ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳಲು ಮೂರು ಜನರ ಮಧ್ಯಸ್ಥಿಕೆ ತಂಡವನ್ನು ರಚಿಸಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎಫ್ ಎಂ ಐ ಕಲೀಫುಲ್ಲಾ ಅಧ್ಯಕ್ಷತೆಯ ಈ ಮೂರು ಸದಸ್ಯರ ಮಧ್ಯಸ್ಥಿಕೆ ತಂಡದಲ್ಲಿ ಇರಲಿರುವ ಇನ್ನಿಬ್ಬರು ಸದಸ್ಯರೆಂದರೆ ಆಧ್ಯಾತ್ಮ ಗುರು ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು.



ಸುಪ್ರೀ ಕೋರ್ಟಿನ ಆದೇಶದಂತೆ ಈ ಮೂರು ಜನರ ಮಧ್ಯಸ್ಥಿಗೆ ತಂಡವು ಇನ್ನು ಒಂದು ವಾರದಲ್ಲಿ ಮಧ್ಯಸ್ಥಿಕೆಯನ್ನು ಫೈಝಾಬಾದ್ ನಲ್ಲಿ ಆರಂಭಿಸಲಿದ್ದು ನಾಲ್ಕು ವಾರಗಳಲ್ಲಿ ಮೊದಲ ವರದಿ ನೀಡಲಿದೆ ಮತ್ತು ಎಂಟು ವಾರಗಳಲ್ಲಿ ಮಧ್ಯಸ್ಥಿಕೆಯನ್ನು ಅಂತಿಮಗೊಳಿಸಲಿದೆ. ಈ ಮಧ್ಯಸ್ಥಿಕೆಯು ಅತ್ಯಂತ ರಹಸ್ಯವಾಗಿ ನಡೆಯತಕ್ಕದ್ದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಯನ್ನು ಯಾವುದೇ ಮಾಧ್ಯಮಗಳು ವರದಿ ಮಾಡಕೂಡದು ಎಂದೂ ತಿಳಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ಈ ಮಧ್ಯಸ್ಥಿಕೆ ಮಾತುಕತೆಗೆ ಉತ್ತರ ಪ್ರದೇಶ ಸರ್ಕಾರವು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಿದೆ.
ಅಯೋಧ್ಯಾ ಭೂವಿವಾದನ್ನು “ಮಧ್ಯಸ್ಥಿಕೆಗೆ ವಹಿಸುವಲ್ಲಿ ಯಾವುದೇ ಕಾನೂನಾತ್ಮಕ ತೊಡಕುಗಳು ನಮಗೆ ಕಂಡು ಬಂದಿಲ್ಲ” ಎಂದು ಸುಪ್ರೀ ಕೋರ್ಟ್ ಪೀಠ ತಿಳಿಸಿದೆ.
ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸುತ್ತಿದ್ದಂತೆ, ಹೆಚ್ಚಿನ ‘ಹಿಂದು’ ಅರ್ಜಿದಾರರು ಮಧ್ಯಸ್ಥಿಕೆಯನ್ನು ವಿರೋಧಿಸಿದ್ದಾರೆ. ಮುಸ್ಲಿಂ ಪ್ರತಿನಿಧಿಗಳು ಇದನ್ನು ಸ್ವಾಗತಿಸಿದ್ದರೂ ಇಡೀ ಪ್ರಕ್ರಿಯೆಯನ್ನು ರಹಸ್ಯವಾಗಿಡಬೇಕೆನ್ನುವ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ.
‘ಈ ವಿವಾದ ಕೇವಲ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ಭೂಮಿಯ ವಿಷಯವಾಗಿಲ್ಲ. ಇದು ಧಾರ್ಮಿಕ ಭಾವನೆಗಳಿಗೆ ಸಂಬಂಧಪಟ್ಟ ವಿಷಯವಾಗಿದೆ. ಕೇವಲ ಆಸ್ತಿ ವಿಷಯವನ್ನು ಪರಿಹರಿಸಬಹುದು, ಆದರೆ ಧಾರ್ಮಿಕ ಸಂಬಂಧಗಳ ನಡುವೆ ಸಂಬಂಧಗಳು ಉತ್ತಮಗೊಳ್ಳುವ ಸಾಧ್ಯತೆಯನ್ನು ನಾವು ನೋಡುತ್ತಿದ್ದೇವೆ’ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಹೇಳಿದೆ.
ಮಧ್ಯಸ್ಥಿಕೆಗೆ ನೇಮಕ ಮಾಡಿರುವ ತಂಡದ ನಡುವೆ ಒಪ್ಪಂದ ಸಾಧ್ಯವಾಗುವುದಾದರೆ ಅಂತಹ ಒಂದು ಒಪ್ಪಂದವನ್ನು ದಾಖಲಿಸಿಕೊಂಡು, ಮೂರು ಪಕ್ಷಗಳ ನಡುವೆ ಕೈಗೊಂಡ ನಿರ್ಣಯಕ್ಕೆ ಸಮ್ಮತಿ ನೀಡಿ ಡಿಕ್ರಿ ರೂಪದಲ್ಲಿ ಹೊರಡಿಸಲು ಅಡ್ಡಿಯಿಲ್ಲ ಎಂದು ಕೋರ್ಟ್ ತಿಳಿಸಿದೆ.