ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ರೂ.13,700 ಕೋಟಿ ವಂಚಿಸಿ ಈಗ ಲಂಡನ್ ನಲ್ಲಿ ನೆಲೆಸಿರುವ ವಜ್ರ ವ್ಯಾಪಾರಿ, ಬಹುಕೋಟಿ ವಂಚಕ ದೇಶಭ್ರಷ್ಟ ನೀರವ್ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ.
ಮುಂಬೈನ ಅಕ್ರಮ ಹಣ ಸಂಪಾದನೆ ನಿಗ್ರಹ ವಿಶೇಷ ಕಾಯ್ದೆ (ಪಿಎಂಎಲ್ ಎ) ಕೋರ್ಟ್ ಗೆ ಪೂರಕ ಆರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಪ್ರಮುಖ ಆರೋಪಿ ನೀರವ್ ಮೋದಿ ಜತೆಗೆ ಆತನ ಪತ್ನಿ ಅಮಿ ಮೋದಿ ಹಾಗೂ ಬೆಲ್ಜಿಯಂ ಮೂಲದ ತಂದೆ ದೀಪಕ್ ಮೋದಿ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದೆ.
ಜಾರಿ ನಿರ್ದೇಶನಾಲಯ ನೂತನವಾಗಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 934 ಕೋಟಿ ಅಕ್ರಮ ಹಣ ನೀರವ್ ಮೋದಿಯ ವೈಯಕ್ತಿಕ ಖಾತೆ್ ಹಾಗೂ ಇನ್ನಿಬ್ಬರ ಖಾತೆ್ಯಿಂದ ವರ್ಗಾವಣೆಯಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ದುಬೈ, ಯುಎಇ ಮತ್ತು ಸಿಂಗಪುರ ಮೂಲದ ಕಂಪನಿಯ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ಸಲ್ಲಿಸಿರುವ ಜಾರಿ ನಿರ್ದೇಶನಾಲಯ, ಕಂಪನಿ ಖಾತೆಯ ಶೇಕಡಾ 91 ರಷ್ಟು ಹಣ ಅಕ್ರಮವಿದೆ ಎಂದೂ ತಿಳಿಸಿದ್ದು, ಈ ಹಣದ ಬಗ್ಗೆಯೂ ತನಿಖೆ ನಡೆಯಬೇಕಿದೆ ಎಂದು ಹೇಳಿದೆ.
ಪಿಎನ್ ಬಿ ಬ್ಯಾಂಕ್ ನಿಂದ ಪಡೆದ ಸಂಪೂರ್ಣ ಹಣ ಹಲವು ಭಾಗಗಳಾಗಿ, ಹಲವರ ಖಾತೆಗೆ ಹಂಚಿಕೆಯಾಗಿದೆ. ವಿದೇಶಿ ಬ್ಯಾಂಕ್ ನಲ್ಲಿರುವ ನೀರವ್ ಮೋದಿ ಖಾತೆಗೆ 560 ಕೋಟಿ ರೂಪಾಯಿ, 200 ಕೋಟಿ ರೂಪಾಯಿ ಪತ್ನಿ ಅಮಿ ಮೋದಿ ಖಾತೆಗೆ ಮತ್ತು 174 ಕೋಟಿ ಹಣ ಮೋದಿ ತಂದೆ ದೀಪಕ್ ಮೋದಿ ವೈಯಕ್ತಿಕ ಖಾತೆಗೆ ಹಣ ಜಮಾ ಆಗಿದೆ ಎಂದು ಇಡಿ ಮೂಲಗಳು ತಿಳಿಸಿದೆ.
ಬ್ಯಾಂಕ್ ಮೂಲಕ ಪಡೆದ ಹಣದ ಸ್ವಲ್ಪ ಪಾಲು ಹಲವು ಶೆಲ್ ಕಂಪನಿಗಳಿಗೆ ವರ್ಗವಾಗಿದೆ. ಮತ್ತಷ್ಟು ಹಣ ಮೋದಿಯ ಪೆಸಿಫಿಕ್ ಡೈಮಂಡ್ ಕಂಪನಿ ಖಾತೆಗೆ ಜಮೆ ಆಗಿದೆ. ಮೋದಿ ಹಾಗೂ ಅವರ ತಂದೆ ಖಾತೆಯಿಂದ ಭಾರೀ ಮೊತ್ತದ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಬ್ಯಾಂಕ್ ಸ್ಟೇಟ್ ಮೆಂಟ್ ತಿಳಿಸುತ್ತದೆ ಎಂದು ಇಡಿ ಮೂಲಗಳು ಹೇಳಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಪಡೆದ ಹಣದ ಮತ್ತೊಂದು ಭಾಗ ನೀರವ್ ಮೋದಿ ಸಹೋದರಿ ಪೂರ್ವಿ ಒಡೆತನದ ಕಂಪನಿ ಶೆಲ್ ಕಂಪನಿ ಫೈನ್ ಕ್ಲಾಸಿಕ್ ಎಫ್ ಜೆಡ್ ಇಗೆ ವರ್ಗವಾಗಿದೆ. ನಂತರ 2.08 ನೂರು ಕೋಟಿ ಹಣವನ್ನು ಪೂರ್ವಿ ಅವರು ಅಮಿ ಮೋದಿಯ ಸಿಂಗಾಪೂರದ ಬ್ಯಾಂಕ್ ಖಾತೆಗೆ ವರ್ಗ ಮಾಡಿದ್ದಾರೆ. ಈ ಹಣವನ್ನು ನ್ಯೂಯಾರ್ಕ್ ಸೆಂಟ್ರಲ್ ಪಾರ್ಕ್ ನಲ್ಲಿ ಫ್ಲಾಟ್ ಖರೀದಿಸಲು ಬಳಸಿದ್ದಾರೆ.
ಜಾರಿ ನಿರ್ದೇಶನಾಲಯ ಮಾರ್ಚ್ ನಲ್ಲಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಮೋದಿ ಸಹೋದರ ನೀಶಲ್, ಸಹೋದರಿ ಪೂರ್ವಿ, ಪೂರ್ವಿ ಪತಿ ಮೈನಕ್ ಮೆಹ್ತಾ ಹೆಸರನ್ನೂ ಸೇರಿಸಿತ್ತು. ಜಾರಿ ನಿರ್ದೇಶನಾಲಯ ಈಗಾಗಲೇ ಮೋದಿ ಹೆಸರಿನಲ್ಲಿ ಭಾರತದಲ್ಲಿರುವ 1,725 ಕೋಟಿ ಆಸ್ತಿಯನ್ನು ಮತ್ತು ವಿದೇಶದಲ್ಲಿರುವ ಆಸ್ತಿಯನ್ನು ವಶಕ್ಕೆ ಪಡೆದಿದೆ.