ಬಹುಕೋಟಿ ರಾಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಪಟ್ಟ ದಾಖಲೆಗಳು ಕಳವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ಮುಂದೆ ಬಾಯಿಬಿಟ್ಟ ದಿನವೇ(ಬುಧವಾರ) ದೆಹಲಿಯ ಅಂತ್ಯೋದಯ ಭವನದಲ್ಲಿ ಮತ್ತೊಂದು ಅಂತಹದ್ದೇ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಸುಟ್ಟುಬೂದಿಯಾದದ್ದು ಸುದ್ದಿಯಾಗದೇ ಹೋಯಿತು.
ಹೌದು, ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ(ಇಪಿಡಬ್ಲ್ಯೂಡಿ)ಗೆ ಸೇರಿದ ನೂರಾರು ಕಡತಗಳು ಆಕಸ್ಮಿಕ ಬೆಂಕಿಗೆ ಆಹುತಿಯಾದವು. ದೆಹಲಿಯ ಸಿಜಿಒ ಸಂಕೀರ್ಣದಲ್ಲಿನ ಇಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ, ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅಕ್ಸೆಸ್ಸಿಬಲ್ ಇಂಡಿಯಾ ಕ್ಯಾಂಪೇನ್(ಎಐಸಿ)’ಗೆ ಸಂಬಂಧಿಸಿದ ಸಂಪೂರ್ಣ ಕಡತಗಳನ್ನು ಸ್ವಾಹಾ ಮಾಡಿದೆ.
ಅದರಲ್ಲೂ ಕಳೆದ ವಾರವಷ್ಟೇ ಇಲಾಖೆಯ ಲೆಕ್ಕಪರಿಶೋಧನಾ ವರದಿಗಳನ್ನು ಸಂಕೀರ್ಣದ ಐದನೇ ಮಹಡಿಗೆ ಸ್ಥಳಾಂತರಗೊಂಡಿತ್ತು. ಇದೀಗ ಅದೇ ಮಹಡಿಯಲ್ಲೇ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ ಮತ್ತು ಮೋದಿ ಸರ್ಕಾರದ ಅತ್ಯಂತ ವಿಫಲ ಯೋಜನೆ ಮತ್ತು ಸುಮಾರು 300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣಕಾಸು ಹಗರಣದ ಆರೋಪ ಕೇಳಿಬಂದಿದ್ದ ಎಐಸಿ ಅನುದಾನ ಬಿಡುಗಡೆ ಮತ್ತು ಕಾರ್ಯಪಾಲನೆಗೆ ಸಂಬಂಧಿಸಿದ ಲೆಕ್ಕಪರಿಶೋಧನೆಯ ಸಂಪೂರ್ಣ ಕಡತಗಳು ಬೆಂಕಿಗೆ ಆಹುತಿಯಾಗಿವೆ ಎಂದು ಇಲಾಖೆಯ ಅಧಿಕಾರಿಗಳೇ ಖಚಿತಪಡಿಸಿರುವುದಾಗಿ ‘ದಿ ವೈರ್’ ಜಾಲತಾಣ ವರದಿ ಮಾಡಿದೆ.
ದೇಶದ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ, ಮುಖ್ಯವಾಗಿ ಕೇಂದ್ರ ಸರ್ಕಾರದ ಕಟ್ಟಡಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ವಿಶೇಷ ಅನುಕೂಲಗಳನ್ನು ಕಲ್ಪಿಸುವ ಉದ್ದೇಶದಿಂದ ಭಾರೀ ಪ್ರಚಾರದೊಂದಿಗೆ 2015ರಲ್ಲಿ ‘ಅಕ್ಸೆಸ್ಸಿಬಲ್ ಇಂಡಿಯಾ ಕ್ಯಾಂಪೇನ್(ಎಐಸಿ)’ ಯೋಜನೆ ಆರಂಭವಾಗಿತ್ತು. ಸ್ವತಃ ಮೋದಿಯವರೇ ಅದನ್ನು ತಮ್ಮ ಹೆಗ್ಗಳಿಕೆಯ ಕಾರ್ಯಕ್ರಮ ಎಂದು ಬಿಂಬಿಸಿಕೊಂಡಿದ್ದರು. ಅದಕ್ಕಾಗಿ ಸುಮಾರು 300 ಕೋಟಿ ರೂ.ಗಳ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು.
ದರೆ, ಕಳೆದ ಮೂರು ವರ್ಷಗಳಲ್ಲಿ ಯೋಜನೆಯಡಿ ಒಂದೇ ಒಂದು ಕಟ್ಟಡದಲ್ಲಿಯೂ ವಿಶೇಷಚೇತನರಿಗಾಗಿನ ವಿಶೇಷ ಸೌಲಭ್ಯವನ್ನು ಈ ಯೋಜನೆಯಡಿ ನಿರ್ಮಿಸಿದ ಉದಾಹರಣೆಯೇ ಇಲ್ಲ. ಆದರೆ, ಒಂದೇ ವಿಳಾಸ, ಒಂದೇ ಉದ್ದೇಶ ನಮೂದಿಸಿ, ಬೇರೆ ಬೇರೆ ಹೆಸರುಗಳಲ್ಲಿ ಹಲವು ಸ್ವಯಂಸೇವಾ ಸಂಘಟನೆಗಳು ಈ ಯೋಜನೆಯಡಿ ನಾಲ್ಕಾರು ಬಾರಿ ಅನುದಾನ ಪಡೆದಿರುವ ಬಗ್ಗೆ ಲೆಕ್ಕಪರಿಶೋಧನೆಯಲ್ಲಿ ಆಕ್ಷೇಪವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಶಂಕೆ ಇತ್ತು. ಹಾಗಾಗಿ, ಒಂದು ಸುತ್ತಿನ ಲೆಕ್ಕಪರಿಶೋಧನೆ ನಡೆಸಿದ್ದ ಅಧಿಕಾರಿಗಳ ತಂಡ, ಮತ್ತೊಂದು ಸುತ್ತಿನ ಪರಿಶೀಲನೆಗೆ ಮುಂದಿನ ವಾರ ಬರುವುದರಲ್ಲಿತ್ತು. ಆದರೆ, ಅಷ್ಟರಲ್ಲಿ ನಿರ್ದಿಷ್ಟವಾಗಿ ಹಗರಣದ ಶಂಕೆ ಮೂಡಿದ್ದ ಎಐಸಿ ಯೋಜನೆಯ ಕಡತ ಹಾಗೂ ಅದಕ್ಕೆ ಸಂಬಂಧಿಸಿದ ಲೆಕ್ಕಪರಿಶೋಧನೆಯ ವರದಿಗಳನ್ನು ಒಳಗೊಂಡಿದ್ದ ಮಹಡಿಗೇ ಬೆಂಕಿ ಹೊತ್ತಿಕೊಂಡಿದೆ ಮತ್ತು ಆ ಯೋಜನೆಗೆ ಸಂಬಂಧಪಟ್ಟ ಹಣಕಾಸು ಅಂದಾಜು, ಅನುದಾನ ಬಿಡುಗಡೆ ಕುರಿತ ಬಹುತೇಕ ಕಡತಗಳು ಸುಟ್ಟು ಬೂದಿಯಾಗಿವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ‘ದಿ ವೈರ್’ ವರದಿ ಹೇಳಿದೆ.
ಕಳೆದ ಜನವರಿಯಲ್ಲಿ ಈ ಯೋಜನೆಯ ಲೋಪಗಳು ಮತ್ತು ವಿಳಂಬ ಧೋರಣೆಯ ಬಗ್ಗೆ ಸಂಪುಟ ಕಾರ್ಯದರ್ಶಿಯವರೇ ಒಂದು ಸಭೆ ಕರೆದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ವಿಳಂಬ ಮತ್ತು ಹಣಕಾಸು ದುರಪಯೋಗದ ಬಗ್ಗೆ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಇಲಾಖೆಯ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳು ತೀವ್ರ ಮುಜುಗರಕ್ಕೊಳಗಾಗಿದ್ದರು. ಈ ನಡುವೆ, ಕೇಂದ್ರ ಸರ್ಕಾರ ಕೂಡ ಈ ಯೋಜನೆಯ ವಿಷಯದಲ್ಲಿ ಸಾಕಷ್ಟು ಮುಜುಗರಕ್ಕೀಡಾಗಿತ್ತು. ಪ್ರಭಾವಿಗಳ ಆಣತಿಯಂತೆ ಅನುದಾನ ಬಿಡುಗಡೆ ಮಾಡಿದ್ದ ಅಧಿಕಾರಿಗಳು ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗದೆ ಕೈಚೆಲ್ಲಿದ್ದರು.
ಈ ನಡುವೆ, ಲೆಕ್ಕಪರಿಶೋಧನೆಯ ಆರಂಭಿಕ ಹಂತದಲ್ಲೇ ಇಡೀ ಯೋಜನೆಯ ಕಡತಗಳು ಬೆಂಕಿಗೆ ಆಹುತಿಯಾಗಿರುವುದು ಆಗಿರುವ ಬಹುಕೋಟಿ ಅವ್ಯವಹಾರವನ್ನು ಮುಚ್ಚಿಹಾಕುವ ಪ್ರಯತ್ನವೇ ಇರಬಹುದು ಎಂದು ಸ್ವತಃ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಟ್ಟಡಗಳ ಲಿಫ್ಟ್, ರೇಲಿಂಗ್ ಮುಂತಾದ ಸೌಲಭ್ಯ ಕಲ್ಪಿಸಲು ವಾಸ್ತವ ವೆಚ್ಚಕ್ಕಿಂತ ಮೂರ್ನಾಲ್ಕು ಪಟ್ಟು ಅಂದಾಜು ವೆಚ್ಚ ನಮೂದಿಸಿದ ಪ್ರಸ್ತಾವನೆಗಳನ್ನೂ ಸ್ವೀಕರಿಸಿ, ಬೇಕಾಬಿಟ್ಟಿ ಅನುದಾನ ಮಂಜೂರು ಮಾಡಲಾಗಿತ್ತು. ಬಹಳ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ನಾಯಕರ ಆಪ್ತರ ಎನ್ ಜಿಒಗಳು ಒಂದೇ ವಿಳಾಸ ನೀಡಿ, ಬೇರೆ ಬೇರೆ ಹೆಸರಿನಲ್ಲಿ ನಾಲ್ಕು ಐದು ಬಾರಿ ಅನುದಾನ ಪಡೆದಿದ್ದವು. ಆದರೆ, ಪ್ರಭಾವಿಗಳ ಮೂಲಕವೇ ಬರುತ್ತಿದ್ದ ಅನುದಾನ ಬೇಡಿಕೆ ಮತ್ತು ಕಾಮಗಾರಿ ಪ್ರಸ್ತಾವನೆಗಳನ್ನು ಅಧಿಕಾರಿಗಳು ತಳ್ಳು ಹಾಕುವಂತಿರಲಿಲ್ಲ. ಹಾಗಾಗಿ, ಇಡೀ ಯೋಜನೆ ಕೆಲವೇ ಮಂದಿಯ ಪಾಲಿನ ಲೂಟಿಯ ಖಜಾನೆಯಂತಾಗಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು(ಹೆಸರು ಉಲ್ಲೇಖಿಸಿಲ್ಲ) ಹೇಳಿರುವುದಾಗಿ ವರದಿ ಹೇಳಿದೆ.
ಲೆಕ್ಕಪರಿಶೋಧನೆಯ ವರದಿಗಳೂ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಕಡತಗಳು ಬೂದಿಯಾಗಿರುವುದರಿಂದ ಹಣಕಾಸು ಹಂಚಿಕೆ ಮತ್ತು ಯೋಜನೆಗಳ ಅಂದಾಜಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಲೆಕ್ಕಪರಿಶೋಧಕರು ಯಾವೆಲ್ಲಾ ಆಕ್ಷೇಪಗಳನ್ನು ಎತ್ತಿದ್ದರು ಎಂಬುದನ್ನು ಈಗ ಯಾರೂ ತಿಳಿಯಲಾಗದು. ಜೊತೆಗೆ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು 2017ರ ಜುಲೈ ಬಳಿಕ ಸ್ಕ್ಯಾನ್ ಮಾಡಿಲ್ಲ. ಆ ವರ್ಷದ ಜೂನ್- ಜುಲೈನಲ್ಲಿ ಕಡತಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್ ಕಾಪಿ ತಯಾರಿಸಲಾಗಿತ್ತು. ಹಾಗಾಗಿ ಆ ಬಳಿಕದ ಇಲಾಖೆಯ ಹಣಕಾಸು ಸೇರಿದಂತೆ ಇತರ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಕಡತಗಳ ಸಾಫ್ಟ್ ಕಾಪಿ ಕೂಡ ಈಗ ಲಭ್ಯವಿಲ್ಲ. ಹಾಗಾಗಿ, ಸುಮಾರು 300 ಕೋಟಿ ರೂ. ಮೊತ್ತದ ಭಾರೀ ಅವ್ಯಹವಾರಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು ಸಾಕ್ಷ್ಯವಿಲ್ಲದಂತೆ ನಾಶವಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ನಡೆದು ಎರಡು ದಿನಗಳು ಕಳೆದಿದ್ದರೂ, ಈವರೆಗೆ ಇಲಾಖೆಯ ಅಧಿಕಾರಿಗಳು ಅಧಿಕೃತವಾಗಿ ಬೆಂಕಿ ಅವಘಢದ ಬಗ್ಗೆಯಾಗಲೀ, ಸಿಐಸಿ ಯೋಜನೆಯ ಕಡತಗಳ ಬಗ್ಗೆಯಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಖ್ಯವಾಹಿನಿ ಮಾಧ್ಯಮ ಕೂಡ ಬಹುತೇಕ ರಾಫೇಲ್ ಪ್ರಕರಣದ ಕಡತಗಳ ಕಳವು ಕುರಿತ ವರದಿಗಳ ಭರದಲ್ಲಿ ಸಿಐಸಿ ಬಹುಕೋಟಿ ಹಗರಣದ ಕುರಿತ ಕಡತಗಳ ‘ಅಗ್ನಿಸಾಕ್ಷಿ’ ಪ್ರಕರಣವನ್ನು ಮರೆತೇಬಿಟ್ಟಿವೆ!