ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಬಹುಮತ ಪಡೆದರೂ ನರೇಂದ್ರ ಮೋದಿ ಅವರು ಮತ್ತೆ ಎರಡನೇ ಬಾರಿ ಪ್ರಧಾನಿ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹಿರಿಯ ರಾಜಕಾರಣಿ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಸರ್ಕಾರ ರಚಿಸಲು ಅಗತ್ಯ ಪ್ರಮಾಣದಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಿಲ್ಲ. ಆದ್ದರಿಂದ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗುವುದು ಅಸಾಧ್ಯದ ಮಾತು. ಬಿಜೆಪಿ ಬಹುಶಃ ಅತಿ ದೊಡ್ಡ ಪಕ್ಷವಾಗಿ ಬಹುಮತ ಪಡೆದರೂ ಇತರ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದೂ ಶರದ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಏನಾದರೂ ಸರ್ಕಾರ ರಚಿಸಲು ಇತರ ಪಕ್ಷಗಳ ಸಹಕಾರ ಕೋರಿದರೆ, ಆ ಪಕ್ಷಗಳು ಪ್ರಧಾನಿ ಸ್ಥಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದೂ ಮುನ್ಸೂಚನೆ ನೀಡಿದ್ದಾರೆ.
2014ರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 326 ಸೀಟುಗಳನ್ನು ಗಳಿಸಿದ್ದರೆ, ಬಿಜೆಪಿ ತನ್ನದೇ ಸರ್ಕಾರ ರಚಿಸಲು ಅಗತ್ಯವಾದ 283 ಕ್ಷೇತ್ರಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಇದೆ ವೇಳೆ, ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ 48ರಲ್ಲಿ 45 ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿದೆ ಎಂದಿರುವ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ ಶರದ್, ಬಹುಶಃ ಅವರು ತಪ್ಪು ಮಾಡಿದ್ದಾರೆ ಎನಿಸುತ್ತಿದೆ. ಅಮಿತ್ ಷಾ ಅವರು ಬಿಜೆಪಿ ಪಕ್ಷ ಒಂದೇ ಸಂಪೂರ್ಣ 48 ಸೀಟುಗಳನ್ನೂ ಪಡೆಯಲಿದೆ ಎಂದು ಹೇಳಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
14 ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, 2012ರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಶರದ್ ಅವರು ಈ ಬಾರಿ ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ ಎರಡು ದಿನದ ನಂತರ ಪ್ರಧಾನಿ ಕುರಿತ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಶರದ್ ಪವಾರ್