ಗಂಡ ಸತ್ತು ಎರಡು ತಿಂಗಳಾಗಿಲ್ಲ. . . . . ಹಿಂದೂ ಸಂಸ್ಕøತಿಯಲ್ಲಿ ಗಂಡ ಸತ್ತ ಮಹಿಳೆ ಕೆಲವು ದಿನ ಹೊರ ಬರಬಾರದು – ಇದು 2019 ರ ಮಾರ್ಚಿ 8 ರಂದು ಕರ್ನಾಟಕ ಸರ್ಕಾರದ ‘ಘನ’ತೆವೆತ್ತ ಮಂತ್ರಿ ರೇವಣ್ಣರವರು ಸುಮಲತಾರ ಕುರಿತು ಹೇಳಿದ ಮಾತು. ಹೆಣ್ಣು ಗಂಡ ಸತ್ತ ನಂತರ ಕೆಲವು ದಿನ ಮನೆಯಿಂದ ಬರಬಾರದು ಎಂಬ ನಿಯಮ ಇದೆ. ಅದಕ್ಕೆ ಧರ್ಮದ ಸಂಸ್ಕøತಿಗೆ ಅನ್ವಯಿಸಿ ಹೇಳಿದೆ ಎಂಬ ಮಾತಷ್ಟೇ ಸಾಲದೆಂಬಂತೆ, ‘ನಮ್ಮ ಸಂಸ್ಕøತಿಯಲ್ಲಿ ಏನಿದೆಯೋ ಅದನ್ನು ಮುಕ್ತವಾಗಿ ಮಾತನಾಡಿದ್ದೇನೆ, ಆ ಹೇಳಿಕೆಗೆ ನಾನು ಕ್ಷಮೆ ಯಾಚಿಸುವುದಿಲ್ಲ’ ಎಂದೂ ಹೇಳಿದ್ದಾರೆ. ಮಹಿಳೆಯರ ಘನತೆ, ಗೌರವ, ಅಸ್ತಿತ್ವ, ಅಸ್ಮಿತೆಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಈ ವೇಳೆಯಲ್ಲಿಯೂ ಇಂಥಹ ದುರಹಂಕಾರದ ಮಾತುಗಳನ್ನಾಡುವವರು ಜನಪ್ರತಿನಿಧಿಗಳು ಎನ್ನುವುದು ನಮ್ಮ ನೆಲದಲ್ಲಿ ಪುರುಷಾಧಿಪತ್ಯದ ಬೇರುಗಳು ಇನ್ನೂ ಎಷ್ಟು ಗಟ್ಟಿಯಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಂಸ್ಕøತಿಯನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದು ಈ ನೆಲಕ್ಕೆ ಹೊಸತಲ್ಲ. ಮತ್ತು ಸಂಸ್ಕøತಿಯ ವಾರಸುದಾರಳಾಗಿ ಹೆಣ್ಣು ಸದಾ ಕಾವಲಿರಬೇಕೆಂದು ಇವರು ಬಯಸುತ್ತಾರೆ ಕೂಡ.
ಸಂವಿಧಾನದತ್ತ ಸಮಾನ ಅವಕಾಶಗಳನ್ನು ಎಲ್ಲ ಕ್ಷೇತ್ರಗಳಲ್ಲಿ ನಿರಾಕರಿಸಲು ಈ ಪಾಳೆಯಗಾರೀ ಮನಸ್ಸುಗಳಿಗೆ ಕಾರಣಗಳೇ ಬೇಕಿಲ್ಲ. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರದಿರಲು ಮುಂದೊಡ್ಡಿದ ಕಾರಣಗಳೂ ಇಂಥಹುವೆ. ಮಹಿಳೆಯರಿಗೆ ಮೀಸಲಾತಿ ಕೊಟ್ಟರೆ ‘ಬಾಲ್ ಕಟೇ ಹುಯೇ ಔರತೇಂ ಹೀ ಆತೇ ಹೈಂ. . . ಎಂದೊಬ್ಬರು ಹೇಳಿದರೆ ಇನ್ನೊಬ್ಬರು ಸಂಸತ್ ಭವನದ ಮಹಿಳಾ ವಿಶ್ರಾಂತಿ ಕೊಠಡಿಗಳ ಕನ್ನಡಿಗಳ ಮುಂದೆ ಕ್ಯೂ ಹಚ್ಚಲಾಗುತ್ತದೆ, ಕುಟುಂಬಗಳು ನಾಶವಾಗುತ್ತವೆ ಎಂದವರು ಮತ್ತೊಬ್ಬರು. ಹೀಗೆ ಆಡಿದ ಮಾತುಗಳ ಹಿಂದೆ ಕೂಡ ಇದೇ ಪುರುಷ ಪ್ರಧಾನ ಮನೋಭಾವವೇ. ಈ ಎಲ್ಲ ಮಾತುಗಳ ಹಿಂದಿರುವುದು ಮಹಿಳೆಯರಿಗಿರುವ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವುದಷ್ಟೇ ಅಲ್ಲದೇ ಮನುಧರ್ಮ ಶಾಸ್ತ್ರವಿಧಿಸುವ ಕಟ್ಟು ಕಟ್ಟಳೆಗಳ ಮುಂದುವರಿದ ಭಾಗವೇ ಆಗಿದೆ. ಮಹಿಳಾ ಸಮಾನತೆಯ ದಾರಿಯಲ್ಲಿರುವ ಹೆಬ್ಬಂಡೆಗಳಿವು. ಪಾಳೆಯಗಾರಿ ವ್ಯವಸ್ಥೆಗಳನ್ನು ಬೇಧಿಸಿ ಮುನ್ನಡೆಯುವ ಅವಸರದಲ್ಲಿ ದೇಶದ ಮಹಿಳೆಯರಿರುವಾಗ ಈ ರೀತಿಯ ಮನೋಭಾವಗಳು ಹಿನ್ನಡೆಯನ್ನುಂಟು ಮಾಡುತ್ತವೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ.
ಹೆಣ್ಣನ್ನು ನಾಲ್ಕು ಗೋಡೆಯೊಳಗೆ ಬಂಧಿಸಿಡುವ, ಗಂಡಿನ ಅಡಿಯಾಳಾಗಿಯೇ ಉಳಿಸುವ ದೊಡ್ಡ ಸಂಚಿದು. ಗೊಡ್ಡು ಕಂದಾಚಾರಗಳಿಗೆ ತಾವಷ್ಟೇ ಬಲಿಯಾಗದೇ ಇಡೀ ಸಮಾಜವನ್ನೇ ಬಲಿಕೊಡುವ ಆಲೋಚನಾ ಕ್ರಮವಿದು. ವಿಶಾಲ ಮನೋಭಾವದಲ್ಲಿ, ಆಧುನಿಕ ಸಾಮಾಜಿಕ ಆಲೋಚನೆ ಹೊಂದಿರುವ ಹೆಣ್ಣಿನ ಘನತೆಗೆ ಕುಂದು ತರುವ ವಿಚಾರ. ಯಾವ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸ ಬಯಸಿರುವರೋ ಅದೇ ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಈ ಹಿಂದೆ ತಮ್ಮದೇ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅಕಾಲಿಕ ನಿಧನ ಹೊಂದಿದಾಗ ಅನುಕಂಪದ ಅಲೆಯ ಮೇಲೆ ಅವರ ಪತ್ನಿಯರನ್ನು ತಮ್ಮ ಪಕ್ಷದ ಚಿಹ್ನೆಯಲ್ಲಿಯೇ ನಿಲ್ಲಿಸಿ ಗೆಲ್ಲಿಸಿಕೊಂಡವರು ತಾವೆಂದು ರೇವಣ್ಣರವರು ಮರೆತಿರಬಹುದು, ಆದರೆ ಅಲ್ಲಿನ ಮತದಾರರು, ರಾಜ್ಯದ ಜನ ಮರೆಯಲಾರರು. ಎಂದರೆ ಮಹಿಳೆ ನಿಮ್ಮ ಕೈಯೊಳಗಿನ ಆಟದ ಬೊಂಬೆ. ನಿಮಗೆ ಬೇಕಾದಾಗ, ನೀವು ಉರುಳಿಸುವ ದಾಳವಾಗಿ ಉರುಳಬೇಕು. ಬೇಡವೆಂದರೆ ನಿಲ್ಲಬೇಕು. ತೆನೆಹೊತ್ತ ಮಹಿಳೆಯನ್ನು ಚಿಹ್ನೆಯಾಗಿಟ್ಟುಕೊಂಡ ಪಕ್ಷವೊಂದು ಮಹಿಳೆಯರ ಕುರಿತು ಹೊಂದಿರುವ ಮನೋಭಾವ ಇದು. ಇದು ಖಂಡನೀಯ.
ಧರ್ಮ ಸಂಸ್ಕøತಿಗಳ ಹೆಸರಿನಲ್ಲಿ ಹೆಣ್ಣಿಗೆ ಅವಹೇಳನ ಮಾಡುವುದು, ಮತ್ತು ಅವಳ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಅಧಿಕಾರ ಯಾರಿಗೂ ಇಲ್ಲ. ಅಧಿಕಾರ ಸಂಪತ್ತಿನ ಅಹಂಕಾರದಿಂದ ಆಡುವ ಮಾತುಗಳು ನಿಮ್ಮ ಅನಾಗರಿಕ ಆಲೋಚನಾ ಕ್ರಮದ ದ್ಯೋತಕವಾಗಿದೆ. ಇದೊಂದು ಪ್ರಜಾಪ್ರಭುತ್ವ ದೇಶ, ಇನ್ನೂ ಈ ದೇಶದ ಸಂವಿಧಾನ ಚಾಲ್ತಿಯಲ್ಲಿದೆ. ಅದು ಎಲ್ಲ ಮಹಿಳೆಯರಿಗೂ ಸಮಾನ ಅವಕಾಶವನ್ನು ನೀಡಬೇಕೆನ್ನುತ್ತದೆ. ಮತ್ತು ಆ ಅವಕಾಶದಿಂದ ವಂಚಿತರಾದ ಮಹಿಳಾ ಸಮೂಹ ಗಟ್ಟಿ ಧ್ವನಿಯಲ್ಲಿ ತನ್ನ ಪಾಲನ್ನು ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ಇಂಥಹ ವಿಪರೀತಾರ್ಥದ ಹೇಳಿಕೆಗಳನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ. ಇದನ್ನು ಸಾಮೂಹಿಕವಾಗಿ ಖಂಡಿಸಬೇಕು.
ಕೆ.ಎಸ್.ವಿಮಲ
(ಲೇಖಕರು ಸಾಮಾಜಿಕ ಕಾರ್ಯಕರ್ತರು)