ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಪ್ರಚಾರಾಂದೋಲನಗಳ ಭಾಗವಾಗಿ ಜಾಹೀರಾತುಗಳಲ್ಲಿ ಸೇನಾ ಸಿಬ್ಬಂದಿಗಳ ಭಾವಚಿತ್ರಗಳನ್ನು ಬಳಸಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿರುವ ಚುನಾವಣಾ ಆಯೋಗವು, ಮಾರ್ಚ್ 9 ರಂದು ಕೇಂದ್ರ ಚುನಾವಣಾ ಆಯೋಗವು ದೇಶದ ಎಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ನಿರ್ದೇಶನ ನೀಡಿ ಯಾವುದೇ ರಾಜಕೀಯ ಪಕ್ಷವು ತನ್ನ ಚುನಾವಣಾ ಪ್ರಚಾರದಲ್ಲಿ ಭಾರತೀಯ ಸೇನಾಪಡೆಗಳ, ಸೈನಿಕರ ಚಿತ್ರಗಳನ್ನು ಬಳಸಬಾರದು ಎಂದು ತಿಳಿಸಿದೆ.
ಸೈನಿಕರ ಭಾವಚಿತ್ರಗಳನ್ನು ಕೆಲವು ರಾಜಕೀಯ ಪಕ್ಷಗಳು, ಅವುಗಳ ಮುಖಂಡರು ಮತ್ತು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಾಂದೋಲನದ ಜಾಹೀರಾತುಗಳಲ್ಲಿ ಬಳಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಈ ಕುರಿತು ರಕ್ಷಣಾ ಸಚಿವಾಲಯವು ಆಯೋಗದ ಗಮನಕ್ಕೆ ತಂದು, ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ಹೊರಡಿಸುವಂತೆ ಮನವಿ ಮಾಡಿಕೊಂಡಿರುತ್ತದೆ.
ಒಂದು ರಾಷ್ಟ್ರದ ಸಶಸ್ತ್ರ ಪಡೆಗಳು ಆ ರಾಷ್ಟ್ರದ ಗಡಿಗಳ, ಭದ್ರತಾ ವ್ಯವಸ್ಥೆಯ ಮತ್ತು ರಾಜಕೀಯ ವ್ಯವಸ್ಥೆಯ ರಕ್ಷಕರಾಗಿರುತ್ತವೆ ಎಂಬುದನ್ನು ಇಲ್ಲಿ ಮುಖ್ಯವಾಗಿ ತಿಳಿಸಬೇಕಾಗುತ್ತದೆ. ಆಧುನಿಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವು ರಾಜಕೀಯೇತರವಾಗಿ ಕಾರ್ಯನಿರ್ವಹಿಸುವ ತಟಸ್ಥ ಅಂಗಗಳಾಗಿರುತ್ತವೆ. ಆದ್ದರಿಂದ ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ರಾಜಕೀಯ ಪ್ರಚಾರಾಂದೋಲನಗಳಲ್ಲಿ ಸಶಸ್ತ್ರ ಪಡೆಗಳ ಕುರಿತು ಯಾವುದೇ ಉಲ್ಲೇಖ ಮಾಡುವಾಗಲೂ ಸಾಕಷ್ಟು ಎಚ್ಚರಿಕೆ ವಹಿಸುವುದು ಅವಶ್ಯ. ಚುನಾವಣೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಜಾಹೀರಾತುಗಳಲ್ಲಿ/ ಪ್ರಚಾರಗಳಲ್ಲಿ/ ಅಭಿಯಾನಗಳಲ್ಲಿ ಯಾವುದೇ ರೀತಿಯಲ್ಲೂ ಸೇನಾಪಡೆಯ ಮುಖ್ಯಸ್ಥರ ಅಥವಾ ಇನ್ನಾವುದೇ ರಕ್ಷಣಾ ಸಿಬ್ಬಂದಿಯ ಭಾವಚಿತ್ರಗಳನ್ನು ಹಾಗೂ ರಕ್ಷಣಾ ಪಡೆಗಳ ಕಾರ್ಯನಿರ್ವಹಣೆಯ ಚಿತ್ರಗಳನ್ನು ಬಳಸಬಾರದೆಂಬುದು ಆಯೋಗದ ಅಭಿಪ್ರಾಯವಾಗಿರುತ್ತದೆ.
ಆದ್ದರಿಂದ ತಮ್ಮ ಚುನಾವಣಾ ಪ್ರಚಾರಾಂದೋಲನಗಳಲ್ಲಿ ಜಾಹೀರಾತುಗಳ ಭಾಗವಾಗಿ ಇಲ್ಲವೇ ಇತರ ಯಾವುದೇ ರೀತಿಯಲ್ಲೂ ರಕ್ಷಣಾ ಸಿಬ್ಬಂದಿಗಳ ಭಾವಚಿತ್ರಗಳನ್ನು ಅಥವಾ ರಕ್ಷಣಾ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸದಂತೆ ತಮ್ಮ ತಮ್ಮ ಅಭ್ಯರ್ಥಿಗಳಿಗೆ/ ಮುಖಂಡರಿಗೆ ತಿಳಿವಳಿಕೆ ನೀಡಲು ಆಯೋಗವು ಎಲ್ಲಾ ರಾಜಕೀಯ ಪಕ್ಷಗಳಿಗೂ ಕರೆ ನೀಡುತ್ತದೆ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಿರ್ದೇಶನದ ಸಮರ್ಪಕ ಅನುಪಾಲನೆಗಾಗಿ ಪಕ್ಷಗಳು ತಮ್ಮ ಅಭ್ಯರ್ಥಿಗಳು/ ಮುಖಂಡರು/ ಕಾರ್ಯಕರ್ತರಿಗೆ ಸೂಕ್ತ ಸೂಚನೆಗಳನ್ನು ನೀಡಲು ಕೋರಲಾಗಿದೆ.
ಎಲ್ಲೆ ಮೀರಿದ ರಾಜಕೀಯ ಪಕ್ಷಗಳು – ಚುನಾವಣಾ ಆಯೋಗದ ಮೂಗುದಾರ
ಮಹತ್ವದ ಈ ಚುನಾವಣಾ ಸಂದರ್ಭದಲ್ಲಿ ಎಲ್ಲೆ ಮೀರಿ ವರ್ತಿಸುತ್ತಿರುವ ಕೆಲವು ರಾಜಕೀಯ ಪಕ್ಷಗಳ ನಡವಳಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆಯೋಗದ ಈ ನಿರ್ದೇಶನವನ್ನು ನೀಡಿದೆ ಎಂದು ಯಾರಾದರೂ ಅರ್ಥೈಸಬಹುದು. ಕಳೆದ ತಿಂಗಳು ಕಾಶ್ಮೀರದ ಫುಲ್ವಾಮಾದಲ್ಲಿ ನಮ್ಮ ಸಿಆರ್ಪಿಎಫ್ ಯೋಧರನ್ನು ಉಗ್ರರು ಹತ್ಯೆಗೈದ ನಂತರ ಬಿಜೆಪಿ ಮತ್ತು ಅದರ ಸಂಘ ಪರಿವಾರ ದೇಶದಲ್ಲಿ ಯುದ್ಧೋನ್ಮಾದವನ್ನು ಹುಟ್ಟಿಹಾಕಿತ್ತು. ಆನಂತರ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಾರತೀಯ ವಾಯಯುಸೇನೆ ವಾಯುದಾಳಿ ನಡೆಸಿತ್ತು. ಅಲ್ಲಿ ಉಗ್ರರ ಶಿಬಿರವನ್ನು ನಾಶಗೊಳಿಸಿ ನೂರಾರು ಉಗ್ರರನ್ನು ಕೊಲ್ಲಲಾಯಿತೆಂದು ಬಿಜೆಪಿಯ ಅಮಿತ್ ಶಾ ಮುಂತಾವರು ಹೇಳಿಕೊಂಡರೂ ರಕ್ಷಣಾ ಸಚಿವರು ಮತ್ತು ವಾಯುಪಡೆಯ ಮುಖ್ಯಸ್ಥರು ಹತರಾದವರ ಸಂಖ್ಯೆಯನ್ನು ನಾವು ಹೇಳಲಾರೆವು ಎಂದಿದ್ದರು! ಉಗ್ರರು ಹತ್ಯೆಯಾದ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನೂ ಭಾರತ ಸರ್ಕಾರ ನೀಡಲು ಸಾಧ್ಯವಾಗಿಲ್ಲವಾದರೂ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮತ್ತು ಉಪಗ್ರಹ ಚಿತ್ರಗಳ ವರದಿಯ ಆಧಾರದಲ್ಲಿ ಈ ದಾಳಿಯಿಂದ ಉಗ್ರರ ಶಿಬಿರಕ್ಕೇನೂ ಹಾನಿಯಾಗಿಲ್ಲ ಎಂಬಂತಿದೆ. ಈ ಮಧ್ಯೆ ಪಾಕಿಸ್ತಾನದ ನೆಲದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವಿಮಾನದಿಂದ ಪತನಗೊಂಡು ಎದುರಾಳಿಗಳ ಸೆರೆ ಸಿಕ್ಕಾಗ, ಇಡೀ ದೇಶ ಅವರ ಸುರಕ್ಷಿತ ವಾಪಸ್ಸಾತಿಗಾಗಿ ಪ್ರಾರ್ಥಿಸಿತು. ಅತ್ತ ಪಾಕಿಸ್ತಾನ, ಎರಡೂ ರಾಷ್ಟ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಿ ಮಾಡಿರುವ ಜಿನಿವಾ ಒಪ್ಪಂದಕ್ಕನುಗುಣವಾಗಿ ಯೋಧ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲು ಒಪ್ಪಿ ಅದರಂತೆ ನಡೆದುಕೊಂಡಿತು. ಆದರೆ ಸೇನಾಪಡೆಗಳನ್ನು, ಯೋಧರ ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಸಾಕಷ್ಟು ರಾಜಕೀಯಕರಣಗೊಳಿಸಿದ ಬಿಜೆಪಿ, ಭಾರತೀಯ ಸೇನಾಪಡೆಗಳು (ವಾಯುಪಡೆ) ನಡೆಸಿದ ವಾಯುದಾಳಿಯೂ ಮೋದಿಯವರ ಸಾಧನೆ ಎಂದು ಮೆರೆಯಿತು. ಹೀಗೆ ಸೈನಿಕರ ತ್ಯಾಗ ಬಲಿದಾನವನ್ನು, ಸೇನೆಯ ಸಾಧನೆಗಳನ್ನು ಒಂದು ರಾಜಕೀಯ ಪಕ್ಷ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದು ಭಾರತೀಯ ಸಶಸ್ತ್ರ ಪಡೆಗಳು ರೂಪಿತವಾಗಿರುವ ನೈತಿಕ ತಳಹದಿಯನ್ನು ನಾಶ ಮಾಡುವ ಪ್ರಯತ್ನ ಎಂದು ಆಯೋಗ ಭಾವಿಸಿದೆ.
ದೇಶದಲ್ಲಿ ಈ ರೀತಿ ಆಡಳಿತಾರೂಢ ಸರ್ಕಾರದಿಂದಲೇ ದೇಶದ ಉನ್ನತ ಸಂಸ್ಥೆಗಳನ್ನು ನಿರ್ದೇಶಿಸುವ ಮೌಲ್ಯಗಳ ಕಗ್ಗೊಲೆಯಾಗುತ್ತಿರುವುದನ್ನು ಕಂಡು ನೊಂದುಕೊಳ್ಳುತ್ತಿರುವವರು ಹಲವರು. ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಅಡ್ಮಿರಲ್ ರಾಮದಾಸ್ ಅವರು ಫೆ. 14ರ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 42 ಯೋಧರು ಹುತಾತ್ಮರಾದ ನಂತರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಹಲವಾರು ನಿವೃತ್ತ ಯೋಧರ ಪರವಾಗಿ ಬಹಿರಂಗ ಪತ್ರ ಬರೆದಿದ್ದರು.
ಚುನಾವಣಾ ಅಯೋಗಕ್ಕೆ ಅಡ್ಮಿರಲ್ (ನಿ) ರಾಮದಾಸ್ ಬಹಿರಂಗ ಪತ್ರ ಓದಲು ಕ್ಲಿಕ್ ಮಾಡಿ