುಪ್ರೀಂಕೋರ್ಟಿನ ಮುಂದೆ ಕೈಕಟ್ಟಿನಿಂತು ಇದೀಗ ಬರೋಬ್ಬರಿ 36 ತಾಸುಗಳು ಕಳೆದಿವೆ. ಆದರೆ, ಈವರೆಗೆ, ಪ್ರಧಾನಿ ನರೇಂದ್ರ ಮೋದಿಯವರಾಗಲೀ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಾಗಲೀ ತುಟಿಬಿಚ್ಚಿಲ್ಲ!
ಸಣ್ಣಪುಟ್ಟ ವಿಷಯಗಳಿಗೂ ತಮ್ಮ ಟ್ವಿಟರ್ ಖಾತೆ ಮೂಲಕ ಪ್ರತಿಕ್ರಿಯಿಸುವ ಪ್ರಧಾನಿ ಮೋದಿ, ದೇಶದ ರಕ್ಷಣಾ ವಿಷಯಕ್ಕೆ ಸಂಬಂಧಿಸಿದ, ಇಡೀ ದೇಶವೇ ಬೆಚ್ಚಿಬೀಳುವಂತಹ ಇಂತಹ ಆಘಾತಕಾರಿ ಸಂಗತಿಯ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿರುವುದು ಸಹಜವಾಗೇ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಆರೋಪಗಳಿಗೆ ರೆಕ್ಕೆಪುಕ್ಕ ನೀಡಿವೆ. ಹಾಗಾಗಿ ದೇಶಾದ್ಯಂತ, ಮೋದಿ ಮತ್ತು ಬಿಜೆಪಿಯ ಕಟ್ಟಾ ಬೆಂಬಲಿಗರು ಕೂಡ, ರಾಫೇಲ್ ಹಗರಣದ ವಿಷಯದಲ್ಲಿ ಕಣ್ಣು ಮಿಟುಕಿಸಿ ಸಂಜ್ಞೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಬೆಳಗ್ಗೆ ತಮ್ಮ ಸರ್ಕಾರದ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸುಪ್ರೀಂಕೋರ್ಟಿನ ಮುಂದೆ “ರಾಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳವಾಗಿವೆ. ಅವು ಹೇಗೆ ಕಳವಾಗಿವೆ ಎಂದು ನ್ಯಾಯಾಲಯ ಕೇಳಬಾರದು” ಎಂದು ಹೇಳಿ ಕೈಕಟ್ಟಿ ನಿಂತ ಕ್ಷಣದಿಂದ ಈವರೆಗೆ ಮೋದಿಯವರು ಕರ್ನಾಟಕ, ತಮಿಳುನಾಡು ವಿವಿಧ ಸಾರ್ವಜನಿಕ ಸಭೆಗಳೂ ಸೇರಿದಂತೆ, ಈಶಾನ್ಯ ರಾಜ್ಯಗಳ ನಾಯಕರೊಂದಿಗೆ ವೀಡಿಯೋ ಕಾನ್ಫೆರೆನ್ಸ್, ನಾಗ್ಪುರ ಮೆಟ್ರೋ ರೈಲು ಸೇವೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರ ಟ್ವಿಟರ್ ಖಾತೆಯಲ್ಲಿ ಕ್ಷಣಕ್ಷಣದ ಮಾಹಿತಿಗಳನ್ನೂ ಶೇರ್ ಮಾಡಿದ್ದಾರೆ. ಆದರೆ, ರಾಫೇಲ್ ದಾಖಲೆ ಕಳವು ಕುರಿತ ಯಾವ ಪ್ರತಿಕ್ರಿಯೆಯೂ ನೇರವಾಗಿಯಾಗಲೀ, ಸಾಮಾಜಿಕ ಜಾಲತಾಣಗಳ ಮೂಲಕವಾಗಲೀ ಈವರೆಗೆ ವ್ಯಕ್ತವಾಗಿಲ್ಲ.
ನೇರವಾಗಿ ತಮ್ಮ ವಿರುದ್ಧವೇ ಪ್ರತಿಪಕ್ಷಗಳು ವಾಗ್ದಾಳಿ ಮಾಡುತ್ತಿದ್ದರೂ, ತಮ್ಮ ಆಪ್ತ ಉದ್ಯಮಿಗೆ ಅನುಕೂಲಮಾಡಿಕೊಡುವ ಉದ್ದೇಶದಿಂದಲೇ ಇಡೀ ಒಪ್ಪಂದವನ್ನು ರೂಪಿಸಿದ್ದು, ರಕ್ಷಣಾ ಸಚಿವಾಲಯ ಒಪ್ಪಂದ ಮಾತುಕತೆ ನಡೆಸುತ್ತಿರುವಾಗ, ಗುಟ್ಟಾಗಿ ಪರ್ಯಾಯವಾಗಿ ಫ್ರೆಂಚ್ ಡಸಾಲ್ಟ್ ಕಂಪನಿಯೊಂದಿಗೆ ವ್ಯಹವಾರ ಮಾಡಿದೆ ಎಂಬ ಗಂಭೀರ ಆರೋಪ ತಮ್ಮದೇ ಕಾರ್ಯಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ವಿರುದ್ಧ ಕೇಳಿಬಂದಿರುವಾಗ ಕೂಡ ಪ್ರಧಾನಿ ಮಹಾಮೌನಕ್ಕೆ ಜಾರಿದ್ದಾರೆ. ಅದೂ ತಮ್ಮ ಕಾರ್ಯಾಲಯ ಒಪ್ಪಂದದಲ್ಲಿ ಮೂಗು ತೂರಿಸಿರುವ ಬಗ್ಗೆ ಸ್ವತಃ ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳೇ ಆಕ್ಷೇಪ ದಾಖಲಿಸಿದ್ದ ಟಿಪ್ಪಣಿಯನ್ನೂ ಒಳಗೊಂಡಿದ್ದ ಒಪ್ಪಂದದ ದಾಖಲೆಗಳು ಕಾಣೆಯಾಗಿವೆ ಎಂದರೆ, ಅದು ನೇರವಾಗಿ ತಮ್ಮ ಕಡೆಗೆ ಬೊಟ್ಟುತೋರಿಸುತ್ತದೆ ಎಂದಾದರೂ, ಅವರು ಮೌನ ಮುರಿದಿಲ್ಲ.
ಇನ್ನು ರಾಫೇಲ್ ಒಪ್ಪಂದದ ವಿಷಯದಲ್ಲಿ ಸಂಸತ್ತಿನ ಒಳಹೊರಗೆ ಸದಾ ಗಟ್ಟಿ ಗಂಟಲಿನಲ್ಲಿ ಸಮರ್ಥನೆಗೆ ಇಳಿಯುತ್ತಿದ್ದ, ಮಾಧ್ಯಮಗಳ ಮೇಲೆಯೇ ಸದಾ ಹರಿಹಾಯುತ್ತಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೂ, ಕಳವು ವಿಷಯ ಬಯಲಾಗುತ್ತಿದ್ದಂತೆ ಬಹುತೇಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ತಮ್ಮದೇ ಖಾತೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ತಮ್ಮದೇ ಸುಪರ್ದಿಯಿಂದಲೇ ಕಳವು ಆಗಿರುವಾಗ ಕೂಡ ಅವರು ಆ ಬಗ್ಗೆ ತುಟಿಬಿಚ್ಚಿಲ್ಲ. ಕನಿಷ್ಠ ನೈತಿಕ ಹೊಣೆಹೊತ್ತು ಆ ಬಗ್ಗೆ ನಿರಾಕರಣೆ ಅಥವಾ ಸಮರ್ಥನೆಯನ್ನಾದರೂ ಮಾಡಿಕೊಳ್ಳಬೇಕಿತ್ತು ಎಂಬುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ, ನಿರ್ಮಲಾ ಅವರು ಸಂಪೂರ್ಣ ತೆರೆಮರೆಗೆ ಸರಿಯುವ ಮೂಲಕ ತಮ್ಮ ವಿರೋಧಿಗಳನ್ನಷ್ಟೇ ಅಲ್ಲ, ಅಭಿಮಾನಿಗಳನ್ನೂ ತೀವ್ರ ನಿರಾಶೆಗೊಳಪಡಿಸಿದ್ದಾರೆ. ಫೈರ್ ಬ್ರಾಂಡ್ ನಾಯಕಿ ಎಂಬ ಮೋದಿ ಅವರ ಮೆಚ್ಚುಗೆ ಕೂಡ ಇದೀಗ ಅರ್ಥಕಳೆದುಕೊಂಡಂತಾಗಿದೆ!
ಇನ್ನು ಪ್ರತಿಪಕ್ಷಗಳಂತೂ ದಾಖಲೆ ಕಳವು ವಿಷಯವನ್ನು ಬಲವಾಗಿ ಹಿಡಿಕೊಂಡಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, “ಪ್ರಧಾನಿ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಇನ್ನೇನು ಬೇಕು” ಎಂದು ಪ್ರಶ್ನಿಸಿದ್ದಾರೆ. ಅವರೊಂದಿಗೆ ಎನ್ ಸಿಪಿ ನಾಯಕ ಶರದ್ ಪವಾರ್, ಎಎಪಿ ನಾಯಕ ಅರವಿಂದ ಕೇಜ್ರಿವಾಲ್, ಬಿಎಸ್ ಪಿ ನಾಯಕಿ ಮಾಯಾವತಿ, ಎಸ್ಪಿ ನಾಯಕ ಅಖಿಲೇಶ್ ಯಾದವ್, ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ದೇಶದ ಬಹುತೇಕ ಎಲ್ಲಾ ಮುಂಚೂಣಿ ನಾಯಕರೂ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವತಃ ಮೋದಿಯವರ ಕಾರ್ಯಾಲಯದ ಹೆಸರೇ ಹಗರಣದಲ್ಲಿ ಉಲ್ಲೇಖವಾಗಿರುವುದರಿಂದ ಮತ್ತು ಅದನ್ನು ಕೂಡ ಸ್ವತಃ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳೇ ಲಿಖಿತವಾಗಿ ಹೇಳಿರುವುದರಿಂದ ಕೂಡಲೇ ಪ್ರಧಾನಿ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಜೊತೆಗೆ, ರಕ್ಷಣಾ ಇಲಾಖೆ ಅಧಿಕಾರಿಗಳು ಒಪ್ಪಂದದಲ್ಲಿ ಪ್ರಧಾನಿ ಕಾರ್ಯಾಲಯ ಮೂಗು ತೂರಿಸುತ್ತಿದೆ ಎಂದು ಲಿಖಿತವಾಗಿ ಉಲ್ಲೇಖಿಸಿ ಟಿಪ್ಪಣಿಯೂ ಸೇರಿದಂತೆ ದಾಖಲೆಗಳು ಕಳವಾಗಿವೆ ಎಂಬುದು ಇಡೀ ಪ್ರಕರಣದ ಬಗೆಗಿನ ಈವರೆಗಿನ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಆ ಹಿನ್ನೆಲೆಯಲ್ಲಿ ಕೂಡಲೇ ಆ ಬಗ್ಗೆ ತನಿಖೆಯಾಗಬೇಕು ಎಂದೂ ಹೇಳಿದ್ದಾರೆ.
ಆದರೆ, ಈ ಗಂಭೀರ ಆರೋಪಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತೋಚದಂತಾಗಿರುವ ಬಿಜೆಪಿ, ಮೊದಲ ಬಾರಿಗೆ ಗುರುವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದರೂ, ದಾಖಲೆಗಳ ಕಳವು ಕುರಿತ ಪ್ರತಿಕ್ರಿಯಿಸುವ ಬದಲಾಗಿ, ರಾಹುಲ್ ಗಾಂಧಿ ವಿರುದ್ಧ ಮತ್ತದೇ ಪಾಕಿಸ್ತಾನದ ಸಾಕ್ಷಿ ಬೇಕೆ ಎಂದು ಪ್ರಶ್ನಿಸುವ ಮೂಲಕ, ತನ್ನ ಬತ್ತಳಿಕೆಯಲ್ಲಿ ದೇಶಭಕ್ತಿಯ ಗುರಾಣಿ ಹೊರತು ಬೇರೆ ಅಸ್ತ್ರಗಳಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ದಾಖಲೆ ಕಳವು ಹೇಗಾಯಿತು? ಅದಕ್ಕೆ ಯಾರು ಹೊಣೆ? ದಾಖಲೆ ಕಳವಿಗೂ ಒಪ್ಪಂದದ ಕುರಿತ ಹಗರಣದ ಆರೋಪಗಳಿಗೂ ಸಂಬಂಧವಿದೆಯೇ ? ಎಂಬ ಯಾವ ಪ್ರಶ್ನೆಗಳಿಗೂ ಬಿಜೆಪಿ ನಾಯಕ, ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಬ್ಬ ಸಚಿವ ಅರುಣ್ ಜೇಟ್ಲಿ ಕೂಡ ತೀರಾ ದುರ್ಬಲ ವಾದ ಮುಂದಿಟ್ಟಿದ್ದು, ರಾಹುಲ್ ಗಾಂಧಿಯವರ ಬೆಳಗ್ಗಿನ ಪತ್ರಿಕಾಗೋಷ್ಠಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಬದಲು, ಅವರಿಗೆ ದೇಶದ ಸುಪ್ರೀಂಕೋರ್ಟ್ ಅಥವಾ ಸಿಎಜಿ ವರದಿಯಲ್ಲಿ ನಂಬಿಕೆ ಇಲ್ಲ. ಅವರಿಗೆ ಪಾಕಿಸ್ತಾನದ ಪ್ರಮಾಣಪತ್ರದಲ್ಲೇ ನಂಬಿಕೆ. ಅದಕ್ಕೆ ನಾವೇನೂ ಮಾಡಲಾಗದು ಎಂದಿದ್ದಾರೆ.
ಒಟ್ಟಾರೆ, ರಾಫೇಲ್ ದಾಖಲೆ ಕಳವು ಪ್ರಕರಣದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇಡೀ ಬಿಜೆಪಿ ಪಾಳೆಯ ದೊಡ್ಡ ಮಟ್ಟದ ಇರಿಸುಮುರಿಸಿಗೆ ಒಳಗಾಗಿದ್ದು, ಪ್ರತಿಪಕ್ಷಗಳು ಮತ್ತು ದೇಶದ ಜನತೆಯ ಎದುರು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಮುಳುಗಿರುವುದು, ಕಳೆದ 36 ಗಂಟೆಗಳ ಕಮಲ ಪಾಳೆಯದ ಪ್ರತಿಕ್ರಿಯೆಗಳಿಂದಲೇ ಗೋಚರಿಸುತ್ತಿದೆ.