ಮುಕ್ತಿವಾಹಿನಿಯನ್ನು ಬೆಂಬಲಿಸಿದ ಭಾರತ…
ಭಾರತ-ಪಾಕಿಸ್ತಾನಗಳು ವಿಭಜನೆಯಾಗಿದ್ದೇ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಸಿಗಬೇಕೆಂಬ ಮಹಮದ್ ಅಲಿ ಜಿನ್ನಾ ಬೇಡಿಕೆಯ ಮೇರೆಗೆ. ಪಾಕಿಸ್ತಾನವೇನೋ ಮುಸ್ಲಿಂ ದೇಶವಾಯಿತು. ಆದರೆ ಧರ್ಮವೊಂದೇ ಜನರನ್ನು ಒಗ್ಗೂಡಿಸುತ್ತದೆ ಎಂಬ ಮಾತು ಹುಸಿಯಾಗಿಹೋಯಿತು. ಬಾಂಗ್ಲಾದೇಶಿ ಮುಸ್ಲಿಮರನ್ನು ಪಾಕಿಸ್ತಾನಿಗಳು ನಮ್ಮವರೆಂದು ಒಪ್ಪಲೇ ಇಲ್ಲ. ಪೂರ್ವ ಪಾಕಿಸ್ತಾನದಲ್ಲಿ ನಡೆದ ದಂಗೆಗಳು, ಸೈನಿಕ ಕಾರ್ಯಾಚರಣೆ ಜನಾಂಗೀಯ ದ್ವೇಷದ ಭಾವನೆಗಳನ್ನು ಬಡಿದೆಬ್ಬಿಸಿಬಿಟ್ಟಿತ್ತು. ಬಂಗಾಳಿಗಳ ವಿರುದ್ಧದ ಮಾರಣಹೋಮದ ನೇತೃತ್ವ ವಹಿಸಿದ್ದ ‘ಬಂಗಾಳಿಗಳ ಕೊಲೆಗಡುಕ’ ಟಿಕ್ಕಾ ಖಾನ್ ‘ನಾನು ಈ ಬಹುಸಂಖ್ಯಾತರನ್ನು (ಬಂಗಾಳಿ) ಅಲ್ಲಸಂಖ್ಯಾತರನ್ನಾಗಿ ಮಾಡುತ್ತೇನೆ’ ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿದ್ದ. ಪಾಕಿಸ್ತಾನಿ ಸೈನಿಕರು ಬಂಗಾಳಿ ಹೆಣ್ಣುಮಕ್ಕಳ ಮೇಲೆ ನಡೆಸಿದ ಸರಣಿ ಅತ್ಯಾಚಾರಗಳಿಗೆ ಒಂದು ಉದ್ದೇಶವೂ ಇತ್ತು. ಅದು ಪಾಕ್ ಸೈನ್ಯದ ಪ್ರಜ್ಞಾಪೂರ್ವಕ ದುಷ್ಕೃತ್ಯವಾಗಿತ್ತು. ಜೆಸ್ಸೂರ್ ನಲ್ಲಿ ಪತ್ರಕರ್ತರ ಜತೆ ಮಾತನಾಡುವ ಸಂದರ್ಭದಲ್ಲಿ ಟಿಕ್ಕಾ ಖಾನ್ ‘ಪೆಹಲೇ ಇನ್ಕೋ ಮುಸಲ್ಮಾನ್ ಕರೋ’ ಎಂದು ಉದ್ಘರಿಸಿದ್ದನಂತೆ. ಅದರ ಅರ್ಥ ಹಿಂದೂ ಆಗಲಿ, ಮುಸ್ಲಿಂ ಆಗಲೀ ಬಂಗಾಳಿಗಳನ್ನು ಪಶ್ಚಿಮ ಪಾಕಿಸ್ತಾನದವರು ‘ಮುಸ್ಲಿಂ’ ಎಂದು ಪರಿಗಣಿಸಿರಲಿಲ್ಲ ಮತ್ತು ಅತ್ಯಾಚಾರಗಳ ಮೂಲಕ ಅವರನ್ನು ಮುಸ್ಲಿಂರನ್ನಾಗಿ ಪರಿವರ್ತಿಸಲು ಅವರು ಬಯಸಿದ್ದರು! ಪಾಕಿಸ್ತಾನೀಯರ ಪಾಲಿಗೆ ಬಂಗಾಳಿಗಳು ಅವಿಧೇಯ ಮುಸ್ಲಿಮರು ಮತ್ತು ದೇಶಪ್ರೇಮಿಯಲ್ಲದ ಪಾಕಿಸ್ತಾನೀಯರಾಗಿದ್ದರು.
ಟಿಕ್ಕಾ ಖಾನ್ ಸೈನ್ಯ ಎಲ್ಲಿ ಬೇಕಾದರೂ ಹೊತ್ತು ಗೊತ್ತಿಲ್ಲದಂತೆ ನುಗ್ಗುತ್ತಿತ್ತು. ಹೆಣ್ಣುಮಕ್ಕಳು ಅವರ ವಿಶೇಷ ಗುರಿಯಾಗಿದ್ದರು. ಹಳ್ಳಿಗಳಿಗೆ ನುಗ್ಗಿದಾಗ ಕುಟುಂಬ ಸದಸ್ಯರ ಎದುರೇ ಹೆಣ್ಣುಮಕ್ಕಳನ್ನು ಸಾಯುವಂತೆ ಹೊಡೆಯಲಾಗುತ್ತಿತ್ತು. ಜನಸಮುದಾಯವನ್ನು ಭಯಭೀತಿಗೆ ಒಳಪಡಿಸಲು ಹೀಗೆ ಮಾಡಲಾಗುತ್ತಿತ್ತು. ಸಾಯದೇ ಉಳಿದ ೮ರಿಂದ ೭೫ ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಸೇನಾ ಕ್ಯಾಂಪ್ಗಳಿಗೆ ಸಾಗಿಸಲಾಗುತ್ತಿತ್ತು. ಎಲ್ಲರ ಮೇಲೆ ಮೇಲಿಂದ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಒಂದಷ್ಟು ಮಂದಿ ದೌರ್ಜನ್ಯಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಮತ್ತೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಕೆಲ ಮಹಿಳೆಯರು ತಮ್ಮ ಉದ್ದನೆಯ ಕೂದಲನ್ನೇ ನೇಣುಹಗ್ಗದಂತೆ ಬಳಸಿ ಸಾವಿಗೆ ಶರಣಾಗುತ್ತಿದ್ದರು. ಯುದ್ಧದ ತರುವಾಯ ಪಾಕಿಸ್ತಾನ ಸೈನ್ಯದ ತುಕಡಿಯೊಂದು ಬಿಡುಗಡೆ ಮಾಡಿದ 564 ಹೆಣ್ಣುಮಕ್ಕಳ ಪೈಕಿ ಬಹುತೇಕ ಎಲ್ಲರೂ ಎರಡರಿಂದ ಐದು ತಿಂಗಳ ಗರ್ಭಿಣಿಯರಾಗಿದ್ದರು ಎಂದು ‘ಟೈಮ್’ ಮ್ಯಾಗಜೀನ್ ವರದಿ ಮಾಡಿತ್ತು. ನೂರಾರು ಮಹಿಳೆಯರನ್ನು ವೇಶ್ಯಾವೃತ್ತಿಗೆ ಬಲವಂತವಾಗಿ ತಳ್ಳಲಾಗಿತ್ತು. ಈ ಭೀಕರ ಘಟನೆಗಳೆಲ್ಲವೂ ಹೊರಜಗತ್ತಿಗೆ ತಿಳಿಯದಂತೆ ಪಾಕಿಸ್ತಾನ ಸರ್ಕಾರ ಏನೆಲ್ಲ ಕಸರತ್ತು ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ವತಂತ್ರ ಮಾಧ್ಯಮಗಳು ಜೀವದ ಹಂಗು ತೊರೆದು ವರದಿ ಮಾಡುತ್ತಲೇ ಇದ್ದವು. ಹೀಗಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ನರಮೇಧಗಳು ಹೊರಜಗತ್ತಿನ ಗಮನಕ್ಕೆ ಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ.
ಆಡಂ ಜೋನ್ಸ್ ಎಂಬ ರಾಜಕೀಯ ತಜ್ಞ ಹೇಳುವ ಪ್ರಕಾರ ಸಾಮೂಹಿಕ ಅತ್ಯಾಚಾರಗಳನ್ನು ‘ಬಂಗಾಳಿ ಮಹಿಳೆಯರ’ ಗೌರವ ಕಳೆಯಲೆಂದೇ ಮಾಡಲಾಗುತ್ತಿತ್ತು. ಕೆಲವು ಮಹಿಳೆಯರನ್ನಂತೂ ಸಾಯುವವರೆಗೆ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತಿತ್ತು. ಇದೆಲ್ಲವೂ ಒಂದೆಡೆಯಾದರೆ ಪಾಕಿಸ್ತಾನ ಸೈನಿಕರ ಕಾಮತೃಷೆಗೆ ಬಂಗಾಳಿ ಗಂಡುಮಕ್ಕಳೂ ಕೂಡ ಬಲಿಯಾದರು. ಇದೆಲ್ಲವೂ ಸಹ ಪಾಕ್ ಸೈನ್ಯ ಸರ್ಕಾರದ ಒಪ್ಪಿಗೆಯ ಮೇರೆಗೇ ಪ್ರಜ್ಞಾಪೂರ್ವಕವಾಗಿಯೇ ನಡೆಸುತ್ತಿತ್ತು. ಲೇಖಕ ಮುಲ್ಕ್ ರಾಜ್ ಆನಂದ್ ‘ಅತ್ಯಾಚಾರಗಳನ್ನು ಪಾಕಿಸ್ತಾನ ಸೈನ್ಯದ ನೀತಿಯಂತೆಯೇ ನಡೆಸಲಾಗುತ್ತಿತ್ತು, ತನ್ಮೂಲಕ ಹೊಸ ಜನಾಂಗವೊಂದನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡಲಾಗಿತ್ತು ಅಥವಾ ಬಂಗಾಳಿ ರಾಷ್ಟ್ರೀಯತೆಯನ್ನು ದಮನ ಮಾಡುವುದು ಅವರ ಉದ್ದೇಶವಾಗಿತ್ತು’ ಎಂದು ಹೇಳುತ್ತಾರೆ. ಯುದ್ಧ ಮುಗಿದ ನಂತರ ಪಾಕಿಸ್ತಾನದ ಸೈನಿಕನೊಬ್ಬ ಪತ್ರಕರ್ತ ಅಮಿತ್ ಮಲಿಕ್ ಎಂಬುವವರಿಗೆ ‘ನಾವು ಈಗ ಹೋಗುತ್ತಿದ್ದೇವೆ. ಆದರೆ ನಮ್ಮ ಬೀಜಗಳನ್ನು ಇಲ್ಲಿ ಉಳಿಸಿದ್ದೇವೆ’ ಎಂದು ಹೇಳಿದ್ದನಂತೆ. ಬಂಗಾಳಿಗಳು ಎದುರಿಸಿದ ಕ್ರೌರ್ಯ ಎಂಥದ್ದು ಎಂಬುದನ್ನು, ಪಾಕಿಸ್ತಾನಿ ಸೈನ್ಯದ ಉದ್ದೇಶ ಏನಾಗಿತ್ತು ಎಂಬುದನ್ನು ಈ ಮಾತು ಬಿಂಬಿಸುತ್ತದೆ.
ಪಾಕಿಸ್ತಾನ ಬಂಗಾಳಿಗಳ ಮೇಲೆ ಸಾರಿದ್ದ ಸಮರದಲ್ಲಿ ತನ್ನ ಎಲ್ಲ ಹತಾರಗಳನ್ನೂ ಬಳಸಿಕೊಂಡಿತು. ಎಲ್ಲ ಬಗೆಯ ಕ್ರೌರ್ಯವನ್ನೂ ಪ್ರದರ್ಶಿಸಿತು. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಆ ಸಂದರ್ಭದಲ್ಲಿ ಬಾಂಗ್ಲಾದೇಶೀಯರನ್ನು ಬಗ್ಗು ಬಡಿಯಲೆಂದೇ ಉಗ್ರಗಾಮಿ ಸಂಘಟನೆಗಳನ್ನು ಆರಂಭಿಸಿತು. ತನ್ನದೇ ದೇಶದ ತನ್ನದೇ ಪ್ರಜೆಗಳ ವಿರುದ್ಧ ಭಯೋತ್ಪಾದಕರನ್ನು ಸೃಷ್ಟಿಸಿದ್ದು ಪಾಕಿಸ್ತಾನವೆಂಬ ದೇಶದ ಕ್ರೂರ ಇತಿಹಾಸಕ್ಕೆ ಸಾಕ್ಷಿ. ಐಎಸ್ಐ ಆಗಿನ ಜಮಾತ್-ಇ-ಇಸ್ಲಾಮಿ ರಾಜಕೀಯ ಪಕ್ಷದೊಂದಿಗೆ ಸೇರಿ ‘ಅಲ್-ಬದ್ರ್’ (ಚಂದಿರ), ಅಲ್-ಶಾಮ್ಸ್ (ಸೂರ್ಯ) ಎಂಬ ಸಂಘಟನೆಗಳನ್ನು ಆರಂಭಿಸಿತು. ಎರಡೂ ಸಂಘಟನೆಗಳು ರಾಷ್ಟ್ರೀಯವಾದಿ ಬಂಗಾಳಿಗಳ ಜತೆ ಸಂಘರ್ಷಕ್ಕೆ ಇಳಿದವು. ಈ ಸಂಘಟನೆಗಳೂ ಸಹ ಕೊಲೆ, ಸುಲಿಗೆ, ಅತ್ಯಾಚಾರಗಳನ್ನು ಅವ್ಯಾಹತವಾಗಿ ನಡೆಸಿದವು. ಪಾಕಿಸ್ತಾನ ಸೈನ್ಯದ ಜತೆಜತೆಗೆ ರಜಾಕರ್ಗಳು ಕೆಲಸ ಮಾಡಿದರು. ಸುಮಾರು ನಲವತ್ತು ಸಾವಿರದಷ್ಟು ಇದ್ದ ರಜಾಕರ್ಗಳಿಗೆ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಸೈನ್ಯವೇ ಒದಗಿಸಿತ್ತು. ರಜಾಕರ್ಗಳ ಪ್ರತ್ಯೇಕ ಪಡೆಗೆ ದೊಡ್ಡ ಸಂಖ್ಯೆಯಲ್ಲಿ ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಚುನಾವಣೆಗಳಲ್ಲಿ ಸೋತಿದ್ದ ಮುಸ್ಲಿಂ ಲೀಗ್ನ ಹಲವು ಬಣಗಳು ಪಾಕಿಸ್ತಾನದ ಸೈನ್ಯದೊಂದಿಗೆ ಸೇರಿ ಬಂಗಾಳಿ ರಾಷ್ಟ್ರೀಯವಾದಿಗಳ ದಮನಕ್ಕೆ ಎಲ್ಲ ರೀತಿಯ ಗುಪ್ತ ಮಾಹಿತಿಗಳನ್ನು ಒದಗಿಸಿತು. ಇದಲ್ಲದೆ ಪಶ್ಚಿಮ ಪಾಕಿಸ್ತಾನದ ನೂರಾರು ನಾಗರಿಕರು ಮತ್ತು ಐದುಸಾವಿರಕ್ಕೂ ಹೆಚ್ಚು ಪೊಲೀಸರನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಪಶ್ಚಿಮ ಪಾಕಿಸ್ತಾನ ಏನೇ ತಂತ್ರ, ವ್ಯೂಹಗಳನ್ನು ಬಳಸಿದರೂ ಅದು ಬಂಗಾಳಿ ಪ್ರತಿರೋಧವನ್ನು ಬುಡಮೇಲು ಮಾಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಅಡ್ಮಿರಲ್ ಮಹಮದ್ ಶರೀಫ್, ತನ್ನ ಆತ್ಮಕಥೆಯಲ್ಲಿ ಬರೆಯುತ್ತ ‘ಮೊದಲ ಹಂತದ ಮಿಲಿಟರಿ ಕಾರ್ಯಾಚರಣೆಯ ಯಶಸ್ಸನ್ನು ಆಪರೇಷನ್ ಸರ್ಚ್ಲೈಟ್ ಸಂಪೂರ್ಣ ಯಶಸ್ವಿಯಾಯಿತು ಎಂಬ ಭ್ರಮೆಯನ್ನು ಮೂಡಿಸಿತು. ಆದರೆ ನಂತರದ ದಿನಗಳಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತು. ಅದರಲ್ಲೂ ಸೆಪ್ಟೆಂಬರ್ ತಿಂಗಳ ನಂತರ ಇಡೀ ಬಂಗಾಳಿ ಜನತೆ ಸರ್ಕಾರ ಮತ್ತು ಸೈನ್ಯದ ವಿರುದ್ಧ ತಿರುಗಿ ನಿಂತಿತು.’ ಎಂದು ಹೇಳುತ್ತಾರೆ.
ಬಂಗಾಳಿ ರಾಷ್ಟ್ರೀಯತೆಯ ಹೋರಾಟಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧ. ಭಾರತ ಅನಿವಾರ್ಯವಾಗಿ ಪರೋಕ್ಷವಾಗಿ ಮತ್ತು ನಂತರ ಪ್ರತ್ಯಕ್ಷವಾಗಿ ಈ ಹೋರಾಟವನ್ನು ಬೆಂಬಲಿಸುವ ಅನಿವಾರ್ಯತೆಗೆ ಸಿಲುಕಿತು. ಪೂರ್ವ ಪಾಕಿಸ್ತಾನದ ಸೈನ್ಯದಲ್ಲಿದ್ದ ಬಂಗಾಳಿಗಳು ಬಂಡಾಯ ಸಾರಿ ಮುಕ್ತಿವಾಹಿನಿಯನ್ನು ರಚಿಸಿಕೊಂಡಿದ್ದರು. ಮಾರ್ಚ್ 26ರಂದು ಎಂ.ಎ.ಜಿ.ಒಸ್ಮಾನಿಯವರನ್ನು ಬಂಗಾಳಿ ಸಶಸ್ತ್ರ ಪಡೆಗಳ ಮುಖ್ಯಸ್ಥರನ್ನಾಗಿ ಘೋಷಿಸುವುದರೊಂದಿಗೆ ಮುಕ್ತಿ ವಾಹಿನಿ ಅಸ್ತಿತ್ವಕ್ಕೆ ಬಂದಿತ್ತು. ಏಪ್ರಿಲ್ 17ರಂದು ಕುಶ್ತಿಯಾದ ಮೆಹರ್ಪುರದಲ್ಲಿ ಅವಾಮಿ ಲೀಗ್ ಮುಖಂಡರು ತಮ್ಮದೇ ಆದ ಸರ್ಕಾರವನ್ನು ರಚಿಸಿದ್ದರು. ಅವಾಮಿ ಲೀಗ್, ಮುಕ್ತಿವಾಹಿನಿ ಸಹಜವಾಗಿಯೇ ಭಾರತದ ಬೆಂಬಲವನ್ನು ಕೋರಿದವು. ಆದರೆ ಇಂದಿರಾಗಾಂಧಿ ಸರ್ಕಾರ ದುಡುಕು ನಿರ್ಧಾರ ತೆಗೆದುಕೊಳ್ಳಲಿಲ್ಲ. ಹಾಗೆ ಆತುರದ ನಿರ್ಧಾರ ಕೈಗೊಂಡಿದ್ದರೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಉತ್ತರ ನೀಡುವುದು ಕಷ್ಟವಾಗುತ್ತಿತ್ತು. ಅದಕ್ಕೆ ಕಾದು ನೋಡುವ ತಂತ್ರವನ್ನು ಭಾರತ ಅನುಸರಿಸುತ್ತಿತ್ತು.
ಆದರೆ ಭಾರತ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗತೊಡಗಿತು. ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಭೀಕರ ಅಂತರ್ಯುದ್ಧದಲ್ಲಿ ನರಳುತ್ತಿದ್ದ ಬಾಂಗ್ಲಾದೇಶದಿಂದ ಸಾವಿರಾರು ಮಂದಿ ನಿರಾಶ್ರಿತರು ಪ್ರಾಣ ಉಳಿಸಿಕೊಳ್ಳಲು ಭಾರತ ಗಡಿಯನ್ನು ಪ್ರವೇಶಿಸಲಾರಂಭಿಸಿದರು. ಮಾನವೀಯತೆಯ ದೃಷ್ಟಿಯಿಂದ ಭಾರತ ತನ್ನ ಗಡಿಗಳನ್ನು ನಿರಾಶ್ರಿತರಿಗಾಗಿ ತೆರೆಯಲೇಬೇಕಾಗಿತ್ತು. ಆದರೆ ಆ ನಂತರ ನಿರಾಶ್ರಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು. ನಿರಾಶ್ರಿತರು ಭಾರತದ ಪೂರ್ವ ಗಡಿಯ, ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂ ಮತ್ತು ಬಿಹಾರಗಳಲ್ಲಿ ಬಂದು ನೆರೆಯಲಾರಂಭಿಸಿದರು. ಕೊನೆಕೊನೆಗೆ ಈ ಸಂಖ್ಯೆ ಎಷ್ಟು ಹೆಚ್ಚುತ್ತ ಬಂದಿತೆಂದರೆ ಪಶ್ಚಿಮದ ರಾಜ್ಯಗಳು ನಿರಾಶ್ರಿತರ ಭಾರವನ್ನು ತಡೆದುಕೊಳ್ಳಲು ಆಗದಷ್ಟು ಹೈರಾಣಾಗಿ ಹೋದವು. ಬಾಂಗ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ವಲಸೆ ಬಂದ ನಿರಾಶ್ರಿತರ ಸಂಖ್ಯೆ ಅಂದಾಜು ಒಂದು ಕೋಟಿ! ಈ ಪೈಕಿ ಸುಮಾರು 62 ಲಕ್ಷ ಜನರನ್ನು 827 ನಿರಾಶ್ರಿತರ ಕೇಂದ್ರಗಳಲ್ಲಿ ಇಡಲಾಗಿತ್ತು. ಸುಮಾರು 73 ಲಕ್ಷ ಮಂದಿ ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದುಕೊಂಡರೆ, 15 ಲಕ್ಷ ಮಂದಿ ತ್ರಿಪುರದಲ್ಲಿ ಆಶ್ರಯ ಪಡೆದರು. ಮಿಕ್ಕ ನಿರಾಶ್ರಿತರು ಅಸ್ಸಾಂ ಮತ್ತು ಬಿಹಾರ್ ರಾಜ್ಯಗಳಲ್ಲಿ ಇದ್ದರು.
ಒಂದು ಕೋಟಿ ನಿರಾಶ್ರಿತರು ಏಕಾಏಕಿ ಬಂದು ಕುಳಿತರೆ ಯಾವುದೇ ಸರ್ಕಾರ ಹೇಗೆ ಅವರಿಗೆ ನೆರವು ನೀಡಲು ಸಾಧ್ಯ? ಅಷ್ಟೂ ಜನರ ವಸತಿ, ಆರೋಗ್ಯ ಮತ್ತು ಊಟದ ವ್ಯವಸ್ಥೆ ಮಾಡುವುದು ಭಾರತ ಸರ್ಕಾರದ ಪಾಲಿಗೆ ದುಸ್ಸಾಧ್ಯವಾಗತೊಡಗಿತು. ಇದಲ್ಲದೆ ನಿರಾಶ್ರಿತರು ಮತ್ತು ಸ್ಥಳೀಯರ ನಡುವಿನ ಸಂಘರ್ಷವೂ ಕೂಡ ಹಲವಾರು ರೀತಿಯ ಸಮಸ್ಯೆಗಳಿಗೆ ಕಾರಣವಾಗತೊಡಗಿತು. ಮಿಜೋ ಮತ್ತು ನಾಗಾ ಬಂಡುಕೋರರ ಕೈಗೆ ಶಸ್ತ್ರಾಸ್ತ್ರಗಳು ಲಭಿಸುವಂತಾಗಿದ್ದು ಸಹ ಭಾರತದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು.
ಭಾರತ ಮತ್ತೊಂದು ಯುದ್ಧಕ್ಕೆ ಸಿದ್ಧವಿಲ್ಲದೇ ಇದ್ದ ಕಾರಣದಿಂದ ಮತ್ತು ಒಂದು ವೇಳೆ ತನ್ನ ಮಿಲಿಟರಿಯನ್ನು ನುಗ್ಗಿಸಿದರೆ ಜಾಗತಿಕ ಮಟ್ಟದಲ್ಲಿ ಉದ್ಭವವಾಗುವ ಪ್ರತಿಕ್ರಿಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಬಂಗಾಳಿ ರಾಷ್ಟ್ರೀಯವಾದಿಗಳಿಗೆ ತತ್ ಕ್ಷಣದ ಪರೋಕ್ಷ ಬೆಂಬಲ ನೀಡುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಭಾರತದ ಸೈನ್ಯ ಮುಕ್ತಿವಾಹಿನಿಗೆ ಎಲ್ಲ ರೀತಿಯ ಸಹಕಾರ (ನೇಮಕಾತಿ, ತರಬೇತಿ, ಶಸ್ತ್ರಾಸ್ತ್ರ, ಸಲಹೆ ಇತ್ಯಾದಿ) ನೀಡುವುದನ್ನು ಆರಂಭಿಸಿತು. ಭಾರತಕ್ಕೆ ಬಂದ ನಿರಾಶ್ರಿತರಲ್ಲಿ ಸದೃಢ ಯುವಕರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿ ಮುಕ್ತಿವಾಹಿನಿಗೆ ಸೇರಿಸುವ ಕೆಲಸವೂ ನಡೆಯಿತು. ಮುಕ್ತಿವಾಹಿನಿ ಬಲಗೊಳ್ಳುತ್ತ ಹೋಗುತ್ತಿದ್ದಂತೆ ಪಶ್ಚಿಮ ಪಾಕಿಸ್ತಾನದ ಪಡೆಗಳು ಹಿನ್ನಡೆಯನ್ನು ಅನುಭವಿಸುತ್ತ ಹೋದವು.
(ಮುಂದುವರೆಯುತ್ತದೆ)
ದಿನೇಶ್ ಕುಮಾರ್ ದಿನೂ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 5 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 4 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 3 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 2 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ–ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 1 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia
ಸರ್ ಈ ಸ್ಟೋರಿ ನ ತಿಳಿಸುವುದಕ್ಕೆ ನಿಮ್ಮಗೆ ಧನ್ಯವಾದಗಳು ಇನ್ನು ಇದೆ ತರ ನಿಜ ಚರಿತ್ರೆಯನ್ನ ನಾವು ನಿಮಿಂದ ನಿರೀಕ್ಷಿಸುತ್ತೆವೆ