ರಾಜಕೀಯದಲ್ಲಿ ಮಹಿಳೆಯ ವಿಚಾರ ಬಂದಾಗ ಎಷ್ಟೋ ವರ್ಷಗಳು ಸರಿದು ಹೋದರೂ ಮಹಿಳೆಗೆ ಇನ್ನೂ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲವೆಂಬುದು ಸ್ಪಷ್ಟ. ಇನ್ನು ರಾಜ್ಯದ ಸ್ಥಿತಿಗತಿಯ ಬಗ್ಗೆ ಗಮನವನ್ನು ಹರಿಸಿದರೂ ಕೂಡ ನಲವತ್ತು ವರ್ಷಗಳ ಹಿಂದೆ ಎಲ್ಲಿದ್ದೇವೆಯೋ ನಾವು ಇನ್ನೂ ಕೂಡ ಅಲ್ಲೇ ಇದ್ದೇವೆ ಅನ್ನೋದನ್ನು ಹೇಳಬೇಕಾಗಿಲ್ಲ,
ನಿಜ ಉಕ್ಕಿನ ಮಹಿಳೆ ಇಂದಿರಾಗಾಂಧಿಯವರು ಈ ದೇಶದ ಪ್ರಧಾನಿಯಾಗಿದ್ದರು.ಹಲವು ಮಹಿಳೆಯವರು ಮುಖ್ಯಮಂತ್ರಿಗಳಾಗಿದ್ದರು.ದಿವಂಗತ ಜಯಲಲಿತಾ, ಮಮತಾ ಬ್ಯಾನರ್ಜಿ, ವಸುಂಧರಾ ರಾಜೆ. ಮಾಯಾವತಿ, ಮೆಹಬೂಬಾ ಮುಫ್ತಿ ನೆನಪಿಗೆ ಬರುವವರು.
ಈ ಎಲ್ಲಾ ಹೆಸರುಗಳನ್ನು ನೋಡಿ ಖುಷಿ ಪಡುವ ಹಾಗಿಲ್ಲ, ಯಾಕೆಂದರೆ ನಮ್ಮ ರಾಜಕಾರಣದಲ್ಲಿ ಮಹಿಳೆಯರಿಗೆ ಸಿಗುವ ರಾಜಕಾರಣದ ಅವಕಾಶಗಳು ಅಷ್ಚಕ್ಕಷ್ಟೇ.
ಇನ್ನು ರಾಜಕಾರಣದಲ್ಲಿ ಮುಂದೆ ಬಂದಿರುವ ಮಹಿಳೆಯರ ಕುರಿತಂತೆ ಗಮನವನ್ನು ಹರಿಸಿದರೂ ಕೂಡ ಕೆಲವರಿಗೆ ಕುಟುಂಬದ ಹಿನ್ನೆಲೆಯಿರುತ್ತದೆ. ಹಾಗಾಗಿ ಸ್ವಂತ ಬಲದಿಂದ ಮುಂದೆ ಬಂದಿರುವವರ ಸಂಖ್ಯೆಯಂತೂ ತೀರಾ ವಿರಳ,
ಹಾಗಾಗಿ ಇವತ್ತು ಮಹಿಳೆ ಮತ್ತು ರಾಜಕಾರಣದ ಬಗ್ಗೆ ಮಾತಾಡೋದಾದ್ರೆ ಮತ್ತೆ ಹಳೆಯ ರಾಗವನ್ನೇ ಹಾಡಬೇಕಾಗುತ್ತದೆ. ಯಾಕೆ ಹೀಗೆ ಎಂದರೆ ಸರಿಯಾದ ಉತ್ತರ ಸಿಗುವುದಿಲ್ಲ. ಅಂಕಿ ಅಂಶಗಳನ್ನಿಟ್ಟು ಮಾತಾಡಿದರೂ ಏನೂ ಕೂಡ ಉಪಯೋಗವಾಗೋದಿಲ್ಲ.
ಕರ್ನಾಟಕದಲ್ಲಿನ ರಾಜಕೀಯದಲ್ಲಿ ಮಹಿಳೆಯ ಪಾತ್ರ
ಕರ್ನಾಟಕದಲ್ಲಿ ನಲವತ್ತು ವರ್ಷಗಳ ಹಿಂದಿನ ರಾಜಕೀಯದತ್ತ ಒಮ್ಮೆ ದೃಷ್ಟಿ ಬೀರಿದರೆ ಅಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಮಹಿಳೆಯರ ಸಂಖ್ಯೆಯೇ ಮಹಿಳೆಯರಿಗೆ ರಾಜಕೀಯದಲ್ಲಿ ನೀಡುವ ಪ್ರಾತಿನಿಧ್ಯವನ್ನು ಅದು ಬಿಂಬಿಸುತ್ತದೆ. ಹೌದು, ಅಂದು ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯನ್ನು ಪ್ರವೇಶಿಸಿದವರು ಕೇವಲ ಎಂಟು ಮಂದಿ ಮಾತ್ರ. ಇನ್ನು 2018 ರ ವಿಧಾನಸಭಾ ಚುನಾವಣೆಯಲ್ಲೂ ಗೆದ್ದವರ ಸಂಖ್ಯೆ ಎಂಟು ಮಂದಿ ಮಾತ್ರ. ಅಂದರೆ ಸುದೀರ್ಘ ನಲವತ್ತು ವರುಷಗಳು ದಾಟಿ ಹೋದರೂ ಮಹಿಳೆಯರಿಗೆ ನೀಡುವ ಸ್ಥಾನಮಾನದ ವಿಷಯದಲ್ಲಿ ನೋಡೋದಾದ್ರೆ ಅಂತಹ ಬದಲಾವಣೆಯಂತೂ ಆಗಿಲ್ಲ.
ಹೀಗೆ ರಾಜಕಾರಣದಲ್ಲಿ ಮಹಿಳೆಗೆ ಸಿಗಬೇಕಾದ ಮಾನ್ಯತೆ ಹೇಗೆ ಸಿಗಲಿಲ್ಲವೆನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ.
ಹಾಗಾದ್ರೆ ಇಂತಹ ಪರಿಸ್ಥಿತಿಗೆ ಕಾರಣವಾದರೂ ಏನು ಎಂದು ಹುಡುಕುತ್ತಾ ಹೋದರೆ ಉತ್ತರಗಳು ಕೂಡ ತೆರೆದುಕೊಳ್ಳುತ್ತವೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಗೆ ರಾಜಕೀಯ ಮಾಡಲು ಬರದು ಎಂಬ ತಪ್ಪು ಕಲ್ಪನೆ ಒಂದಾದರೆ ಸೀಟಿಗಾಗಿ ಮತ್ಯಾವುದೋ ರೀತಿಯ ರಾಜಕೀಯವನ್ನು ಮಾಡಲು ಮಹಿಳೆಗೆ ಸಾಧ್ಯವಾಗದು.
ಮತ್ತೊಂದು ಕಡೆ ಹಣಬಲ ತೋಳ್ಬಲದ ರಾಜಕೀಯ ಪರಿಸ್ಥಿತಿಯಲ್ಲಿ ಮಹಿಳೆಗೆ ಗೆದ್ದು ಬರಲು ಸಾಧ್ಯವಾಗದೆಂಬ ಯೋಚನೆಯು ಕೂಡ ಇದೆ. ಹೀಗೆ ಗೆಲ್ಲಲು ಬೇಕಾದ ಮಾನದಂಡಗಳು ಮಹಿಳೆಯಲ್ಲಿ ಇಲ್ಲ ಎನ್ನುವ ಯೋಚನೆಯೇ ಆಕೆಗೆ ಬೇಕಾದ ಪ್ರಾಶಸ್ತ್ಯವನ್ನು ನೀಡದಿರಲು ಕಾರಣವಾಗಿರುತ್ತದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಲಕ್ಷ, ಕೋಟಿ ಸುರಿಯಬೇಕಾದ ಸಂದರ್ಭದಲ್ಲಿ, ಟಿಕೆಟ್ ಗಾಗಿ ಹಣವನ್ನೇ ಕೆಲವೊಂದು ಸಂದರ್ಭದಲ್ಲಿ ಕೊಡಬೇಕಾದ ಸಂದರ್ಭದಲ್ಲಿ ಮಹಿಳೆಯಾದರೂ ಇಷ್ಟೊಂದು ಮೊತ್ತದ ಹಣವನ್ನು ಹೊಂದಿಸೋದಾದರು ಹೇಗೆ ಎನ್ನುವ ಪ್ರಶ್ನೆಯು ಮುಂದಿದೆ.
ರಾಜಕೀಯ ಮತ್ತು ಸಂಸಾರ
ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ರಾಜಕೀಯವನ್ನು ನಿಭಾಯಿಸಲು ಮಹಿಳೆಗೆ ಅಪಾರ ತಾಳ್ಮೆ ಬೇಕಾಗುತ್ತದೆ. ಮತ್ತು ಅದನ್ನು ಆಕೆ ಸಮರ್ಥವಾಗಿ ನಿಭಾಯಿಸುತ್ತಾಳೆ ಕೂಡ. ಕೇವಲ ರಾಜಕೀಯವಾದ ನಿಲುವುಗಳನ್ನು ತೆಗೆದುಕೊಳ್ಳುವುದು, ಅಭಿವೃದ್ದಿ ಕಾಮಗಾರಿಗಳು ಹೀಗೆ ಅಭಿವೃದ್ಧಿ ಕೇಂದ್ರಿತ ಕೆಲಸಗಳಷ್ಟೇ ಅಲ್ಲ ಮಹಿಳೆ ತಾನು ಮನೆಕೆಲಸ ಮಕ್ಕಳ ಜವಾಬ್ದಾರಿಯನ್ನು ಕೂಡ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ ಕೂಡ. ತೊಟ್ಟಿಲು ತೂಗುವ ಕೈ ಜಗವನ್ನು ಆಳಬಲ್ಲದು ಎಂಬುದನ್ನು ಆಕೆ ಸಾಬೀತುಪಡಿಸಿದ್ದಾಳೆ.
..ಇನ್ನು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುಂದೆ ಸಾಗಿರುವ ಅಮೆರಿಕಾವೇ ಇನ್ನೂ ಕೂಡ ಮಹಿಳೆಯೊಬ್ಬಳು ಅಧ್ಯಕ್ಷರಾಗಿರುವುದನ್ನು ಕಂಡಿಲ್ಲ. ಇನ್ನು ಮಹಿಳೆಯು ಉನ್ನತ ಸ್ಥಾನಮಾನವನ್ನು ಅಲಂಕರಿಸುವುದನ್ನು ಹೇಗೆ ನೋಡಲು ಸಾಧ್ಯವೆಂಬುದನ್ನು ನಾವು ಕಲ್ಪಿಸಿಕೊಳ್ಳಬಹುದು. ರಾಜಕೀಯವೆಂದರೆ ಪುರುಷರಿಗಷ್ಟೇ ಸೀಮಿತ ಮತ್ತು ರಾಜಕಾರಣ ಮಾಡಲು ಪುರುಷರಿಗೆ ಮಾತ್ರ ಸಾಧ್ಯವೆನ್ನುವ ಮನಸ್ಥಿತಿ ಇರುವವರೆಗೂ ಹೀಗೆ ರಾಜಕೀಯ ರಂಗದಲ್ಲಿ ಮಹಿಳೆಯರ ಹೆಜ್ಜೆ ಗುರುತು ಹೆಚ್ಚಾಗಲು ಸಾಧ್ಯವಾಗೋದಿಲ್ಲ.
ಇನ್ನು ಮತದಾನ ಮಾಡುವವರಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದರು ಮತದಾನ ಮಾಡುವ ವಿಚಾರ ಬಂದಾಗ ವ್ಯವಸ್ಥೆ ಪುರುಷರ ಗೆಲುವನ್ನೇ ಸುಲಭವಾಗಿಸುತ್ತದೆ.
ಭರವಸೆಯಿದ್ದರು ರಾಜಕೀಯ ಜಗತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ ನೀಡುವ ಬದಲಾವಣೆ ಅಷ್ಟೊಂದು ಬೀಸಿದಂತೆ ಭಾಸವಾಗುತ್ತಿಲ್ಲ.
– ಜ್ಯೋತಿ ಇರ್ವತ್ತೂರು
(ಲೇಖಕರು ಪತ್ರಕರ್ತರು)
Insight