ಲೋಕಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 11ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಜೆಪಿ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ರಾಜಕೀಯ ಪೋಸ್ಟರ್ ಗಳಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾವಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವುದನ್ನು ಚುನಾವಣಾ ಆಯೋಗ ಖಂಡಿಸಿದೆ.
ಅಲ್ಲದೇ, ಕೂಡಲೇ ಈ ಪೋಸ್ಟರ್ ಗಳನ್ನು ತೆಗೆದುಹಾಕುವಂತೆ ಫೇಸ್ ಬುಕ್ ಗೆ ಚುನಾವಣಾ ಆಯೋಗ ಸೂಚನೆ ರವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರ ಭಾವಚಿತ್ರದ ಜತೆಗೆ ಅಭಿನಂದನ್ ಭಾವಚಿತ್ರವನ್ನು ಬಳಸಿಕೊಂಡಿರುವ ಪೋಸ್ಟರ್ ಅನ್ನು ಬಿಜೆಪಿ ನಾಯಕ ಹಾಗೂ ದೆಹಲಿ ಶಾಸಕ ಪ್ರಕಾಶ್ ಶರ್ಮಾ ಅವರು ಮಾರ್ಚ್ 1ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ಶರ್ಮಾ ಅವರ ಪೇಸ್ಬುಕ್ ಖಾತೆಯಲ್ಲಿ ಮಾಡಿರುವ “ಪಾಕಿಸ್ತಾನ ಸೋಲೊಪ್ಪಿಕೊಂಡಿದೆ, ದೇಶದ ಕೆಚ್ಚೆದೆಯ ಯೋಧ ಮರಳಿ ಬಂದ’’ ಎಂದು ಹಾಗೂ ಮತ್ತೊಂದರಲ್ಲಿ ಪ್ರಧಾನಿ ಅವರನ್ನು ಶ್ಲಾಘಿಸಿ “ಪ್ರಧಾನಿ ಮೋದಿ ಅವರಿಂದಾಗಿ ಅಭಿನಂದನ್ ಮತ್ತೆ ದೇಶಕ್ಕೆ ಮರಳಿದ್ದಾರೆ. ಇದು ದೇಶದ ಬಹುದೊಡ್ಡ ರಾಜತಾಂತ್ರಿಕ ಗೆಲುವು,’’ ಎಂದು ಮೋದಿ ಪರ ಪ್ರಚಾರ ಮಾಡಿದ್ದರು.
ರಕ್ಷಣಾ ಸಿಬ್ಬಂದಿಯನ್ನು ಹಾಗೂ ಅವರ ಭಾವಚಿತ್ರಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಬಾರದು ಎಂದು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ಈ ಬೆನ್ನಲ್ಲೇ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಕ್ರಮಕೈಗೊಂಡಿದೆ.
ಸಾಮಾಜಿಕ ಜಾಲತಾಣಗಳ ಮೇಲೆ 2013ರಿಂದ ನೀತಿ ಸಂಹಿತೆ ಜಾರಿಯಾಗಿದ್ದರೂ, ಸಾಮಾಜಿಕ ಜಾಲತಾಣಗಳನ್ನು ತಲುಪಲು ಅಗತ್ಯವಿರುವ ತಂತ್ರಜ್ಞಾನ ಕೊರತೆಯಿಂದಾಗಿ ಚುನಾವಣಾ ಆಯೋಗ ಈವರೆಗೂ ಯಾವುದೇ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ವಿಷಾದನೀಯ.
ಕರ್ನಾಟಕದಲ್ಲಿಯೂ ಅಭಿನಂದನ್ ಅವರ ಚಿತ್ರವಿರುವ ಟೀಶರ್ಟ್ ಹಾಕಿಕೊಂಡ ಬಿಜೆಪಿ ರಾಜಕಾರಣಿ ಚಕ್ರವರ್ತಿ ಸೂಲಿಬೆಲೆಯ ಫೋಟೋ ಒಂದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಚುನಾವಣಾ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಇನ್ನೂ ಕೈಗೊಂಡಿಲ್ಲ.
ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ಸೈನಿಕರ ಮತ್ತು ಸೇನಾಪಡೆಗಳ ಚಿತ್ರಗಳನ್ನು ಬಳಕೂಡದು: ಚುನಾವಣಾ ಆಯೋಗ ನಿರ್ದೇಶನ