ಅಂತೂ ದೇಶದ ಅನೇಕರು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ‘ಪ್ರಿಯಾಂಕಾ ಗಾಂಧಿಯವರ ಮೊಟ್ಟ ಮೊದಲ ಚುನಾವಣಾ ಪ್ರಚಾರ ಭಾಷಣ ಇಂದು ಜರುಗಿತು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿ ಜವಾಬ್ದಾರಿ ಹೊತ್ತುಕೊಂಡ ನಂತರದಲ್ಲಿ ಮೊತ್ತ ಮೊದಲ ಬಾರಿಗೆ ಇಂದು ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿದ ಮಾತನಾಡಿದ ಪ್ರಿಯಾಂಕಾ ಗಾಂಧಿ ದೇಶದ ಗಮನ ಸೆಳೆದರು.
ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದರು.
ಪ್ರಿಯಾಂಕಾ ಗಾಂಧಿ ಪೋಡಿಯಂ ಬಳಿ ಬರುತ್ತಲೇ ಜನರೆಲ್ಲಾ, “ಇಂದಿರಾ ಗಾಂಧಿ ಜಿಂದಾಬಾದ್’ ಎಂದು ಘೋಷಣೆ ಹಾಕುತ್ತಿದ್ದುದಕ್ಕೂ ಪ್ರಿಯಾಂಕಾ ಅವರ ಮಾತಿನ ಶೈಲಿ, ದೇಹ ಭಾಷೆ ಎಲ್ಲವೂ ಇಂದಿರಾ ಅವರನ್ನೇ ಹೋಲುತ್ತಿದ್ದುದಕ್ಕೂ ಸಮವಾಯಿತು.
ನೆರೆದ ಸಹಸ್ರಾರು ಜನರನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದು ಕೇವಲ ಏಳು ನಿಮಿಷ ಮಾತ್ರ. ಆದರೆ ಒಂದೇ ಒಂದು ಪದವನ್ನು ಯಾರನ್ನಾದರೂ ನಿಂದಿಸಲಾಗಲೀ, ವ್ಯಂಗ್ಯ ಮಾಡಲಾಗಲೀ ಬಳಸದೇ ನೇರವಾಗಿ ತಮ್ಮ ಹೃದಯದಿಂದಲೇ ಮಾತಾಡಿದರು. ‘ನಾನು ಭಾಷಣ ಮಾಡುವುದಿಲ್ಲ, ನನ್ನ ಹೃದಯಿಂದ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ’ ಎಂದೇ ತಮ್ಮ ಭಾಷಣ ಶುರುಮಾಡಿದರು ಇಂದಿರಮ್ಮನ ಮೊಮ್ಮಗಳು.
ಯಾರನ್ನೂ ನಿಂದಿಸದೇ ಹೋದರೂ ಆಡಳಿತ ಪಕ್ಷವನ್ನು ಕಟುವಾಗಿಯೇ ವಿಮರ್ಶೆಗೊಳಪಡಿಸಿದರು. ಮೋದಿ ಸರ್ಕಾರ ಪೂರೈಸಲಾಗದ ಆಶ್ವಾಸನೆಗಳನ್ನು ಉಲ್ಲೇಖಿಸಿ ಮಾತಾಡಿದರು. ಇಂದು ದೇಶದಲ್ಲಿ ಏನಾಗುತ್ತೆದೆಯೋ ಅದನ್ನೆಲ್ಲಾ ನೋಡಿ ದುಃಖವಾಗುತ್ತಿದೆ ಎಂದರು.
“ನಾನು ಗುಜರಾತಿಗೆ ಕಾಲಿಟ್ಟಿದ್ದು ಇದೇ ಮೊದಲು. ಹಾಗೆಯೇ ಗಾಂಧೀಜಿಯವರ ಸಬರಮತಿ ಆಶ್ರಮಕ್ಕೂ ಇಂದು ಬೆಳಿಗ್ಗೆ ಭೇಟಿ ನೀಡಿದೆ. ಅಲ್ಲಿ ಭಜನೆ ಕೇಳಿಕೊಂಡು ಮರವೊಂದರ ಕೆಳಗೆ ಕುಳಿತಿದ್ದಾಗ ನನ್ನ ಮನಸ್ಸಿನಲ್ಲಿ ಅಂದು ಈ ದೇಶವನ್ನು ಕಟ್ಟಿದ ದೇಶಭಕ್ತರ ತ್ಯಾಗ, ಬಲಿದಾನಗಳೆಲ್ಲಾ ಬಂದವು. ಈ ದೇಶವನ್ನು ಪ್ರೇಮ ಮತ್ತು ಸಹಬಾಳ್ವೆಯ ತಳಹದಿಯ ಮೇಲೆ ಕಟ್ಟಲಾಗಿದೆ ಎಂದು ನಾನು ನಂಬಿದ್ದೇನೆ. ಆದರೆ ಇಂದು ಈ ದೇಶದಲ್ಲಿ ಏನಾಗಿದೆ ಎಂದು ನೋಡಿದರೆ ನನಗೆ ದುಃಖ ಉಮ್ಮಳಿಸುತ್ತದೆ’ ಎಂದರು.
I realised that this country is built with love and harmony. I feel sad at the current situation of the country. There is no better nationalism than being aware. Your vote is your weapon: GS UP East @priyankagandhi #GandhiMarchesOn pic.twitter.com/48o3nQMQ7x
— Congress (@INCIndia) March 12, 2019
‘ಇಂದು ನಿಜವಾದ ದೇಶಭಕ್ತಿ ಎಂದರೆ ನೀವು ತೋರುತ್ತಿರುವ ಜಾಗೃತಿಯೇ ಹೊರತು ಬೇರೇನಲ್ಲ. ಈ ಜಾಗೃತಿಯೇ ಒಂದು ಪ್ರಬಲ ಸಾಧನ, ನೀವು ಚಲಾಯಿಸುವ ಮತವೇ ಒಂದು ನಿಮ್ಮ ಕೈಯಲ್ಲಿನ ಒಂದು ಅಸ್ತ್ರವಾಗಿದೆ’ ಎಂದ ಪ್ರಿಯಾಂಕಾ ‘ನೀವು ಚುನಾವಣೆಯ ಮೂಲಕ ಆಯ್ಕೆ ಮಾಡುವುದು ನಿಮ್ಮ ಭವಿಷ್ಯವನ್ನು ಎಂಬುದು ನೆನಪಿನಲ್ಲಿಡಿ ಎಂದು ಕಿವಿಮಾತು ಹೇಳಿದರು.
ಮೋದಿ ಸರ್ಕಾರದ ವೈಫಲ್ಯಗಳನ್ನು ಬೊಟ್ಟು ಮಾಡಿದ ಪ್ರಿಯಾಂಕಾ, ‘ನಮ್ಮ ಯುವಕರಿಗೆ ಉದ್ಯೋಗ ಸಿಗದಾಗುತ್ತಿರುವುದು ಯಾಕೆ? ಮಹಿಳೆಯರಿಗೆ ರಕ್ಷಣೆ ಯಾಕೆ ಸಿಗುತ್ತಿಲ್ಲ? ರೈತರ ಸಮಸ್ಯೆಗಳು ಯಾಕೆ ನೀಗುತ್ತಿಲ್ಲ’ ಇವು ನಿಮಗೆಲ್ಲಾ ಚುನಾವಣೆಯ ವಿಷಯಗಳಾಗಬೇಕಿದೆ’ ಎಂದರು.
ಐದು ವರ್ಷಗಳ ಹಿಂದೆ ದೊಡ್ಡ ದೊಡ್ಡ ಮಾತುಗಳನ್ನಾಡಿದ್ದವರಿಗೆ ನೀವೀಗ ಪ್ರಶ್ನಿಸಬೇಕು. ನೀವು ಭರವಸೆ ನೀಡಿದ್ದ ವರ್ಷಕ್ಕೆರಡು ಕೋಟಿ ಉದ್ಯೋಗ ಎಲ್ಲಿ ಎಂದು ಕೇಳಬೇಕು, ನಿಮ್ಮ ಅಕೌಂಟಿಗೆ ಹಾಕುತ್ತೇವೆ ಎಂದಿದ್ದ 15 ಲಕ್ಷ ಎಲ್ಲಿ ಎಂದು ಕೇಳಬೇಕು, ಮಹಿಳೆಯರ ಸುರಕ್ಷತೆ ಬಗ್ಗೆ ಕೇಳಬೇಕು’ ಎಂದು ಹೇಳಿದರು.
‘ನೀವು ನಿಮ್ಮ ಎಚ್ಚರ ಕಾಪಾಡಿಕೊಂಡರೆ ಅದೇ ಈ ದೇಶವನ್ನು ಕಾಪಾಡುತ್ತದೆ’ ಎಂದರು.
“ಈ ದೇಶವನ್ನು ರಕ್ಷಿಸಿಕೊಳ್ಳುವುದಕ್ಕಿಂತ ನಮಗೆ ಬೇರೆ ಯಾವುದೂ ಮುಖ್ಯವಲ್ಲ, ಇದಕ್ಕಾಗಿ ನಾವೆಲ್ಲರೂ ಜೊತೆಗೂಡಿ ಕೆಲಸ ಮಾಡೋಣ” ಎಂದು ಹೇಳಿ ತಮ್ಮ ಚಿಕ್ಕ ಚೊಕ್ಕ ಭಾಷಣವನ್ನು ಮುಗಿಸಿದರು.
ಪ್ರಿಯಾಂಕಾ ಗಾಂಧಿಯವರ ನಂತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಯವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದರು. “15 ಜನ ಕೈಗಾರಿಕೋದ್ಯಮಿಗಳಿಗೆ 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೋದಿಯವರಿಗೆ ರೈತರ ಸಾಲ ಮನ್ನಾ ಮಾಡಲು ಯಾಕೆ ಆಗಲಿಲ್ಲ? ನಮ್ಮ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಹೇಳುವ ಪ್ರಕಾರ ‘ರೈತರ ಸಾಲ ಮನ್ನಾ ಮಾಡುವುದು ಅವರ ಸರ್ಕಾರದ ನೀತಿ ಅಲ್ಲವೇ ಅಲ್ಲವಂತೆ’ ಎಂದು ಮಾತಿನ ಚಾಟಿ ಬೀಸಿದರು. ‘ಮೋದಿ ಹೋದಲ್ಲೆಲ್ಲಾ ದೇಶಭಕ್ತಿಯ ಉಪದೇಶ ಮಾಡುತ್ತಾರೆ, ರಾಫೇಲ್ ಡೀಲ್ ನಡೆಸಿ ನಮ್ಮ ದೇಶದ ವಾಯುಪಡೆಗಳಿಗೆ ಅವರು ಮಾಡಿದ ವಂಚನೆ ಬಗ್ಗೆ ಅವರು ಹೇಳುವುದಿಲ್ಲ. ವಿಮಾನ ತಯಾರಿಕೆಯಲ್ಲಿ ಸಾಸಿವೆಯಷ್ಟೂ ಅನುಭವವಿಲ್ಲದ ಅಂಬಾನಿಯ ಬೋಗಸ್ ಕಂಪನಿಗೆ ರಾಫೇಲ್ ಡೀಲ್ ಒಪ್ಪಿಸಿದ್ದಾದರೂ ಯಾಕೆ ಎಂದು ಮೋದಿ ಹೇಳುತ್ತಲೇ ಇಲ್ಲ” ಎಂದರು.
TruthIndia ಕನ್ನಡ