ಬಹುಕೋಟಿ ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದೆ. ದೇಶದ ರಕ್ಷಣಾ ಖರೀದಿಯ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ ಇದು. ಈ ಭ್ರಷ್ಟಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆ, ಬುಧವಾರ ರಾಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆ ಕಳವಾಗಿವೆ ಎಂದಿದ್ದ ಕೇಂದ್ರ ಸರ್ಕಾರ, ಇದೀಗ ಎರಡೇ ದಿನದಲ್ಲಿ ಉಲ್ಟಾ ಹೊಡೆದಿದ್ದು, ದಾಖಲೆ ಕಳವಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ!
ರಾಫೇಲ್ ಯುದ್ಧ ವಿಮಾಣ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅತಿ ಸೂಕ್ಷ್ಮ ದಾಖಲೆಗಳು ರಕ್ಷಣಾ ಇಲಾಖೆಯ ಸುಪರ್ದಿಯಿಂದಲೇ ಕಳವಾಗಿವೆ ಎಂಬ ಸಂಗತಿಯನ್ನು ಸರ್ಕಾರದ ಪರವಾಗಿ ಅಟಾರ್ನಿ ಜನರಲ್(ಎಜಿ) ಕೆ ಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟಿನ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ಹೇಳುತ್ತಲೇ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವೂ ಹಾಗೂ ಒಪ್ಪಂದದಲ್ಲಿ ಭಾರೀ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ಮತ್ತು ಬಿಜೆಪಿ ಸರ್ಕಾರದ ಭವಿಷ್ಯದ ದೃಷ್ಟಿಯಲ್ಲಿ ಮಹತ್ವದ ಈ ‘ದಾಖಲೆಗಳು ಇದ್ದಕ್ಕಿದ್ದಂತೆ ಕಳವಾಗುವುದು ಹೇಗೆ?’ ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿಗಳೂ ಕೇಳಿದ್ದರು ಮತ್ತು ಅದೇ ಪ್ರಶ್ನೆ ಪ್ರತಿಪಕ್ಷಗಳು ಹಾಗೂ ಪ್ರಕರಣದ ಅರ್ಜಿದಾರರು, ಸಾರ್ವಜನಿಕರು ಸೇರಿದಂತೆ ಇಡೀ ದೇಶದಾದ್ಯಂತ ಪ್ರತಿಧ್ವನಿಸಿತ್ತು. ಎರಡು ದಿನಗಳ ಕಾಲ ಆ ವಿಷಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿಡಂಬನೆ, ವ್ಯಂಗ್ಯ ಮತ್ತು ರಕ್ಷಣಾ ಸಚಿವರು ಮತ್ತು ಸರ್ಕಾರದ ವಿರುದ್ಧ ಆಕ್ರೋಶಕ್ಕೂ ಆ ಹೇಳಿಕೆ ಕಾರಣವಾಗಿತ್ತು.
ದೇಶದ ಭದ್ರತೆಗೆ ಸಂಬಂಧಿಸಿದ ತನ್ನದೇ ಇಲಾಖೆಯ ಸೂಕ್ಷ್ಮ ದಾಖಲೆಗಳನ್ನು ರಕ್ಷಿಸಲಾಗದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶವನ್ನು ಕಾಯಬಲ್ಲರೇ? ಎಂಬ ಪ್ರಶ್ನೆಯೊಂದಿಗೆ, ಅವರ ರಾಜೀನಾಮೆಗೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನವೇ ಆರಂಭವಾಗಿತ್ತು. ಅಲ್ಲದೆ, ದಾಖಲೆ ಕಳವಿನಂತಹ ಗಂಭೀರ ವಿಷಯದ ಬಗ್ಗೆ ಅಟಾರ್ನಿ ಜನರಲ್ ಹೇಳಿಕೆಯ 48 ತಾಸುಗಳ ಬಳಿಕವೂ ರಕ್ಷಣಾ ಸಚಿವೆಯಾಗಲೀ, ಸ್ವತಃ ಪ್ರಧಾನಿಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸರ್ಕಾರದ ಈ ಮೌನ ರಾಫೇಲ್ ಡೀಲ್ ಕುರಿತ ಸಾರ್ವಜನಿಕ ಅನುಮಾನಗಳನ್ನು ಖಾತ್ರಿಪಡಿಸತೊಡಗಿದ್ದವು.
ಅಲ್ಲದೆ, ಎಜಿ ಅವರು ನ್ಯಾಯಾಲಯದಲ್ಲಿ, ದಿ ಹಿಂದೂ ಮತ್ತು ಅರ್ಜಿದಾರ ಪ್ರಶಾಂತ್ ಭೂಷಣ್ ಅವರು ಬಹಿರಂಗಗೊಳಿಸಿರುವ ದಾಖಲೆಗಳು ಕಳವಾದ ದಾಖಲೆಗಳು. ಆ ಕುರಿತು ಈಗಾಗಲೇ ತನಿಖೆ ಆರಂಭವಾಗಿದೆ. ರಾಜ ರಹಸ್ಯ ಕಾನೂನಿನಡಿ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಅಲ್ಲದೆ ನ್ಯಾಯಾಲಯಕ್ಕೆ ಕದ್ದ ದಾಖಲೆ ಸಲ್ಲಿಸುವುದು ಕೂಡ ನ್ಯಾಯಾಂಗ ನಿಂದನೆ ಎಂದೂ ವಾದಿಸಿದ್ದರು. ಜೊತೆಗೆ ದಾಖಲೆ ಕಳವು ಹೇಗಾಯಿತು ಮತ್ತು ಯಾವಾಗ ಆಯಿತು ಎಂಬುದನ್ನು ನ್ಯಾಯಾಲಯ ಕೇಳಬಾರದು. ಏಕೆಂದರೆ, ಆ ವಿಷಯ ಬಹಿರಂಗವಾದರೆ, ಸರ್ಕಾರದ ಸುರಕ್ಷತೆಗೆ ಧಕ್ಕೆ ತರುತ್ತದೆ ಎಂದೂ ತೆರೆದ ನ್ಯಾಯಾಲಯ ಕಲಾಪದಲ್ಲಿಯೇ ವಾದಿಸಿದ್ದರು ಮತ್ತು ಅದನ್ನು ದೇಶದ ಎಲ್ಲಾ ಮಾಧ್ಯಮಗಳೂ ವರದಿ ಮಾಡಿದ್ದವು.
ಆದರೆ, ಇದೀಗ ಅಟಾರ್ನಿ ಜನರಲ್ ಅವರು ಶುಕ್ರವಾರ ದೆಹಲಿಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ, “ರಾಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮತ್ತು ಅರ್ಜಿದಾರರು ಬಹಿರಂಗಪಡಿಸಿರುವ ದಾಖಲೆಗಳು ಕಳವು ಮಾಡಿರುವುದು ಎಂದು ನಾನು ಹೇಳಿಲ್ಲ. ಹಾಗೆ ವರದಿಯಾಗಿರುವುದು ತಪ್ಪು. ಅವರು ಬಹಿರಂಗಪಡಿಸಿರುವುದು ಮೂಲ ದಾಖಲೆಗಳ ನಕಲು ಪ್ರತಿಗಳು” ಎಂದು ಯೂ ಟರ್ನ್ ತೆಗೆದುಕೊಂಡಿದ್ದಾರೆ.
ರಾಫೇಲ್ ದಾಖಲೆಗಳು ಕಳವಾಗಿವೆ ಎಂಬ ತಮ್ಮ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ಬಹುತೇಕ ಪ್ರತಿಪಕ್ಷಗಳ ಮುಖಂಡರು, ರಾಫೇಲ್ ಒಪ್ಪಂದದ ವಿಷಯದಲ್ಲಿ ಪತ್ರಿಕಾ ವರದಿಗಳನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕಂಡಂತಾಗಿದೆ. ಆ ಹಿನ್ನೆಲೆಯಲ್ಲಿ ಮೋದಿ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ನ್ಯಾಯಾಲಯ ಕೂಡ ಭ್ರಷ್ಟಾಚಾರವನ್ನು ದೇಶದ ಹೆಸರಲ್ಲಿ ಬಚ್ಚಿಡಲು ಸಾಧ್ಯವೇ ಎಂದು ಕಟುವಾಗಿ ಪ್ರಶ್ನಿಸಿತ್ತು. ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಪಾಲಿಗೆ ಇದು ನುಂಗಲಾರದ ತುತ್ತಾಗಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಮುಜುಗರವನ್ನು ತಪ್ಪಿಸಲು ಎಜಿ ಅವರು ಇದೀಗ ತಮ್ಮ ಹೇಳಿಕೆಯನ್ನು ತಿರುವುಮುರುವು ಮಾಡಿದ್ದಾರೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಒಂದು ವೇಳೆ ಬಹಿರಂಗಗೊಂಡಿರುವುದು ದಾಖಲೆಗಳ ನಕಲು ಪ್ರತಿಗಳು ಎಂಬುದು ತಮ್ಮ ಹೇಳಿಕೆಯ ಅರ್ಥವಾಗಿದ್ದರೆ, ನ್ಯಾಯಾಲಯದಲ್ಲಿ ಅವರು ದಿ ಹಿಂದೂ ಮತ್ತು ಅರ್ಜಿದಾರರ ವಿರುದ್ಧ ತನಿಖೆ ನಡೆಸುವ, ರಾಜ ರಹಸ್ಯ ಕಾನೂನು ಪ್ರಯೋಗಿಸುವ, ನ್ಯಾಯಾಂಗ ನಿಂದನೆ ಪ್ರಕರಣ ಹೂಡುವ ಮಾತುಗಳನ್ನು ಏಕೆ ಆಡಿದರು? ನ್ಯಾಯಾಲಯ ಕೂಡ ಯಾಕೆ ದಾಖಲೆ ಕಳವಾದವು ಮತ್ತು ಹೇಗೆ ಕಳವಾಯಿತು ಎಂಬುದನ್ನು ಕೇಳಬಾರದು ಎಂದು ಏಕೆ ಹೇಳಿದರು? ಒಂದು ವೇಳೆ ಹಾಗೂ ತಮ್ಮ ಹೇಳಿಕೆ ತಪ್ಪಾಗಿ ವರದಿಯಾಗಿದ್ದರೆ, ಅದಕ್ಕೆ ಕೂಡಲೇ ಯಾಕೆ ಸ್ಪಷ್ಟನೆ ನೀಡಲಿಲ್ಲ. ದಾಖಲು ಕಳವು ಎಂಬ ಹೇಳಿಕೆ ಇಡೀ ದೇಶದಾದ್ಯಂತ ಆಘಾತಕಾರಿ ಸಂಗತಿಯಾಗಿ ಮಾಧ್ಯಮಗಳ ಮುಖಪುಟದ ದೊಡ್ಡ ಸುದ್ದಿಯಾದರೂ ಎರಡು ದಿನಗಳವರೆಗೆ ಅವರಿಗೆ ಅರಿವಿಗೆ ಬರಲಿಲಿಲ್ಲವೇ?
ಇಂತಹ ಹಲವು ಪ್ರಶ್ನೆಗಳು ಇದೀಗ, ರಾಫೇಲ್ ಒಪ್ಪಂದದ ವಿಷಯದಲ್ಲಿ ಸರ್ಕಾರ ಏನನ್ನೋ ಮುಚ್ಚಿಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ. ಮತ್ತೆ ಮತ್ತೆ ನ್ಯಾಯಾಲಯಕ್ಕೇ ತಪ್ಪುಮಾಹಿತಿ ನೀಡಿ ದಿಕ್ಕುತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ದೇಶದ ಜನತೆಯನ್ನೂ ಯಾವ ಲಜ್ಜೆ ಇಲ್ಲದೆ ಯಾಮಾರಿಸಲಾಗುತ್ತಿದೆ ಎಂಬುದನ್ನು ಹೇಳುತ್ತಿವೆ.
ಹಾಗೆ ನೋಡಿದರೆ, ರಾಫೇಲ್ ವಿಷಯದಲ್ಲಿ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು, ಕಳೆದ ವರ್ಷದ ಡಿಸೆಂಬರಿನಲ್ಲಿ ರಾಫೇಲ್ ಒಪ್ಪಂದದ ಕುರಿತು ಸುಪ್ರೀಂಕೋರ್ಟ್ ಮಧ್ಯಸ್ಥಿಕೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿದ್ದ ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿಯೂ ಸುಪ್ರಿಂಕೋರ್ಟಿಗೆ ಸರ್ಕಾರ ತಪ್ಪು ಮಾಹಿತಿ ನೀಡಿತ್ತು ಮತ್ತು ಆ ತಪ್ಪು ಮಾಹಿತಿಯ ಆಧಾರದ ಮೇಲೆ ತೀರ್ಪು ಕೂಡ ಹೊರಬಿದ್ದಿತ್ತು.
ರಾಫೇಲ್ ಯುದ್ಧ ವಿಮಾನ ಖರೀದಿ ಮೊತ್ತದ ಬಗ್ಗೆ ಸಿಎಜಿ ಮತ್ತು ಪಿಎಸಿ(ಸಾರ್ವಜನಿಕ ಲೆಕ್ಕಪತ್ರ ಸಮಿತಿ) ವರದಿ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಆಗ ವಿಚಾರಣಾ ಪೀಠಕ್ಕೆ ಮಾಹಿತಿ ನೀಡಿತ್ತು. ಆ ಮಾಹಿತಿ ಆಧಾರದ ಮೇಲೆ ರೂ.59 ಸಾವಿರ ಕೋಟಿ ಮೊತ್ತದ ರಾಫೇಲ್ ಒಪ್ಪಂದದ ವಿಷಯದಲ್ಲಿ ಈಗಾಗಲೇ ಸಿಎಜಿ ಮತ್ತು ಪಿಎಸಿ ಅಭಿಪ್ರಾಯ ಪಡೆದಿರುವುದರಿಂದ ಆ ಬಗ್ಗೆ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂಬ ಅಭಿಪ್ರಾಯದೊಂದಿಗೆ ಎಲ್ಲಾ ಮೇಲ್ಮನವಿ ಅರ್ಜಿಗಳನ್ನೂ ತಳ್ಳಿಹಾಕಿತ್ತು. ಆದರೆ, ಆ ಬಳಿಕ ಪ್ರತಿಪಕ್ಷ ಮತ್ತು ಮಾಧ್ಯಮಗಳು ಸಿಎಜಿ ಮತ್ತು ಪಿಎಸಿ ಮುಂದೆ ಒಪ್ಪಂದದ ಯಾವುದೇ ವಿವರ ಬಂದೇ ಇಲ್ಲ ಎಂಬ ಸಂಗತಿಯನ್ನು ಬಯಲುಮಾಡಿದ್ದವು. ಆ ಬಳಿಕ ಕೇಂದ್ರ ಸರ್ಕಾರ ಯೂ ಟರ್ನ್ ಹೊಡೆದು, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮಾಹಿತಿಯಲ್ಲಿ ‘ಆ ವಿವರ ತಪ್ಪಾಗಿ ನುಸುಳಿದೆ’, ಅದು ಸಿಎಜಿ ಮತ್ತು ಪಿಎಸಿ ಮುಂದೆ ವರದಿ ‘ಸಲ್ಲಿಸಲಾಗುವುದು’ ಎನ್ನುವ ಬದಲು ‘ಸಲ್ಲಿಸಲಾಗಿದೆ’ ಎಂದು ತಪ್ಪಾಗಿದೆ ಎಂದು ತಪ್ಪೊಪ್ಪಿಗೆ ಸಲ್ಲಿಸಿತ್ತು.
ಆಗಲೂ ಕೂಡ ಸರ್ಕಾರದ ಆ ನಡೆ ಸಾಕಷ್ಟು ವ್ಯಂಗ್ಯ ಮತ್ತು ವಿಡಂಬನೆಗೆ ಒಳಗಾಗಿತ್ತು ಮತ್ತು ವಾಟ್ಸಪ್, ಟ್ವಿಟರ್ ಮಾಹಿತಿಯನ್ನು ಆಧರಿಸಿ ಸರ್ಕಾರ ನ್ಯಾಯಾಲಯದ ದಾರಿತಪ್ಪಿಸಿದೆ ಎಂಬ ಮಾತು ಕೇಳಿಬಂದಿತ್ತು. ಅಲ್ಲದೆ, ಹಿಂದಿನ ಒಪ್ಪಂದಕ್ಕಿಂತ ಸುಮಾರು ರೂ. 36 ಸಾವಿರ ಕೋಟಿ ಅಧಿಕ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮೋದಿ ಅವರು ತಮ್ಮ ಆಪ್ತ ಅಂಬಾನಿಗೆ ಅನುಕೂಲಮಾಡಿಕೊಟ್ಟಿದ್ದಾರೆ. ಆ ಮೂಲಕ ದೇಶದ ರಕ್ಷಣಾ ಖರೀದಿ ಇತಿಹಾಸದಲ್ಲೇ ರಾಫೇಲ್ ಅತಿದೊಡ್ಡ ಹಗರಣ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸರ್ಕಾರದ ಯೂಟರ್ನ್ ನಡೆ ಪುಷ್ಟಿನೀಡಿತ್ತು.
ಇದೀಗ ಮತ್ತೊಮ್ಮೆ ಸರ್ಕಾರ ಅದೇ ರಾಫೇಲ್ ವಿಷಯದಲ್ಲಿ ಸುಪ್ರೀಂಕೋರ್ಟಿನ ಮುಂದೆ ಒಂದು ಹೇಳಿಕೆ, ನ್ಯಾಯಾಲಯದ ಹೊರಗೆ ಮತ್ತೊಂದು ಹೇಳಿಕೆ ನೀಡಿದೆ. ಆ ಮೂಲಕ ಒಪ್ಪಂದದ ವಿಷಯದಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇಡೀ ಸರ್ಕಾರ, ಮಹತ್ವದ ಸತ್ಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ಇನ್ನಷ್ಟು ಗಟ್ಟಿಯಾಗುತ್ತಿದೆ. ಒಟ್ಟಾರೆ, ಚುನಾವಣಾ ಕಣದಲ್ಲಿ ಇದೀಗ ಇಡೀ ಹಗರಣ ಸ್ವತಃ ಭ್ರಷ್ಟಾಚಾರ ರಹಿತ ಸರ್ಕಾರ ಎಂದು ತಮ್ಮಬೆನ್ನು ತಾವೇ ತಟ್ಟಿಕೊಳ್ಳುತ್ತಿರುವ ಮೋದಿಯವರಿಗೆ ಇದು ನುಂಗಲಾರದ ತುತ್ತಾಗಿದೆ.