ಲೆಕ್ಕಾಚಾರದ ಪ್ರಕಾರದ ಮಾರ್ಚ್ 5ರಂದು ಚುನಾವಣೆ ಘೋಷಣೆ ಆಗಬೇಕಿತ್ತು. ಮತ್ತು ಅಂದೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಬೇಕಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 9 ರಂದು ಚುನಾವಣೆ ಘೋಷಣೆ ಮಾಡಿತು. ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಚುನಾವಣೆ ಘೋಷಣೆ ಮಾಡುವುದು ನಾಲ್ಕು ದಿನ ತಡವಾಗಿದ್ದರಿಂದ ಯಾರಿಗಾದರೂ ಅನುಕೂಲವಾಯಿತೇ? ಖಂಡಿತವಾಗಿಯೂ ಆಗಿದೆ. ತನ್ನ ಮರುಆಯ್ಕೆಗಾಗಿ ಏನೆಲ್ಲ ಕಸರತ್ತು ಮಾಡುತ್ತಿರುವ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಇದರಿಂದ ಅನುಕೂಲವಾಗಿದೆ.
ವಿರೋಧ ಪಕ್ಷಗಳು ಅತ್ತ ರಾಷ್ಟ್ರೀಯ ಸುರಕ್ಷತೆ ಮತ್ತು ಬಾಲಕೋಟ್ ವಾಯುದಾಳಿ ಕುರಿತಂತೆ ಸಾಕ್ಷಿಗಳಿಗಾಗಿ ಒತ್ತಾಯಿಸುತ್ತಿದ್ದ ಹೊತ್ತಿನಲ್ಲಿ ಮೋದಿ ಸರ್ಕಾರ ತೆರೆ ಮರೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಅಧಿಸೂಚನೆಯನ್ನೂ ಹೊರಡಿಸಿಬಿಟ್ಟಿದೆ. ಸಾಮಾನ್ಯವಾಗಿ ಚುನಾವಣಾ ಪೂರ್ವದ ನಾಲ್ಕು ತಿಂಗಳು
ಮುಂಚಿನ ಅವಧಿಯಲ್ಲಿ ಸರ್ಕಾರ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಒಂದು ವೇಳೆ ನಿರ್ಧಾರ ಕೈಗೊಂಡಿದ್ದೇ ಆದರೆ, ಅದನ್ನು ಪಾರದರ್ಶಕ ರೀತಿಯಲ್ಲಿ ಕೈಗೊಳ್ಳಬೇಕು. ಕೈಗೊಂಡ ನಿರ್ಧಾರಗಳೆಲ್ಲವನ್ನೂ ಅದು ಸಾರ್ವಜನಿಕವಾಗಿ ಪ್ರಕಟಿಸಬೇಕು.
ಆದರೆ, ಮೋದಿ ಸರ್ಕಾರ ಈ ಸಂಸದೀಯ ಸತ್ಸಂಪ್ರದಾಯವನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನವೇ ಮತಲಾಭಕ್ಕೆ ಅನುಕೂಲವಾಗುವ ಆದೇಶಗಳನ್ನು ಹೊರಡಿಸಲು ಈ ನಾಲ್ಕು ದಿನಗಳನ್ನು ಮೋದಿ ಆಡಳಿತ ಬಳಸಿಕೊಂಡಿದೆ.
ಚುನಾವಣೆ ಘೋಷಣೆಗೆ ಮುನ್ನ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳೆಂದರೆ, ದೆಹಲಿಯ ಅನಧಿಕೃತ ವಸತಿ ಪ್ರದೇಶದಲ್ಲಿರುವ ನಿವಾಸಿಗಳಿಗೆ ಒಡೆತನದ ಹಕ್ಕು ನೀಡುವ ಸಂಬಂಧ ಪೂರಕ ಪ್ರಕ್ರಿಯೆಗಳನ್ನು ಶಿಫಾರಸು ಮಾಡುವ ಸಮಿತಿ ರಚನೆ ಮಾಡಿರುವುದು. ರಾಜ್ಯಮಟ್ಟದಲ್ಲಿ ವಿವಿಧ ನಿಗಮಗಳ ಅನುಮೋದಿತ ಯೋಜನೆಗಳನ್ನು ವರ್ಕ್ ಆರ್ಡರ್ ಆಗಿ ಪರಿವರ್ತಿಸಿರುವುದು. ಘೋಷಣೆಗೆ ಎರಡು ದಿನ ಮೊದಲು ಸೂರತ್ ಮುನಿಸಿಪಲ್ ಕಾರ್ಪೊರೆಷನ್ ಮುನಿಸಿಪಲ್ ಬಾಂಡ್ ಮೂಲಕ ಹಣ ಸಂಗ್ರಹಿಸಲು ಅನುಮೋದನೆ ನೀಡಿರುವುದು.
ಮಾರ್ಚ್ 7 ಮತ್ತು 10 ರನಡುವೆ ಮೋದಿ ಸರ್ಕಾರದ ಫ್ಲಾಗ್ಷಿಪ್ ಯೋಜನೆಯಾದ ಸ್ಮಾರ್ಟ್ ಸಿಟಿಯ ವರ್ಕ್ ಆರ್ಡರ್ ಮೊತ್ತವನ್ನು 82,533 ಕೋಟಿ ರುಪಾಯಿಗಳಿಂದ 85,632 ಕೋಟಿ ರುಪಾಯಿಗಳಿಗೆ ಏರಿಸಲಾಗಿದೆ. ಅಂದರೆ, ಯಾವುದೇ ತಾಂತ್ರಿಕ ಶಿಫಾರಸು ಇಲ್ಲದೇ ಅಂದಾಜು ಮೊತ್ತವನ್ನು 3099 ಕೋಟಿ ರುಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂದುಎಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.
ಮೋದಿ ಸರ್ಕಾರವು ಚುನಾವಣೆಗೆ ಮುನ್ನ ನಡೆದ ಮೂರು ಸಚಿವ ಸಂಪುಟ ಸಭೆಗಳಲ್ಲಿ ಒಟ್ಟು 70 ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಮಾರ್ಚ್ 7 ರಂದು ನಡೆದ ಸಂಪುಟ ಸಭೆಯಲ್ಲಿ ದೆಹಲಿ ಮೆಟ್ರೊ ನಾಲ್ಕನೇ ಹಂತದ ಯೋಜನೆ ಅನುಮೋದನೆಯೂ ಸೇರಿದಂತೆ 18 ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಫೆಬ್ರವರಿ ತಿಂಗಳ ಕೊನೆ ಎರಡು ಸಂಪುಟ ಸಭೆಗಳಲ್ಲಿ 50 ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಫೆಬ್ರವರಿ 19ರಂದು 23 ಮತ್ತು ಫೆಬ್ರವರಿ 28ರಂದು 27ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಮುಂಚಿನ ಕೊನೆ ಮೂರು ದಿನಗಳ ಅವಧಿಯಲ್ಲಿ ಮೋದಿ ಸರ್ಕಾರ ಹೊರಡಿಸಿದ ಅಧಿಸೂಚನೆಗಳ ಸಂಖ್ಯೆ 78. ಇವುಗಳ ಪೈಕಿ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭೂಸ್ವಾಧೀನ ಪ್ರಕ್ರಿಯೆಗಳು ಸೇರಿವೆ. ಅಲ್ಲದೇ ಬಜೆಟ್ ನಲ್ಲಿ ನೀಡಿದ ಆಶ್ವಾಶನೆಗಳನ್ನೂ ಈಡೇರಿಸುವ ಸಲುವಾಗಿ ಹಲವು ಅಧಿಸೂಚನೆಗಳನ್ನು ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಎರಡು ದಿನಗಳ ಮುಂಚೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯ ಅಭಿವೃದ್ಧಿ ನಿಗಮವನ್ನು ಡಿನೋಟಿಫೈ ಮಾಡಿ, ಈ ಹಿಂದೆ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಆಯೋಗದ ಮುಖ್ಯಸ್ಥರಾಗಿದ್ದ ಭಿಕು ರಾಮ್ಜಿ ಇದಾತೆ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಾರ್ಚ್ 31ರಂದು ಅವಧಿ ಪೂರ್ಣಗೊಳಿಸಲಿದ್ದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು 1 ವರ್ಷ ವಿಸ್ತರಿಸಲಾಗಿದೆ. ಟೀ ಬೋರ್ಡ್ ಅನ್ನು ನೂತನ ಸದಸ್ಯರೊಂದಿಗೆ ಪುನಾರಚನೆ ಮಾಡಲಾಗಿದ್ದು, ನೂತನ ಸದಸ್ಯರ ಅಧಿಕಾರದ ಅವಧಿಯನ್ನು 2022ರವರೆಗೆ ವಿಸ್ತರಿಸಲಾಗಿದೆ.
ದೆಹಲಿಯಲ್ಲಿ ಅನಧಿಕೃತ ಕಾಲೋನಿಗಳ ನಿವಾಸಿಗಳಿಗೆ ಒಡೆತನದ ಹಕ್ಕು ನೀಡಬೇಕೆಂಬ ಬೇಡಿಕೆಯು ಬಹಳ ಹಳೆಯದು. ಚುನಾವಣೆ ಘೋಷಣೆಗೆ ಮುನ್ನ ಸಮಿತಿ ರಚಿಸುವ ಮೂಲಕ ಮತಲಾಭಕ್ಕೆ ಮೋದಿ ಸರ್ಕಾರ ಮುಂದಾಗಿರುವುದು ಸ್ಪಷ್ಟ. ದೆಹಲಿಯಲ್ಲಿ 1650 ಅನಧಿಕೃತ ಕಾಲೋನಿಗಳಿವೆ. ಈ ಕಾಲೋನಿಗಳಲ್ಲಿ ಕನಿಷ್ಠ 500 ರಿಂದ 2000ದಷ್ಟು ಮತದಾರರಿದ್ದಾರೆ ಎಂಬ ಅಂದಾಜಿದೆ. ಈ ಕಾಲೋನಿಗಳಲ್ಲಿನ ಮತದಾರರ ಸಂಖ್ಯೆಯೇ 20 ಲಕ್ಷ ದಾಟಬಹುದು. ಅಲೆಮಾರಿ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಚುನಾವಣೆಗೆ ಮುಂಚಿತವಾಗಿ ಕೈಗೊಂಡ ನಿರ್ಧಾರವು ಆ ಸಮುದಾಯದ ಮತಲಾಭಕ್ಕಾಗಿಯೇ ಎಂದು ಸ್ಪಷ್ಟ.