ಒಂದು ಕಡೆ ಬಿಜೆಪಿ ಈ ಬಾರಿ ಭಯೋತ್ಪಾದನೆ ವಿರುದ್ಧ ಹೋರಾಟ, ದೇಶರಕ್ಷಣೆ ಮತ್ತು ದೇಶಭಕ್ತಿಯ ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ಹೊರಟಿದೆ. ಕಳೆದ ಐದು ವರ್ಷಗಳಲ್ಲಿ ತಾನು ನೀಡಿದ್ದ ‘ಅಚ್ಛೇದಿನ’ದ ಭರವಸೆಯನ್ನು ಈಡೇರಿಸುವಲ್ಲಿ ಹೀನಾಯವಾಗಿ ಸೋಲುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ತನ್ನ ಸರ್ಕಾರದ ಮುಖ ಉಳಿಸಿಕೊಳ್ಳಲು ಬಿಜೆಪಿಗೆ ‘ಭಯೋತ್ಪಾದನೆ’ ವಿಷಯಕ್ಕಿಂತ ಪರಿಣಾಮಕಾರಿಯಾದ ಮತ್ತೊಂದು ಅಸ್ತ್ರ ಸದ್ಯಕ್ಕಿಲ್ಲ.
ಆದರೆ, ಆ ದೇಶಭಕ್ತಿ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟಗಳು ಎಷ್ಟು ನೈಜ ಎಂಬ ಪ್ರಶ್ನೆ ಇದೀಗ ಹತ್ತುಹಲವು ಬಗೆಯಲ್ಲಿ ಆ ಪಕ್ಷಕ್ಕೆ ಎದುರಾಗತೊಡಗಿದೆ. ದೇಶಭಕ್ತಿಯ ಮತ್ತು ದೇಶದ ಸುರಕ್ಷತೆಯ ವಿಷಯವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ಸಿನ 60 ವರ್ಷಗಳ ಆಡಳಿತ, ವಿವಿಧ ಪ್ರಗತಿಪರರು, ಬುದ್ಧಿಜೀವಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ಪ್ರಶ್ನಿಸುತ್ತಿರುವ, ಅವರ ದೇಶಪ್ರೇಮವನ್ನೇ ಕಟಕಟೆಗೆ ನಿಲ್ಲಿಸುತ್ತಿರುವ ಬಿಜೆಪಿಗೆ, ಇದೀಗ ತನ್ನ ಮತ್ತು ತನ್ನ ಮಾತೃಸಂಸ್ಥೆಗಳ ‘ದೇಶಭಕ್ತಿ’ಯ ಘಟನಾವಳಿಗಳ ಇತಿಹಾಸದ ಭೂತ ಮೇಲೆದ್ದು ಕೂತು ಅಣಕಿಸತೊಡಗಿದೆ.
ಅಂತಹ ಕಾಡುವ ಭೂತಗಳ ಪೈಕಿ ಇತ್ತೀಚಿನ ಮಧ್ಯಪ್ರದೇಶದ ಬಿಜೆಪಿ ಐಟಿ ಸೆಲ್ ಸಂಯೋಜಕ ಮತ್ತು ಆತನ ಇತರ ಹತ್ತು ಸಹಚರರು ಪಾಕಿಸ್ತಾನದ ಐಎಸ್ ಐ ಏಜೆಂಟರಾಗಿ ಕೆಲಸ ಮಾಡುತ್ತಿದ್ದದು ಬಹಳ ಪ್ರಮುಖ. ವಾಸ್ತವವಾಗಿ ಒಂದು ತಿಂಗಳ ಹಿಂದೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐಗೆ ದೇಶದ ಸೇನೆ ಮತ್ತು ಇತರ ಮಹತ್ವದ ಗೌಪ್ಯ ಮಾಹಿತಿಯನ್ನು ನೀಡುತ್ತಿದ್ದ ಮತ್ತು ಆ ಮೂಲಕ ಐಎಸ್ ಐ ಏಜೆಂಟರಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಭೋಪಾಳದ ಬಿಜೆಪಿ ಐಟಿ ವಿಭಾಗದ ಧ್ರುವ ಸಕ್ಸೇನಾ ಮತ್ತು ಇತರ 10 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ದೇಶದ್ರೋಹ ಮತ್ತು ದೇಶದ ವಿರುದ್ಧ ಸಮರ ಸಾರಿದ ಆರೋಪದಡಿ ಅವರ ವಿರುದ್ಧ ಐಪಿಸಿ ಸೆಕ್ಸನ್ 122 ಮ್ತು 123 ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿತ್ತು.
ದೇಶದ ಸೇನಾ ಪಡೆಗಳ ನಿಯೋಜನೆ, ಸೇನಾ ನೆಲೆಗಳು ಸೇರಿದಂತೆ ಮಹತ್ವದ ಮಾಹಿತಿಯನ್ನು ಈ ಹನ್ನೊಂದು ಮಂದಿ ಪಾಕಿಸ್ತಾನದಲ್ಲಿರುವ ಐಎಸ್ ಐ ಗೆ ಗೌಪ್ಯವಾಗಿ ರವಾನಿಸಿದ್ದಾರೆ. ಅಲ್ಲದೆ, ದೇಶದ ವಿರುದ್ಧವೇ ಸಂಚು ನಡೆಸುತ್ತಿದ್ದ ಅವರು ಅಂತಹ ಮಾಹಿತಿ ರವಾನೆಗೆ ಪರ್ಯಾಯ ಟೆಲಿಕಾಂ ಎಕ್ಸಚೇಂಜ್ ಕೂಡ ಹೊಂದಿದ್ದರು ಎಂಬ ಆಘಾತಕಾರಿ ಅಂಶ ತನಿಖೆಯಿಂದ ಹೊರಬಿದ್ದಿತ್ತು!
ಅದಕ್ಕಿಂತ ಆಘಾತಕಾರಿಯಾಗಿದ್ದದು, ಆ 11 ಮಂದಿಯ ತಂಡದ ನಾಯಕತ್ವ ವಹಿಸಿದ್ದ ಧ್ರುವ ಸಕ್ಸೇನಾ ಎಂಬಾತ ಸ್ವತಃ ‘ದೇಶಭಕ್ತ’ ಬಿಜೆಪಿಯ ಸದಸ್ಯ ಎಂಬುದು! ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕಾರದಲ್ಲಿದ್ದಾಗ ಅವರೊಂದಿಗೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕೈಲಾಶ್ ವಿಜಯ ವರ್ಗೀಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಧ್ರುವ ಸಕ್ಸೇನಾ, ಪಕ್ಷದಲ್ಲಿ ಎಂತಹ ಪ್ರಭಾವ ಹೊಂದಿದ್ದ ಎಂಬುದನ್ನು ತೋರಿಸುತ್ತದೆ. ಆತ ಯಾವುದೋ ಒಬ್ಬ ಸಾಮಾನ್ಯ ಕಾರ್ಯಕರ್ತನೇನೂ ಆಗಿರಲಿಲ್ಲ. ಬದಲಾಗಿ ಪ್ರಭಾವಿ ನಾಯಕರ ಆಪ್ತನಾಗಿದ್ದ ಎಂಬುದಕ್ಕೆ ಹಿಂದಿನ ವಿವಿಧ ಕಾರ್ಯಕ್ರಮಗಳಲ್ಲಿ ಆತನೊಟ್ಟಿಗೆ ಹಿರಿಯ ನಾಯಕರು ಇದ್ದ ಫೋಟೋಗಳೇ ಸಾಕ್ಷಿ ಎಂದು ‘ಆಲ್ಟ್ ನ್ಯೂಸ್’ ವೆಬ್ ನ್ಯೂಸ್ ಬಿಜೆಪಿ ಮತ್ತು ಸಂಘಪರಿವಾರದ ಈ ದೇಶಭಕ್ತರ ಅಸಲೀ ಮುಖವಾಡವನ್ನು ಬಿಚ್ಚಿಟ್ಟಿದೆ.
ಧ್ರುವ ಸಕ್ಸೇನಾ ಮತ್ತು ಆತನೊಂದಿಗೆ ಬಂಧಿತನಾಗಿರುವ ಮತ್ತೊಬ್ಬ ಸಹಚರ ಮೋಹಿತ್ ಅಗರ್ ವಾಲ್ ಇಬ್ಬರೂ ಭೋಪಾಲ್ ಮೂಲದವರು. ಆ ಇಬ್ಬರೂ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಎಂಬುದು ಅವರ ಫೇಸ್ ಬುಕ್ ಮತ್ತು ಸ್ವತಃ ಬಿಜೆಪಿ ಯುವಮೋರ್ಚಾದ ವೆಬ್ ತಾಣದ ಮಾಹಿತಿಯಲ್ಲೇ ಬಹಿರಂಗವಾಗಿದೆ. ಯುವ ಮೋರ್ಚಾದ ವೆಬ್ ತಾಣ(bjymbhopal.org – ಈಗ ರದ್ದಾಗಿದೆ)ವನ್ನು ವಿನ್ಯಾಸಗೊಳಿಸಿಕೊಟ್ಟಿದ್ದೇ ಧ್ರುವ ಮಾಲೀಕತ್ವದ ವೋಕಲ್ ಹಾರ್ಟ್ ಇನ್ಫೋಟೆಕ್ ಎಂಬ ಸಂಸ್ಥೆ. ಇದಕ್ಕೆ ಸಾಕ್ಷ್ಯ ಈ ಬಂಧನದ ಬಳಿಕ ಮುಚ್ಚಲಾಗಿರುವ ಬಿಜೆಪಿ ಯುವ ಮೋರ್ಚಾದ ವೆಬ್ ತಾಣವೇ. ವೆಬ್ ತಾಣದ ಕೆಳತುದಿಯಲ್ಲಿ ವೆಬ್ ತಾಣ ಅಭಿವೃದ್ಧಿಪಡಿಸಿದ ಸಂಸ್ಥೆ ವೋಕಲ್ ಹಾರ್ಟ್ ಇನ್ಫೋಟೆಕ್ ಎಂದಿದೆ. ಆ ಸಂಸ್ಥೆಯ ವೆಬ್ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಧ್ರುವ ಸಕ್ಸೇನಾ ಎಂಬುದು ನಮೂದಾಗಿದೆ ಮತ್ತು ಸಕ್ಸೇನಾ ಫೇಸ್ ಬುಕ್ ಖಾತೆಯಲ್ಲೂ ತಾನು ವೋಕಲ್ ಹಾರ್ಟ್ ಇನ್ಫೋಟೆಕ್ ಸಂಸ್ಥೆಯ ಎಂಡಿ ಎಂದು ಬರೆದುಕೊಂಡಿದ್ದಾನೆ ಎಂದು ಅತ್ಯಂತ ವಿಶ್ವಾಸಾರ್ಹ ವೆಬ್ ತಾಣ ಆಲ್ಟ್ ನ್ಯೂಸ್ ವರದಿ ಮಾಡಿದೆ. ಜೊತೆಗೆ ತನ್ನ ವರದಿಗೆ ಪೂರಕವಾಗಿ ವೆಬ್ ತಾಣ, ಧ್ರುವ ಸಕ್ಸೇನಾ ಫೋಟೋಗಳನ್ನೂ ಲಗತ್ತಿಸಿದೆ.
ಒಟ್ಟಾರೆ, ಈಗ ಮಾತೆತ್ತಿದರೆ ದೇಶಭಕ್ತಿ, ಭಯೋತ್ಪಾದನೆ, ಸೇನಾಪಡೆಗಳನ್ನೇ ತನ್ನ ಚುನಾವಣಾ ಪ್ರಚಾರದ ಸರಕು ಮಾಡಿಕೊಂಡಿರುವ ಬಿಜೆಪಿ, ತನ್ನದೇ ಸಂಘಟನೆಯಲ್ಲಿ ಪಾಕಿಸ್ತಾನದ ಐಎಸ್ ಐ ಏಜೆಂಟರನ್ನು ಹೊಂದಿದೆ. ಅದೂ, ಸ್ವತಃ ಮುಖ್ಯಮಂತ್ರಿ, ತನ್ನ ಪ್ರಧಾನ ಕಾರ್ಯದರ್ಶಿಗಳ ಆಪ್ತ ವಲಯದಲ್ಲೇ ಅಂತಹ ಅಸಲೀ ದೇಶದ್ರೋಹಿಗಳು, ದೇಶದ ಸುರಕ್ಷತೆಯನ್ನೇ ಪಾಕಿಸ್ತಾನಕ್ಕೆ ಮಾರಿಕೊಳ್ಳುವ ವ್ಯಕ್ತಿಗಳಿಗೆ ಐಟಿ ಸೆಲ್ ನಿರ್ವಹಣೆಯಂತಹ ಆಯಕಟ್ಟಿನ ಸ್ಥಾನಮಾನಗಳನ್ನು ಕೊಟ್ಟಿದೆ ಎಂಬುದು ಈ ದೇಶದ್ರೋಹಿಗಳ ಬಂಧನದಿಂದ ಇದೀಗ ಸಾಬೀತಾಗಿದೆ.
ಹಾಗೆ ನೋಡಿದರೆ, ಭಯೋತ್ಪಾದನೆ ಮತ್ತು ದೇಶದ ಆಂತರಿಕ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ‘ದೇಶದ್ರೋಹ’ ಕೃತ್ಯದಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ತೊಡಗಿರುವುದು ಇದೇ ಮೊದಲೇನಲ್ಲ. 1948ರ ಮಹಾತ್ಮಾ ಗಾಂಧಿ ಹತ್ಯೆ ವಿಷಯದಲ್ಲಿಯೂ ಹಂತಕರಾದ ನಾಥೂರಾಂ ಗೋಡ್ಸೆ ಮತ್ತು ಆತನ ಸಹಚರರು ಹತ್ಯೆಗೆ ಮುನ್ನ ಹಿಂದೂ ಮಹಾಸಭಾದ ನಾಯಕ ವೀರ್ ಸಾವರ್ಕರ್ ಅವರನ್ನು ಭೇಟಿ ಮಾಡಿದ್ದರು ಎಂದು ಗಾಂಧಿ ಹತ್ಯೆಯ ಸಂಚಿನ ಕುರಿತು ತನಿಖೆ ನಡೆಸಿದ್ದ ನ್ಯಾ. ಕಪೂರ್ ವರದಿಯಲ್ಲಿಯೇ ಉಲ್ಲೇಖವಾಗಿದೆ.
ಇನ್ನು 2000ನೇ ಸಾಲಿನಿಂದ ಈಚೆಗೆ ಕಳೆದ ಒಂದೂವರೆ ದಶಕದಲ್ಲಿ ‘ಹಿಂದೂ ಭಯೋತ್ಪಾದನೆ’ ಎಂಬ ಹೊಸ ಪರ್ವವೇ ಆರಂಭವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. 2004ರಿಂದ 2008ರ ನಡುವಿನ ಕೇವಲ ನಾಲ್ಕು ವರ್ಷಗಳಲ್ಲೇ ಏಳು ಬಾಂಬ್ ಸ್ಫೋಟ ಪ್ರಕರಣಗಳನ್ನು ಸ್ವತಃ ಪೊಲೀಸರೇ ವಿವಿಧ ಹಿಂದೂ ಸಂಘಟನೆಗಳ ಕೃತ್ಯ ಎಂದಿದ್ದಾರೆ. 2004ರ ಜಲ್ನಾ ಸ್ಫೋಟ, 2006 ಮತ್ತು 2008ರ ಮಾಲೇಗಾಂವ್ ಸ್ಫೋಟ, 2007ರ ಸಂಜೋತಾ ಎಕ್ಸೆಪ್ರೆಸ್, ಅಜ್ಮೀರ್ ದರ್ಗಾ ಹಾಗೂ ಮೆಕ್ಕಾ ಮಸೀದಿ ಸ್ಫೋಟಗಳು ಮತ್ತು 2008ರ ಮೊದಸಾ ಸ್ಫೋಟಗಳ ಹಿಂದೆ ಅಭಿನವ್ ಭಾರತ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳಿಗೆ ಸೇರಿದ ಸ್ವಾಮಿ ಅಸೀಮಾನಂದ, ಪುರೋಹಿತ್, ಸಾಧ್ವಿ ಪ್ರಜ್ಯಾ ಸಿಂಗ್, ಆರ್ ಎಸ್ ಎಸ್ ನ ಇಂದ್ರೇಶ್ ಕುಮಾರ್, ಸುನಿಲ್ ಜೋಷಿ ಮುಂತಾದವರ ಹೆಸರುಗಳು ಕೇಳಿಬಂದಿದ್ದವು. ಅಲ್ಲದೆ, ಆ ಪೈಕಿ ಹಲವರನ್ನು ಬಂಧಿಸಲಾಗಿತ್ತು ಕೂಡ.
ವಿಚಿತ್ರವೆಂದರೆ, ದೇಶದ ಭದ್ರತೆ, ಸುರಕ್ಷತೆ ಮತ್ತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಪಠಿಸುವ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಸೇರಿದಂತೆ 2004ರಿಂದ 2008ರ ಅವಧಿಯಲ್ಲಿ ನಡೆದ ಬಹುತೇಕ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳನ್ನು ಸಾಕ್ಷ್ಯಧಾರ ಕೊರತೆಯ ಕಾರಣದ ಮೇಲೆ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಆರೋಪಿಗಳು ನಿರ್ದೋಷಿಗಳೆಂದು ಹೊರಬಂದಿದ್ದಾರೆ. ಅಂತಹ ಪ್ರಕರಣಗಳಲ್ಲಿ ಎನ್ ಐಎ ಮೇಲ್ಮನವಿಯನ್ನು ಕೂಡ ಸಲ್ಲಿಸಿಲ್ಲ ಮತ್ತು ಸಾಧ್ವಿ ಪ್ರಕರಣದಲ್ಲಂತೂ ಅವರ ಹೆಸರನ್ನು ಚಾರ್ಜ್ ಶೀಟ್ನಿಂದ ಕೈಬಿಡಲಾಗಿದೆ! ಆ ಕ್ರಮಕ್ಕೆ ಸ್ವತಃ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು!
ಅಭಿನವ್ ಭಾರತ್ ಸಂಘಟನೆಗೆ ಸೇರಿದ ಈ ಆರೋಪಿಗಳ ವಿಷಯದಲ್ಲಿ ಮೃದು ಧೋರಣೆ ತಾಳುವಂತೆ ತಮ್ಮ ಮೇಲೆ ಸ್ವತಃ ಎನ್ ಐಎ ಒತ್ತಡ ಹೇರಿತ್ತು ಎಂದು ಸರ್ಕಾರಿ ವಕೀಲರಾದ ರೋಹಿಣಿ ಸಾಲಿಯಾನ್ ಅವರು ಬಹಿರಂಗ ಹೇಳಿಕೆ(2016) ನೀಡಿದ್ದು ಕೂಡ ಸರ್ಕಾರದ ದೇಶಭಕ್ತಿಯವನ್ನು ಅನಾವರಣಗೊಳಿಸಿತ್ತು.
ಬಳಿಕ, ತೀರಾ ಇತ್ತೀಚಿನ ವರ್ಷಗಳಲ್ಲಿ ವಿಚಾರವಾದಿಗಳ ಸರಣಿ ಹತ್ಯೆಯ ಹಿಂದೆಯೂ ಸನಾತನ ಸಂಸ್ಥೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಹೆಸರುಗಳು ಕೇಳಿಬಂದಿವೆ. ಗೌರಿ ಲಂಕೇಶ್, ಎಂ ಎಂ ಕಲಬುರ್ಗಿ, ಪಾನ್ಸೋರೆ, ಧಾಭೋಲ್ಕರ್ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಕೂಡ ಹಿಂದೂ ಸಂಘಟನೆಗಳ ಕೃತ್ಯ ಎಂದಿದೆ. ಈ ಘಟನೆಗಳು ಕೂಡ ಭಯೋತ್ಪಾದನಾ ಕೃತ್ಯಗಳು ಎಂಬುದರಲ್ಲಿ ಬಹುಶಃ ಬಿಜೆಪಿಯ ಸಭ್ಯರಿಗೂ(?) ಯಾವ ಅನುಮಾನಗಳೂ ಇರಲಿಕ್ಕಿಲ್ಲ.
ಒಟ್ಟಾರೆ, ಬಿಜೆಪಿ ಮತ್ತು ಸಂಘಪರಿವಾರದ ಮಾತು ಮತ್ತು ಕೃತಿಯ ನಡುವೆ ಎಂತಹ ವೈರುಧ್ಯವಿದೆ, ಎಷ್ಟು ಆತ್ಮವಂಚನೆ ಇದೆ ಎಂಬುದಕ್ಕೆ ಈ ಸಾಲು ಸಾಲು ಪ್ರಕರಣಗಳೇ ನಿದರ್ಶನ. ಇದೀಗ ದೇಶದ ಜನಸಾಮಾನ್ಯರು ಕೂಡ ಈ ದ್ವಂದ್ವವನ್ನು ಗುರುತಿಸತೊಡಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಸಕ್ಸೇನಾನಂತಹ ‘ದೇಶಭಕ್ತ’ರು ಬೆತ್ತಲಾಗತೊಡಗಿದ್ದಾರೆ.