ದೇಶದ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದೊಂದಿಗೆ ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗ್ಗೆ ಬಿಎಸ್ ಪಿ ನಾಯಕರೊಂದಿಗೆ ಸಭೆ ನಡೆಸಿದ ನಂತರ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಮಾಯಾವತಿ ಅವರು ತಮ್ಮ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿಯನ್ನು ಮಣಿಸಲು ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷಗಳು ತಮ್ಮ ನಡುವಿನ ಭಿನ್ನಮತ ಮರೆತು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ. ಆದರೆ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮಾಯಾವತಿ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ಬಿಎಸ್ ಪಿ ಗಳಿಕೆಯ ಮತಗಳನ್ನು, ಕ್ಷೇತ್ರಗಳನ್ನು ಬಿಎಸ್ ಪಿಗೆ ಹಸ್ತಾಂತರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊದಿಗೆ ಬಿಎಸ್ ಪಿ ಮೈತ್ರಿ ಕೊಳ್ಳುತ್ತದೆ ಎಂದು ಮಾಯಾವತಿ ಅವರು ಜನವರಿಯಲ್ಲೆ ಹೇಳಿದ್ದರು. ಅದರಂತೆ ಈಗ ಕಾಂಗ್ರೆಸ್ನೊಂದಿಗೆ ಮೈತ್ರಿ ಅಲ್ಲಗಳೆದು ಸಮಾಜವಾದಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಒಂದು ಕಡೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಸೋಲಿಸಲು ಇತರೆಲ್ಲಾ ಪಕ್ಷಗಳು ಒಂದಾಗಿ ಮಹಾಮೈತ್ರಿಯ ಮೂಲಕ ಲೋಕಸಭಾ ಚುನಾವಣೆ ಎದುರಿಸುವ ಪ್ರಯತ್ನಗಳು ನಡೆದಿದೆ. ಮತ್ತೊಂದು ಕಡೆ ಇದಕ್ಕೆ ವ್ಯತಿರಿಕ್ತವಾಗಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಎಎಪಿಯೊಂದಿಗೆ ಹೊಂದಾಣಿಕೆಗೆ ಒಪ್ಪದಿರುವುದು, ಹಾಗೆಯೇ ಮಾಯಾವತಿಯವರು ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆಯನ್ನು ಅಲ್ಲಗಳೆದಿರುವುದು ರಾಷ್ಟ್ರಮಟ್ಟದ ಮಹಾಮೈತ್ರಿಗೆ ಹಿನ್ನಡೆಯಾಗುವುದಂತೂ ನಿಜ.
ಯಾವ ರಾಜ್ಯದಲ್ಲೂ ಕಾಂಗ್ರೆಸ್ ನೊಂದಿಗೆ ಬಿಎಸ್ ಪಿ ಮೈತ್ರಿ ಇಲ್ಲ: ಮಾಯಾವತಿ ಸ್ಪಷ್ಟನೆ
ಉತ್ತರ ಪ್ರದೇಶದಲ್ಲಿರುವ ಬಿಜೆಪಿಯನ್ನು ಮಣಿಸಲು ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷಗಳು ತಮ್ಮ ನಡುವಿನ ಭಿನ್ನಮತ ಮರೆತು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ
