ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಅಡ್ಮಿರಲ್ ರಾಮದಾಸ್ ದೇಶದ ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವ ಮುಂಚೂಣಿ ವ್ಯಕ್ತಿಗಳಲ್ಲಿ ಒಬ್ಬರು. ಕಳೆದ ಫೆ. 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 42 ಯೋಧರು ಹುತಾತ್ಮರಾದ ನಂತರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಈ ಪತ್ರವನ್ನು ಬರೆದಿದ್ದಾರೆ. ಅದನ್ನು ದ ಸಿಟಿಜನ್ ವೆಬ್ ಪತ್ರಿಕೆ ಮೊದಲು ಪ್ರಕಟಿಸಿದ್ದು ಟ್ರೂಥ್ ಇಂಡಿಯಾ ಕನ್ನಡ ಅನುವಾದಿಸಿ ಇಲ್ಲಿ ನೀಡಿದೆ.
ಡಿಯರ್ ಸರ್,
ಭಾರತೀಯ ಸೇನಾಪಡೆಗಳ ಅನೇಕಾನೇಕ ನನ್ನ ಹಿರಿಯ ಸಹೋದ್ಯೋಗಿ ನಿವೃತ್ತ ಸೈನಿಕರ ಪರವಾಗಿ, ಅಡ್ಮಿರಲ್ ಎಲ್ ರಾಮದಾಸ್ – ನೌಕಾದಳ ಸಿಬ್ಬಂದಿಯ ಮಾಜಿ ಮುಖ್ಯಸ್ಥನಾಗಿರುವ ನಾನು ಈ ಬಹಿರಂಗ ಪತ್ರದ ಮೂಲಕ ಹೇಳಬಯಸುವುದೇನೆಂದರೆ, ಮುಖ್ಯವಾಗಿ ಪುಲ್ವಾಮಾ ಘಟನೆಯ ಹಾಗೂ ಬಾಲಾಕೋಟ್ ವಾಯುದಾಳಿಯ ನಂತರದಲ್ಲಿ, ಮತ್ತು ಭಾರತೀಯ ವಾಯುಪಡೆಯ ಒಬ್ಬ ಪೈಲಟ್ ವಶ ಮತ್ತು ಹಿಂತಿರುಗಿಸಿದ ನಂತರದಲ್ಲಿ ಸೇನಾಪಡೆಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆತಂಕದ ವಿದ್ಯಮಾನ ನಡೆಯುತ್ತಿದೆ.
ದೇಶದ ಸಶಸ್ತ್ರ ಪಡೆಗಳು ಒಂದು ರಾಜಕೀಯವಾಗಿ ತಟಸ್ಥ ಹಾಗೂ ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಒಂದು ವಾತಾವರಣವನ್ನು ಯಾವತ್ತೂ ಪ್ರತಿಬಿಂಬಿಸುತ್ತವೆ ಎಂಬ ಸಂಗತಿ ನಿಮಗೆ ತಿಳಿದೇ ಇರುತ್ತದೆ ಎಂಬ ಖಾತ್ರಿ ನನಗಿದೆ.
ಲೋಕಸಭಾ ಚುನಾವಣೆಗಳು ಕೆಲವೇ ವಾರಗಳು ಬಾಕಿ ಉಳಿದಿರುವಂತೆ, ಯಾವುದೇ ರಾಜಕೀಯ ಪಕ್ಷವು ಇತ್ತೀಚಿನ ಸೇನೆಗೆ ಸಂಬಂಧಿಸಿದ ಘಟನೆಗಳನ್ನು ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳದಂತೆ, ಚುನಾವಣಾ ಫಲಿತಾಂಶವನ್ನು ಪ್ರಭಾವಿಸುವ ರೀತಿ ವಿಜಯೋನ್ಮಾದಿ ಸಂದೇಶಗಳನ್ನು ಕಳಿಸದಂತೆ ನೋಡುವುದು ಬಹಳ ಮುಖ್ಯವಾಗಿದೆ.
ಈ ಸಂದರ್ಭದಲ್ಲಿ, ಒಬ್ಬ ಹೊಣೆಯರಿತ ಪ್ರಜೆಯಾಗಿ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮಯ ನಿವೃತ್ತ ಯೋಧನಾಗಿ ನನ್ನಲ್ಲಿ ಹಾಗೂ ನಮ್ಮೆಲ್ಲಾ ಸೇನಾಬಂಧುಗಳಲ್ಲಿ ಒಂದು ರೀತಿಯ ಹೇವರಿಕೆ ಮೂಡಿದೆ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳು ಸೈನ್ಯದ ಚಿತ್ರಗಳು, ಯೂನಿಫಾರಂ ಮತ್ತಿತರ ವಸ್ತುಗಳು, ರಾಜಕೀಯ ಚಿನ್ಹೆಗಳಿರುವ ಸೇನಾ ಪಡೆಗಳ ಚಿತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಚುನಾವಣಾ ರ್ಯಾಲಿಗಳಲ್ಲಿ ಪ್ರದರ್ಶಿಸುತ್ತಿರುವುದು.
ಈಗ ಕಣ್ಣ ಮುಂದೆ ನಡೆಯುತ್ತಿರುವ ಬೆಳವಣಿಗೆಗಳು ಎಷ್ಟೊಂದು ಅಪಾಯಕಾರಿ ಎಂದರೆ ಅವು ನಮ್ಮ ಸಂವಿಧಾನದಿಂದ ನಮ್ಮ ಸೇನಾಪಡೆಗಳು ಪಡೆದುಕೊಂಡ ಮುನ್ನೋಟ, ಸ್ಪೂರ್ತಿ ಮತ್ತು ಧ್ಯೇಯಗಳಿಂದ ರೂಪಿತವಾಗಿರುವ ಮೌಲ್ಯವ್ಯವಸ್ಥೆಯನ್ನೇ ನಾಶಮಾಡುವ ಸಾಮರ್ಥ್ಯ ಹೊಂದಿವೆ.
ಈ ಕಾರಣದಿಂದ, ಈ ಕೂಡಲೇ ಚುನಾವಣಾ ಆಯೋಗವು ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ರಾಜಕೀಯ ಪಕ್ಷಗಳಿಗೆ ಒಂದು ಪ್ರಬಲ ಸಂದೇಶ ನೀಡಿ, ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಯಾವುದೇ ಸಾಮಗ್ರಿ/ವರದಿ ಅಥವಾ ಮಾಹಿತಿಯನ್ನಾಗಲೀ, ಫೋಟೋಗಳನ್ನಾಗಲೀ ಚುನಾವಣಾ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಳ್ಳಕೂಡದು ಎಂದು ಆದೇಶಿಸಬೇಕು ಎಂದು ಆಗ್ರಹಪಡಿಸುತ್ತಿದ್ದೇನೆ.
ಈಗೇನಾಗುತ್ತಿದೆ ಎಂದು ನೋಡಲು ಕೆಳಗೆ ನೀಡಿರುವ ಲಿಂಕ್ ಗಳ ಮೂಲಕ ಅಂತರ್ಜಾಲದಲ್ಲಿ ನೋಡಿ (ಇವುಗಳ ಸತ್ಯಾಸತ್ಯತೆ ಕುರಿತು ನೀವೇ ದೃಢೀಕರಿಸಬೇಕಿದೆ)
ಮುಂಬೈನ, ಕೊಲಾಬಾದಲ್ಲಿ ಹಚ್ಚಲಾದ ಭಿತ್ರಿಪತ್ರದ ಚಿತ್ರವನ್ನೂ ಇಲ್ಲಿ ಲಗತ್ತಿಸಲಾಗಿದೆ. (ಸ್ಥಳೀಯ ನಾಗರಿಕರ ಗುಂಪೊಂದು ತಕಾರರು ಸಲ್ಲಿಸಿದ ಕೂಡಲೇ ರಾತ್ರೋರಾತ್ರಿ ಇದನ್ನು ತೆಗೆದುಹಾಕಲಾಗಿದೆ)
ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಗೌರವಾನ್ವಿತ ಚುನಾವಣಾ ಆಯೋಗದಲ್ಲಿ ಈ ತಕ್ಷಣದ ಕ್ರಮವನ್ನು ನಿರೀಕ್ಷಿಸುತ್ತೇವೆ. ಕಾಲಾವಕಾಶ ಹೆಚ್ಚಿಲ್ಲದಿರುವ ಕಾರಣ ನಾನು ಈ ಪತ್ರಕ್ಕೆ ಹೆಚ್ಚು ಜನರ ಸಹಿ ಹಾಕಿಸಲು ಹೋಗಿಲ್ಲ. ಆದಾಗ್ಯೂ ಹಲವಾರು ನಿವೃತ್ತ ಯೋಧರು ಭಾರತೀಯ ಸಶಸ್ತ್ರ ಪಡೆಗಳ ಸಮಗ್ರತೆ ಮತ್ತು ಜಾತ್ಯತೀತ ಗುಣಲಕ್ಷಣಕ್ಕೆ ಯಾವುದೇ ಧಕ್ಕೆಯಾಗಬಾರದೆಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ವಂದನೆಗಳೊಂದಿಗೆ
ವಿಶ್ವಾಸದಿಂದ
ಅಡ್ಮಿರಲ್ ಎಲ್ ರಾಮದಾಸ್
ಭಾರತೀಯ ನೌಕಾಪಡೆಯ ಮುಖ್ಯಸ್ಥ (ನಿವೃತ್ತ)

ಸರ್ಕಾರದ ಬಂಡವಾಳ ಬಯಲಾಗುತ್ತಿದೆ