“ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸಂವಿಧಾನವನ್ನು ಬದಲಿಸುವ ಪ್ರಯತ್ನದಲ್ಲಿದ್ದಾರೆ” ಎಂದು ಇತ್ತೀಚೆಗಷ್ಟೇ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಬಹರೈಚ್ ನ ದಲಿತ ಸಂಸದೆ ಸಾವಿತ್ರಿ ಫುಲೆ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯವನ್ನು ಅನೇಕರು ಹೇಳುತ್ತಿದ್ದರೂ ಬಿಜೆಪಿಯ ಸಂಸತ್ ಸದಸ್ಯರೇ ಆಗಿ ಕೆಲಸ ಮಾಡಿರುವ ಸಾವಿತ್ರಿ ಬಾಯಿ ಫುಲೆ ಅವರು ಹೇಳಿರುವುದು ಅವರ ಮಾತಿನಲ್ಲಿರುವ ವಾಸ್ತವವನ್ನು ತಿಳಿಸುತ್ತದೆ.
ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆ ಸಾವಿತ್ರಿ ಪುಲೆ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಅವರು, ಈ ದೇಶದ ಆಡಳಿತ ನಡೆಸುತ್ತಿರುವುದು ಬಿಜೆಪಿ ಅಲ್ಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್). ಮೋದಿ ಸೇರಿದಂತೆ ಆರ್ ಎಸ್ ಎಸ್ ನ ಎಲ್ಲಾ ಸದಸ್ಯರು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನವನ್ನು ಬದಲಿಸಿ ಪುರಾತನ ಕಾಲದ, ಶೂದ್ರ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಮನುಸ್ಮೃತಿಯನ್ನು ಜಾರಿಗೆ ತರಲು ಭಾರೀ ಪ್ರಯತ್ನ ಹಾಗೂ ಸಂಚು ನಡೆಸಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ.
ದಲಿತ ನಾಯಕಿ ಸಾವಿತ್ರಿ ಬಾಯಿ ಪುಲೆ ಅವರಿಂದಾಗಿ ಬಹರೈಚ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಸಂಖ್ಯೆಯ ಮತಬ್ಯಾಂಕ್ ಇದ್ದು, ಇದೀಗ ಅವರ ರಾಜಿನಾಮೆಯಿಂದಾಗಿ ಬಿಜೆಪಿ ಸಾಕಷ್ಟು ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
2014ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಮೋದಿ ಅವರು ಸಾವಿತ್ರಿ ಅವರಿಗೆ ಗುಜರಾತ್ ನಿಂದ ಚುನಾವಣೆಗೆ ಸ್ಪರ್ಧಿಸಲು ಕೇಳಿದ್ದರೂ ಸಾವಿತ್ರಿ ಅವರೇ ಇದನ್ನು ನಿರಾಕರಿಸಿದ್ದರು. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ ಪಿ) ಯ ನಾಯಕಿ ಮಾಯಾವತಿಗೂ ಸಾವಿತ್ರಿ ಅವರು ಪ್ರಬಲ ಸ್ಪರ್ಧೆ ನೀಡಿದ್ದರು.
ಬಿಜೆಪಿಗೆ ರಾಜಿನಾಮೆ ನೀಡುವ ಆರು ತಿಂಗಳಿಗೂ ಮುನ್ನ ಸಾವಿತ್ರಿ ಅವರು ಕೆಲವು ಮೀಸಲು ಪ್ರದೇಶಗಳಿಗೆ ಹಾಗೂ ದಲಿತರು ನೆಲೆಸಿರುವ ಪ್ರದೇಶಗಳಿಗೆ ತೆರಳಿ, ಬಿಜೆಪಿಗೆ ದಲಿತರ ಮತ ಮಾತ್ರ ಬೇಕಿದೆ, ಅವರಿಗಾಗಿ ಬಿಜೆಪಿ ಏನನ್ನೂ ಮಾಡಿಲ್ಲ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅಚ್ಚರಿಯೆಂದರೆ, ಬಿಜೆಪಿ ಸಾವಿತ್ರಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನ್ಯೂಸ್ ಕ್ಲಿಕ್ ಪತ್ರಿಕೆ ನಡೆಸಿರುವ ಸಾವಿತ್ರಿ ಫುಲೆ ಅವರ ಸಂದರ್ಶನ ದ ಪೂರ್ಣ ಪಾಠ ಇಲ್ಲಿದೆ.
ಬಿಜೆಪಿಗೆ ಏಕೆ ರಾಜಿನಾಮೆ ನೀಡಿದಿರಿ?
ಫುಲೆ: ಬಿಜೆಪಿ ಪಕ್ಷದ ದಲಿತರ ವಿರೋಧಿ, ಹಿಂದುಳಿದವರ ವಿರೋಧಿ, ಮುಸ್ಲಿಂ ವಿರೋಧಿಯ ನಡೆಗಳಿಂದ, ಪಕ್ಷದ ಸಿದ್ಧಾಂತಗಳಿಂದ ನನಗೆ ಸಾಕಷ್ಟು ಅವಮಾನ, ಮುಜುಗರವಾಗಿದೆ. ಒಂದೆಡೆ ಬಿಜೆಪಿ ನಾಯಕರು ಅವರ ಪರವಾಗಿಯೇ ಮಾತನಾಡಿದರೂ, ಮತ್ತೊಂದೆಡೆ ದಲಿತರು, ಮುಸ್ಲಿಂ ಪರ ವಿಚಾರಗಳನ್ನು ಬಹಿಷ್ಕರಿಸುತ್ತಾರೆ. ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರ ಪರವಾಗಿ ಮಾತನಾಡುವುದು ಕೇವಲ ಮತಕ್ಕಾಗಿ ಮಾತ್ರ, ಮತ್ತೊಂದೆಡೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲೇ ದೇಶದ ವಿವಿಧ ಭಾಗಗಳಲ್ಲಿದ್ದ ಅಂಬೇಡ್ಕರ್ ಪ್ರತಿಮೆಗಳನ್ನು ನಾಶಗೊಳಿಸಿದ್ದಾರೆ, ಇಂತಹ ಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ನೀವು ಎಂದಾದರೂ ಈ ಬಗ್ಗೆ ಪಕ್ಷದ ವರಿಷ್ಠರ ಜತೆ ಮಾತನಾಡಿದ್ದೀರಾ?
ಫುಲೆ: ಹೌದು, ನಾನು ಯಾವಾಗಲೂ ಪಕ್ಷದ ಹಿರಿಯರ ಮುಂದೆ ನನ್ನ ಆಕ್ಷೇಪಗಳನ್ನು ಸಲ್ಲಿಸುತ್ತಿದ್ದೆ. ಲೋಕಸಭೆಯಲ್ಲೂ ನಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಮತ್ತು ಸಂಸತ್ ನಲ್ಲಿರುವ ಮೋದಿ ಅವರ ಕಚೇರಿಯಲ್ಲೂ ಈ ವಿಷಯದ ಬಗ್ಗೆ ಚರ್ಚಿಸಿದ್ದೇನೆ . ಅವರು ಕೇವಲ ನಮ್ಮ ಆರೋಪವನ್ನು ಕೇಳಿಸಿಕೊಂಡದ್ದಷ್ಟೇ ಹೊರತಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಈ ಪ್ರವಿಷಯದ ಕುರಿತಾಗಿ ಪ್ರಧಾನಿ ಮೋದಿ ಅವರಿಗೆ ಅಧಿಕೃತವಾಗಿ ಲಿಖಿತ ದೂರು ಸಲ್ಲಿಸಿದ್ದೇನೆ. ಆದರೆ, ಅವರು ನನ್ನ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ ಎಂದು ನಿಮಗೇಕೆ ಅನಿಸುತ್ತಿದೆ?
ಫುಲೆ: ದಿನಪತ್ರಿಕೆಯನ್ನು ಓದಿ, ನಿಮಗೇ ಅರ್ಥವಾಗುತ್ತದೆ. ಭಾರತದ ಸಂವಿಧಾನ ದೇಶದ ಎಲ್ಲಾ ಪ್ರಜೆಗೂ ಸಮಾನ ಹಕ್ಕನ್ನು ನೀಡುತ್ತದೆ, ಆದರೆ, ದಲಿತರು ಹಾಗೂ ಬಹುಜನ ಸಮಾಜದ ಜನರನ್ನು ಸಮಾನವಾಗಿ ನೋಡಲಾಗುತ್ತಿದೆಯೇ?, ಇಲ್ಲ.
ಈ ಸರ್ಕಾರ ದೇವಾಲಯ, ಪ್ರತಿಮೆಗಳ ನಿರ್ಮಾಣಗಳಿಗೆ ಹಣ ವಿನಿಯೋಗಿಸುತ್ತಿದೆಯೇ ಹೊರತು, ಅಭಿವೃದ್ಧಿಗಾಗಿ ಯಾವುದೇ ವೆಚ್ಚ ಮಾಡುತ್ತಿಲ್ಲ.
ಬಿಜೆಪಿ ದಲಿತ ವಿರೋಧಿ ಪಕ್ಷ ಎಂದು ನೀವು ಹೇಳುತ್ತಿದ್ದೀರಾ, ಆದರೆ ಪ್ರಧಾನಿ ಮೋದಿ ಅವರು ಕುಂಭ ಮೇಳದಲ್ಲಿ ಸಫಾಯಿ ಕಾರ್ಮಿಕರ ಪಾದ ತೊಳೆದಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಾ?
ಫುಲೆ: ಪ್ರಧಾನಿ ಮೋದಿ ಅವರು ಪಾದ ತೊಳೆದ ನಂತರ ಆ ಕಾರ್ಮಿಕರಿಗೇನು ಸಿಕ್ಕಿದೆ?. ಪ್ರಧಾನಿಗಳು ಅವರಿಗೇನು ಕೆಲಸ ಅಥವಾ ಬೇರೇನಾದರೂ ಕೊಡುವುದಾಗಿ ಭರವಸೆ ನೀಡಿದ್ದರೇ? ಅದರಿಂದೇನಾದರೂ ಅವರ ಜೀವನ ಬದಲಾಯಿತೇ? ಆ ಕಾರ್ಮಿಕರೇ ಹೇಳಿದ್ದಾರಲ್ಲ, ಐದು ಜನ ಕಾರ್ಮಿಕರ ಬಳಿ ಐದು ನಿಮಿಷವೂ ಮಾತಾಡಲಿಲ್ಲ ಮೋದಿ ಎಂದು. ಇದೆಲ್ಲಾ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆ ಮಾಡುತ್ತಿರುವ ರಾಜಕೀಯ ತಂತ್ರಗಳಷ್ಟೇ.
ಬಿಎಸ್ ಪಿಗೆ ಸೇರಲು ಅವಕಾಶವಿದ್ದರೂ ಉತ್ತರ ಪ್ರದೇಶದಲ್ಲಿ ಕೊನೆಯ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೇಕೆ ನೀವು ಸೇರಿದ್ದಿರಿ.
ಫುಲೆ: ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ, ಛತ್ತೀಸ್ ಗಡ ಮತ್ತು ರಾಜಸ್ತಾನದ ವಿಧಾನಸಭಾ ಚುನಾವಣೆಯಲ್ಲಿ ದಲಿತರು, ಹಿಂದುಳಿದವರು ಮತ್ತು ಮುಸ್ಲಿಂಮರ ಮತಗಳನ್ನು ಪಡೆದಿದೆ. ಬಹುಜನ ಸಮಾಜ ಸಹ ಕಾಂಗ್ರೆಸ್ ಗೆ ಬೆಂಬಲ ನೀಡುತ್ತದೆ ಮತ್ತು ನಮ್ಮ ನಾಟಕಕಾರ ಪ್ರಧಾನಿಯ ಸುಳ್ಳು ಭರವಸೆಗಳಿಗೆ ಬಗ್ಗುವುದಿಲ್ಲ.
ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ಕಾನ್ಷೀರಾಂಜಿ ನಿಧನ ನಂತರ ಮಾಯಾವತಿ ಅವರು ತಪ್ಪು ದಾರಿಯಲ್ಲಿದ್ದಾರೆ. ಇಂದು ಅಲ್ಪಸಂಖ್ಯಾತರ ಏಳ್ಗೆ ಕುರಿತು ಯಾರು ಮಾತನಾಡುತ್ತಿಲ್ಲ.
ನೀವು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೀರಾ? ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವುದಾಗಿ ಭರವಸೆ ನೀಡಿದೆಯೇ?
ಫುಲೆ: ಹೌದು. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಪೂರ್ವ ವಿಭಾಗದ ಮುಖ್ಯಸ್ಥೆ ಪ್ರಿಯಾಂಕ ಗಾಂಧಿ ಅವರು ಬಹರೈಚ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಪ್ರಚಾರ ಆರಂಭಿಸಲೂ ತಿಳಿಸಿದ್ದಾರೆ.