ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಉಗ್ರ ಹೋರಾಟದ ಮೂಲಕ ದೇಶದ ಗಮನ ಸೆಳೆದಿದ್ದ ಹಾರ್ದಿಕ್ ಪಟೇಲ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ
ಗುಜರಾತ್ ನ ಗಾಂಧಿನಗರದ ಅದಲಜ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ರ್ಯಾಲಿ ಹಾಗೂ ಪಕ್ಷದ ಕಮಿಟಿ ಸಭೆಯಲ್ಲಿ ಹಾರ್ದಿಕ್ ಅವರು ಪಕ್ಷಕ್ಕೆ ಸೇರ್ಪಡೆಯಾಯಾಗಿದ್ದಾರೆ.
ಕಾಂಗ್ರೆಸ್ ಸೇರುವ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಹಾರ್ದಿಕ್ ಪಟೇಲ್, ‘ಇನ್ನು ಮುಂದೆ ಇನ್ನಷ್ಟು ಉತ್ತಮವಾಗಿ ಗುಜರಾತ್ ನ ಆರು ಕೋಟಿ ಜನತೆಯ ಸೇವೆ ಮಾಡಬಹುದು’ ಎಂದರು. ರ್ಯಾಲಿಗೆ ಬಂದಿದ್ದ ಜನತೆಯನ್ನುದ್ದೇಶಿ ನನ್ನ ನಿರ್ಧಾರ ಸರಿಯೇ ? ಎಂದು ಹಾರ್ದಿಕ್ ಪ್ರಶ್ನಿಸಿದಾಗ, ನೆರೆದಿದ್ದ ಜನತೆ ಎಲ್ಲರೂ “ಹೌದು” ಎಂದು ಪ್ರತಿಕ್ರಿಯಿಸಿದರು.
ನಂತರ ರಾಹುಲ್ ಗಾಂಧಿ ಅವರನ್ನುದ್ದೇಶಿ ಮಾತನಾಡಿದ ಹಾರ್ದಿಕ್, “ರಾಹುಲ್ ಗಾಂಧಿ ಅವರು ಬಹಳ ಪ್ರಾಮಾಣಿಕರು ಆದ್ದರಿಂದಲೇ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದೆ. ಅಲ್ಲದೇ, ಅವರಿಗೆ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುವ ಉದ್ದೇಶವಿಲ್ಲ” ಎಂದು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಹಾರ್ದಿಕ್, ಈ ಮೊದಲು ಕಾಂಗ್ರೆಸ್ ಫೆಬ್ರವರಿ 28ರಂದು ಗುಜರಾತ್ ನಲ್ಲಿ ರ್ಯಾಲಿ ನಡೆಸಲು ಉದ್ದೇಶಿಸಿತ್ತು. ಆದರೆ, ಪುಲ್ವಾಮ ದಾಳಿಯಿಂದಾಗಿ ಅದನ್ನು ರದ್ದು ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ಮಾತ್ರ ದೇಶಾದ್ಯಂತ ಚುನಾವಣಾ ಪ್ರಚಾರ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
‘ದೇಶ ಹಾಗೂ ಸಮಾಜಕ್ಕಾಗಿ ಸೇವೆ ಸಲ್ಲಿಸುವ ನನ್ನ ಉದ್ದೇಶಕ್ಕೆ ಉತ್ತಮ ರೂಪ ನೀಡಲು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ಮಾರ್ಚ್ 12ರಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ’ ಎಂದು ಹಾರ್ದಿಕ್ ಪಟೇಲ್ ಎರಡು ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದರು. .
To give shape to my intentions to serve society & country, I have decided to join Indian National Congress on 12th March in presence of Shri Rahul Gandhi & other senior leaders.
— Hardik Patel (@HardikPatel_) March 10, 2019
ಯಾವುದೇ ಕಾನೂನಾತ್ಮಕ ತೊಡಕು ಬರದಿದ್ದರೆ ಮತ್ತು ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ದೇಶದ 125 ಕೋಟಿ ಜನರ ಸೇವೆಗೆ ಸಿದ್ಧನಿದ್ದೇನೆ ಎಂದೂ ಮತ್ತೊಂದು ಟ್ವೀಟ್ ಮೂಲಕ ದೇಶದ ಜನತೆಗೆ ತಮ್ಮ ನಿಲುವನ್ನು ತಿಳಿಸಿದ್ದಾರೆ.
25 ವರ್ಷದ ವಾಣಿಜ್ಯ ಪದವೀಧರ ಹಾರ್ದಿಕ್ ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ನಡೆಸಿದ ಹೋರಾಟದ ವೇಳೆ ತನ್ನ ಆಕ್ರೋಶಭರಿತ ಮಾತು ಹಾಗೂ ಪ್ರಬಲ ಭಾಷಣ ಶೈಲಿಯಿಂದ ಕೋಟ್ಯಂತರ ಬೆಂಬಲಿಗರು ಆತನ ಅನುಯಾಯಿಗಳಾಗಿದ್ದಾರೆ. ಕಳೆದ 2017ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗುಜರಾತಿನಲ್ಲಿ ಮೂರಂಕಿ ತಲುಪಲು ಬಹಳ ಕಷ್ಟಪಡಬೇಕಾಗಿ ಬಂದಿದ್ದರಲ್ಲಿ ಹಾರ್ದಿಕ್ ಪಟೇಲ್ ಕೊಡುಗೆಯೂ ಇತ್ತು. ಇವರೊಂದಿಗೆ ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಗುಜರಾತ್ ಬಿಜೆಪಿಯ ನಿದ್ದೆಗೆಡಿಸಿದ್ದಂತೂ ನಿಜ. ವಿಧಾನಸಭಾ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದರು. ತಾನೇ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಹಾರ್ದಿಕ್ ಪಟೇಲ್ ಗೆ ಇನ್ನೂ 25 ತುಂಬಿರಲಿಲ್ಲ. ಈಗ 25 ತುಂಬಿರುವುದರಿಂದ ಈ ಸಲ ತಾನು ಜಾಮನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಭಾನುವಾರ ಘೋಷಿಸಿದ್ದಾರೆ.
ಹಾರ್ದಿಕ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, “ಪಾಟೀದಾರ್ ಸಮುದಾಯದಲ್ಲಿ ಹಾರ್ದಿಕ್ ಪಟೇಲ್ ಎಂಬ ನಾಯಕನನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಪಾಟೀದಾರ್ ಹೋರಾಟ ಕಾಂಗ್ರೆಸ್ ಪಕ್ಷದ ಆಜ್ಞೆಯಂತೆ ನಡೆದದ್ದು. ಹಾರ್ದಿಕ್ ತನ್ನ ಸಮುದಾಯಕ್ಕೆ ಮೋಸ ಮಾಡಿದ್ದಾನೆ, ಯುವಜನತೆಯನ್ನು ತಪ್ಪುದಾರಿಗೆ ಎಳೆದಿದ್ದಾನೆ. ಆತ ಚುನಾವಣೆಗೆ ನಿಂತರೆ ಅವರ ಸಮುದಾಯವರೇ ತಕ್ಕ ಪಾಠ ಕಲಿಸುತ್ತಾರೆ,’’ ಎಂದು ಟೀಕಿಸಿದ್ದಾರೆ.
ಹಾರ್ದಿಕ್ ಗೆ 1200 ಕೋಟಿ ಆಮಿಷ ಒಡ್ಡಿದ್ದ ಬಿಜೆಪಿ
ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷನಾಗಲು ಭಾರತೀಯ ಜನತಾ ಪಕ್ಷ ತನಗೆ 1,200 ಕೋಟಿ ಆಫರ್ ನೀಡಿತ್ತು ಎಂದು ಸ್ವತಃ ಹಾರ್ದಿಕ್ ಪಟೇಲ್ ಬಹಿರಂಗಪಡಿಸಿದ್ದಾರೆ.
ತಾನು ಸೂರತ್ ಜಿಲ್ಲಾ ಕೇಂದ್ರೀಯ ಕಾರಾಗೃಹದಲ್ಲಿದ್ದಾಗ ದೇಶದ ಹಾಲಿ ಪ್ರಧಾನಿ, ಗುಜರಾತ್ ನ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ಕೈಲಾಶ್ ನಾಥನ್ ಅವರು ನನ್ನನ್ನು ಭೇಟಿ ಮಾಡಿ, ಭಾರೀ ಕೊಡುಗೆ ಹಾಗೂ ಬಿಜೆಪಿ ಯುವ ಘಟಕದ ಪ್ರಧಾನ ಹುದ್ದೆ ನೀಡುವುದಾಗಿ ಪ್ರ್ತಸಾಪಿಸಿದ್ದರು. ಈ ಮೂಲಕ ಎಲ್ಲಾ ಹೋರಾಟಗಳಿಗೂ ಅಂತ್ಯವಾಡುವಂತೆಯೂ ಪರೋಕ್ಷವಾಗಿ ಕೇಳಿಕೊಂಡಿದ್ದರು, ‘ಅಂದಿನ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಪರವಾಗಿ ಸಂಧಾನಕ್ಕೆ ಬಂದಿದ್ದ ಕೈಲಾಶ್ ನಾಥ್ (ಕೆಕೆ) ಅವರ ಬೇಡಿಕೆಯನ್ನು ನಾನು ಅಂದೇ ತಿರಸ್ಕರಿಸಿದ್ದೆ’ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಈ ಆರೋಪದ ಬಗ್ಗೆ ಸಾಕ್ಷಿ ಕೇಳಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವರದಿಗಾರರಿಗೆ ಪ್ರತಿಕ್ರಿಯಿಸಿದ ಹಾರ್ದಿಕ್, ಗುಜರಾತ್ ಸರ್ಕಾರಕ್ಕೆ ಧೈರ್ಯವಿದ್ದರೆ ಅಂದಿನ ಸಿಸಿಟಿವಿ ದ್ಯಶ್ಯಗಳನ್ನು ಬಹಿರಂಗಪಡಿಸಲಿ. ಆಗ ಎಲ್ಲಾ ಸತ್ಯಗಳು ಹೊರಬರಲಿದೆ ಎಂದು ಬಹಿರಂಗ ಸವಾಲು ಹಾಕಿದರು.