ಚುನಾವಣೆ ಘೋಷಣೆಯಾಗಿ ಮೂರು ದಿನ ಕಳೆದರೂ, ರಾಜ್ಯ ರಾಜಕಾರಣದಲ್ಲಿ ಇನ್ನೂ ಚುನಾವಣೆಯ ಬಿರುಸು ನಿಧಾನಗತಿಯಲ್ಲೇ ಇದೆ. ಬಿಜೆಪಿಯೇತರ ಮಹಾಮೈತ್ರಿಯ ಅಂಗಪಕ್ಷಗಳ ಮೈತ್ರಿ ಆಡಳಿತ ಮತ್ತು ಬಿಜೆಪಿಯ ದಕ್ಷಿಣ ಭಾರತದ ದಿಗ್ವಿಜಯಕ್ಕೆ ಹೆಬ್ಬಾಗಿಲು ಎಂದೇ ಬ್ರಾಂಡ್ ಆಗಿರುವ ರಾಜ್ಯದ ಲೋಕಸಭಾ ಚುನಾವಣೆ ಈ ಬಾರಿ ಹಲವು ಕಾರಣಗಳಿಗಾಗಿ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದೆ. ಆ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಾನಗಳಿಕೆ ಬಿಜೆಪಿಯ ಮಟ್ಟಿಗೆ ಎಷ್ಟು ಮುಖ್ಯವೋ ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷಗಳಿಗೂ ತಮ್ಮ ಬಲಪ್ರದರ್ಶನ ಮತ್ತು ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಅಧಿಕ ಸ್ಥಾನ ಗಳಿಸುವ ಅನಿವಾರ್ಯತೆ ಇದೆ.
ಆದರೆ, ಸೀಟು ಹಂಚಿಕೆ ವಿಷಯದಲ್ಲಿ ಇನ್ನು ಒಮ್ಮತಕ್ಕೆ ಬರಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟವಿದ್ದರೆ, ಸ್ವತಃ ಪ್ರಧಾನಿ ಮೋದಿಯವರೇ ಎರಡು ರ್ಯಾಲಿಗಳನ್ನು ಮಾಡಿಹೋದ ಬಳಿಕವೂ ಬಿಜೆಪಿ ರಾಜ್ಯ ನಾಯಕತ್ವ ನಿರೀಕ್ಷಿಸಿದ ಮಟ್ಟಕ್ಕೆ ಪಕ್ಷದ ಪರ ಅಲೆ ಎದ್ದಿಲ್ಲ. ಆ ಹಿನ್ನೆಲೆಯಲ್ಲಿ, ಸದ್ಯಕ್ಕೆ ರಾಜ್ಯದಲ್ಲಿ ಭರಾಟೆ ಕಾಣುತ್ತಿಲ್ಲ.
ಜೆಡಿಎಸ್ ಪ್ರಮುಖವಾಗಿ ಈ ಬಾರಿಯ ಚುನಾವಣೆಯನ್ನು ತನ್ನ ನೆಲೆ ವಿಸ್ತರಣೆಯ ಸದಾವಕಾಶವಾಗಿ ಬಳಸಿಕೊಳ್ಳುವ ನಿರ್ಧಾರದೊಂದಿಗೆ ತನ್ನ ಎರಡು ಸಂಸದ ಕ್ಷೇತ್ರಗಳನ್ನು ಹನ್ನೆರಡಕ್ಕೆ ಏರಿಸಿಕೊಳ್ಳಲು ಕಸರತ್ತು ನಡೆಸಿದ್ದು, ಹನ್ನೆಡರು ಕ್ಷೇತ್ರ ಬಿಟ್ಟುಕೊಡುವಂತೆ ಮಿತ್ರಪಕ್ಷ ಕಾಂಗ್ರೆಸ್ ಮೇಲೆ ಒತ್ತಡಹೇರಿತ್ತು. ಆದರೆ, ಹಲವು ಸುತ್ತಿನ ಮಾತುಕತೆ ಬಳಿಕ ಕಾಂಗ್ರೆಸ್ ಹತ್ತು ಸ್ಥಾನ ಬಿಟ್ಟುಕೊಡಲು ಸೈ ಎಂದಿದೆ. ಆದರೆ, ಹಾಲಿ ತನ್ನ ಸಂಸದರು ಪ್ರತಿನಿಧಿಸುತ್ತಿರುವ ಯಾವ ಕ್ಷೇತ್ರವನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ ಎಂದು ವರದಿಯಾಗಿದೆ.
ಆದರೆ, ತಮ್ಮ ಕ್ಷೇತ್ರ ಹಾಸನವನ್ನು ಒಬ್ಬ ಮೊಮ್ಮಗನಿಗೆ(ಪ್ರಜ್ವಲ್) ಬಿಟ್ಟುಕೊಟ್ಟಿರುವು ಗೌಡರು, ಇದೀಗ ಮಂಡ್ಯಕ್ಕೆ ಮತ್ತೊಬ್ಬ ಮೊಮ್ಮಗ ನಿಖಿಲ್ ರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಆದರೆ, ಸ್ವತಃ ತಮಗೆ ಯಾವ ಕ್ಷೇತ್ರ ಆಯ್ದುಕೊಳ್ಳುವುದು ಎಂಬ ಗೊಂದಲ ಅವರಿಗೆ ಎದುರಾಗಿದ್ದು, ತುಮಕೂರು, ಬೆಂಗಳೂರು ಉತ್ತರ, ಇಲ್ಲವೇ ಮೈಸೂರಿನಿಂದ ಕಣಕ್ಕಿಳಿಯುವಂತೆ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಕೋರಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಜೆಡಿಎಸ್ ಪಾಲಿಗೆ ಹಾಸನ, ಶಿವಮೊಗ್ಗ, ಮಂಡ್ಯ ಹಾಗೂ ಉತ್ತರಕನ್ನಡ ಕ್ಷೇತ್ರಗಳು ಮಾತ್ರ ಅಂತಿಮವಾಗಿದ್ದು, ಇನ್ನೂ ಕನಿಷ್ಠ ನಾಲ್ಕು ಕ್ಷೇತ್ರಗಳಿಗಾಗಿ ಜೆಡಿಎಸ್ ಪಟ್ಟು ಹಿಡಿದಿದೆ.
ಆ ಹಿನ್ನೆಲೆಯಲ್ಲಿ ಜೆಡಿಎಸ್ ಈಗ ತುಮಕೂರು, ಮೈಸೂರು-ಕೊಡಗು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ. ಆದರೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ, ಕೃಷ್ಣ ಭೈರೇಗೌಡ ಸೇರಿದಂತೆ ಪ್ರಮುಖ ನಾಯಕರು ಬೆಂಗಳೂರು ಉತ್ತರ ಹೊರತುಪಡಿಸಿ ಉಳಿದ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ಒಪ್ಪಬಾರದು ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರಿಗೆ ಸೋಮವಾರ ಮನವರಿಕೆ ಮಾಡಿದ್ದಾರೆ. ಆದರೆ, ಮೈತ್ರಿ ಕೂಟದ ಮೂಲಕ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಮಣಿಸುವ ವಿಸ್ತಾರ ನೆಲೆಯಲ್ಲಿ ಯೋಚಿಸುವ ಹೈಕಮಾಂಡ್, ಇನ್ನು ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರಕೈಗೊಳ್ಳಲಿದ್ದು, ಬಹುತೇಕ ತುಮಕೂರು, ಬೆಂಗಳೂರು ಉತ್ತರ, ವಿಜಯಪುರ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬಹುದು ಎಂಬ ಲೆಕ್ಕಚಾರ ಕೇಳಿಬರುತ್ತಿದೆ.
ಪ್ರಮುಖವಾಗಿ ಮೈತ್ರಿ ನಡುವೆ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ವಿಷಯದಲ್ಲಿ ಸಾಕಷ್ಟು ಕಸಿವಿಸಿಯಾಗಿದೆ. ಮೈಸೂರು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಹಾಗಾಗಿ ಅಲ್ಲಿ ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಇರಾದೆ ಅವರಿಗಿತ್ತು. ಆ ಮೂಲಕ ಕ್ಷೇತ್ರದ ಮೇಲಿನ ತಮ್ಮ ಹಿಡಿತ ಜೆಡಿಎಸ್ ವಶವಾಗದಂತೆ ತಡೆಯುವುದು ಅವರ ವೈಯಕ್ತಿಕ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮುಖ್ಯ. ಹಾಗಾಗಿ ಮೈಸೂರನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಡಲು ಸ್ವತಃ ಸಿದ್ದರಾಮಯ್ಯ ಅವರದ್ದೇ ವಿರೋಧವಿದೆ ಎನ್ನಲಾಗಿದೆ.
ಇನ್ನು ಮಂಡ್ಯದ ವಿಷಯದಲ್ಲಿ, ತಮ್ಮ ಆಪ್ತ ಅಂಬರೀಶ್ ಅವರ ಪತ್ನಿಗೆ ಟಿಕೆಟ್ ಕೊಡಿಸುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದಾಗಿತ್ತು. ಆ ಮೂಲಕ ಆ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ಸಿಗೆ ತರುವ ಯೋಜನೆ ಇತ್ತು. ಆದರೆ, ಅಷ್ಟರಲ್ಲಿ ಗೌಡರು ನಿಖಿಲ್ ರನ್ನು ಅಲ್ಲಿಗೆ ಕಳಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ದಿಗ್ಬಂಧನ ಹಾಕಿದ್ದಾರೆ. ಇದೀಗ ಸುಮಲತಾ ಅವರನ್ನು ಸಮಧಾನಪಡಿಸಿ, ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಮೊಯಿಲಿ ಅವರು ಗೌಡರ ಆಸೆಗೆ ತಣ್ಣೀರೆರೆಚುತ್ತಿದ್ದಾರೆ. ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹಾಗಾಗಿ, ಗೌಡರು ಇದೀಗ ತುಮಕೂರು ಸಂಸದ ಮುದ್ದುಹನುಮೇಗೌಡರ ಮನವೊಲಿಸಿ, ಆ ಕ್ಷೇತ್ರವನ್ನು ಕಿತ್ತುಕೊಳ್ಳಬಹುದು, ಇಲ್ಲವೇ ಕೋಲಾರಕ್ಕೆ ಬೇಡಿಕೆ ಇಡಬಹುದು. ಇನ್ನುಳಿದಂತೆ ಬೆಂಗಳೂರು ಉತ್ತರ ಕ್ಷೇತ್ರವನ್ನೂ ಬೋನಸ್ ಪಡೆಯಬಹುದು ಎಂಬ ಲೆಕ್ಕಾಚಾರಗಳು ಇವೆ.
ಒಟ್ಟಾರೆ, ಸದ್ಯದ ಸೀಟು ಹಂಚಿಕೆ ಇತ್ಯರ್ಥ್ಯಕ್ಕೆ ಅಡ್ಡಿಯಾಗಿರುವುದು ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ನಡುವಿನ ‘ಕ್ಷೇತ್ರ ರಕ್ಷಣೆ’ಯ ಹಗ್ಗಜಗ್ಗಾಟ ಎನ್ನಲಾಗುತ್ತಿದೆ. ಮೈಸೂರು ವಲಯದಲ್ಲಿನ ತಮ್ಮ ರಾಜಕೀಯ ಪ್ರಭಾವಕ್ಕೆ ಕೊಡಲಿಪೆಟ್ಟು ಕೊಡಲಿರುವ ಜೆಡಿಎಸ್ ದಂಡಯಾತ್ರೆಗೆ ಈಗಲೇ ತಡೆಯೊಡ್ಡದೇ ಇದ್ದರೆ, ಭವಿಷ್ಯದಲ್ಲಿ ತಮ್ಮ ರಾಜಕೀಯ ನೆಲಕಚ್ಚಲಿದೆ ಎಂಬ ಆತಂಕ ಸಿದ್ದರಾಮಯ್ಯ ಅವರದ್ದು. ಈಗ ಸಿಕ್ಕ ಅವಕಾಶ ಬಳಸಿಕೊಂಡು, ಪಕ್ಷದ ನೆಲೆ ವಿಸ್ತರಿಸಿ, ಕನಿಷ್ಠ ಹಳೇಮೈಸೂರು ವಲಯದಲ್ಲಾದರೂ ಪಕ್ಷವನ್ನು ಭದ್ರಪಡಿಸದೇ ಹೋದರೆ, ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಅಸ್ತಿತ್ವದ ಪ್ರಶ್ನೆ ಗೌಡರದ್ದು. ಹಾಗಾಗಿ ಸದ್ಯದ ಬಿಕ್ಕಟ್ಟಿನ ಹಿಂದಿರುವುದು ಈ ಇಬ್ಬರು ನಾಯಕರ ನಡುವಿನ ಈ ಕ್ಷೇತ್ರ ರಕ್ಷಣೆಯ ಕಾಳಜಿಯೇ ಎಂಬುದು ಗುಟ್ಟೇನಲ್ಲ.
ಈ ನಡುವೆ, ನಿಖಿಲ್ ಎಂಟ್ರಿಯಾಗುತ್ತಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಲವು ಸಂಚಲನಗಳು ಗರಿಗೆದರಿದ್ದು, ಈಗಾಗಲೇ ಒಂದು ಕಾಲದ ಕುಮಾರಸ್ವಾಮಿ ಆಪ್ತ ಹಾಗೂ ನಂತರ ಅವರೊಂದಿಗಿನ ಸಂಘರ್ಷಕ್ಕೆ ನೇತೃತ್ವ ನೀಡಿದ್ದ ಕಾಂಗ್ರೆಸ್ ನಾಯಕ ಚೆಲುವರಾಯ ಸ್ವಾಮಿ ಮತ್ತು ಜೆಡಿಎಸ್ ನಾಯಕ ಎಲ್ ಆರ್ ಶಿವರಾಮೇಗೌಡ ಅವರು ಬೆಂಗಳೂರಿನಲ್ಲಿ ಆಪರೇಷನ್ ಕಮಲದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕ ಸಿ ಎನ್ ಅಶ್ವಥನಾರಾಯಣ ಅವರನ್ನು ಭೇಟಿಯಾದ ಸುದ್ದಿಗೆ ಗರಿ ಮೂಡಿವೆ. ಮಂಡ್ಯದ ರಾಜಕಾರಣ ಇದೀಗ ರಾಜ್ಯದ ಗಮನ ಸೆಳೆಯತೊಡಗಿದೆ.
ಹಾಗೇ, ಹಾಸನದಲ್ಲಿಯೂ ಪ್ರಜ್ವಲ್ ವಿರುದ್ಧ ಮಿತ್ರಪಕ್ಷ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಮಾಜಿ ಸಚಿವ ಎ ಮಂಜು ಬಹಿರಂಗವಾಗಿಯೇ ಪ್ರಜ್ವಲ್ ಸ್ಪರ್ಧಿಸಿದ್ದಲ್ಲಿ ತಾವು ಬೆಂಬಲಿಸುವುದಿಲ್ಲ ಎನ್ನುವ ಜೊತೆಗೆ, ಪಕ್ಷವನ್ನೇ ತೊರೆಯುವ ಮಾತನ್ನೂ ಆಡಿದ್ದಾರೆ. ಅದಕ್ಕೆ ಪೂರಕವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಂಜು ಕೆಲವೇ ದಿನದಲ್ಲಿ ಬಿಜೆಪಿ ಸೇರುತ್ತಾರೆ ಎಂದಿದ್ದಾರೆ. ಆ ಮೂಲಕ ಹಾಸನ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮಂಜು ಅವರನ್ನೇ ಕಣಕ್ಕಿಳಿಸುವ ಸೂಚನೆ ನೀಡಿದ್ದರು. ಆದರೆ, ಅವರ ಆ ಹೇಳಿಕೆಗೆ ಅವರದೇ ಪಕ್ಷದ ಜಿಲ್ಲಾ ಅಧ್ಯಕ್ಷರೇ ವಿರೋಧವ್ಯಕ್ತಪಡಿಸಿದ್ದು, ಮಂಜು ಈಗ ಹಳಸಿದ ಅನ್ನ, ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವುದಕ್ಕೆ ತಮ್ಮ ವಿರೋಧವಿದೆ ಎಂದಿದ್ದಾರೆ.
ಮಡಿಕೇರಿಯಲ್ಲಿ ಜೆಡಿಎಸ್ ನಾಯಕರಲ್ಲೇ ಒಳಜಗಳ ತಾರಕ್ಕೇರಿದ್ದು, ಜಿಲ್ಲಾ ಘಟಕಕ್ಕೆ ಗಣೇಶ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಲೇ, ಮಾಜಿ ಸಚಿವ ಜೀವಿಜಯ ಅವರು ಪಕ್ಷ ತೊರೆಯುವ ಮಾತನಾಡಿದ್ದಾರೆ.
ಬಿಜೆಪಿ ಕೂಡ ಚಿಕ್ಕಮಗಳೂರು-ಉಡುಪಿ, ಮೈಸೂರು-ಮಡಿಕೇರಿ, ಹಾಸನ, ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ಸವಾಲು ಎದುರಿಸುತ್ತಿದೆ. ಉಡುಪಿ ಮತ್ತು ಮೈಸೂರು ವಿಷಯದಲ್ಲಿ ಹಾಲಿ ಸಂಸದರ ಬಗ್ಗೆ ಪಕ್ಷದ ಸ್ಥಳೀಯ ಮುಖಂಡರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಜೆಡಿಎಸ್ ಪ್ರಾಬಲ್ಯದ ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಗಾಗಿ ಅದು, ಸದ್ಯಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿದೆ. ಹಾಗಾಗಿಯೇ ಅದು ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿಗಾಗಿ ಕಾದುಕೂತಿದೆ.
ಒಮ್ಮೆ ಪಟ್ಟಿ ಪ್ರಕಟವಾಗುತ್ತಲೇ ಪರಸ್ಪರ ಒಂದು ಪಾಳೆಯದಿಂದ ಮತ್ತೊಂದಕ್ಕೆ ಜಿಗಿತ, ಗಾಳ ಹಾಕುವುದು ಮುಂತಾದ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ, ಚುನಾವಣೆಯ ಭರಾಟೆಯೂ ಬಿರುಸಾಗಲಿದೆ. ಅದಕ್ಕೆ ಇನ್ನೇನು ಒಂದೆರಡು ದಿನ ಬಾಕಿಯಷ್ಟೇ!