ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು (National Pharmaceutical Pricing Authority (NPPA) ದರ ನಿಯಂತ್ರಣ ವ್ಯಾಪ್ತಿಯಲ್ಲಿ ಇಲ್ಲದ (ನಾನ್ ಸೆಡ್ಯೂಲ್ಡ್) 390 ಕ್ಯಾನ್ಸರ್ ಔಷಧಗಳ ದರವನ್ನು ಶೇ.87ರವರೆಗೆ ತಗ್ಗಿಸಿದೆ ಎಂದು ಕೇಂದ್ರ ರಸಾಯನಿಕ ಮತ್ತು ಔಷಧ ಸಚಿವಾಲಯದ ತಿಳಿಸಿದೆ. ಸಚಿವಾಲಯದ ಪ್ರಕಟಣೆ ಪ್ರಕಾರ, ದರ ಕಡಿತ ದಿಂದ ದೇಶದಲ್ಲಿರುವ 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ. ದರ ಕಡಿತದಿಂದಾಗಿ ರೋಗಿಗಳಿಗೆ ಉಳಿಯಾತವಾಗಲಿರುವ ಮೊತ್ತ 800 ಕೋಟಿ ರುಪಾಯಿಗಳಂತೆ! ಪರಿಷ್ಕೃತ ದರವು ಮಾರ್ಚ್ 8ರಿಂದಲೇ ಜಾರಿಗೆ ಬಂದಿದೆ.
ಎನ್ಪಿಪಿಎ ಫೆಬ್ರವರಿ 27 ರಂದು 42 ಕ್ಯಾನ್ಸರ್ ನಿಯಂತ್ರಣ ಔಷಧಿಗಳನ್ನು ಶೇ.30ರಷ್ಟು ಗರಿಷ್ಠ ಲಾಭದ ಮಿತಿ ವಿಧಿಸಿ ದರ ಪರಿಷ್ಕರಿಸಿ, ಫೆಬ್ರವರಿ 8ರಿಂದಲೇ ಪರಿಷ್ಕೃತ ದರ ಜಾರಿಗೆ ತರುವಂತೆ ಔಷಧ ಕಂಪನಿಗಳು ಮತ್ತು ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಸೂಚಿಸಿತ್ತು.
38 ಬ್ರಾಂಡ್ ಗಳ ಔಷಧಿಗಳ ದರವನ್ನು ಶೇ.75ರಷ್ಟು ತಗ್ಗಿಸಲಾಗಿದೆ. 124 ಬ್ರಾಂಡ್ ಗಳ ಔಷಧಿ ದರಗಳನ್ನು ಶೇ.50ರಿಂದ 75ರಷ್ಟು ತಗ್ಗಿಸಲಾಗಿದೆ. 121 ಬ್ರಾಂಡ್ ಗಳ ಔಷಧಿಗಳನ್ನು ಶೇ.25-50ರಷ್ಟು ತಗ್ಗಿಸಿದ್ದರೆ, 107 ಬ್ರಾಂಡ್ ಗಳ ಔಷಧಿಗಳನ್ನು ಶೇ.25ಕ್ಕಿಂತ ಕಡಮೆ ಪ್ರಮಾಣದಲ್ಲಿ ತಗ್ಗಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು ಆಗಿಂದಾಗ್ಗೆ ಔಷಧಿಗಳ ದರವನ್ನು ಪರಿಷ್ಕರಿಸುತ್ತದೆ. ಸೆಡ್ಯುಲ್ಡ್ ಮತ್ತು ನಾನ್ ಸೆಡ್ಯುಲ್ಡ್ ಔಷಧಿಗಳ ದರವನ್ನು ನಿಯಂತ್ರಿಸುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಔಷಧ ದರ ನಿಯಂತ್ರಣ ವ್ಯಾಪ್ತಿಯಲ್ಲಿರುವ ಔಷಧಿಗಳು ಸೆಡ್ಯುಲ್ಡ್ ವ್ಯಾಪ್ತಿಗೆ ಬಂದರೆ, ದರ ನಿಯಂತ್ರಣ ವ್ಯಾಪ್ತಿಯಲ್ಲಿ ಇಲ್ಲದ ಔಷಧಿಗಳು ನಾನ್ ಸೆಡ್ಯುಲ್ಡ್ ವ್ಯಾಪ್ತಿಗೆ ಬರುತ್ತವೆ. ಅಗತ್ಯವಸ್ತುಗಳ ಕಾಯ್ದೆ (1955) ಸೆಕ್ಷನ್ 3ರ ಅಡಿಯಲ್ಲಿ 1995ರಲ್ಲಿ ಔಷಧ ದರ ನಿಯಂತ್ರಣ ಆದೇಶ (ಡಿಪಿಸಿಒ- 1995) ಹೊರಡಿಸಲಾಗಿದೆ. ಅದರ ಅನ್ವಯವೇ ದರ ನಿಯಂತ್ರಣ ಮಾಡಲಾಗುತ್ತದೆ. ದರ ನಿಯಂತ್ರಣದ ಜವಾಬ್ದಾರಿಯನ್ನು ಔಷಧ ದರ ನಿಯಂತ್ರಣ ಪ್ರಾಧಿಕಾರವು ನಿರ್ವಹಿಸುತ್ತದೆ.
ಸಾಮಾನ್ಯವಾಗಿ ದರ ನಿಯಂತ್ರಣ ವ್ಯಾಪ್ತಿಯಲ್ಲಿರುವ ಔಷಧಗಳಿಗೆ ಶೇ.16ರಷ್ಟು ಮಾರ್ಜಿನ್ ನೀಡಲಾಗುತ್ತದೆ. ದರ ನಿಯಂತ್ರಣ ವ್ಯಾಪ್ತಿಯಲ್ಲಿ ಇಲ್ಲದ ಔಷಧಿಗಳ ದರವನ್ನು ಪ್ರಾಧಿಕಾರ ಹಂತಹಂತವಾಗಿ ದರ ನಿಯಂತ್ರಣ ವ್ಯಾಪ್ತಿಗೆ ತರುತ್ತಿದೆ. ಒಟ್ಟು ಉತ್ಪಾದನಾ ವೆಚ್ಚ, ಹಂಚಿಕೆ, ಮಾರಾಟ, ಕಮಿಷನ್ ಮತ್ತು ವೆಸ್ಟೇಜ್ ಎಲ್ಲಾ ವೆಚ್ಚಗಳನ್ನು ಪರಿಗಣಿಸಿ ದರ ನಿಗದಿ ಮಾಡಲಾಗುತ್ತದೆ. ಆ ದರ ಮೀರಿ ಯಾವುದೇ ಔಷಧ ಕಂಪನಿಗಳಾಗಲೀ, ಆಸ್ಪತ್ರೆಗಳಾಗಲಿ ಹೆಚ್ಚಿನ ದರ ವಿಧಿಸುವಂತಿಲ್ಲ. 2011ರಲ್ಲಿ ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು (ಎನ್ಎಲ್ಇಎಂ) ಅಂಗೀಕರಿಲಾಗಿದ್ದು, ದರ ನಿಯಂತ್ರಣ ವ್ಯಾಪ್ತಿಯಲ್ಲಿರುವ ಎಲ್ಲಾ ಔಷಧಗಳೂ ಈ ಪಟ್ಟಿಯಲ್ಲಿವೆ. ಡಿಪಿಸಿಒ 2013ರ ಆದೇಶದಂತೆ 27 ವಿವಿಧ ರೋಗಳಗಿಗೆ ಸಂಬಂಧಿಸಿದ 680 ಔಷಧಗಳನ್ನು ದರನಿಯಂತ್ರಣ ವ್ಯಾಪ್ತಿಗೆ ತಂದು ಪ್ರಾಧಿಕಾರವು ದರ ನಿಯಂತ್ರಣ ಮಾಡುತ್ತದೆ. ಆ ಪಟ್ಟಿಯಿಂದ ಹೊರಗುಳಿದ ಔಷಧಗಳನ್ನು ಆಗಿಂದಾಗ್ಗೆ ಅಗತ್ಯ ಬಿದ್ದಾಗ ದರ ನಿಯಂತ್ರಣ ವ್ಯಾಪ್ತಿಗೆ ತರಲಾಗುತ್ತಿದೆ.
ದರ ಕಡಿತದಲ್ಲಿ ತರ್ಕವೇ ಇಲ್ಲ
390 ಕ್ಯಾನ್ಸರ್ ನಿಯಂತ್ರಣ ಔಷಧಿಗಳ ದರವನ್ನು ಶೇ.87ರವರೆಗೆ ಕಡಿತ ಮಾಡಲಾಗಿದೆ. ಆದರೆ, ದರ ಕಡಿತ ಮಾಡುವಾಗ ಯಾವ ಮನದಂಡ ಅನುಸರಿಸಲಾಗಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಕಡಮೆ ದರ ಔಷಧಿಗಳ ದರವನ್ನು ಗರಿಷ್ಠ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಆದರೆ, ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ದುಬಾರಿ ಔಷಧಿಗಳ ದರವನ್ನು ಅತಿ ಕಡಮೆ ಅಂದರೆ ಶೇ.1ರಷ್ಟು ಮತ್ತು ಅದಕ್ಕೆ ಕಡಮೆ ದರ ಕಡಿತ ಮಾಡಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿರುವ ದುಬಾರಿ ಔಷಧಿಗಳು ದುಬಾರಿಯಾಗಿಯೇ ಉಳಿಯಲಿವೆ.
ಉದಾಹರಣೆಗೆ ಕ್ರಿಜೋಟಿನಿಬ್ 250 ಎಂಜಿ ಕ್ಯಾಪ್ಸೂಲ್ ಗಳ ಹಿಂದಿನ ದರವು 1,06,698 ರುಪಾಯಿ ಇದ್ದದ್ದನ್ನು 1,06,270.25 ರುಪಾಯಿಗೆ ತಗ್ಗಿಸಲಾಗಿದೆ. ಅಂದರೆ ಲಕ್ಷ ರುಪಾಯಿ ಮೀರಿದ ಈ ಔಷಧಿಯ ದರವನ್ನು ಕೇವಲ 427.75 ರುಪಾಯಿ ಇಳಿಸಲಾಗಿದೆ. ವಾಸ್ತವಿಕ ದರ ಕಡಿತವು ಶೇ.0.40ನಷ್ಟು ಮಾತ್ರ.
ಕ್ರಿಜೋಟಿನಿಬ್ 200 ಎಂಜಿ ಕ್ಯೂಪ್ಸೂಲ್ ಗಳ ದರ 1,06,698 ರುಪಾಯಿ ಇದ್ದದ್ದನ್ನು 1,00,177.53ಕ್ಕೆ ಇಳಿಸಲಾಗಿದೆ. ಒಟ್ಟು ದರ ಇಳಿಕೆಯು 6520.47 ರುಪಾಯಿಗಳು. ವಾಸ್ತವಿಕ ದರ ಕಡಿತವು ಶೇ.6.11ರಷ್ಟು ಮಾತ್ರ.
ಕ್ಯಾರ್ಫಿಲ್ಜೊಮಿಬ್ 60 ಎಂಜಿ ಇಂಜೆಕ್ಷನ್ ದರವು 49,500 ರುಪಾಯಿ ಇದ್ದದ್ದನ್ನು 47,325 ರುಪಾಯಿಗೆ ಇಳಿಸಲಾಗಿದೆ. ಅಂದರೆ ದರ ಕಡಿತ ಪ್ರಮಾಣವು ಕೇವಲ ಶೇ.4.39 ಮಾತ್ರ.
ಡೊಕ್ಸಾರುಬಿಸಿನ್ ಎಚ್ಸಿಎಲ್ 2 ಎಂಜಿ ಪೆಗ್ ದರ 49,427 ರುಪಾಯಿ ಇದ್ದದ್ದನ್ನು 48,850 ರುಪಾಯಿಗೆ ತಗ್ಗಿಸಲಾಗಿದೆ. ದರ ಇಳಿಕೆ ಪ್ರಮಾಣವು ಕೇವಲ ಶೇ.1.17ರಷ್ಟು. ಎರಿಬುಲಿನ್ ಮೈಸಲೆಟ್ 0.44 ಎಂಎಲ್ (ಪೆರೆಂಟಲ್ ಪ್ರಿಪರೇಷನ್) 32,860 ರುಪಾಯಿ ಇದ್ದದ್ದನ್ನು 31,885 ರುಪಾಯಿಗೆ ಇಳಿಸಿದ್ದು, ದರ ಇಳಿಕೆ ಪ್ರಮಾಣವು ಶೇ.2.97 ಮಾತ್ರ. ಲ್ಯೂಪ್ರೊಲೈಡ್ 45 ಎಂಜಿ ಇಂಜೆಕ್ಷನ್ 38,450 ರುಪಾಯಿ ಇದ್ದದ್ದನ್ನು 36,357 ರುಪಾಯಿ ಇಳಿಸಿದ್ದು, ದರ ಇಳಿಕೆ ಪ್ರಮಾಣವು ಶೇ.5.20ರಷ್ಟಿದೆ. ಟ್ರೆಪ್ಟೊರೆಲಿನ್ 22.5 ಎಂಜಿ ಇಂಜೆಕ್ಷನ್ ದರವನ್ನು 38,000 ರುಪಾಯಿಗಳಿಂದ 36,409 ರುಪಾಯಿಗೆ ತಗ್ಗಿಸಿದ್ದು ದರ ಕಡಿತ ಶೇ.4.19ರಷ್ಟು ಮಾತ್ರ.
ಡೆಸಿಟಬಿನ್ 50 ಎಂಜಿ ಪೌಡರ್ ದರವನ್ನು 80,000 ರುಪಾಯಿಯಿಂದ 61,430 ರುಪಾಯಿಗೆ ಇಳಿಸಲಾಗಿದ್ದು, ಇಳಿಕೆ ಪ್ರಮಾಣವು ಶೇ.23.21ರಷ್ಟಿದೆ. 288 ರುಪಾಯಿ ದರ ಇದ್ದ ಸೈಟರ್ಬಿನ್ 100 ಎಂಜಿ ಇಂಜೆಕ್ಷನ್ ದರವನ್ನು 50.74 ರುಪಾಯಿಗೆ ತಗ್ಗಿಸಲಾಗಿದ್ದು, ದರ ಇಳಿಕೆ ಪ್ರಮಾಣವು ಶೇ.82.42ರಷ್ಟಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಈಗಾಗಲೇ ಅತಿ ಕಡಮೆ ದರ ಇರುವ ಔಷಧಿಗಳನ್ನು ಗರಿಷ್ಠ ಪ್ರಮಾಣದಲ್ಲಿ ತಗ್ಗಿಸಿ, ಎಲ್ಲಾ ಔಷಧಗಳ ದರವನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಿರುವಂತೆ ಪ್ರಚಾರ ಮಾಡಲಾಗುತ್ತಿದೆ.
ಗರಿಷ್ಠ ಪ್ರಮಾಣದಲ್ಲಿ ಇಳಿಕೆಯಾಗಿರುವ ಔಷಧಿಗಳು 10,000 ರುಪಾಯಿ ವ್ಯಾಪ್ತಿಯೊಳಗಿವೆ. 10,000 ಮೀರಿದ ಬಹುತೇಕ ಔಷಧಗಳ ದರ ಇಳಿಕೆ ಪ್ರಮಾಣವು ಸರಾಸರಿ ಶೇ.20ರಷ್ಟಾಗಬಹುದು.
390 ಔಷಧಗಳ ಪೈಕಿ ಶೇ.87ರಷ್ಟು ದರ ತಗ್ಗಿರುವುದು ಮೂರ್ನಾಲ್ಕು ಔಷಧಗಳಿಗೆ ಮಾತ್ರ. ಬಹುತೇಕ ಔಷಧಗಳ ದರ ತಗ್ಗಿರುವುದು ಶೇ.0.4ರಿಂದ 10ರಷ್ಟು ಮಾತ್ರ.
ಔಷಧಗಳ ಪರಿಷ್ಕೃತ ದರ ಪಟ್ಟಿ ಗಮನಿಸಿದರೆ ಈಗಲೂ ಬಹುತೇಕ ಔಷಧಿಗಳು ದುಬಾರಿಯಾಗಿಯೇ ಇವೆ. ಮೇಲ್ವರ್ಗದವರು ಮಾತ್ರವೇ ಖರೀದಸಲು ಸಾಧ್ಯ. ಮಧ್ಯಮವರ್ಗಕ್ಕೂ ಈ ದರ ದುಬಾರಿಯಾಗಲಿದೆ. ಇನ್ನು ಕೆಳಮಧ್ಯಮ ವರ್ಗ ಮತ್ತು ಕೆಳವರ್ಗದ ಜನರಿಗೆ ಔಷಧಿಗಳು ಕೈಗೆಟಕುವುದು ಕಷ್ಟ. ಮತ್ತಷ್ಟು ದರ ಕಡಿತ ಮಾಡಬೇಕು. ಯಾವ ಔಷಧಯ ದರವೂ ನಾಲ್ಕಂಕಿ ದಾಟದಂತೆ ದರ ನಿಗದಿ ಮಾಡಿದರೆ ಮಾತ್ರ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುತ್ತದೆ.