ನೋಟು ರದ್ದತಿ ಎಂಬ ಬಡವರ ಬದುಕಿನ ಮೇಲಿನ ಸರ್ಜಿಕಲ್ ದಾಳಿಯ ಕುರಿತ ಒಂದೊಂದೇ ಸತ್ಯಗಳು ಇದೀಗ ಮೋದಿ ಆಡಳಿತದ ಅಂತ್ಯದ ಹೊತ್ತಿಗೆ ಹೊರಬರತೊಡಗಿವೆ.
ರದ್ದುಗೊಂಡ ನೋಟುಗಳ ಪೈಕಿ ಶೇ.99.3ರಷ್ಟು ವಾಪಸು ಬ್ಯಾಂಕುಗಳಿಗೆ ಬಂದಿವೆ ಎಂದು ಕಳೆದ ವರ್ಷದ ವರ್ಷದ ಆಗಸ್ಟ್ ನಲ್ಲಿ ಆರ್ ಬಿ ಐ ಹೇಳಿತ್ತು. ಆ ಮೂಲಕ ಪ್ರಧಾನಿ ಮೋದಿಯವರು ನೋಟು ರದ್ದತಿಯ ಘೋಷಣೆ ವೇಳೆ ಹೇಳಿದ್ದ ಕಪ್ಪುಹಣ ಮತ್ತು ಖೋಟಾ ನೋಟು ವ್ಯವಸ್ಥೆಯನ್ನು ತೊಡೆದುಹಾಕುವ ಉದ್ದೇಶ ಸಂಪೂರ್ಣ ನೆಲಕಚ್ಚಿತ್ತು. ಇದೀಗ, ಅದೇ ಆರ್ ಬಿಐ ಮತ್ತೊಂದು ಮಹತ್ವದ ಸತ್ಯ ಸಂಗತಿಯನ್ನು ಬಯಲುಮಾಡಿದ್ದು, ನೋಟು ರದ್ದತಿಯಂತಹ ದೇಶದ ಜನಜೀವನ ಮತ್ತು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ನಿರ್ಧಾರಕೈಗೊಳ್ಳುವ ಮುನ್ನ ಪ್ರಧಾನಿ ಮೋದಿಯವರು ಹಣಕಾಸು ವ್ಯವಸ್ಥೆಯ ನಿರ್ವಹಣೆಯ ಪರಮೋಚ್ಛ ಸಂಸ್ಥೆಯಾದ ಆರ್ ಬಿಐನ ಅನುಮತಿಯನ್ನೇ ಪಡೆದಿರಲಿಲ್ಲ ಎಂಬ ಸತ್ಯಾಂಶ ಬಯಲುಮಾಡಿದೆ.
2016ರ ನವೆಂಬರ್ 8ರಂದು ಪ್ರಧಾನಿ ಮೋದಿಯವರು ತಮ್ಮ ಬಹುದೊಡ್ಡ ಹೆಗ್ಗಳಿಕೆಯ ದಿಟ್ಟ ನಿರ್ಧಾರ ಎಂದು ಸ್ವಯಂ ಶ್ಲಾಘಿಸಿಕೊಳ್ಳುವ ನೋಟು ರದ್ದತಿ ಘೋಷಣೆ ಮಾಡುವ ಎರಡೂವರೆ ಗಂಟೆ ಮುನ್ನವಷ್ಟೇ ಆರ್ ಬಿ ಐ ನಿರ್ದೇಶಕ ಮಂಡಳಿ ಆ ಬಗ್ಗೆ ಚರ್ಚಿಸಲು ಸಭೆ ಸೇರಿತ್ತು. ನೋಟು ರದ್ದತಿಯ ತಮ್ಮ ನಿರ್ಧಾರದ ಹಿಂದಿನ ಮೂರು ಪ್ರಮುಖ ಉದ್ದೇಶಗಳು ಎಂದು ಮೋದಿ ಸರ್ಕಾರ ಹೇಳಿದ್ದ, ಕಪ್ಪು ಹಣಕ್ಕೆ ಕಡಿವಾಣ, ಖೋಟಾ ನೋಟು ಚಲಾವಣೆಗೆ ಇತಿಶ್ರೀ ಹಾಗೂ ಭಯೋತ್ಪಾದಕರ ಹಣಕಾಸು ಸರಬರಾಜು ಕಡಿತದ ಬಗ್ಗೆ ಸಭೆಯಲ್ಲಿ ಕೆಲವು ನಿರ್ದೇಶಕರು ಆಕ್ಷೇಪವೆತ್ತಿದ್ದರು. ನಿಜವಾಗಿಯೂ ಆ ಉದ್ದೇಶಗಳು ಈ ನಿರ್ಧಾರದಿಂದ ಈಡೇರಲಾರವು ಎಂಬುದು ಅವರ ಪ್ರಮುಖ ಆಕ್ಷೇಪವಾಗಿತ್ತು. ಆದರೆ, ಸಭೆಯಲ್ಲಿ ಆ ಬಗ್ಗೆ ಚರ್ಚೆ ನಡೆದು ನೋಟು ರದ್ದತಿ ಪ್ರಸ್ತಾವನೆಗೆ ಅನುಮೋದನೆ ನೀಡುವ ಮೊದಲೇ ಅಂದು ಮೋದಿ ಅವರು ನೋಟು ರದ್ದತಿ ಘೋಷಣೆ ಮಾಡಿಬಿಟ್ಟಿದ್ದರು ಎಂದು ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ಇದೀಗ ಆರ್ ಬಿ ಐ ಸ್ಪಷ್ಟಪಡಿಸಿದೆ.
ನೋಟು ರದ್ದತಿ ಘೋಷಣೆ ಹೊರಬಿದ್ದ ಮೊದಲ ವಾರದಲ್ಲೇ ಆರ್ ಬಿಐ ಸಭೆಯ ನಡಾವಳಿಯ ಕುರಿತ ಮಾಹಿತಿ ಕೋರಿ ಆರ್ ಟಿ ಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬುವರು ಮಾಹಿತಿ ಕಾಯ್ದೆಯಡಿ ಅರ್ಜಿಸಲ್ಲಿಸಿದ್ದರೂ, ಆರಂಭದಲ್ಲಿ ಆ ಮಾಹಿತಿ ನೀಡಲು ನಿರಾಕರಿಸಿದ್ದ ಆರ್ ಬಿ ಐ ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ದೇಶದಲ್ಲಿ ಕಪ್ಪುಹಣ ಬಹುತೇಕ ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿದೆ. ಹಾಗಾಗಿ ನೋಟು ರದ್ದತಿಯಿಂದ ಕಪ್ಪುಹಣ ನಿರ್ಮೂಲನೆ ಸಾಧ್ಯವಿಲ್ಲ. ಹಾಗೂ ದೇಶದಲ್ಲಿ ಒಟ್ಟಾರೆ ಚಲಾವಣೆಯಲ್ಲಿರುವ ಖೋಟಾ ನೋಟುಗಳ ಪ್ರಮಾಣ ಒಟ್ಟು ಚಲಾವಣೆಯಲ್ಲಿರುವ ನೋಟುಗಳಿಗೆ ಹೋಲಿಸಿದರೆ ಕೇವಲ ಶೇ.0.02ರಷ್ಟು ಮಾತ್ರ. ಇನ್ನು ಭಯೋತ್ಪಾದನೆಯ ಹಣಕಾಸು ಹರಿವು ಕಡಿತದ ಕಾರಣ ಕೂಡ ಸಮಂಜಸವಲ್ಲ ಎಂಬ ಅಭಿಪ್ರಾಯ ಆರ್ ಬಿಐ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಸಭೆ ನಡೆಯುತ್ತಿರುವಾಗಲೇ, ಪ್ರಧಾನಿಯವರು ಅವಸರದಲ್ಲಿ ನಿರ್ಧಾರ ಪ್ರಕಟಿಸಿದ್ದರು. ಆ ಬಳಿಕ, ಸಭೆ ನೋಟು ರದ್ದತಿಗೆ ಅನುಮೋದನೆ ನೀಡಿತ್ತು. ಆ ಅನುಮೋದನೆಯನ್ನು ಆರ್ ಬಿಐ ನೋಟು ರದ್ದತಿ ಘೋಷಣೆಯಾದ 38 ದಿನಗಳ ಬಳಿಕ ಸರ್ಕಾರಕ್ಕೆ ಸಲ್ಲಿಸಿತ್ತು ಎಂಬ ಅಂಶವನ್ನೂ ಆರ್ ಬಿಐ ಹೇಳಿದೆ.
ಅಂದರೆ; ನೋಟು ರದ್ದತಿಯ ದಿನ ಮೋದಿಯವರು ಹೇಳಿದ್ದ ಪ್ರಮುಖ ಮೂರೂ ಉದ್ದೇಶ(ಕಪ್ಪುಹಣ ನಿರ್ಮೂಲನೆ, ಖೋಟಾ ನೋಟು ನಾಶ ಹಾಗೂ ಭಯೋತ್ಪಾದನೆ ಹಣಕಾಸು ಕಡಿತ)ಗಳನ್ನೂ ಆರ್ ಬಿಐ ಒಪ್ಪಿರಲಿಲ್ಲ. ಇಂತಹ ಸಾಧುವಲ್ಲದ ಉದ್ದೇಶಗಳನ್ನು ಉಲ್ಲೇಖಿಸಿ ನೋಟು ರದ್ದತಿ ಮಾಡುವುದರಿಂದ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಸ್ವತಃ ಆರ್ ಬಿ ಐ ನಿರ್ದೇಶಕರಲ್ಲೇ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ದೇಶದ ಹಣಕಾಸು ವ್ಯವಸ್ಥೆಯ ಹೊಣೆಗಾರ ಪರಮೋಚ್ಛ ಸಂಸ್ಥೆಯ ಅಭಿಪ್ರಾಯ ಪಡೆಯುವ ಮುನ್ನವೇ ಮೋದಿಯವರ ನೋಟು ರದ್ದತಿ ಘೋಷಿಸಿ ದೇಶದ ಅರ್ಥವ್ಯವಸ್ಥೆ ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಸರ್ಜಿಕಲ್ ದಾಳಿ ನಡೆಸಿಬಿಟ್ಟರು ಎಂಬುದು ಇದೀಗ ಸಾಬೀತಾಗಿದೆ.
ಮೋದಿಯವರ ವರ್ಚಸ್ಸು ನಿರ್ಮಾಣದ ಪಿಆರ್ ಒ ಸರ್ಕಸ್ಸು ಎಂಬ ಗಂಭೀರ ಟೀಕೆಗೆ ಕಾರಣವಾದ ನೋಟು ರದ್ದತಿಯ ಮೂಲಕ, ಪ್ರಧಾನಿ ದೇಶದಲ್ಲಿ ಚಲಾವಣೆಯಲ್ಲಿದ್ದ ಒಟ್ಟು ನಗದು ಪೈಕಿ ಶೇ.86ರಷ್ಟಿದ್ದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಏಕಾಏಕಿ ಬೆಲೆರಹಿತ ಕಾಗದ ಚೂರು ಮಾಡಿದ್ದರು. ಒಟ್ಟು 15.42 ಲಕ್ಷ ಕೋಟಿ ಮೌಲ್ಯದ ನಗದು ಹಣ ದಿಢೀರನೇ ಮೌಲ್ಯ ಕಳೆದುಕೊಂಡು, ಹಣಕಾಸು ಮಾರುಕಟ್ಟೆಯಿಂದ ಹೊರಬಿದ್ದಿತ್ತು. ಘೋಷಿತ ಉದ್ದೇಶಗಳು ಈಡೇರಿ, ಸುಮಾರು 5 ಲಕ್ಷ ಕೋಟಿಯಷ್ಟು ಹಣ ಬ್ಯಾಂಕುಗಳಿಗೆ ವಾಪಸು ಬರಲಾರದು ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ಆದರೆ, ಬಹಳಷ್ಟು ವಿಳಂಬದ ಬಳಿಕ ಕಳೆದ ವರ್ಷದ ಆಗಸ್ಟ್ ನಲ್ಲಿ ಆರ್ ಬಿಐ ಬಿಡುಗಡೆ ಮಾಡಿದ ನೋಟು ರದ್ದತಿ ಕುರಿತ ವರದಿಯಲ್ಲಿ ಆ ನಿರೀಕ್ಷೆ ತಲೆಕೆಳಗಾಗಿತ್ತು. ಆರ್ ಬಿಐ ಪ್ರಕಾರ, ರದ್ದಾದ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸು ಬಂದಿತ್ತು.
ನೋಟು ರದ್ದತಿಯಂತಹ ಅವಾಸ್ತವಿಕ ಮತ್ತು ಆತ್ಮಾಹತ್ಯಾತ್ಮಕ ನಡೆಯ ಮೂಲಕ ಮೋದಿ ಅವರು ದೇಶದ 10 ಕೋಟಿ ಜನಸಾಮಾನ್ಯರ, ಬಡವರ ಬದುಕಿನ ಮೇಲೆ ನೇರ ದಾಳಿ ಮಾಡಿದ್ದಾರೆ. ನಿತ್ಯ ದುಡಿದು ತಿನ್ನುವ ಕೂಲಿಕಾರ್ಮಿಕರು, ಚಿಲ್ಲರೆ ವ್ಯಾಪಾರಿಗಳು, ನಗದು ಮೇಲೆಯೇ ನಿತ್ಯದ ವ್ಯವಹಾರ ನಡೆಸುವ ಕೃಷಿಕರ ಬದುಕು ಮೂರಾಬಟ್ಟೆಯಾಗಿದೆ ಎಂದು ಪ್ರತಿಪಕ್ಷಗಳಷ್ಟೇ ಅಲ್ಲ; ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು ಕೂಡ ಮೋದಿ ನಡೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಕೇವಲ ಶೇ.6ರಷ್ಟು ಪ್ರಮಾಣದ ಕಪ್ಪುಹಣ ಮಾತ್ರ ನಗದು ರೂಪದಲ್ಲಿದೆ ಮತ್ತು ಒಟ್ಟು ಚಲಾವಣೆಯಲ್ಲಿರುವ ನಗದು ಪೈಕಿ ಶೇ.0.02ರಷ್ಟು ಮಾತ್ರ ಖೋಟಾ ನೋಟು ಇವೆ. ಇನ್ನು ನಗದು ಹರಿವಿಗೂ ಭಯೋತ್ಪಾದನೆಗೂ ಇರುವ ನಂಟಿನ ಬಗ್ಗೆ ಯಾವ ಖಚಿತ ಅಂಕಿಅಂಶಗಳೂ ಇಲ್ಲ. ಹಾಗಿರುವಾಗ, ಈ ಮೂರು ಕಾರಣಗಳನ್ನು ಮುಂದಿಟ್ಟುಕೊಂಡು, ಅವುಗಳ ಮೇಲೆ ಸರ್ಜಿಕಲ್ ದಾಳಿ ನಡೆಸುವೆ ಎಂದು ಪ್ರಧಾನಿ ಮೋದಿ ನಡೆಸಿದ ಈ ದಾಳಿ, ನಿಜವಾಗಿಯೂ ಬಲಿತೆಗೆದುಕೊಂಡಿದ್ದು ದೇಶದ ಉದ್ಯೋಗ ಮಾರುಕಟ್ಟೆಯನ್ನು ಎಂಬುದು ಬಹುತೇಕ ಆರ್ಥಿಕ ತಜ್ಞರ ಅಭಿಪ್ರಾಯವಾಗಿತ್ತು.
ದೇಶ ಪ್ರಮುಖ ಉದ್ಯೋಗ ವಲಯಗಳಾದ ಕೃಷಿ, ಉತ್ಪಾದನೆ ಮತ್ತು ನಿರ್ಮಾಣ ವಲಯಗಳ ಬೆಳವಣಿಗೆ ದರವನ್ನು ಶೇ.50ರಷ್ಟು ಕಡಿತ ಮಾಡಿದ ಕುಖ್ಯಾತಿ ನೋಟು ರದ್ದತಿಗೆ ಸಲ್ಲುತ್ತದೆ. ನೋಟು ರದ್ದತಿಗೆ ಮುನ್ನ ಶೇ.8ರಷ್ಟಿದ್ದ ಈ ಮೂರೂ ವಲಯಗಳ ಬೆಳವಣಿಗೆ ದರ, ಆ ಬಳಿಕದ ತ್ರೈಮಾಸಿಕದಲ್ಲಿ ದಿಢೀರನೇ ಶೇ.4.6ಕ್ಕೆ ಕುಸಿಯಿತು ಎಂದು ಮುಂಬೈ ಮೂಲದ ಆರ್ಥಿಕ ತಜ್ಞ ಪ್ರವೀಣ್ ಚಕ್ರವರ್ತಿ ‘ಬಿಬಿಸಿ’ಯಲ್ಲಿ ಪ್ರಕಟವಾದ ತಮ್ಮ ವಿಶ್ಲೇಷಣೆಯಲ್ಲಿ ಅಭಿಪ್ರಾಯಪಟ್ಟಿದ್ದರು.
ಮೋದಿಯವರ ಹೆಗ್ಗಳಿಕೆಯ ನೋಟು ರದ್ದತಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವಾಗಿತ್ತು ಎಂಬುದನ್ನು ಸ್ವತಃ ಆರ್ ಬಿ ಐ ವರದಿಯೇ ಅಧಿಕೃತವಾಗಿ ಹೇಳಿತ್ತು. ನೋಟು ರದ್ದತಿಯಿಂದಾಗಿ ದೇಶದಲ್ಲಿ ಅನುಕೂಲವಾಗಿದ್ದು ಬ್ಯಾಂಕುಗಳಿಗೆ ಮಾತ್ರ, ಭಾರೀ ಪ್ರಮಾಣದ ಎನ್ ಪಿಎಯಿಂದ ಇನ್ನೇನು ಕುಸಿಯಲಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ದಿಢೀರನೇ ಹರಿದು ಬಂದ ಬರೋಬ್ಬರಿ 15 ಲಕ್ಷ ಕೋಟಿ ನಗದು, ಆ ಅಪಾಯದಿಂದ ಅವುಗಳನ್ನು ಉಳಿಸಿತು. ಅಸಲಿಗೇ ಮೋದಿಯವರ ಉದ್ದೇಶ ಕೂಡ ಬ್ಯಾಂಕುಗಳನ್ನು ಪೊರೆಯುವುದೇ ಆಗಿತ್ತು ಎಂಬ ಮಾತುಗಳೂ ಆಗ ಕೇಳಿಬಂದಿದ್ದವು.
ಆದರೆ, ಅಂತಹದ್ದೊಂದು ವಿವೇಚನಾರಹಿತ ನಡೆಯ ಪರಿಣಾಮವಾಗಿ ದೇಶಾದ್ಯಂತ ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಆದ ಜನಜಂಗುಳಿ ಕಾಲ್ತುಳಿದಲ್ಲಿ 100ಕ್ಕೂ ಹೆಚ್ಚು ಮಂದಿ ಬಡವರು ಜೀವ ಕಳೆದುಕೊಂಡರು. ಕೋಟ್ಯಂತರ ಮಂದಿ ತಮ್ಮ ನಿತ್ಯದ ದುಡಿಮೆ ಮತ್ತು ಬದುಕನ್ನೇ ಕಳೆದುಕೊಂಡರು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. ಇಡೀ ದೇಶದ ಆರ್ಥಿಕ ವೃದ್ಧಿ ದರ ಶೇ.2ರಷ್ಟು ಕುಸಿಯಿತು. ಜಿಡಿಪಿ ದರಕ್ಕೆ ಪೆಟ್ಟು ಬಿತ್ತು. ಒಟ್ಟಾರೆ ಇಡೀ ದೇಶದ ಬದುಕು ಮತ್ತು ಆರ್ಥಿಕತೆ ಹೈರಾಣಾಯಿತು. ಇತಿಹಾಸ ನಿರ್ಮಿಸುವ ಹುಂಬತನದ ನಿರ್ಧಾರದಿಂದಾಗಿ ಆದ ಆ ಗಾಯ ಮಾಯಲು ಇನ್ನೂ ದಶಕಗಳೇ ಬೇಕಾಗಬಹುದು ಎಂದು ಆರ್ ಬಿ ಐ ಮಾಜಿ ಗವರ್ನರ್ ಕೂಡ ಹೇಳಿದರು!